ಶಿವಮೊಗ್ಗ ಜಿಲ್ಲೆಯ ಸಾಗರದ ಶ್ರೀ ಗಣಪತಿ ಅರ್ಬನ್ ಕೋಆಪರೇಟಿವ್ ಬ್ಯಾಂಕಿಗೆ ಶತಮಾನದ ಇತಿಹಾಸವಿದೆ. ಇಂಥ ಬ್ಯಾಂಕಿನ ವ್ಯವಹಾರಗಳನ್ನು ದಕ್ಷ ಸಿಇಓ ಆಗಿ ನಿರ್ವಹಿಸುತ್ತಿರುವ ಲಲಿತಾಂಬಿಕೆಯರ ಸಾಧನೆಗಳ ಬಗ್ಗೆ ತಿಳಿಯೋಣವೇ.....?
ಶಿವಮೊಗ್ಗ ಜಿಲ್ಲೆಯ ಸಾಗರದ ಶ್ರೀ ಗಣಪತಿ ಅರ್ಬನ್ ಕೋಆಪರೇಟಿವ್ ಬ್ಯಾಂಕಿಗೆ ಶತಮಾನದ ಇತಿಹಾಸವಿದೆ. ಈ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಅಚ್ಚಳಿಯದ ಹೆಸರು ದಾಖಲಾಗಿದೆ. ಅಂದಹಾಗೆ 1915ರಲ್ಲಿ ಈ ಬ್ಯಾಂಕ್ ಆರಂಭಗೊಂಡಿತು. ಈಗ 2024ಕ್ಕೆ ಭರ್ತಿ 109 ವರ್ಷಗಳು! ಶಿವಮೊಗ್ಗ ಜಿಲ್ಲೆಯಲ್ಲಿಯೇ ಅತ್ಯುತ್ತಮ ಸಹಕಾರಿ ಬ್ಯಾಂಕ್ ಎಂಬ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಶತಮಾನದ ಬ್ಯಾಂಕ್ ಎಂದು ನವದೆಹಲಿಯಲ್ಲೂ ರಾಷ್ಟ್ರೀಯ ಸಹಕಾರ ಫೆಡರೇಷನ್ ನಿಂದ ಗೌರವ ಪುರಸ್ಕಾರ ಸಂದಿದೆ.

ಇಂಥ ದೀರ್ಘಕಾಲದ ಇತಿಹಾಸವುಳ್ಳ ಪಟ್ಟಣ ಸಹಕಾರಿ ಬ್ಯಾಂಕ್ ಒಬ್ಬ ಮಹಿಳೆಯ ಸಾರಥ್ಯದಲ್ಲಿ (ಸಿಇಓ) ನಡೆಯುತ್ತಿದೆ ಎಂದರೆ ಯಾರೂ ಮೂಗಿನ ಮೇಲೆ ಬೆರಳಿಡಬೇಕು. ನಿಮಗೆ ನಿಜ ತಿಳಿಯಬೇಕಾದರೆ ಸಾಗರದ ಚಾಮರಾಜಪೇಟೆಯಲ್ಲಿರುವ ಶ್ರೀ ಗಣಪತಿ ಅರ್ಬನ್ ಬ್ಯಾಂಕಿಗೆ ಕಾಲಿಟ್ಟರೆ ಅವರು ಎದುರಾಗುತ್ತಾರೆ. ತಮ್ಮದೇ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಗಿ (ಸಿಇಓ) ಕೊಠಡಿಯಲ್ಲಿ ಕಾರ್ಯ ತತ್ಪರರಾಗಿರುತ್ತಾರೆ. ಅವರೇ ಬಿ. ಲಲಿತಾಂಬಿಕೆ. ಮಹಿಳೆ ಎಲ್ಲ ಕ್ಷೇತ್ರಕ್ಕೂ ಕಾಲಿಟ್ಟಿದ್ದಾಳೆ. ಮಹಿಳಾ ಸಬಲೀಕರಣದ ಸುದ್ದಿ ಸದ್ದು ಮಾಡುತ್ತಿರುವಾಗಲೇ ಅವರು ಇಂಥ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ.

ಈಕೆ ಸಾಗರದಲ್ಲಿ ನಾರಾಯಣಪ್ಪ ಮತ್ತು ಲಕ್ಷಮ್ಮ ದಂಪತಿ ಪುತ್ರಿಯಾಗಿ ಜನಿಸಿದರು. ಸಾಗರದ ಎಲ್.ಬಿ. ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದುಕೊಂಡರು. ಮುಂದೆ 1993ರಲ್ಲಿ ಗಣಪತಿ ಬ್ಯಾಂಕಿನಲ್ಲಿ ಕ್ಲರ್ಕ್ ಹುದ್ದೆಗೆ ಸೇರಿದರು. ಕಳೆದ 30 ವರ್ಷಗಳಿಂದ ಶ್ರೀ ಗಣಪತಿ ಬ್ಯಾಂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಂತರ 2007 ರಿಂದ ಸಹಾಯಕ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಗಿ ಪದೋನ್ನತಿ ಹೊಂದಿದರು. ನಂತರ ತಮ್ಮ ಕಾರ್ಯಕ್ಷಮತೆಯಂದ 2018 ರಿಂದ ಮುಖ್ಯ ಸಿಇಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಲಲಿತಾಂಬಿಕೆ ಬಿ.ಕಾಂ. ಪದವೀಧರರಾಗಿದ್ದು, ಸೀನಿಯರ್ ಡಿಪ್ಲೊಮಾ ಇನ್ ಕೋಆಪರೇಟಿವ್ ಮ್ಯಾನೇಜ್ ಮೆಂಟ್ ಹಾಗೂ ಕೋಆಪರೇಟಿವ್ ಡಿಪ್ಲೊಮಾಗಳಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ರಾಂಕ್ ಪಡೆದು `ಬಂಗಾರದ ಪದಕ'ವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಇವರನ್ನು ಶಿವಮೊಗ್ಗ ಜಿಲ್ಲಾ ಯೂನಿಯನ್ ನಿಂದ 2021-22 ರಲ್ಲಿ `ಉತ್ತಮ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ' ಎಂದು ಸನ್ಮಾನಿಸಿ ಗೌರವಿಸಲಾಗಿದೆ. ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಶಿವಮೊಗ್ಗ ಹಾಗೂ ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ಇದರಿಂದ ಶ್ರೀ ಗಣಪತಿ ಅರ್ಬನ್ ಕೋಆಪರೇಟಿವ್ ಬ್ಯಾಂಕ್ ಲಿ.ಸ ಸಾಗರ `ಶಿವಮೊಗ್ಗ ಜಿಲ್ಲಿಯ ಉತ್ತಮ ಸಹಕಾರ ಬ್ಯಾಂಕ್' ಎಂದು ಪ್ರಶಸ್ತಿಯನ್ನು ಪಡೆದುಕೊಂಡಿದೆ.
2023ರಲ್ಲಿ ಈಕೆಗೆ ರಾಜ್ಯ ಮಟ್ಟದ ಸಹಕಾರಿ ಸಪ್ತಾಹದಲ್ಲಿ ಶಿವಮೊಗ್ಗ ಜಿಲ್ಲೆಯ `ಉತ್ತಮ ಮಹಿಳಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ' ಎಂಬ ಗೌರವವನ್ನು ನೀಡಿ ಸನ್ಮಾನಿಸಲಾಗಿದೆ. 100 ವರ್ಷ ಪೂರೈಸಿದ ಗಣಪತಿ ಬ್ಯಾಂಕ್ ನ್ನು 23.06.2022 ರಂದು ನವದೆಹಲಿಯಲ್ಲಿ ನಡೆದ ಸಮ್ಮೇಳನದಲ್ಲಿ ಕೇಂದ್ರ ಸರ್ಕಾರದಿಂದ ಸನ್ಮಾನಿಸಿ ಗೌರವಿಸಲಾಗಿದೆ.





