ಮಳೆಯಿಂದ ನಿಮ್ಮನ್ನು ರಕ್ಷಿಸುವ ಛತ್ರಿಗಳು ಯಾವ ರೀತಿ ನಿಮಗೆ ಫ್ಯಾಷನೆಬಲ್ ಲುಕ್ಸ್ ನೀಡಿ ನಿಮಗೆ ಅನುಕೂಲಕರವಾಗಲಿದೆ ಎಂದು ಸಂಪೂರ್ಣವಾಗಿ ತಿಳಿಯೋಣವೇ?

ಮಳೆ ಹನಿಗಳು ಬೀಳತೊಡಗಿದಂತೆ ಮನೆಯ ಮೂಲೆ ಮೂಲೆಗಳಲ್ಲಿ ಅಡಗಿರುವ ಛತ್ರಿಗಳು ಹೊರಗೆ ಇಣುಕುತ್ತವೆ. ಸಾದಾ ಕಪ್ಪು ಕೊಡೆ ಹಳೆಯ ಕಾಲಕ್ಕಾಯಿತು, ಈಗೆಲ್ಲ ಬಣ್ಣ ಬಣ್ಣದ ಚಿಟ್ಟೆಗಳಂತೆ ಛತ್ರಿಗಳು ಎಲ್ಲೆಲ್ಲೂ ರಾರಾಜಿಸುತ್ತವೆ.

ಮಳೆಗಾಲ ಆಧುನಿಕ ಯವಜನರಿಗೆ ಎಷ್ಟು ಇಷ್ಟವೋ, ಹುಡುಗಿಯರಿಗೆ ಈ ಕಾಲದಲ್ಲಿ ತಮ್ಮ ಸೌಂದರ್ಯ ಕಾಪಾಡಿಕೊಳ್ಳುವುದು ಅಷ್ಟೇ ಕಷ್ಟಕರ ಎನಿಸುತ್ತದೆ. ತಾವು ಮಾಡಿಕೊಂಡ ಹೇರ್‌ಸ್ಟೈಲ್ ಎಲ್ಲಿ ಕೆಡುತ್ತದೋ, ಮೇಕಪ್‌ ಎಲ್ಲಿ ಹಾಳಾಗುವುದೋ ಎಂಬ ಚಿಂತೆ ಕಾಡುತ್ತಿರುತ್ತದೆ. ಈ ಎಲ್ಲಾ ಸಮಸ್ಯೆಗಳಿಂದಲೂ ಮುಕ್ತರಾಗಲು ಇರುವ ಏಕೈಕ ಉಪಾಯ ಎಂದರೆ ಛತ್ರಿ.

ಆದರೆ ಇಂದಿನ ಆಧುನಿಕ ತರುಣಿಯರು ಛತ್ರಿ ಎಂದರೆ ಕೇವಲ ತಮ್ಮನ್ನು ಮಳೆಯಿಂದ ರಕ್ಷಿಸುವಂಥ ಸಾಧನವಷ್ಟೇ ಎಂದು ಭಾವಿಸುವುದಿಲ್ಲ. ಇಂದಿನ ಫ್ಯಾಷನ್‌ಪ್ರಿಯ ಯುವ ಜನತೆ ವಿಭಿನ್ನ ಬಗೆಯ ಡಿಸೈನಿನ ಛತ್ರಿಗಳನ್ನು ಕೊಳ್ಳಬಯಸುತ್ತಾರೆ.

ಛತ್ರಿಗಳಲ್ಲಿ ಇದೆಂಥ ಫ್ಯಾಷನ್‌ ಅಂದುಕೊಂಡಿರಾ? ಕೊಡೆ ತೆರೆದು ಮಳೆ ಬಿಸಿಲಿಗೆ ಹಿಡಿದು ಹೊರಟರೆ ಆಯ್ತಪ್ಪ ಎನ್ನುವಿರಿ. ಆದರೆ ಇಂದಿನ ಹುಡುಗಿಯರು ಅಗತ್ಯಕ್ಕಿಂತಲೂ ಹೆಚ್ಚು ಫ್ಯಾಷನೆಬಲ್, ಹೀಗಾಗಿ ಇಂದಿನ ಮಾರ್ಕೆಟ್‌ನಲ್ಲಿ ಎಲ್ಲೆಲ್ಲೂ ಫ್ಯಾಷನೆಬಲ್ ಫತ್ರಿಗಳೇ ತುಂಬಿವೆ.

ಸಿಂಪಲ್ ಪ್ಲೇನ್‌ ಕಲರ್ಡ್‌ ಛತ್ರಿ : ನಿಮ್ಮ ಡ್ರೆಸ್‌ಗೆ ಮ್ಯಾಚಿಂಗ್‌ ಅಥವಾ ಕಾಂಟ್ರಾಸ್ಟ್ ಆಗಿರುವ ಛತ್ರಿ ಬಳಸುವುದರಿಂದ, ನಿಮ್ಮ ಲುಕ್ಸ್ ಇನ್ನಷ್ಟು ಹೆಚ್ಚಿನ ಬೆಡಗು ಪಡೆಯುತ್ತದೆ.

ಯು ಹ್ಯಾಂಡ್‌ವುಳ್ಳ ಲಾಂಗ್‌ ಹ್ಯಾಂಡಲ್ ಛತ್ರಿ : ಈ ಛತ್ರಿ ಮಳೆಯಲ್ಲಿ ಸುಂದರವಾಗಿ ಕಾಣುವುದು ಮಾತ್ರವಲ್ಲದೆ, ಮಳೆ ಇಲ್ಲದಿದ್ದಾಗ ನೀವು ಇದನ್ನು ಹಿಡಿದು ಹೊರಗೆ ನಿಂತಿದ್ದರೆ ಅಥವಾ ಎಲ್ಲಿಗಾದರೂ ಹೊರಟರೆ, ಹೆಗಲಿಗೆ ಇಳಿಬಿಟ್ಟ ಹ್ಯಾಂಡ್‌ಬ್ಯಾಗ್‌, ಒಂದು ಕೈಲಿ ಲಗೇಜ್‌ ಮತ್ತೊಂದರಲ್ಲಿ ಈ ಛತ್ರಿ ಇದ್ದರೆ ನಿಮ್ಮ ವ್ಯಕ್ತಿತ್ವಕ್ಕೆ ಹೆಚ್ಚಿನ ಕಳೆ ಬರುತ್ತದೆ.

ಲೇಸ್‌ವುಳ್ಳ ಛತ್ರಿ : ನೆರಿಗೆಗಳುಳ್ಳ ವಿಶಿಷ್ಟ ಡಿಸೈನಿನ ಫ್ರಾಕ್‌ ಅಥವಾ ಸ್ಕರ್ಟ್‌ ಜೊತೆ ಬಣ್ಣಬಣ್ಣದ ಅಥವಾ ಪ್ರಿಂಟೆಡ್‌ ಹಾಗೂ ಅಂಚಿನಲ್ಲಿ ಲೇಸ್‌ವುಳ್ಳ ಛತ್ರಿ ಹಿಡಿದು ಹೊರಟರೆ, ವಿಭಿನ್ನ ಕಾಂಬಿನೇಷನ್‌ ನಿಮ್ಮ ಗ್ಲಾಮರ್‌ ಹೆಚ್ಚಿಸಬಲ್ಲದು.

ಸ್ಟ್ರೈಪ್ಡ್ ಅಂಬ್ರೆಲಾ : ಗುಂಡಗಿನ, ಎಲ್ಲಾ ಮೂಲೆಗಳಿಂದಲೂ ಯೂ ಕಟ್‌ವುಳ್ಳ ಹಾಗೂ ಸುಂದರ ಲೇಸ್‌ನಿಂದ ಸುಸಜ್ಜಿತ ಸ್ಪ್ರೈಪ್ಡ್ ಅಂಬ್ರೆಲಾ ಕಾಲೇಜು ಕಿಶೋರಿಯರಿಗೆ ಹೆಚ್ಚು ಒಪ್ಪುತ್ತದೆ.

ಡಬಲ್ ಟ್ರಿಪಲ್ ಫ್ರಿಲ್ ಛತ್ರಿ :  ಹಲವು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿರುವ ಪ್ರಿಂಟೆಡ್‌ ಅಥವಾ ಪ್ಲೇನ್‌, ಡಬಲ್ ಯಾ ಟ್ರಿಪಲ್ ಫ್ರಿಲ್‌ನ ಛತ್ರಿಗಳು ವೆಸ್ಟರ್ನ್‌ ಡ್ರೆಸ್‌ಗೆ ಚೆನ್ನಾಗಿ ಹೊಂದುತ್ತವೆ.

ಕ್ಲೌಡ್ಸ್ ರೇನ್‌ ಡ್ರಾಪ್‌ ಅಂಬ್ರೆಲಾ : ಆಕಾಶ ಮೋಡಗಳಿಂದ ಕವಿದಿದ್ದು, ನಿಧಾನವಾಗಿ ಮಳೆ ಹನಿಯಲಾರಂಭಿಸಿದರೆ ಸಂಗಾತಿ ಎಂಬಂತೆ  ಕ್ಲೌಡ್ಸ್ ಛತ್ರಿ ಹಾಗೂ ತುಂತುರು ಮಳೆಗೆ ಸಂಗಾತಿಯಾಗಿ ರೇನ್‌ ಡ್ರಾಪ್‌ ಛತ್ರಿ ನಿಮ್ಮ ಜೊತೆಗಿದ್ದರೆ, ಎಲ್ಲರೂ ನಿಮ್ಮನ್ಮು ನೋಡಿ `ಯಾರೇ ನೀನು ಚೆಲುವೆ…,’ ಎಂದು ತಮ್ಮಷ್ಟಕ್ಕೆ ಗುನುಗದೇ ಇರಲಾರರು.

ಡೇಝಿ ಪ್ರಿಂಟ್ ಛತ್ರಿ : ಡೇಝಿ ಹೂವಿನಂಥ ಪ್ರಿಂಟ್‌ನ, ನೀವು ಛತ್ರಿ ಬದಲಿಗೆ ಅತಿ ದೊಡ್ಡ ಡೇಝಿ ಹೂವನ್ನೇ ಮಳೆಹನಿ ಬೀಳದಂತೆ ರಕ್ಷಣೆಗೆ ಹಿಡಿದಿದ್ದೀರಿ ಎನಿಸುತ್ತದೆ. ಈ ಕೊಡೆ ಕೆಂಪು, ಹಳದಿ, ನೇರಳೆ ಇತ್ಯಾದಿ ವಿಭಿನ್ನ ಬಣ್ಣಗಳಲ್ಲಿ ಲಭ್ಯವಿವೆ.

ಸನ್‌ಫ್ಲವರ್‌ ಬ್ಲೂಮ್ ಪ್ರಿಂಟ್ ಛತ್ರಿ : ಹಳದಿ ಅಥವಾ ಹಸಿರು ಬಣ್ಣದ ಡ್ರೆಸ್‌ ಜೊತೆ ನೀವು ನಿಮ್ಮ ಸನ್‌ಫ್ಲವರ್‌ ಬ್ಲೂಮ್ ಛತ್ರಿ ಹಿಡಿದು ಹೊರಟರೆ, ನಿಜಕ್ಕೂ ಬೀದಿಗೆ ಸೂರ್ಯಕಾಂತಿ ಹೂ ಬಂದುಬಿಟ್ಟಿದೆ ಎಂದು ಅನಿಸುತ್ತದೆ.

ಆ್ಯಸ್ಟಫ್ರಾ ಛತ್ರಿ : ಮುಸಲಧಾರೆಯಾಗಿ ಮಳೆ ಸುರಿಯುತ್ತಿರುವಾಗ, ನೀವು ನಿಮ್ಮ ಪಾರ್ಟ್‌ನರ್‌ ಜೊತೆ ಒಂದೇ ಛತ್ರಿಯಡಿ ಹೊರಟಿರಲು…. ಎಷ್ಟು ರೊಮ್ಯಾಂಟಿಕ್‌ ಅನಿಸುವುದಿಲ್ಲವೇ? ಇದರ ಹೆಚ್ಚಿನ ಮಜಾ ಪಡೆಯಲು ಬೇಗ ಮಾರ್ಕೆಟ್‌ನಿಂದ ಒಂದು ಆ್ಯಸ್ಟಫ್ರಾ ಛತ್ರಿ ಕೊಂಡು ತನ್ನಿ. ರೊಮ್ಯಾಂಟಿಕ್‌ ಕಪಲ್ಸ್ ಗೆ ಇದು ನಿಜಕ್ಕೂ ರೋಮಾಂಚಕಾರಿ ಅನುಭವ ನೀಡುತ್ತದೆ.

ನ್ಯೂಬ್ರೆಲಾ ಛತ್ರಿ : ಮಳೆಯಲ್ಲಿ ನಿಮ್ಮ ಕೈಗಳಲ್ಲಿ ಏನಾದರೂ ಲಗೇಜ್‌ ಇದ್ದರೆ, ಆಗ ಲಗೇಜ್‌ ಜೊತೆ ಛತ್ರಿ ಹಿಡಿದುಕೊಳ್ಳುವುದು ತುಸು ಕಷ್ಟವೆನಿಸುತ್ತದೆ. ಆದರೆ ಗಾಬರಿಗೊಳ್ಳದಿರಿ. ಮಾರ್ಕೆಟ್‌ನಲ್ಲಿ ಈಗ ನ್ಯೂಬ್ರೆಲಾ ಛತ್ರಿ ಸಿಗತೊಡಗಿದೆ. ಈ ಛತ್ರಿ ಹೆಗಲಿನ ಬಳಿ ಪಟ್ಟಿಯಂತೆ ಫಿಟ್‌ ಆಗುತ್ತದೆ. ಇದನ್ನು ಕೈಯಲ್ಲಿ ಹಿಡಿಯಬೇಕಾದ ಆಗತ್ಯವಿಲ್ಲ. ವಿಭಿನ್ನ ಡಿಸೈನ್‌ಗಳಲ್ಲಿ ಲಭ್ಯವಿರುವ ಇದು ಬಳಸಲಿಕ್ಕೂ ಸುಲಭ.

ಖಡ್ಗ ಛತ್ರಿ : ಇದರ ಹ್ಯಾಂಡ್‌ ಬಿಲ್ ಕುಲ್ ಖಡ್ಗದಂತೆಯೇ ಇರುತ್ತದೆ. ಇದು ಉದ್ದನೆಯ ಸ್ಟ್ಯಾಂಡಿಂಗ್‌ ಛತ್ರಿ ಆಗಿದ್ದು, ಮಡಿಚಿದಾಗ, ಖಡ್ಗದಂತೆಯೇ ಕಂಡುಬರುತ್ತದೆ.

ಗನ್‌ ಛತ್ರಿ : ಇದೊಂದು ಫೋಲ್ಡಿಂಗ್‌ ಛತ್ರಿ ಆಗಿದ್ದು , ಇದರ ಹ್ಯಾಂಡಲ್ ಗನ್‌ ತರಹ ಇರುತ್ತದೆ. ನೀವು ಮಡಿಚಿದ ಛತ್ರಿ ಹ್ಯಾಂಡಲ್ ಹಿಡಿದು ಪೋಸ್‌ ನೀಡಿದರೆ, ಜನರಿಗೆ ನೀವು ನಿಜಕ್ಕೂ ಗನ್‌ ಹಿಡಿದಿದ್ದೀರಿ ಎಂದೇ ಅನಿಸುತ್ತದೆ.

ಪ್ಯಾಕೆಟ್‌ ಛತ್ರಿ : ಅರೆ, ನಿಮ್ಮ ಕೈಯಲ್ಲಿ ಇದೆಂಥ ಪ್ಯಾಕೆಟ್‌? ಯಾರಾದರೂ ನಿಮ್ಮನ್ನು ಈ ಬಗ್ಗೆ ಕೇಳಿದಾಗ, ತಕ್ಷಣ ನೀವು ಆ ಪ್ಯಾಕೆಟನ್ನು ಫಟಕ್‌ ಎಂದು ತೆರೆದುಬಿಟ್ಟರೆ, ಆ ಪ್ಯಾಕೆಟ್‌ ದೊಡ್ಡ ಛತ್ರಿಯಾಗಿ ಮಾರ್ಪಡುತ್ತದೆ. ಆಗ ಆ ಬಗ್ಗೆ ಕೇಳಿದವರು ಆಶ್ಚರ್ಯಪಡದೆ ಇರಲಾರರು. ನಿಮ್ಮ ಮುಷ್ಟಿಗಾತ್ರ ಹಿಡಿಸುವಂಥ ಈ ಛತ್ರಿ, ನೀವು ಸಣ್ಣ ಪ್ಯಾಕೆಟ್‌ ತರಹ ಕೈಗಳಲ್ಲೇ ಹಿಡಿದು ಹೋಗಬಹುದು, ಪರ್ಸಿನ ತುಸುವೇ ಜಾಗದಲ್ಲೂ ಇದನ್ನು ಇರಿಸಿಕೊಳ್ಳಬಹುದು.

ಟ್ವಿಲೈಟ್‌ ಛತ್ರಿ : ಇದು ನಿಜಕ್ಕೂ ಮಜಾ ಕೊಡುವ ಛತ್ರಿ. ಮಳೆಗಾಲದಲ್ಲಿ ಕರೆಂಟ್‌ ಕೈ ಕೊಡುವುದು ಮಾಮೂಲಿ ಸಂಗತಿ. ಹಾಗಿರುವಾಗ ಕತ್ತಲಲ್ಲಿ ಮಳೆ ಮಧ್ಯೆ ನಡೆಯುವುದು ಕಷ್ಟವೇ ಸರಿ. ಆದರೆ ನೀವು ಗಾಬರಿಗೊಳ್ಳದಿರಿ. ಈ ಟ್ವಿಲೈಟ್‌ನಿಂದಾಗಿ ನಿಮಗೆ ದಾರಿ ಉದ್ದಕ್ಕೂ ಬೆಳಕು ನೀಡಿ, ಕ್ಷೇಮವಾಗಿ ನಿಮ್ಮನ್ನು ಮನೆ ಸೇರಿಸುತ್ತದೆ.

– ಸಂಧ್ಯಾ ಕುಮಾರ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ