ಈಚಿನ ದಿನಗಳಲ್ಲಿ ಹೋಮ್ ಡೆಕೋರ್ ಅಂದರೆ ಗೃಹಾಲಂಕಾರದ ಸ್ವರೂಪ ಹಿಂದಿನ ಕಾಲದ ಶೈಲಿಯತ್ತ ವಾಲುತ್ತಿದೆ. ಅಂದರೆ, ಆಧುನಿಕ ಬದಲಾವಣೆಯ ಜೊತೆಗೆ ಪುರಾತನ ಶೈಲಿಯನ್ನು ಒಗ್ಗೂಡಿಸಿಕೊಳ್ಳುವ ಪದ್ಧತಿಯು ಬಲವಾಗುತ್ತಿದೆ. ಇಲ್ಲಿ ನಾವು 2020ರ ಕೆಲವು ಜನಪ್ರಿಯ ವಿನ್ಯಾಸಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ ಮತ್ತು 2021 ರಲ್ಲೂ ಇವು ಬೇಡಿಕೆಯಲ್ಲಿರುತ್ತವೆ.
ಇಂಡಿಯನ್ ಹೆರಿಟೇಜ್
ಇತ್ತೀಚಿನ ದಿನಗಳಲ್ಲಿ ಗೃಹಾಲಂಕಾರದಲ್ಲಿ ಪುರಾತನ ಶೈಲಿಗೆ ಒತ್ತು ನೀಡುವ ಪ್ರವೃತ್ತಿ ಕಂಡುಬರುತ್ತದೆ. ಆಕರ್ಷಕ ಕಲರ್ ಮತ್ತು ಟೆಕ್ಸ್ ಚರ್ ಭಾರತೀಯ ವಿನ್ಯಾಸದ ಪ್ರಮುಖ ತತ್ವಗಳಾಗಿವೆ. ಕಸೂತಿ ಕೆಲಸದಿಂದ ಕೂಡಿದ ಆಕರ್ಷಕ ಫಿನಿಶಿಂಗ್‌ನ ಕುಶನ್‌ಗಳು ಭಾರತೀಯ ಶೈಲಿಯ ಅಲಂಕಾರದ ಒಂದು ಪ್ರಮುಖ ವಿನ್ಯಾಸ. ಭಾರತೀಯ ಫರ್ನೀಚರ್ ತೇಗದ ಮರದಿಂದ ಮಾಡಲ್ಪಟ್ಟಿದ್ದು ಬಲವಾಗಿರುತ್ತವೆ. ಭಾರತ ಶ್ರೇಷ್ಠ ಸಿಲ್ಕ್ ಮತ್ತು ಇತರೆ ಟೆಕ್ಸ್ ಟೈಲ್ಸ್ಗೆ ಪ್ರಸಿದ್ಧವಾಗಿದ್ದು, ಅವುಗಳಿಂದ ತಯಾರಿಸಿದ ಬಗೆಬಗೆಯ ವಸ್ತುಗಳು ಕಿಟಕಿ, ಬಾಗಿಲು, ಗೋಡೆಗಳನ್ನು ಅಲಂಕರಿಸಲು ಬಳಸಲಾಗುತ್ತದೆ. ಈ ಬಗೆಯ ಭಾರತೀಯ ಶೈಲಿಯ ಜೋಡಣೆಯು ಅಂತರರಾಷ್ಟ್ರೀಯ ಗೃಹಾಲಂಕಾರದಲ್ಲೂ ಪ್ರದರ್ಶಿತವಾಗುತ್ತಿದೆ ಮತ್ತು ಇದು ಸದ್ಯದಲ್ಲಿ ಹಿಂದೆ ಬೀಳುವ ಸಾಧ್ಯತೆ ಇಲ್ಲ.
ಇಕತ್
ಇದು ದಾರಗಳನ್ನು ಬಟ್ಟೆಯ ಮೇಲೆ ವಿಶೇಷ ವಿನ್ಯಾಸದಲ್ಲಿ ಜೋಡಿಸುವ ಒಂದು ಪ್ರಿಂಟಿಂಗ್ ಸ್ಟೈಲ್. ಭಾರತ ಮತ್ತು ಇಂಡೋನೇಶಿಯಾದಲ್ಲಿ ಇದು ಜನಪ್ರಿಯವಾಗಿದೆ. ಇಕತ್ ಪ್ರಿಂಟ್‌ನ ವಿಭಿನ್ನ ಬಣ್ಣ, ಆಕಾರ ಮತ್ತು ಡಿಸೈನ್‌ಗಳು ವಿಶ್ವದಾದ್ಯಂತ ಜನಪ್ರಿಯವಾಗಿದೆ. ಈ ವಿನ್ಯಾಸಗಳನ್ನು ಬಟ್ಟೆಯ ಮೇಲೆ ಮಾತ್ರವಲ್ಲದೆ ಕ್ಲಾಕ್, ಮಗ್ ಮತ್ತು ಲ್ಯಾಂಪ್‌ಗಳ ಮೇಲೂ ಪ್ರಿಂಟ್ ಮಾಡಬಹುದು.
ಹಿತ್ತಾಳೆ ಮತ್ತು ತಾಮ್ರ
ಹಿತ್ತಾಳೆ ಮತ್ತು ತಾಮ್ರ ನಮಗೆ ಹೊಸದೇನೂ ಅಲ್ಲ. ಇತ್ತೀಚಿನ ದಿನಗಳಲ್ಲಿ ಇವು ಜಾಗತಿಕ ವಿನ್ಯಾಸದ ಪರಿಕಲ್ಪನೆಯ ಭಾಗವಾಗಿ ಬೆಳೆದಿವೆ ಮತ್ತು ಇವಿನ್ನೂ ಬಹಳ ಕಾಲ ಬೇಡಿಕೆಯಲ್ಲುಳಿಯುವ ಸಾಧ್ಯತೆ ಇದೆ. ಡಿಸೈನರ್‌ಗಳು ಹಿತ್ತಾಳೆಯನ್ನು ಕರಗಿಸಿ, ಅಚ್ಚಿಗೆ ಹಾಕಿ, ನಂತರ ಪಾಲಿಶ್ ಮಾಡಿ ಆಕರ್ಷಕಗೊಳಿಸುತ್ತಾರೆ. ಇದರಿಂದ ಪೆಂಡೆಂಟ್‌ನಂತಹ ಆಭರಣಗಳಿಂದ ಹಿಡಿದು ಲೈಟ್ಸ್, ಕುರ್ಚಿ, ಅಲಂಕಾರಿಕ ವಸ್ತುಗಳು ಬಾತ್ ಮತ್ತು ಕಿಚನ್ ಉಪಕರಣಗಳು ಮುಂತಾದವನ್ನೆಲ್ಲ ವಿನ್ಯಾಸಗೊಳಿಸುತ್ತಾರೆ.
ಪುರಾತನ ಕಾಲದಿಂದಲೂ ಬಳಕೆಯಲ್ಲಿರುವ ಮತ್ತೊಂದು ಲೋಹವೆಂದರೆ ತಾಮ್ರ, ತಾಮ್ರದ ಪಾತ್ರೆಗಳ ತಯಾರಿಕೆ ಶತಮಾನಗಳಿಂದ ನಡೆದು ಬಂದಿದೆ. ತಾಮ್ರದ ಟೇಬಲ್‌ವೇರ್ (ಮೇಜಿನ ಮೇಲೆ ಬಡಿಸಲು ಬಳಸುವ ಪಾತ್ರೆ) ಆಧುನಿಕ ಹೋಟೆಲ್‌ಗಳ ಸ್ಟೈಲ್ ಆಗಿವೆ. ತಾಮ್ರದ ಲೈಟಿಂಗ್ ಉಪಕರಣಗಳೂ ಈಗ ಬೇಡಿಕೆಯಲ್ಲಿವೆ. ಹೀಗೆ ಈ ಪುರಾತನ ಉಪಕರಣಗಳು ಆಧುನಿಕ ರೂಪದೊಂದಿಗೆ ಜನಪ್ರಿಯವಾಗಿವೆ.
ಕ್ರಿಸ್ಟಲ್
ಗೃಹಾಲಂಕಾರದಲ್ಲಿ ಬಳಸಲ್ಪಡುವ ಕ್ರಿಸ್ಟಲ್ ಹೊಸ ವಸ್ತುವೇನೂ ಅಲ್ಲ. ಹಿಂದಿಗಿಂತ ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚು ಜನಪ್ರಿಯವಾಗಿದೆ. ಎಲ್ಲ ಹೋಟೆಲ್ ಮತ್ತು ಪಾರ್ಟಿ ಹಾಲ್‌ಗಳಲ್ಲಿ ಕ್ರಿಸ್ಟಲ್‌ನ ತೂಗುದೀಪಗಳು ಕಂಗೊಳಿಸುತ್ತವೆ. ಹೊಳೆಯುವ ಸೆಂಟರ್‌ಪೀಸ್‌ಗಳು ಅತಿಥಿಗಳಿಗೊಂದು ದೊಡ್ಡ ಆಕರ್ಷಣೆಯಾಗಿದೆ. ಮೇಜನ್ನು ಅಲಂಕರಿಸಲು ಕ್ರಿಸ್ಟಲ್ ಶೋ ಪೀಸ್‌ಗಳು ಲಭ್ಯವಿವೆ. ಬಗೆಬಗೆಯ ವಿನ್ಯಾಸಗಳಲ್ಲಿ ದೊರೆಯುವ ಕ್ರಿಸ್ಟಲ್ ಗ್ಲಾಸ್‌ನ ಹೂದಾನಿಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಶುದ್ಧ ಕ್ರಿಸ್ಟಲ್‌ನಿಂದ ತಯಾರಾದ ಶೋ ಪೀಸ್ ಮತ್ತು ತೂಗುದೀಪಗಳು ಅತ್ಯಂತ ದುಬಾರಿಯಾಗಿರುತ್ತವೆ. ಆದ್ದರಿಂದ ಕೃತಕ ಕ್ರಿಸ್ಟಲ್‌ನ ವಸ್ತುಗಳನ್ನು ಕೊಳ್ಳಲು ನಿಮಗೆ ಕಷ್ಟವಾಗಲಾರದು.
ಇಂಡಿಗೋ ಕಲರ್
ಈ ಬಣ್ಣ ಶಾಂತಿ ಹಾಗೂ ಸೌಹಾರ್ದತೆಯ ಪ್ರತೀಕ. ಆದ್ದರಿಂದ ಇಂಟೀರಿಯರ್ ಡಿಸೈನ್‌ನಲ್ಲಿ ಈ ಬಣ್ಣವನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ದೀರ್ಘ ಕಾಲದಿಂದಲೂ ಗೃಹಾಲಂಕಾರದಲ್ಲಿ ಬಳಸಲ್ಪಡುತ್ತಿರುವ ಬಣ್ಣವೆಂದರೆ ಇಂಡಿಗೊ. ಇದು ಯಾವ ವಿನ್ಯಾಸದೊಂದಿಗೂ ಹೊಂದಿಕೊಳ್ಳಬಲ್ಲದು. ಇತರೆ ಗಾಢ ಬಣ್ಣಗಳೊಂದಿಗೆ ಸೇರಿದಾಗ ಭವ್ಯ ಮತ್ತು ಪರಿಪೂರ್ಣತೆಯ ನೋಟವನ್ನೊದಗಿಸುತ್ತದೆ.
ಇಂಡಿಗೋ ಬಣ್ಣ ಹೊಳೆಯುವ ಬಣ್ಣಗಳೊಂದಿಗೆ ಬೆರೆತಾಗ ಸೌಮ್ಯವಾಗಿ ಕಂಡರೆ, ಇತರೆ ಬಣ್ಣಗಳೊಂದಿಗೆ ಎದ್ದುತೋರುತ್ತದೆ. ಇಂಡಿಗೋ ಡೈ ಭಾರತದ ಕಲಾಪ್ರಪಂಚದಲ್ಲಿ ಪ್ರಭಾವಶಾಲಿಯಾಗಿದೆ ಮತ್ತು ಇದನ್ನು ವಿವಿಧ ಫರ್ನಿಶಿಂಗ್ ಮತ್ತು ಡೆಕೋರ್ ಉತ್ಪನ್ನಗಳಲ್ಲಿ ಕಾಣಬಹುದಾಗಿದೆ.
ಮೊರಕ್ಕೊ ಪ್ರಭಾವ
ಮೊರಕ್ಕೊ ಡೆಕೋರೇಶನ್‌ನ್ನು ಆಫ್ರಿಕಾ, ಪರ್ಷಿಯಾ ಮತ್ತು ಯೂರೋಪಿನ ಜನರು ಬಳಸುತ್ತಾರೆ. ಇತರೆ ಪ್ರಾಚೀನ ಸಂಸ್ಕೃತಿಗಳಂತೆ ಮೊರಕ್ಕೋ ಡೆಕೊರೇಶನ್ ಸಹ ದೀರ್ಘ ಇತಿಹಾಸ ಮತ್ತು ವಿಶಿಷ್ಟ ಶೈಲಿಯನ್ನು ಹೊಂದಿದೆ. ಇದರ ಫರ್ನೀಚರ್ ನೆಲಕ್ಕಿಂತ ಹೆಚ್ಚು ಎತ್ತರದಲ್ಲಿರುವುದಿಲ್ಲ, ಅದರ ಜೊತೆಗೆ ಸುಪ್ಪತ್ತಿಗೆ ಹೊಂದಿದ ಆಸನ ಮತ್ತು ಮೇಜು ಇರುತ್ತದೆ. ಆದರೆ ಕೆಲವು ಡಿಸೈನ್‌ಗಳು ಕ್ಲಿಷ್ಟವಾಗಿರುತ್ತವೆ. ಅವುಗಳಿಗೆ ಲ್ಯಾಂಪ್ ಮತ್ತು ಲ್ಯಾಂಟರ್ನ್‌ನಂತಹ ಆ್ಯಕ್ಸೆಸರೀಸ್ ಕೂಡ ಇರುತ್ತವೆ. ಆಧುನಿಕ ಗೃಹಗಳಲ್ಲಿ ಸಾಂಪ್ರದಾಯಿಕ ಮೊರಕ್ಕನ್ ಡೆಕೊರೇಶನ್‌ನ್ನು ಬಳಸುವ ಟ್ರೆಂಡ್ ಹೆಚ್ಚುತ್ತಿದೆ.
ಪುಷ್ಪಾಲಂಕಾರ
ಪುಷ್ಪಾಲಂಕಾರ ಹೊಸದೇನೂ ಅಲ್ಲ. ಆದರೆ ಪುರಾತನ ಪದ್ಧತಿಯ ಅಲಂಕಾರದ ಜಾಗದಲ್ಲೀಗ ನವೀನ ರೀತಿಯ ಸ್ಟೈಲ್ ಮನೆ ಮಾಡಿದೆ. ವಾಟರ್ ಕಲರ್ ಪೇಂಟಿಂಗ್‌ನಿಂದ ಕೂಡಿದ ಫ್ಲೋರ್ ಪ್ರಿಂಟ್‌ಗಳು ಈಗ ಬಟ್ಟೆಯ ಮೇಲೆ, ವಾಲ್ ಪೇಪರ್‌ನಂತಹ ಫ್ಲೋರ್ ಡಿಸೈನ್‌ನಿಂದ ಕೂಡಿದ ವಸ್ತುವನ್ನು ಬಳಸಬಹುದಾಗಿದೆ. ಲಿವಿಂಗ್ ರೂಮ್ ನ್ನೂ ಸಹ ಫ್ಲೋರ್ ಕುಶನ್‌ಗಳನ್ನು ಬಳಸಿ ಸಿಂಗರಿಸಬಹುದು.
– ಸಿ.ಕೆ. ವಿಭಾವರಿ