ತ್ವಚೆಯನ್ನು ಬ್ಯೂಟಿಪುಲ್, ಕೋಮಲ, ಅನಗತ್ಯ ಕೂದಲು ರಹಿತಗೊಳಿಸಲು ವ್ಯಾಕ್ಸಿಂಗ್‌ಗಿಂತ ಮತ್ತೊಂದು ಉತ್ತಮ ಉಪಾಯವಿಲ್ಲ. ಇದರಿಂದ ಅನಗತ್ಯ ಕೂದಲು ತೆಗೆಯುವುದಷ್ಟೇ ಅಲ್ಲ, ಟ್ಯಾನಿಂಗ್‌ನಂಥ ಸಮಸ್ಯೆಯಿಂದಲೂ ದೂರಾಗಬಹುದು. ವ್ಯಾಕ್ಸಿಂಗ್‌ ಮಾಡಿಸಿದ ನಂತರ ಸಾಮಾನ್ಯವಾಗಿ ತ್ವಚೆ 2 ವಾರಗಳವರೆಗೂ ಮೃದುವಾಗಿರುತ್ತದೆ. ನಂತರ ಮೂಡುವ ಕೂದಲು ಎಳೆಯದಾಗಿ, ಕೋಮಲ ಆಗಿರುತ್ತದೆ. ನಿಯಮಿತವಾಗಿ ವ್ಯಾಕ್ಸಿಂಗ್‌ ಮಾಡುವುದರಿಂದ 3-4 ವಾರ ಕೂದಲು ಮತ್ತೆ ಮೂಡುವುದಿಲ್ಲ. ಕಾಲಕ್ರಮೇಣ ಕೂದಲಿನ ಬೆಳವಣಿಗೆ ತಗ್ಗಿಹೋಗುತ್ತದೆ.

ಹಾಗಿದ್ದರೆ ವ್ಯಾಕ್ಸಿಂಗ್‌ನ ವಿವಿಧ ವಿಧಾನಗಳನ್ನು ತಿಳಿಯೋಣವೇ?

ಸಾಫ್ಟ್ ವ್ಯಾಕ್ಸ್ (ರೆಗ್ಯುಲರ್‌)

ಇದು ಎಲ್ಲಕ್ಕೂ ಅತಿ ಕಾಮನ್‌ ಎನಿಸಿದೆ. ಇದು ಜೇನುತುಪ್ಪ, ಸಕ್ಕರೆಗಳ ಅಂಶದಿಂದ ತಯಾರಾಗಿದೆ. ಹೇರ್‌ ರಿಮೂವ್‌ ಮಾಡುವ ಜೊತೆಯಲ್ಲೇ ಇದು ಟ್ಯಾನಿಂಗ್‌ ಸಹ ನಿವಾರಿಸುತ್ತದೆ. ಜೊತೆಗೆ ಚರ್ಮವನ್ನು ಸಾಫ್ಟ್ ಗ್ಲಾಸಿ ಮಾಡುತ್ತದೆ.

ಚಾಕಲೇಟ್‌ ವ್ಯಾಕ್ಸ್

ಈ ವ್ಯಾಕ್ಸ್ ನೆರವಿನಿಂದ ಸ್ಕಿನ್‌ ಪೋರ್ಸ್‌ ದೊಡ್ಡದಾಗುತ್ತವೆ. ಇದರಿಂದ ಕೂದಲನ್ನು ಸುಲಭವಾಗಿ ಹೊರ ತೆಗೆಯಬಹುದು, ಜೊತೆಗೆ ಹೆಚ್ಚಿನ ನೋವು ಇರುವುದಿಲ್ಲ. ಇಷ್ಟು ಮಾತ್ರವಲ್ಲದೆ, ಚಾಕಲೇಟ್‌ನಲ್ಲೇ ಮೂಲತಃ ಸ್ಕಿನ್‌ ಸ್ಮೂದಿಂಗ್‌ ಗುಣಗಳಿವೆ. ಇದು ದೇಹವನ್ನು ರಿಲ್ಯಾಕ್ಸ್ ಗೊಳಿಸುತ್ತದೆ. ಕೋಕೋ ಪೌಡರ್‌ ಬೇಸ್ಡ್ ಈ ವ್ಯಾಕ್ಸಿಂಗ್‌ನಿಂದ ಕೂದಲು ಪೂರ್ತಿಯಾಗಿ ಹೋಗುತ್ತದೆ. ಆಗ ಸ್ಕಿನ್‌ ಸಾಫ್ಟ್ ಸ್ಮೂದ್‌ ಅನಿಸುತ್ತದೆ. ಈ ವ್ಯಾಕ್ಸಿಂಗ್‌ನಿಂದ ದೇಹದ ಮೇಲೆ ರೆಡ್‌ ಪ್ಯಾಚೆಸ್‌ ಬರುವ ಸಾಧ್ಯತೆಗಳೂ ಅತಿ ಕಡಿಮೆ. ಈ ವ್ಯಾಕ್ಸ್ ಸೆನ್ಸಿಟಿವ್‌ ಸ್ಕಿನ್‌ಗೂ ಸಹ ಉತ್ತಮ ಎನಿಸಿದೆ. ಇದರ ಜೊತೆ ಚಾಕಲೇಟ್‌ ಪರಿಮಳ ಎಲ್ಲರಿಗೂ ಇಷ್ಟವಾಗುತ್ತದೆ. ಇದರ ಆನಂದವನ್ನು ಅನುಭವಿಸಿಯೇ ತೀರಬೇಕು.

ಆ್ಯಲೋವೆರಾ ವ್ಯಾಕ್ಸ್

ಆ್ಯಲೋವೆರಾದ ತಿರುಳಿನಿಂದ ರೂಪುಗೊಂಡ ಈ ವ್ಯಾಕ್ಸ್ ಸ್ಕಿನ್‌ಗೆ ನರಿಶ್‌ಮೆಂಟ್‌ ನೀಡುವ ಜೊತೆಯಲ್ಲೇ ರೀಜುವಿನೇಟ್‌ ಸಹ ಮಾಡಿಸುತ್ತದೆ. ಇದು ದೇಹದ ಸೆನ್ಸಿಟಿವ್‌ ಏರಿಯಾ… ಅಂದರೆ ಅಂಡರ್‌ ಆರ್ಮ್ಸ್, ಬಿಕಿನಿ ಪಾರ್ಟ್‌ಗೂ ಸಹ ಬಹು ಹಿತಕಾರಿ.

ಬ್ರೆಝಿಲಿಯನ್‌ ವ್ಯಾಕ್ಸ್

ಇದೂ ಸಹ ಹಾರ್ಡ್‌ ವ್ಯಾಕ್ಸ್ ನ ಒಂದು ಟೈಪ್‌ ಆಗಿದೆ. ಇದನ್ನು ವಿಶೇಷವಾಗಿ ಬಿಕಿನಿ ಏರಿಯಾಗೆಂದೇ ಮಾಡಲಾಗುತ್ತದೆ. ಇದರಿಂದ ಎಲ್ಲಾ ಭಾಗದ ಅನಗತ್ಯ ಕೂದಲಿನಿಂದಲೂ ಮುಕ್ತಿ ಪಡೆಯಬಹುದು. ಅಂದ್ರೆ ಮುಂದೆ, ಹಿಂದೆ, ಸೈಡ್‌, ಸೆಂಟರ್‌ನಿಂದಲೂ ಹೇರ್‌ ರಿಮೂವ್‌ ಮಾಡಬಹುದು. ವ್ಯಾಕ್ಸಿಂಗ್‌ನ ನೋವು ತಿಳಿಯಬಾರದೆಂದರೆ ಇದನ್ನು ಆದಷ್ಟು ಬೇಗ ಮಾಡಿ ಮುಗಿಸಬೇಕು.

ಲಿಪೋಸಾಲ್ಯುಬ್‌ ವ್ಯಾಕ್ಸ್

ಈ ವ್ಯಾಕ್ಸ್, ಆಯಿಲ್ ಬೇಸ್ಡ್ ಎನಿಸಿದೆ. ಕೂದಲಿನ ಬುಡಭಾಗದಲ್ಲಿ ಇದರ ಗ್ರಿಪ್‌ ಉತ್ತಮವಾಗಿದೆ. ಜೊತೆಗೆ ಇದು ಸ್ಕಿನ್‌ಗೆ ಬಹಳ ಡೆಲಿಕೇಟ್‌ ಎನಿಸಿದೆ. ಈ ವ್ಯಾಕ್ಸ್ ಬಳಸುವ ಮೊದಲು ಮತ್ತು ನಂತರ ಸ್ಕಿನ್‌ ಮೇಲೆ ತುಸು ಆಲಿವ್‌ ಆಯಿಲ್ ಹಾಕಲಾಗುತ್ತದೆ. ಕೂದಲನ್ನು ತೆಗೆಯಲು ಸಣ್ಣ ಸಣ್ಣ ಸ್ಟ್ರಿಪ್ಸ್ ಬಳಸುತ್ತಾರೆ. ಈ ವ್ಯಾಕ್ಸ್ ಎಷ್ಟೇ ಬಿಸಿಯಾದರೂ ಅದರಿಂದ ಚರ್ಮಕ್ಕೆ ಹಾನಿಯಿಲ್ಲ. ಇವನ್ನೂ ಗಮನಿಸಿ

ವ್ಯಾಕ್ಸಿಂಗ್‌ ಮಾಡಿಸುವವರಿಗೆ ತಜ್ಞರು ನೀಡುವ ಮೊದಲ ಸಲಹೆ ಎಂದರೆ, ವ್ಯಾಕ್ಸಿಂಗ್‌ನ ಮೊದಲು ಅಥವಾ ನಂತರ ಕೆಲವು ಎಚ್ಚರಿಕೆ ವಹಿಸಬೇಕು. ವ್ಯಾಕ್ಸಿಂಗ್‌ ಮಾಡಿಸುವಾಗ ಚರ್ಮ ಸುಡುವ ಸಾಧ್ಯತೆಗಳಿವೆ, ಕೆಂಪು ಕೆಂಪಾಗಬಹುದು, ತ್ವಚೆಗೆ ಸೋಂಕು ತಗುಲಬಹುದು. ಎಲ್ಲಿ ವ್ಯಾಕ್ಸಿಂಗ್‌ ಮಾಡಿದ್ದಾರೋ ಅಲ್ಲಿ ನೋವು, ಚರ್ಮದ ಉರಿ, ಚರ್ಮದ ಬಣ್ಣ ಬದಲಾಗುವಿಕೆ, ಸಣ್ಣ ಸಣ್ಣ ಗುಳ್ಳೆ, ತ್ವಚೆಯ ಟೆಕ್ಸ್ ಚರ್‌ ಬದಲಾಗುವುದು, ನವೆ ಕಡಿತ ಸಹ ಉಂಟಾಗಬಹುದು.

ಮುಖದ ವ್ಯಾಕ್ಸಿಂಗ್

ಮುಖದಲ್ಲಿ ಅಗತ್ಯಕ್ಕಿಂತ ಹೆಚ್ಚು ಕೂದಲು ಮೂಡುವುದು ಕೆಲವು ಮಹಿಳೆಯರಿಗೆ ದೊಡ್ಡ ಸಮಸ್ಯೆಯೇ ಸರಿ. ಪಾರ್ಲರ್‌ಗೆ ಹೋದರೆ ಬೇಗ ವ್ಯಾಕ್ಸಿಂಗ್‌ ಮಾಡಿಸಿ ಎನ್ನುತ್ತಾರೆ. ತಜ್ಞರ ಸಲಹೆ ಎಂದರೆ ಮುಖದ ಮೇಲೆ ವ್ಯಾಕ್ಸಿಂಗ್‌ ಹಾನಿಕಾರಕ. ಮುಖದಲ್ಲಿನ ಚರ್ಮ ಬಲು ಮೃದು, ಹೀಗಾಗಿ ಇತರ ಭಾಗಗಳಿಗಿಂತ ಮುಂಚೆ ಇಲ್ಲಿ ಸುಕ್ಕು ಎದ್ದು ಕಾಣುತ್ತದೆ. ಮುಖದ ಕೂದಲು ತುಸು ದಪ್ಪಕ್ಕಿದ್ದರೆ, ಲೇಸರ್‌ ಹೇರ್‌ ರಿಮೂವ್‌ ಉತ್ತಮ ವಿಧಾನ. ಅದು ದುಬಾರಿ ಎನಿಸಿದರೆ ಬ್ಲೀಚಿಂಗ್‌ ವಿಧಾನವಿದೆ. ವ್ಯಾಕ್ಸಿಂಗ್‌ನಿಂದ ಹೇರ್‌ ಫಾಲಿಕ್ಸ್‌ಗೆ ಬಲು ಹಾನಿ ಆಗುತ್ತದೆ. ಇದರಿಂದ ಸೋಂಕು, ಊತ ತಪ್ಪಿದ್ದಲ್ಲ. ಇದರ ಕಾರಣ ಕಲೆಗಳೂ ಆಗಬಹುದು, ಆಗ ಅದನ್ನು ಹೋಗಲಾಡಿಸುವುದು ನಿಜಕ್ಕೂ ಕಷ್ಟಕರ.

ವ್ಯಾಕ್ಸಿಂಗ್‌ಗೆ ಮುನ್ನ

ವ್ಯಾಕ್ಸಿಂಗ್‌ ಮಾಡಿಸುವ ಮುನ್ನ ಈ ವಿಷಯಗಳನ್ನು ಗಮನದಲ್ಲಿಡಿ :

– ವ್ಯಾಕ್ಸಿಂಗ್‌ ಮಾಡುವವರ ಕೈಗಳು ಶುದ್ಧವಾಗಿರಬೇಕು.

– ಯಾವ ಭಾಗದ ಚರ್ಮ ವ್ಯಾಕ್ಸ್ ಆಗಬೇಕೋ ಅದೂ ಸಹ ಶುದ್ಧವಾಗಿರಬೇಕು.

– ಇದನ್ನು ಉತ್ತಮ ಪಾರ್ಲರ್‌ನಲ್ಲಿಯೇ  ಮಾಡಿಸಿ.

– ವ್ಯಾಕ್ಸ್ ಮತ್ತು ಪಟ್ಟಿಗಳು ಉತ್ತಮ ಬ್ರ್ಯಾಂಡ್‌ನವು ಆಗಿರಲಿ.

ವ್ಯಾಕ್ಸಿಂಗ್‌ ಮಾಡಿಸುವ 1 ದಿನ ಮೊದಲು ಚರ್ಮದ ಸ್ಕ್ರಬಿಂಗ್‌ ಮಾಡಿಸಿ. ಇದು ಡೆಡ್‌ ಸ್ಕಿನ್‌ನ್ನು ಸುಲಭವಾಗಿ ಹೊರತೆಗೆಯುತ್ತದೆ, ಇವು ಹೇರ್‌ ಫಾಲಿಕಲ್ಸ್ ನ್ನು ಕ್ಲೋಸ್‌ ಮಾಡಿ, ಹೇರ್‌ ಇನ್‌ಗ್ರೋನ್‌ ಸಮಸ್ಯೆ ಹೆಚ್ಚಿಸುತ್ತದೆ.

ವ್ಯಾಕ್ಸಿಂಗ್‌ ನಂತರ

ವ್ಯಾಕ್ಸಿಂಗ್‌ ಮಾಡಿಸಿದ ತಕ್ಷಣ ತ್ವಚೆ ಕೆಂಪು ಕೆಂಪಾಗುತ್ತದೆ, ಅದರ ಮೇಲೆ ರಾಶೆಸ್‌ ಕಾಣಿಸುತ್ತದೆ. 2-3 ತಾಸುಗಳ ನಂತರ ಇದು ತಂತಾನೇ ಮಾಯವಾಗುತ್ತದೆ. ಇದು ಹಿಸ್ಟಾಮಿನ್‌ನ ಪ್ರಕ್ರಿಯೆ ಕಾರಣ ಹೀಗಾಗುತ್ತದೆ, ಏಕೆದಂರೆ ಕೂದಲನ್ನು ಇದು ಬುಡದಿಂದಲೇ ತೆಗೆದುಹಾಕುತ್ತದೆ. ಆ ಭಾಗವನ್ನು ಶುದ್ಧವಾಗಿರಿಸಿ, ಬ್ಯಾಕ್ಟೀರಿಯಾ ಮುಕ್ತವಾಗಿಸಬೇಕು.

– ವ್ಯಾಕ್ಸಿಂಗ್‌ ಮಾಡಿಸಿದ 24 ಗಂಟೆಗಳ ತನಕ ಬಿಸಿಲಿಗೆ ಹೋಗಬೇಡಿ.

– 12 ಗಂಟೆಗಳ ಕಾಲ ಸನ್‌ಬಾಥಿಂಗ್‌ ಬೇಡವೇ ಬೇಡ.

– 24 ಗಂಟೆಗಳ ಕಾಲ ಕ್ಲೋರಿನ್‌ ಬೆರೆತ ಸ್ವಿಮಿಂಗ್‌ ಪೂಲ್‌ನಲ್ಲಿ ಈಜಲು ಹೋಗಬೇಡಿ.

– ಸ್ಪಾ ಮತ್ತು ಸೋನಾ ಬಾಥ್‌ ಮಾಡಿಸಬೇಡಿ.

– ಯಾವುದೇ ಪರಿಮಳಯುಕ್ತ ಕ್ರೀಂ ಹಚ್ಚಬೇಡಿ, ಇಲ್ಲದಿದ್ದರೆ ಉರಿ ಆದೀತು.

– ಆ ಭಾಗದ ಮೇಲೆ ಬ್ಯಾಕ್ಟೀರಿಯಾ ಹೆಚ್ಚದಂತೆ ತಡೆಗಟ್ಟಲು ಟೀಟ್ರೀಯುಕ್ತ ಉತ್ಪನ್ನ ಬಳಸಿರಿ.

– ವ್ಯಾಕ್ಸಿಂಗ್‌ ನಂತರ ಚರ್ಮ ಕೆಂಪು ಕೆಂಪಾಗಿದ್ದರೆ, ಅರ್ಧ ಬಟ್ಟಲು ಹಾಲಿಗೆ, ಅಷ್ಟೇ ನೀರು ಬೆರೆಸಿ. ಇದರಲ್ಲಿ ಪೇಪರ್‌ ಟವೆಲ್‌ ಅದ್ದಿಕೊಂಡು ತ್ವಚೆಯನ್ನು ಒರೆಸಿಕೊಳ್ಳಿ. ಇದನ್ನು ಆಗಾಗ ರಿಪೀಟ್‌ ಮಾಡಿ, ಆರಾಮ ಪಡೆಯಿರಿ. ಹಾಲಿನ ಲ್ಯಾಕ್ಟಿಕ್‌ ಆ್ಯಸಿಡ್‌ ಚರ್ಮಕ್ಕೆ ಹಿತಕಾರಿ.

– ಇನ್‌ಗ್ರೋನ್‌ ಹೇರ್‌ ಗ್ರೋಥ್‌ನ್ನು ತಡೆಯಲು ವ್ಯಾಕ್ಸ್ ಮಾಡಿದ ಭಾಗವನ್ನು ಐಸ್‌ನಿಂದ ತೀಡಿರಿ. ಇದರಿಂದ ರೋಮರಂಧ್ರಗಳು ಕ್ಲೋಸ್‌ ಆಗುತ್ತವೆ, ಬ್ಯಾಕ್ಟೀರಿಯಾ ಒಳಗೆ ಪ್ರವೇಶಿಸುವುದಿಲ್ಲ. ಸ್ವಲ್ಪ ಹೊತ್ತಿನ ನಂತರ ವ್ಯಾಕ್ಸಿಂಗ್‌ ಭಾಗವನ್ನು ಸ್ಯಾಲಿಸಿಲಿಕ್‌ ಕ್ಲೆನ್ಸ್‌ನಿಂದ ತೊಳೆದುಬಿಡಿ.

– ವ್ಯಾಕ್ಸಿಂಗ್‌ ನಂತರ ಉರಿ ಹೆಚ್ಚಾಗಿದೆ ಎನಿಸಿದರೆ, ಆಗ ಆ್ಯಲೋವೆರಾಯುಕ್ತ ಕ್ರೀಂ ಹಚ್ಚಬೇಕು. ಇದರಲ್ಲಿ ಆಲ್ಕೋಹಾಲ್‌ಇರಬಾರದು ಎಂಬುದನ್ನು ನೆನಪಿಡಿ. ಉರಿ ಕಡಿಮೆ ಮಾಡಲು ಐಸ್‌ ಕ್ಯೂಬ್ಸ್ ಬಳಸುತ್ತಿರಿ.

– ವ್ಯಾಕ್ಸಿಂಗ್‌ ಮಾಡಿಸಿದ ತಕ್ಷಣ ಜಿಮ್ ಗೆ ಹೊರಟು ಬಿಡಬೇಡಿ. ಇದರಿಂದ ನಿಮ್ಮ ಹೊಸ ಮೃದು ಚರ್ಮದ ಮೇಲೆ ಬ್ಯಾಕ್ಟೀರಿಯಾ ಬಹುಬೇಗ ಹತ್ತಿಕೊಳ್ಳುತ್ತದೆ.

– ಹಾಗೆಯೇ ವ್ಯಾಕ್ಸಿಂಗ್‌ ಮಾಡಿಸಿದ ತಕ್ಷಣ ಯಾವುದೇ ಸ್ಕಿನ್‌ ಟೈಟ್‌ ಡ್ರೆಸೆಸ್‌ ಬೇಡ. ಇದರಿಂದ ಉಡುಗೆ ನುಣುಪಾದ ಚರ್ಮವನ್ನು ಘರ್ಷಿಸಿ ಹಿಂಸೆ ಹೆಚ್ಚಿಸಬಹುದು.

ಎಚ್ಚರಿಕೆ ಅಗತ್ಯ           

ನಾಳೆ ಫಂಕ್ಷನ್‌ ಇದೆ ಎಂದರೆ ಇವತ್ತು ವ್ಯಾಕ್ಸಿಂಗ್‌ ಮಾಡಿಸದಿರಿ. ಏಕೆಂದರೆ ನಿಮ್ಮ ಚರ್ಮ ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೋ ತಿಳಿಯದು.

– ನೀವು ರೆಗ್ಯುಲರ್‌ ವ್ಯಾಕ್ಸಿಂಗ್‌ ಮಾಡಿಸುತ್ತೀರಿ ಎಂದ ಮೇಲೆ, ಮಧ್ಯೆ ಮಧ್ಯೆ ಶೇವ್‌ ಮಾಡಬೇಡಿ. ಇದರಿಂದ ಕೂದಲು ಎದ್ದು ನಿಲ್ಲುತ್ತದೆ ಹಾಗೂ ವ್ಯಾಕ್ಸಿಂಗ್‌ ಮಾಡಲು ಕಷ್ಟವಾಗುವುದು. ಮುಖ್ಯವಾಗಿ ಚರ್ಮ ಸಮಸ್ಯೆಗಳುಳ್ಳವರು ಅಂದರೆ ಎಗ್ಸಿಮಾ, ಕತ್ತರಿಸಿದ ಚರ್ಮ, ಚರ್ಮದ ಮೇಲೆ ಗಾಯ ಆಗಿದ್ದರೆ ವ್ಯಾಕ್ಸಿಂಗ್‌ ಮಾಡಿಸಬೇಡಿ.

– ವ್ಯಾಕ್ಸಿಂಗ್‌ ಮಾಡಿಸಿದ 24 ಗಂಟೆಗಳ ನಂತರ ಚರ್ಮದಲ್ಲಿ ಉರಿ, ನೋವು, ಉಳಿದಿದ್ದರೆ, ತಕ್ಷಣ ಚರ್ಮತಜ್ಞರನ್ನು ಭೇಟಿಯಾಗಿ.

ಲೇಸರ್‌ ಟೆಕ್ನಿಕ್‌

ತಜ್ಞರ ಸಲಹೆಯಂತೆ, ನೀವು ನಿಮ್ಮ ಮುಖ ಅಥವಾ ದೇಹದ ಅನಗತ್ಯ ಕೂದಲಿನಿಂದ ಮುಕ್ತಿ ಬಯಸಿದರೆ, ವ್ಯಾಕ್ಸಿಂಗ್‌ ಅಥವಾ ಲೇಸರ್‌ ಉತ್ತಮ ಆಯ್ಕೆ ಆಗುತ್ತದೆ. ಶೇವಿಂಗ್‌ಗೆ ಹೋಲಿಸಿದಾಗ, ಈ ಎರಡೂ ಪ್ರಕ್ರಿಯೆಗಳಿಂದ ಚರ್ಮ ಹೆಚ್ಚು ಕಾಲ ಮೃದುವಾಗಿರುತ್ತದೆ.

ಲೇಸರ್‌ ಮಾಡಿಸಿದ ಕೆಲವು ಮಹಿಳೆಯರಿಗೆ ಅಪರೂಪಕ್ಕೆ ಮತ್ತೆ ಬೇಡದ ಕೂದಲು ಮೂಡಬಹುದು. ಆದರೆ ಹೀಗೆ ಕೂದಲು ಮೊಳೆತು ಬೆಳೆಯುವ ಕಾಲ, ಒಬ್ಬೊಬ್ಬರಿಗೆ ಒಂದೊಂದು ತರಹ ಇರುತ್ತದೆ. ಲೇಸರ್‌ ಟ್ರೀಟ್‌ಮೆಂಟ್‌ ನಂತರ ಮೂಡುವ ಕೂದಲು ಅತಿ ತೆಳ್ಳಗೆ, ನಯವಾಗಿದ್ದು, ಬಣ್ಣ ತಿಳಿಯಾಗಿರುತ್ತದೆ. ಹೀಗಾಗಿಯೇ ಅನಗತ್ಯ ಕೂದಲ ನಿವಾರಣೆಯಲ್ಲಿ ಲೇಸರ್‌ ಪ್ರಧಾನ ಪಾತ್ರ ವಹಿಸುತ್ತದೆ. ಲೇಸರ್‌ ಚಿಕಿತ್ಸೆಗೆ ಎಷ್ಟು ಸಿಟ್ಟಿಂಗ್ಸ್, ಖರ್ಚು ಎಷ್ಟು ಮುಂತಾದುವೆಲ್ಲ ನೀವು ದೇಹದ ಯಾವ ಭಾಗದ ಎಷ್ಟು ಪ್ರಮಾಣ ಮಾಡಿಸಲಿದ್ದೀರಿ, ಯಾವ ಊರಿನ ಎಂಥ ಪಾಶ್‌ ಪಾರ್ಲರ್‌ ಆರಿಸಿದ್ದೀರಿ ಎಂಬುದನ್ನು ಅವಲಂಬಿಸಿದೆ. ಆ ಕೂದಲು ಮತ್ತೆ ಎಷ್ಟು ಮೂಡುತ್ತದೆ ಎಂಬುನ್ನೂ ಲೆಕ್ಕ ಹಾಕುತ್ತಾರೆ.

– ಜಿ. ಪಂಕಜಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ