ಮನೆ ನಿಮ್ಮ ವ್ಯಕ್ತಿತ್ವವನ್ನು ಪ್ರಭಾವಿತಗೊಳಿಸುತ್ತದೆ. ಇಂತಹದರಲ್ಲಿ ನಿಮ್ಮ ಇಂಟೀರಿಯರ್ ನಿಮ್ಮ ಮನಸ್ಸಿಗೆ ತಕ್ಕಂತೆ ಆದಲ್ಲಿ ಅದನ್ನು ವರ್ಣಿಸಲು ನಿಮ್ಮ ಬಳಿ ಶಬ್ದಗಳೇ ಇರಲಾರವೇನೋ? ದಿನವಿಡೀ ಕೆಲಸ ಮಾಡಿ ಮನೆಗೆ ಬಂದು ಸುಸ್ತು ನಿವಾರಿಸಲು ಸ್ವಲ್ಪ ಹೊತ್ತು ಹಾಗೆಯೇ ಕುಳಿತುಕೊಳ್ಳುತ್ತೀರಿ. ಆಗ ನಿಮ್ಮ ಗಮನ ಮನೆ ತುಂಬಾ ಹರಿದಾಡುತ್ತದೆ. ಎಲ್ಲ ವ್ಯವಸ್ಥಿತವಾಗಿದೆ ಎಂದಾಗ ನಿಮಗೆ ಖುಷಿಯಾಗುತ್ತದೆ. ಅದೇ ಮನೆ ತುಂಬಾ ಸಾಮಾನುಗಳು ಬೇಕಾಬಿಟ್ಟಿ ಹರಡಿಕೊಂಡಿದ್ದರೆ ಪೀಠೋಪಕರಣಗಳನ್ನು ವ್ಯವಸ್ಥಿತವಾಗಿ ಇರಿಸದೇ ಇದ್ದಿದ್ದರೆ ನಿಮಗೆ ಬೇಜಾರಾಗುವುದು ಖಚಿತ.
ಇತ್ತೀಚಿನ ವರ್ಷಗಳಲ್ಲಿ ಪ್ರತಿಯೊಬ್ಬರೂ ಮನೆ ಖರೀದಿ ಮಾಡುತ್ತಿದ್ದಂತೆಯೇ ಅಥವಾ ಹೊಸದಾಗಿ ಕಟ್ಟಿಸುತ್ತಿದ್ದಂತೆಯೇ ಅದರ ಇಂಟೀರಿಯರ್ ಬಗ್ಗೆ ಗಮನ ಕೊಡುತ್ತಾರೆ. ಮನೆ ಬಾಡಿಗೆಯದಾಗಿದ್ದರೂ ಅಷ್ಟಿಷ್ಟು ಅಲಂಕಾರ ಮಾಡಿಯೇ ಮಾಡುತ್ತಾರೆ.
ಪ್ರೊಡಕ್ಷನ್ ಡಿಸೈನರ್ ಶೃತಿ ನಾಗೇಂದ್ರ ಈ ಕುರಿತಂತೆ ಹೀಗೆ ಹೇಳುತ್ತಾರೆ, “ಮನೆ ಒಳಾಂಗಣ ಅಲಂಕಾರ ಸಮರ್ಪಕವಾಗಿರಬೇಕು ಎನ್ನುವುದು ನಿಜ. ಮನೆಯ ಅಲಂಕಾರದಿಂದಲೇ ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಪರಿಚಯವಾಗುತ್ತದೆ. ಮನೆಯ ಯಾವ ಭಾಗದಲ್ಲಿ ಕುಳಿತರೆ ನನಗೆ ಹಿತಕರ ಅನುಭವ ಉಂಟಾಗುತ್ತದೆ, ಯಾವ ಭಾಗದಲ್ಲಿ ಕುಳಿತು ಏನನ್ನು ನೋಡಲು ಇಷ್ಟವಾಗುತ್ತದೆ ಎಂಬುದರ ಬಗ್ಗೆ ನಾನು ಸದಾ ಗಮನಹರಿಸುತ್ತೇನೆ. ಮನೆಯ ಅಲಂಕಾರದಲ್ಲಿ ಗೋಡೆಗಳು ನ್ಯೂಟ್ರಲ್ ಆಗಿರುವುದು ಅತ್ಯವಶ್ಯಕ. ಮನೆಯ ಕುಶನ್, ಪರದೆಗಳು, ತಾಜಾ ಹೂಗಳು ಇವೆಲ್ಲ ಮನೆಯ ಲುಕ್‌ನ್ನೇ ಬದಲಿಸಬಲ್ಲವು.
”`ಒಳಾಂಗಣ ಅಲಂಕಾರದಲ್ಲಿ ಬೆಳಕು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಅದು ಮನೆಯ ಅಂದಚೆಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಬಿಳಿ ಬಣ್ಣದ ಬೆಳಕು ಮನೆಗೆ ಸೂಕ್ತವಾದುದಲ್ಲ. ಅದು ಆಫೀಸು ಮುಂತಾದವುಗಳಿಗೆ ಮಾತ್ರ ಒಳ್ಳೆಯದು. ಏಕೆಂದರೆ ಅಲ್ಲಿ ಕೆಲಸ ಮಾಡಬೇಕಾಗಿರುತ್ತದೆ. ಬಿಳಿ ಬಣ್ಣದ ಬೆಳಕು ಕಠೋರವಾಗಿರುತ್ತದೆ. ಹೀಗಾಗಿ ನಾನು ವಾರ್ಮ್ ಲೈಟ್‌ನಿಂದ ಮನೆ ಅಲಂಕರಿಸಲು ಸಲಹೆ ನೀಡುತ್ತೇನೆ. ಅದೆಷ್ಟೋ ದೊಡ್ಡ ದೊಡ್ಡ ಕಂಪನಿಗಳು ಇತ್ತೀಚಿನ ವರ್ಷಗಳಲ್ಲಿ ಆಕರ್ಷಕ ಬೆಳಕಿಗಾಗಿ ಬಲ್ಬು ತಯಾರಿಸುತ್ತವೆ. ಈ ಬಲ್ಬುಗಳ ಬೆಳಕು ಮನೆಯ ಸೌಂದರ್ಯದ ರೂಪುರೇಷೆಯನ್ನೇ ಬದಲಿಸಿಬಿಡುತ್ತವೆ.
ಬೆಡ್‌ರೂಮಿನಲ್ಲಿ ನೀಲಿ ಬಣ್ಣದ ಗೋಡೆಗಳಿಗೆ ಅದೇ ಬಣ್ಣದ ಲೈಟುಗಳು ಹೆಚ್ಚು ಆಕರ್ಷಣೆ ನೀಡುತ್ತವೆ. ಅದು ಹೆಚ್ಚು ಶಾಂತತೆಯ ಅನುಭೂತಿ ನೀಡುತ್ತದೆ.
ಮನೆ ಅಲಂಕರಿಸುವುದು ನಿಜಕ್ಕೂ ಒಂದು ಕಲೆ! ಅದು ವ್ಯಕ್ತಿಯೊಬ್ಬನ ಸ್ವಯಂ ಅವಲೋಕನಕ್ಕೆ ದಾರಿ ಮಾಡಿಕೊಡುತ್ತದೆ. ಅದಕ್ಕಾಗಿ ಯಾವುದೇ ಇಂಟೀರಿಯರ್ ಡಿಸೈನರ್‌ನ ಅವಶ್ಯಕತೆ ಉಂಟಾಗದು. ಯಾವುದನ್ನು ಮಾಡಿದ ಬಳಿಕ ನಿಮಗೆ ಸಂತೃಪ್ತಿಯ ಅನುಭೂತಿ ಉಂಟಾಗುತ್ತೋ ಅದೇ ನಿಮ್ಮ ಮನೆಯ ಸುಂದರ ಅಲಂಕಾರವಾಗಿರುತ್ತದೆ. ನಿಮ್ಮ ಬಳಿ ಯಾವುದೇ ಐಡಿಯಾ ಇರದೇ ಹೋದರೆ, ನಿಮಗೆ ಎಷ್ಟು ಗೊತ್ತಿರುತ್ತೊ ಅಷ್ಟನ್ನೇ ಅವಲಂಬಿಸಿ ಇಂಟೀರಿಯರ್ ಡಿಸೈನ್ ಮಾಡಿ. ಕುಶನ್, ಕಾರ್ಪೆಟ್, ಕರ್ಟನ್ ಹಾಗೂ ಹೂಗಳಲ್ಲಿ ಯಾವ ಬಣ್ಣ ಇಷ್ಟವೋ ಅದರಿಂದ ಮನೆಯನ್ನು ಅಲಂಕರಿಸಿ.
ಮನೆ ಹಾಗೂ ಸೆಟ್‌ನ ಇಂಟೀರಿಯರ್‌ನಲ್ಲಿ ಏನು ವ್ಯತ್ಯಾಸ ಎಂಬ ಪ್ರಶ್ನೆಗೆ ಶೃತಿ ಹೀಗೆ ಹೇಳುತ್ತಾರೆ, “ಪ್ರತಿಯೊಂದು ಕೆಲಸ ಸವಾಲಿನಿಂದ ಕೂಡಿರುತ್ತದೆ. ಸೆಟ್‌ನ್ನು ಕೆಲವೇ ದಿನಗಳ ಮಟ್ಟಿಗೆ ಸಿದ್ಧಪಡಿಸಲಾಗುತ್ತದೆ. ಅದರಲ್ಲಿ ವಾಸ್ತವತೆಯೇನೂ ಇರುವುದಿಲ್ಲ. ಎಲ್ಲ ಕೃತಕವಾಗಿರುತ್ತದೆ. ಸೆಟ್‌ನ್ನು ಸಾಮಾನ್ಯವಾಗಿ ಬಟ್ಟೆ ಹಾಗೂ ವುಡ್ ಬಳಸಿ ಸಿದ್ಧಪಡಿಸಲಾಗುತ್ತದೆ. ಕೆಲವೊಂದು ಕಡೆ ವಾಲ್ ಪೇಪರ್ ಬಳಕೆ ಮಾಡಲಾಗುತ್ತದೆ.
”ಸೆಟ್‌ನ ನಿರ್ಮಾಣವನ್ನು ಲೊಕೇಶನ್, ಸ್ಟೋರಿ, ಸ್ಕ್ರಿಪ್ಟ್, ನಿರ್ದೇಶಕ, ಪರ್ಫಾರ್ಮೆನ್ಸ್, ನಟನಟಿಯರನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗುತ್ತದೆ. ಅದೇ ಮನೆಯ ಇಂಟೀರಿಯರ್‌ನ್ನು ವರ್ಷಗಳಿಗಾಗಿ ಮಾಡಲಾಗುತ್ತದೆ. ಹೀಗಾಗಿ ಅದನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ.
ಸೆಟ್ ಚಿಕ್ಕದಾಗಿದ್ದರೆ 3 ದಿನ ಹಾಗೂ ದೊಡ್ಡ ಗಾತ್ರದ್ದಾಗಿದ್ದರೆ ಒಂದೂವರೆ ತಿಂಗಳ ಸಮಯ ತಗಲುತ್ತದೆ. ಎರಡಕ್ಕೂ ಮೊದಲು ಸ್ಕೆಚ್ ತಯಾರಿಸಿಕೊಳ್ಳಬೇಕು.
– ಎಸ್. ಮಾಲತಿ
ಬೇಸಿಗೆ ಹಾಗೂ ಮಳೆಗಾಲದಲ್ಲಿ ಇಂಟೀರಿಯರ್‌ನ ಕೆಲವು ಟಿಪ್ಸ್
ಹವಾಮಾನಕ್ಕೆ ತಕ್ಕಂತೆ ಪರದೆಗಳನ್ನು ಬದಲಿಸುವುದು ಸಾಕಷ್ಟು ಉಪಯುಕ್ತ.
– ಆಲಿವ್, ಪೇಲ್ ಬ್ಲ್ಯೂ, ಬ್ಯಾಜೆಸ್, ನ್ಯೂಟ್ರಲ್ ಕಲರ್‌ಗಳಿಂದ ಮನೆಯ ಅಲಂಕಾರ ಮಾಡಬಹುದು.
– ನಿಮ್ಮ ಕೋಣೆಗಳು ಚಿಕ್ಕದಾಗಿದ್ದರೆ, ಗೋಡೆಗಳ ಬಣ್ಣ ಆಫ್‌ವೈಟ್ ಅಥವಾ ತಿಳಿಬಣ್ಣದ್ದಾಗಿರಲಿ.
– ಪೀಠೋಪಕರಣದ ಗಾಢತೆ ಹೆಚ್ಚಿಸಲು ಫ್ಲೋರ್ ಲ್ಯಾಂಪ್, ಟೇಬಲ್ ಲ್ಯಾಂಪ್ ಮುಂತಾದವುಗಳನ್ನು ಬಳಸಿ.
– ಬೇಸಿಗೆಯ ದಿನಗಳಲ್ಲಿ ದಪ್ಪನೆಯ ಪರದೆಗಳನ್ನು ಬಳಸಿ. ಇದರಿಂದ ಕೋಣೆಯೊಳಗೆ ಹೊರಗಿನ ಬೆಳಕು ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತದೆ.
– ಮಳೆಗಾಲದಲ್ಲಿ ಹೊರಗೆ ಮಂದ ಬೆಳಕು ಇರುತ್ತದೆ. ಇಂತಹ ಸ್ಥಿತಿಯಲ್ಲಿ ಶಿಯರ್ ಕರ್ಟನ್ ಬಳಸಿ.
– ಬೆಳಕಿನ ಸಂಯೋಜನೆಯನ್ನು ಕೋಣೆಯ ಆಕಾರಕ್ಕನುಗುಣವಾಗಿ ಮಾಡಿ.
– ಮಕ್ಕಳ ಕೋಣೆಯನ್ನು ಅವರ ಆಸಕ್ತಿಗನುಗುಣವಾಗಿ ಅಲಂಕರಿಸಿ.
– ಕೋಣೆಯ ಒಂದು ಗೋಡೆಯನ್ನು ಹಾಗೆಯೇ ಮುಕ್ತವಾಗಿ ಬಿಡಿ. ಅದರಲ್ಲಿ ಅವರು ತಮ್ಮ ಕಲ್ಪನೆಯನ್ನು ಸಾಕಾರಗೊಳಿಸಲು ಅವಕಾಶ ದೊರೆಯುತ್ತದೆ.
– ಹುಡುಗಿಯರ ಕೋಣೆ ಪಿಂಕ್ ಹಾಗೂ ಹುಡುಗರ ಕೋಣೆಯ ಬಣ್ಣ ನೀಲಿ ವರ್ಣದ್ದೇ ಆಗಿರಬೇಕೆಂದೇನಿಲ್ಲ. ಬಾಲ್ಯದಿಂದಲೇ ಅವರಿಗೆ ತಟಸ್ಥ ಬಣ್ಣಗಳ ಪರಿಚಯ ಮಾಡಿಕೊಡಿ.
– ಮಕ್ಕಳ ಕಲ್ಪನೆ ವಯಸ್ಸಿಗನುಗುಣವಾಗಿ ಬದಲಾಗುತ್ತಿರುತ್ತದೆ. ಆಗಾಗ ಅವರ ಇಚ್ಛೆಗನುಗುಣವಾಗಿ ಬದಲಾವಣೆ ಮಾಡುತ್ತಾ ಇರಿ.
ಇಂಟೀರಿಯರ್ : ಈ ತಪ್ಪು ಮಾಡಬೇಡಿ. ಪುಟ್ಟ ಮನೆಯಲ್ಲಿ ದೊಡ್ಡ ಗಾತ್ರದ ಫರ್ನೀಚರ್ ಇಡುವುದು.
– ಫ್ರೆಶ್ ಹೌಸ್ ಪ್ಲ್ಯಾಂಟ್ಸ್ ಇಡದೇ ಇರುವುದು.
– ಪ್ರತಿಯೊಂದು ಕಿಟಕಿಯನ್ನು ಒಂದೇ ರೀತಿಯಲ್ಲಿ ಭಾವಿಸುವುದು.
– ಪುಟ್ಟ ಮನೆಯನ್ನು ಗೋಡೆಗಳಿಗೆ ಗಾಢ ವರ್ಣಗಳನ್ನು ಬಳಸುವುದು. ಇದರಿಂದ ಕೋಣೆ ಮತ್ತಷ್ಟು ಚಿಕ್ಕದೆಂಬಂತೆ ಅನಿಸುತ್ತದೆ.
– ಬೇರೆಯವರ ಇಂಟೀರಿಯರನ್ನು ಕಾಪಿ ಮಾಡುವುದು.