ಪ್ರೀತಿಯನ್ನು ಮನಸೋಕ್ತವಾಗಿ ಹರಿಸುವ ಪತಿಯನ್ನು ಪಡೆದುಕೊಳ್ಳಲು ಯಾವ ಹೆಂಡತಿಗೆ ತಾನೇ ಇಷ್ಟವಾಗುವುದಿಲ್ಲ? ಗಂಡ ಒಂದು ಇತಿಮಿತಿಯಲ್ಲಿ, ರೀತಿ ರಿವಾಜುಗಳಿಗೆ ತಕ್ಕಂತೆ ಹೆಂಡತಿಯ ಮೇಲೆ ಪ್ರೀತಿಯ ಮಳೆ ಸುರಿಸುತ್ತಿದ್ದರೆ, ಹೆಂಡತಿಯ ಹೃದಯ ಬಡಿತ ಏರುವುದರಲ್ಲಿ ಸಂದೇಹವೇ ಇಲ್ಲ. ಹೆಂಡತಿಯ ಸೌಂದರ್ಯವನ್ನು ಹೊಗಳುವ ಗಂಡ ಖಂಡಿತವಾಗಿಯೂ ಅವಳ ಹೃದಯವನ್ನು ಗೆಲ್ಲುತ್ತಾನೆ. ಇದರಲ್ಲಿ ಕೆಲವು ಜನ ಹೆಂಡತಿಯರು ಕೆಲವು ವರ್ಷಗಳ ಬಳಿಕ ತಮ್ಮ ಗಂಡಂದಿರ ಹೊಗಳುವಿಕೆಯ ಬಗ್ಗೆ ದ್ವೇಷಿಸಲಾರಂಭಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಖಯಾಲಿ. ಗಂಡ ಹೊರಗಿನ ಮಹಿಳೆಯರ ಮೇಲೆ ಕಣ್ಣು ಹಾಕುವುದು.

ನನ್ನನೇಕೆ ಮದುವೆಯಾದ್ರಿ…?

ಮದುವೆಗೂ ಮುಂಚೆ ವಿನಯ್‌ ಹಾಗೂ ಶೋಭಾ ದಂಪತಿಯನ್ನು ಜನರು `ಮೇಡ್‌ ಫಾರ್‌ ಈಚ್‌ ಅದರ್‌’ ಎಂದು ಹೇಳುತ್ತಿದ್ದರು. ಮದುವೆಯ ಬಳಿಕ ಆದರ್ಶ ದಂಪತಿಗಳೇ ಆಗಿದ್ದರು. ಆದರೆ ಕಾಲಕ್ರಮೇಣ ವಿನಯನ ಕಣ್ಣುಗಳಲ್ಲಿದ್ದ ಮುಗ್ಧತನ ಮಾಯವಾಗ ತೊಡಗಿತು. ದಾರಿಯಲ್ಲಿ ಯಾರಾದರೂ ಮಹಿಳೆಯರು ಕಂಡರೆ ಸಾಕು, ಅವನು ಅವರ ಕಡೆಯೇ ನೋಡುತ್ತ ನಿಂತುಬಿಡುತ್ತಿದ್ದ. ಶೋಭಾ ಅವನ ಈ ಸ್ವಭಾವದಿಂದ ಕೋಪಗೊಂಡು ಕೆಂಗಣ್ಣು ಬೀರುತ್ತಿದ್ದಳು. ಅವನ ಈ ವರ್ತನೆ ಸಹಿಸಲು ಆಗದೇ ಇದ್ದಾಗ ಅವಳು ಬಹಿರಂಗವಾಗಿಯೇ, “ನೀವು ಇದನ್ನೇ ಮಾಡುವ ಹಾಗಿದ್ದಿದ್ದರೆ ನನ್ನನ್ನೇಕೆ ಮದುವೆಯಾದಿರಿ? ನನಗೆ ಮೋಸ ಮಾಡಬೇಕೆಂದು ಮೊದಲೇ ನಿರ್ಧರಿಸಿದ್ದಿರಾ?” ಎಂದು ಕೇಳುತ್ತಾಳೆ.

ಅವಳ ಮಾತಿಗೆ ವಿನಯ್‌ ಹೇಳುತ್ತಿದ್ದ, “ನಾನು ನಿನ್ನನ್ನು ಪ್ರೀತಿಸುವುದಿಲ್ಲ ಎಂದು ನೀನು ಅದ್ಹೇಗೆ ಹೇಳ್ತೀಯಾ? ನೀನು ಯಾವಾಗಲೂ ನನ್ನ ಹೃದಯದ ರಾಣಿ.”

ವಾಸ್ತವ ಸಂಗತಿ ಬೇರೆಯೇ ಆಗಿತ್ತು. ಆಫೀಸಿನ ಒಬ್ಬಳು ಹುಡುಗಿ ಮಂಜುಳಾ ಅವನನ್ನು ಆಕರ್ಷಿಸಿಬಿಟ್ಟಿದ್ದಳು. ಸದಾ ನಗುನಗುತ್ತಾ ಇರುತ್ತಿದ್ದ, ಮನಸ್ಸನ್ನು ಖುಷಿಗೊಳಿಸುತ್ತಿದ್ದ ಆಕೆಯ ಜೊತೆಗೆ ಅವನ ನಿಕಟತೆ ಹೆಚ್ಚಿತ್ತು. ಅವಳ ಜೊತೆ ಇದ್ದಾಗ ಅವನಿಗೆ ತನ್ನ ಕಾಲೇಜಿನ ದಿನಗಳು ನೆನಪಿಗೆ ಬರುತ್ತಿದ್ದವು. ಮಂಜುಳಾಳ ತುಂಟಾಟದ ಕಣ್ಣಾಮುಚ್ಚಾಲೆ ಆಟ ಅವನ ಪುರುಷತನಕ್ಕೆ ಸವಾಲೆಸೆಯುವಂತಿತ್ತು. ಆ ತುಂಟ ಕಣ್ಣುಗಳ ಚೆಲುವೆಯ ಮುಂದೆ ಶೋಭಾಳ ಚೆಲುವು ಮಸುಕು ಮಸುಕು ಎಂಬಂತೆ ಭಾಸವಾಗುತ್ತಿತ್ತು. ಶೋಭಾಳನ್ನು ಅವನು ಮನಸಾರೆ ಪ್ರೀತಿಸುತ್ತಿದ್ದ. ತನ್ನ ಜೀವನದ ಅವಿಭಾಜ್ಯ ಅಂಗ ಎಂದೇ ಭಾವಿಸುತ್ತಿದ್ದ. ಆದರೆ ರೊಮ್ಯಾನ್ಸ್ ನಿಟ್ಟಿನಲ್ಲಿ ಮಂಜುಳಾಳನ್ನು ಬದಿಗೆ ಸರಿಸುವುದು ಅವನಿಗೆ ಅಸಾಧ್ಯ ಎಂಬಂತಾಗಿತ್ತು.

ಇವರು ನನ್ನ ಗಂಡ!

ಶೋಭಾಳ ಹಾಗೆ ಮೈತ್ರೇಯಿ ಕೂಡ ತನ್ನ ಗಂಡನ ಪ್ರೇಮ ಪ್ರಕರಣಗಳಿಂದ ಬೇಸತ್ತು ಹೋಗಿದ್ದಳು. ಗೆಳತಿಯರ ಮನೆಗಳಿಗೆ ಗಂಡನನ್ನು ಕರೆದುಕೊಂಡು ಹೋಗಲು ಆಕೆ ಹೆದರುತ್ತಿದ್ದಳು. ಆಕೆ ಗಂಡನ ಮೇಲೆ ಸದಾ ಒಂದು ಕಣ್ಣು ನೆಟ್ಟಿರುತ್ತಿದ್ದಳು. ಯಾವುದೇ ಪಾರ್ಟಿಗೆ ಹೋದರೂ ಆಕೆಗೆ ಪಾರ್ಟಿಯಲ್ಲಿ ಮನಸ್ಸು ನಿಲ್ಲುವುದೇ ಇಲ್ಲ. ಪತಿಯ ವ್ಯಕ್ತಿತ್ವ, ಮಾತಿನ ವೈಖರಿ ಹೇಗಿತ್ತೆಂದರೆ, ಅವನ ಸುತ್ತಮುತ್ತ ಒಂದಿಷ್ಟು ಜನ ಇದ್ದೇ ಇರುತ್ತಿದ್ದರು. ಅದರಲ್ಲೂ ಹುಡುಗಿಯರ ಸಂಖ್ಯೆ ಹೇರಳವಾಗಿರುತ್ತಿತ್ತು. ಆ ದೃಶ್ಯ ನೋಡಿ ಮೈತ್ರೇಯಿಗೆ ಗಂಡನ ಕೆನ್ನೆಗೆ ಎರಡು ಬಾರಿಸಬೇಕು ಎನ್ನುವಷ್ಟರ ಮಟ್ಟಿಗೆ ಕೋಪ ಬರುತ್ತಿತ್ತು. ಅಷ್ಟೇ ಅಲ್ಲ, ಇವನು ನನ್ನ ಗಂಡ, ಇವನ ಹತ್ತಿರ ಯಾರೂ ಸುಳಿಯಬೇಡಿ ಎಂದು ಕೊರಳಲ್ಲಿ ಬೋರ್ಡ್‌ ಹಾಕಬೇಕು ಎನಿಸುತ್ತಿತ್ತು.

ಪುರುಷರ ವರ್ತನೆಗೆ ಏನು ಕಾರಣ?

ಮನೆಯಲ್ಲಿ ರೂಪವತಿ ಹೆಂಡತಿ ಇದ್ದಾಗ್ಯೂ ಕೆಲವು ಪತಿಯರಿಗೆ ಈ ತೆರನಾಗಿ ಮನಸ್ಸು ಏಕೆ ಚಂಚಲಗೊಳ್ಳುತ್ತದೆ? ಈ ಪ್ರಶ್ನೆಯನ್ನು ಮ್ಯಾರೇಜ್‌ ಕೌನ್ಸೆಲರ್‌ ಒಬ್ಬರ ಬಳಿ ಕೇಳಲಾಯಿತು. ಅವರು ಹೇಳಿದ ಮಾತುಗಳನ್ನು ಕೇಳಿ ನಿಮಗೆ ಕೋಪ ಬರುತ್ತದೆ. ಅಷ್ಟೇ ಅಲ್ಲ, ಗೊತ್ತಿಲ್ಲದ ಒಂದು ವಿಷಯದ ಬಗ್ಗೆ ಮಾಹಿತಿ ಕೂಡ ದೊರೆಯುತ್ತದೆ.

ಪುರುಷರ ರಕ್ತದಲ್ಲಿ ಎಂತಹ ಕೆಲವು ಘಟಕಗಳಿವೆ ಎಂದರೆ, ಅವೇ ಹೆಚ್ಚು ಕಡಿಮೆ ಪುರುಷರ ವರ್ತನೆಗೆ ಕಾರಣಗಳಾಗಿವೆ. ಅಂದರೆ ನಿಸರ್ಗವೇ ಅವರ ಈ ವರ್ತನೆಗೆ ಒಂದಷ್ಟು ಮಟ್ಟಿಗೆ ಕಾರಣವಾಗಿದೆ.

ಇದರ ಅರ್ಥವನ್ನು ಹೀಗೂ ವಾಖ್ಯಾನಿಸಬಹುದು. ಪ್ರತಿಯೊಬ್ಬ ಪುರುಷನಲ್ಲೂ ವಿಲಾಸಿತನದ, ಬೇರೆ ಸ್ತ್ರೀಯರ ಮೇಲೆ ಕಣ್ಣು ಹಾಕುವ ಚಂಚಲ ಪ್ರವೃತ್ತಿ ಇದ್ದೇ ಇರುತ್ತವೆ. ಕೆಲವರಿಗೆ ಧೈರ್ಯವಾಗಿ ಕಣ್ಣುಹಾಕುವ ಭಂಡತನ ಇದ್ದರೆ, ಮತ್ತೆ ಕೆಲವರಿಗೆ ಆ ಧೈರ್ಯವೇ ಇರುವುದಿಲ್ಲ. ಒಬ್ಬ ವ್ಯಕ್ತಿಗೆ ತನ್ನ ಹೆಂಡತಿಗಿಂತ ಬೇರೊಬ್ಬನ ಹೆಂಡತಿಯೇ ಸುಂದರಿಯಾಗಿ ಕಾಣುತ್ತಾಳೆ. ಅವಳಲ್ಲಿಯೇ ಆತ ದಿನ ದಿನ ಹೊಸ ಹೊಸ ಪ್ರೇಯಸಿಯರನ್ನು ಕಾಣುತ್ತಾನೆ. ಇನ್ನು ಕೆಲವರು ತಮ್ಮ ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ತನಗೇಕೆ ಆ ಉಸಾಬರಿ ಎಂದು ಸುಮ್ಮನಿದ್ದುಬಿಡುತ್ತಾರೆ. ಈಗ ಇಲ್ಲಿ ಏಳುವ ಒಂದು ಮುಖ್ಯ ಪ್ರಶ್ನೆಯೆಂದರೆ, ಕೆಲವೇ ಕೆಲವು ಪತಿಯರು ಮಾತ್ರ ಈ ಸುಳಿಗೆ ಏಕೆ ಸಿಲುಕುತ್ತಾರೆ? ಆ ಬಗ್ಗೆ ಮನೋತಜ್ಞರು ಕೊಟ್ಟ ಉತ್ತರಗಳು ಬಲು ರೋಚಕವಾಗಿವೆ.

ಪತ್ನಿಯಿಂದ ಬಯಸಿದ ಸುಖವಿಲ್ಲ

ಸಾಮಾನ್ಯವಾಗಿ ಪತಿಯರ ಅಂತರ್ಮನದಲ್ಲಿ ಒಂದು ಬಗೆಯ ಅತೃಪ್ತಿ ಆವರಿಸಿಕೊಂಡಿರುತ್ತದೆ. ಸಾಮಾಜಿಕ ರೀತಿ ನೀತಿಯ ಪ್ರಕಾರ ಅವರು ಮದುವೆಯನ್ನೇನೋ ಆಗಿರುತ್ತಾರೆ.  ಗೃಹಸ್ಥ ಜೀವನ ನಡೆಸುವಾಗ ಅವರು ಹೆಂಡತಿಯನ್ನು ಪ್ರೀತಿಸುತ್ತಾರೆ. ಅವರ ಮನಸ್ಸಿನಲ್ಲಿ ಒಂದಿಲ್ಲೊಂದು ಅಭಿಲಾಷೆ ಇದ್ದೇ ಇರುತ್ತದೆ. ಆ ಅಭಿಲಾಷೆ ಹೆಂಡತಿಯಿಂದ ಈಡೇರದೇ ಇದ್ದಾಗ ಅವರ ಮನಸ್ಸಿನಲ್ಲಿ ಒಂದು ಬಗೆಯ ಅತೃಪ್ತಿ ಕಾಣಿಸಿಕೊಳ್ಳುತ್ತದೆ. ಹೆಂಡತಿಯಿಂದ ಸಿಗಬೇಕಾದಷ್ಟು ಪ್ರೀತಿ ಸಿಗದೇ ಇದ್ದಾಗ ಅವರ ಮನಸ್ಸಿನಲ್ಲಿ ಅತೃಪ್ತಿಯ ಹೊಗೆ ಕಾಣಿಸಿಕೊಳ್ಳುತ್ತದೆ. ಇದೇ ಅತೃಪ್ತಿ ಹೊರಗಿನ ಪ್ರಪಂಚದಲ್ಲಿ ಬೇರೆ ಮಹಿಳೆಯರ ಮೇಲೆ ಕಣ್ಣು ಹರಿಸುವಂತೆ ಮಾಡುತ್ತದೆ. ಇದರಲ್ಲಿ ಒಂದಷ್ಟು ಮಟ್ಟಿಗೆ ಹೆಂಡತಿಯ ತಪ್ಪು ಇದ್ದೇ ಇರುತ್ತದೆ. ಅಂದಹಾಗೆ ಹೊರಗಿನ ಸ್ತ್ರೀಯರ ಮೇಲೆ ಕಣ್ಣು ಹಾಕುವುದು ಮಾತ್ರ ಅಪಾಯ.

ಕ್ಷಮಿಸಲು ಸಾಧ್ಯವೇ ಇಲ್ಲ

ರವಿಂದ್ರನಾಥ ಟ್ಯಾಗೋರ್‌ರ ಒಂದು ಕಥೆಯ ಉದಾಹರಣೆಯನ್ನು ಇಲ್ಲಿ ಕೊಡಬಹುದು. ಹೆಂಡತಿ ನೀರೂ ಕುರುಡಿಯಾಗಲು ಆಕೆಯ ಗಂಡನೇ ಕಾರಣನಾಗಿರುತ್ತಾನೆ. ಆದಾಗ್ಯೂ ಅವಳ ಗಂಡ ಇನ್ನೊಬ್ಬ ಮಹಿಳೆಯ ಜೊತೆ ಮದುವೆಯಾಗಲು ಗುಪ್ತ ಯೋಜನೆ ರೂಪಿಸುತ್ತಾನೆ. ಅವನು ತನ್ನ ಹೆಂಡತಿ ನೀರೂಳನ್ನು ಅಪಾರವಾಗಿ ಪ್ರೀತಿಸುತ್ತಾನೆ. ಆದರೂ ಅವಳಲ್ಲಿ ಏನೋ ಕೊರತೆ ಇದೆ. ಗಂಡನ ಮೋಸದ ವಿಷಯ ಹೆಂಡತಿಯ ಕಿವಿಗೆ ಬಿದ್ದಾಗ ಆಕೆ ಬಿಕ್ಕಿ ಬಿಕ್ಕಿ ಅಳುತ್ತಾ ಗಂಡನನ್ನು ಪ್ರಶ್ನಿಸುತ್ತಾಳೆ, “ನೀವು ಹೀಗೇಕೆ ಯೋಚಿಸಿದಿರಿ?”

ಆಗ ಅವನು ಅತ್ಯಂತ ಸರಳವಾಗಿಯೇ ಹೇಳುತ್ತಾನೆ, “ನೀರೂ, ನಾನು ನಿನಗೆ ಹೆದರುತ್ತೇನೆ. ನೀನೊಬ್ಬ ಆದರ್ಶ ನಾರಿ. ನನಗೆ ಸಾಧಾರಣ ಸ್ತ್ರೀ ಬೇಕಿದ್ದಳು. ಅವಳ ಜೊತೆ ನಾನು ಜಗಳವಾಡಬೇಕು, ಕಣ್ಣುಮುಚ್ಚಾಲೆ ಆಟ ಆಡಬೇಕು ಅನಿಸುತ್ತದೆ. ಅವಳು ಮುನಿಸಿಕೊಳ್ಳಬೇಕು, ನಾನು ರಮಿಸಬೇಕು.” ಇದರಲ್ಲಿ ನೀರೂಳ ತಪ್ಪೇನೂ ಇರಲಿಲ್ಲ. ಆದರಿಲ್ಲಿ ಗಂಡನ ವರ್ತನೆಯನ್ನು ಕ್ಷಮಿಸಲಾಗದು. ಇದನ್ನು ಅನಿವಾರ್ಯ ಎಂದು ಹೇಳಬಹುದು. ಆದರೆ ಎಲ್ಲರೂ ನೀರೂಳಂತೆಯೇ ಇರುವುದಿಲ್ಲ.

ಮಹಿಳೆಯರು ಇಷ್ಟೊಂದು ಸುಂದರ ಏಕೆ?

“ಹೆಂಡತಿ ನಮ್ಮದೇ ಕಲೆಯ ಒಂದು ಭಾಗ,” ಎನ್ನುತ್ತಾನೆ ಒಬ್ಬ ಕವಿ, “ಅವರನ್ನು ಯಾರು ಎಷ್ಟರಮಟ್ಟಿಗೆ ಇಷ್ಟಪಡುತ್ತಾರೆ? ಸೃಷ್ಟಿ ಮಹಿಳೆಯನ್ನು ಇಷ್ಟು ಸುಂದರಗೊಳಿಸಿದ್ದಾದರೂ ಹೇಗೆ? ಯಾವುದೇ ಬಗೆಯ ಸೌಂದರ್ಯವನ್ನು ಹೊಗಳುವುದು, ಅವರನ್ನು  ಭೇಟಿಯಾಗುವುದು ಅವರು ನಿಕಟರಾಗುವುದರಲ್ಲಿ ತಪ್ಪೇನಿದೆ?”

ಈ ಕವಿಯ ಮಾತನ್ನು ನೀವು ಒಪ್ಪುತ್ತೀರೊ, ಬಿಡತ್ತೀರೊ, ಆದರೆ ಒಂದು ಸಂಗತಿಯನ್ನಂತೂ ನೀವು ಒಪ್ಪಲೇಬೇಕು. ಅದೇನೆಂದರೆ ರೊಮ್ಯಾನ್ಸ್ ಎನ್ನುವುದು ಜೀವನವನ್ನು ಮತ್ತಷ್ಟು ರೋಮಾಂಚಕಾರಿಯಾಗಿಸುತ್ತದೆ. ಕೆಲವು ಪತಿಯರು ಹೀಗೂ ಇರುತ್ತಾರೆ. ಅವರಿಗೆ ಏಕಮುಖ ಪ್ರೀತಿಯೇ ಇಷ್ಟವಾಗುತ್ತದೆ.

ಮುಂಜಾನೆ ನಿಖಿಲ್ ಆಫೀಸ್‌ಗೆ ಹೋಗಲು ಸಿದ್ಧತೆ ನಡೆಸಿದ್ದ. ಎದುರಿಗಿನ ರಸ್ತೆಯಲ್ಲಿ ಮುಂಜಾನೆಯ ಎಳೆ ಬಿಸಿಲಿನಂತಹ ಹುಡುಗಿ ಹೋಗುತ್ತಿದ್ದಾಳೆ. ಅವಳನ್ನು ನೋಡಿ ನಿಖಿಲ್‌ ಹಾಡು ಗುನುಗುನಿಸುತ್ತಾ ಒಳಗೆ ಬರುತ್ತಾನೆ. ಪತ್ನಿ ಕೈಯಲ್ಲಿ ಟೀ ಕಪ್‌ ಹಿಡಿದು ಗಂಡನ ಬಳಿ ಬರುತ್ತಾಳೆ. ಗಂಡನ ಬಾಹ್ಯ ಖಯಾಲಿ ಕಂಡ ಅವಳು ಕೋಪ ಮಾಡಿಕೊಂಡರೂ ಮಾತನಾಡದೆ ಸುಮ್ಮನಾಗುತ್ತಾಳೆ. `ಬೇಗ ಬೇಗ ರೆಡಿಯಾಗಿ ಆಫೀಸ್‌ಗೆ ಹೊತ್ತಾಗುತ್ತೆ,’ ಎಂದು ಹೇಳಿ ಅವನ ಗಮನವನ್ನು ಬೇರೆಡೆ ತಿರುಗಿಸಿದಳು.

ನಿಖಿಲ್‌ಗೆ ತನ್ನ ಪತ್ನಿಯ ಇದೇ ಮಾತು ಇಷ್ಟವಾಗುತ್ತದೆ. ತನ್ನ ಗಂಡನ ಸ್ವಭಾವದ ಬಗ್ಗೆ ಹೆಂಡತಿ ಹೀಗೆ ಹೇಳುತ್ತಾಳೆ, ಎಲ್ಲಿ ಬಿಗುವಿನಿಂದಿರಬೇಕು, ಎಲ್ಲಿ ಸಡಿಲ ನೀತಿ ಅನುಸರಿಸಬೇಕು ಎಂಬುದು ನನಗೆ ಗೊತ್ತು.

ನಿಖಿಲ್‌ನ ಹೆಂಡತಿ ಈ ಒಂದು ಸ್ಥಿತಿಗೆ ಬರಲು ಎರಡು ವರ್ಷಗಳೇ ಬೇಕಾಯಿತು. ಮದುವೆಯಾಗಿ 2 ವರ್ಷಗಳ ಬಳಿಕ ಗಂಡ ಬೇರೆ ಹುಡುಗಿಯರನ್ನು ಪ್ರಶಂಸೆ ಮಾಡಲು ಶುರು ಮಾಡಿದ್ದ. ಆಗ ಆಕೆಗೆ ಬಹಳ ಹಿಂಸೆಯಾಗುತ್ತಿತ್ತು. ಪತ್ರಿಕೆಗಳಲ್ಲಿ ಹುಡುಗಿಯರ ಚಿತ್ರಗಳನ್ನು ನೋಡುತ್ತಿದ್ದಾಗ ಆಕೆಗೆ ಅಸೂಯೆ  ಉಂಟಾಗುತ್ತಿತ್ತು ಇವರೆಂತಹ ಗಂಡಸು ಎಂದು ಆಕೆಗೆ ಅನಿಸಲಾರಂಭಿಸಿತ್ತು. ಬಳಿಕ ತನ್ನ ಮೈದುನರಿಂದ, ಸ್ನೇಹಿತರಿಂದ ಅವಳಿಗೆ ಅವನ ಈ ಅಭ್ಯಾಸದ ಬಗ್ಗೆ ಗೊತ್ತಾಯಿತು.“ಅವನು ಇರುವುದೇ ಹಾಗೆ ಅತ್ತಿಗೆ, ಅವನಿಗೆ ಪ್ರತಿ ಹುಡುಗಿಯೂ ಸುಂದರವಾಗಿ ಕಾಣುತ್ತಾಳೆ. ಅವರ ಬಗ್ಗೆ ಕನಸು ಕಾಣುತ್ತಾನೆ. ಆದರೆ ಅವರ ಹಿಂದೆ ಮಾತ್ರ ಸುಳಿಯುವುದಿಲ್ಲ,” ಎಂದು ಹೇಳಿದರು.

ಕ್ರಮೇಣ ನಿಖಿಲ್ ಸ್ವಭಾವ ಅರಿತು ಮತ್ತೆ ನಗುವನ್ನು ತಂದುಕೊಂಡಳು. ಏಕೆಂದರೆ ತನ್ನನ್ನು ಆತ ಬಹಳ ಪ್ರೀತಿಸುತ್ತಾರೆ. ಒಂದಷ್ಟು ತುಂಟಾಟವನ್ನು ಮಾಡುತ್ತಾರೆ ಎಂದು ಆಕೆ ಸುಮ್ಮನಾಗಿಬಿಟ್ಟಳು.

– ಜಿ. ಅನುರಾಧಾ  

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ