ನಾಯಕಿಗಿರಬೇಕಾದ ಎಲ್ಲ ಕ್ವಾಲಿಟೀಸ್‌ ಇರುವಂಥ ಬೆಡಗಿ ಕಾರುಣ್ಯಾ. ಹೌದು, ಕನ್ನಡದ ಹುಡುಗಿ. ನೀವು `ವಜ್ರಕಾಯ’ ಸಿನಿಮಾ ನೋಡಿದ್ದರೆ ಈ ನಟಿಯ ಪರಿಚಯವಿರುತ್ತೆ. ಇದೀಗ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಈ ನಟಿಯ ಮತ್ತೊಂದು ಜನಪ್ರಿಯ ಚಿತ್ರ `ಕಿರಗೂರಿನ ಗಯ್ಯಾಳಿಗಳು.’ ಇದೆಲ್ಲದರ ಜೊತೆಗೆ ಇನ್ನಷ್ಟು ಜನಪ್ರಿಯವಾಗಿದ್ದು `ಬಿಗ್‌ಬಾಸ್‌’ ಮನೆಯೊಳಗೆ ಹೋಗಿ ಬಂದ ಮೇಲೆ.

ಸಿನಿಮಾ, ಗ್ಲಾಮರ್‌ ಬಗ್ಗೆ ತುಂಬಾನೆ ಕ್ರೇಜ್‌ ಇದ್ಯಾ ಅಂತ ಕೇಳಿದರೆ, ಅಷ್ಟೇ ಆಶ್ಚರ್ಯ ತರಿಸುವಂಥ ಉತ್ತರ ಕಾರುಣ್ಯಾಳಿಂದ ಹೊರಬಂದಿತು.

“ನಿಜ ಹೇಳಬೇಕೆಂದರೆ ನನ್ನ ಮನೆಯಲ್ಲಿ ಆ ವಾತಾವರಣವಿರಲಿಲ್ಲ. ಸಿನಿಮಾ ಕೂಡ ನೋಡುತ್ತಿರಲಿಲ್ಲ. ಸ್ಕೂಲಾಯ್ತು, ಮನೆಯಾಯ್ತು. ಆಟ ಪಾಠ ಅಷ್ಟೆ. ನಾನು ಒಂಬತ್ತನೇ ಕ್ಲಾಸಿಗೆ ಬಂದ ಮೇಲೆ ಸಿನಿಮಾ ನೋಡಿದ್ದು ಅಷ್ಟೆ. ಆದರೆ ಸ್ಕೂಲಲ್ಲಿ ನಾಟಕ, ಡ್ಯಾನ್ಸು ಅಂತ ತುಂಬಾ ಮಾಡ್ತಿದ್ದೆ. ನಾನು ಸ್ಟೇಜ್‌ ಮೇಲೆ ಬಂದ್ರೆ ಸಾಕು ಎಲ್ಲರೂ ಹೋ ಅಂತಿದ್ರು. ಯಾವಾಗ ಕಾಲೇಜು ಮೆಟ್ಟಿಲು ಹತ್ತಿದೆನೋ ಆಗ ನಿರ್ದೇಶಕರೊಬ್ಬರು ನನ್ನನ್ನು ಗುರುತಿಸಿ ಆ್ಯಕ್ಟ್ ಮಾಡ್ತೀಯಾ ಅಂತ ಆಫರ್‌ ಮಾಡಿದರು. ಅಲ್ಲಿಯವರೆಗೂ ಸಿನಿಮಾ ಬಗ್ಗೆ ನನಗೇನೂ ಗೊತ್ತಿರಲಿಲ್ಲ. ನಾನು ನಟಿಯಾಗ್ತೀನಿ ಅಂತಾನೂ ಕನಸಿನಲ್ಲೂ ಕಂಡವಳಲ್ಲ.”

ಮೊದಲ ಚಿತ್ರ?

`10ನೇ ಕ್ಲಾಸ್‌  ಹುಡ್ಗಿ|.’ ಅಂತ ಒಂದು ಸಿನಿಮಾ ಮಾಡ್ದೆ. ಅದಾದ ಮೇಲೆ ಸಾಕಷ್ಟು ಚಿತ್ರಗಳು ಬಂತು. ಆದರೆ ನನ್ನ ಎಜುಕೇಶನ್‌ಗೆ ತೊಂದರೆಯಾಗುತ್ತೆ ಅಂತ ಹೆಚ್ಚು ಆಸಕ್ತಿ ತೋರಿಸಲಿಲ್ಲ. ಅದಾದ ಮೇಲೆ 2015ರಲ್ಲಿ `ವಜ್ರಕಾಯ’ ಚಿತ್ರದ ಮೂಲಕ ಎಂಟ್ರಿಯಾದೆ. ಈ ಚಿತ್ರದಿಂದ ನನ್ನ ವೃತ್ತಿಗೆ ಒಂದು ರೀತಿ ಟರ್ನಿಂಗ್‌ ಪಾಯಿಂಟ್‌ ಸಿಕ್ತು ಎನ್ನಬಹುದು. ಸಿನಿಮಾದ ನಟನೆ ಬಗ್ಗೆ ಸಾಕಷ್ಟು ತಿಳಿದುಕೊಂಡೆ. ಇದೇ ನನ್ನ ಮೊದಲ ಬ್ರೇಕ್‌ ಅಂತಾನೂ ಹೇಳಬಹುದು. ಸಿನಿಮಾ ವೃತ್ತಿಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡೆ.

ಈಗ ಎಷ್ಟು ಚಿತ್ರಗಳಾಯ್ತು?

ಆರು ಚಿತ್ರಗಳಾಗಿವೆ. ಇತ್ತೀಚೆಗೆ `ಎರಡು ಕನಸು’ ಬಿಡುಗಡೆಯಾಯ್ತು. ಈಗ `ಕೆಫೆ ಗ್ಯಾರೇಜ್‌’ ಅಂತ ಸಿನಿಮಾ ಮಾಡ್ತಿದ್ದೀನಿ. ನನ್ನ ಪ್ರಕಾರ ತುಂಬಾನೆ ಚೆನ್ನಾಗಿದೆ. ಪಾತ್ರ ತುಂಬಾ ವಿಭಿನ್ನವಾಗಿದೆ. ಇಂಥ ಪಾತ್ರವನ್ನು ನಾನಿಲ್ಲಿಯತನಕ ಮಾಡಿರಲಿಲ್ಲ. ನನ್ನ ಪಾತ್ರದ ಹೆಸರು ಚೆರ್ರಿ ಅಂತ, ತುಂಬಾನೇ ಬೋಲ್ಡ್ ರೋಲ್. ಸ್ಟೈಲಿಶ್‌ ಹುಡುಗಿ, ತನಗೆ ಏನಾದ್ರೂ ಬೇಕೂ ಅಂದ್ರೆ ಪಡೆದುಕೊಳ್ಳುವಷ್ಟು ದಿಟ್ಟ ಹುಡುಗಿ ಪಾತ್ರ. ನನ್ನ ಕಾಸ್ಟ್ಯೂಮ್, ಹೇರ್‌ಸ್ಟೈಲ್ ಎಲ್ಲ ಡಿಫರೆಂಟಾಗಿದೆ. ರಿಯಲ್ ಕ್ಯಾರೆಕ್ಟರ್‌ ಕೂಡಾ ನಂದು ಅದೇ ರೀತಿ ಇರೋದ್ರಿಂದ ನಟಿಸುವಾಗ ತುಂಬಾ ಸುಲಭ ಅನಿಸ್ತು.

ಸಿನಿಮಾ ರಂಗಕ್ಕೆ ಬಂದ ಮೇಲೆ ತೃಪ್ತಿ ಅನ್ನೋದು ಸಿಕ್ಕಿದ್ಯಾ?

ಕಲಾವಿದರಿಗೆ ತೃಪ್ತಿ ಅನ್ನೋದು ಇರಬಾರದು ಅಂತಾರೆ, ನಿಜ. ಆದರೆ ನಿರೀಕ್ಷಿಸಿದ ಹಾಗೆ ನಾನು ಹಾಕುವ ಶ್ರಮಕ್ಕೆ ತಕ್ಕದಾದ ಅವಕಾಶಗಳು, ತೃಪ್ತಿಕರವಾದ ಪ್ರೋತ್ಸಾಹ ಸಿಗುತ್ತಿಲ್ಲ ಅನ್ಸುತ್ತೆ. ಒಂದು ಹತ್ತು ಪರ್ಸೆಂಟ್‌ನಷ್ಟು ನಾನು ರೀಚ್‌ ಆಗಿದ್ದೀನಿ ಅಂತ ಹೇಳಬಹುದು. ನಾನಿನ್ನು ಒಳ್ಳೊಳ್ಳೆ ನಿರ್ದೇಶಕರ ಜೊತೆ ಕೆಲಸ ಮಾಡಬೇಕು, ದೊಡ್ಡ ದೊಡ್ಡ ನಟರ ಚಿತ್ರಗಳಲ್ಲಿ ನಟಿಸಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅದೃಷ್ಟ ಇರಬೇಕು.

ಅದೃಷ್ಟ ಎಷ್ಟು ಮುಖ್ಯವಾಗುತ್ತೆ?

ನಾವೆಷ್ಟೇ ಶ್ರಮ ಹಾಕಿದ್ರೂ ಕಡೆಗೆ ಮುಖ್ಯವಾಗೋದು ಅದೃಷ್ಟ. ನಾವು ಸಿನಿಮಾ ನಟಿಯಾಗಿ ಬರೋದೆ ಶ್ರಮ ವಹಿಸಿ ಕೆಲಸ ಮಾಡೋಕೆ. ಎಂಡ್‌ ಆಫ್‌ ದಿ ಡೇ ಲಕ್‌ ಮತ್ತು ಗಾಡ್‌ಫಾದರ್‌ ತುಂಬಾನೆ ಇಂಪಾರ್ಟೆಂಟ್‌ ಅನಿಸಿಬಿಡುತ್ತೆ. ನಾವೆಷ್ಟೇ ಸಿನಿಮಾದಲ್ಲಿ ನಟಿಸಿರಲಿ, ಪ್ರತಿಭೆ ಪ್ರದರ್ಶಿಸಿರಲಿ ಕಡೆಗೆ ಗೆಲ್ಲೋದು ಲಕ್ಕೇ…. ಅಂತ ನನಗನಿಸಿಬಿಟ್ಟಿದೆ.

ಇನ್ನೂ ಆ ಲಕ್‌ ಬಂದಿಲ್ವಾ?

ಇನ್ನೂ ಬಂದಿಲ್ಲ. ನಾನೂ ಸಹ ಕಾಯುತ್ತಿದ್ದೇನೆ. ನೋಡಿ `ವಜ್ರಕಾಯ’ ಸೂಪರ್‌ ಹಿಟ್‌ ಆಯ್ತು. ಗಯ್ಯಾಳಿಗಳು ಕೂಡ ಹಿಟ್‌ ಸಿನಿಮಾ. `ಎರಡು ಕನಸು’ ಚಿತ್ರ ಕೂಡಾ ಜನಕ್ಕೆ ಇಷ್ಟ ಆಯ್ತು. ಆದರೂ ಸಹ ನಾನು ನಿರೀಕ್ಷಿಸಿದ ಹಾಗೆ ತಾರಾ ವೃತ್ತಿ ರೂಪುಗೊಳ್ಳುತ್ತಿಲ್ಲ. ಆದರೆ ನನ್ನಲ್ಲಿ ಆತ್ಮವಿಶ್ವಾಸ ಬಲವಾಗಿದೆ. ಒಂದಲ್ಲ ಒಂದು ದಿನ ಖಂಡಿತ ಒಂದೊಳ್ಳೆ ಹೆಸರು ಮಾಡೇ ಮಾಡ್ತೀನಿ ಅಂತ.

ನಾಯಕಿಯರ ಸಂಖ್ಯೆ ಜಾಸ್ತಿಯಾಗಿರೋದ್ರಿಂದ ಟಫ್‌ ಕಾಂಪಿಟೇಶನ್‌ ಅನ್ಸುತ್ತಾ?

ಹೊಸಬರು ತುಂಬಾ ಬರ್ತಿದ್ದಾರೆ. ಒಂದೇ ಸಿನಿಮಾದಲ್ಲಿ ನಟಿಸಿ ಹೋಗೋರು ಇದ್ದಾರೆ. ಸೂಪರ್‌ ಡೂಪರ್‌ ಹಿಟ್‌ ಆಗಿ ಒಳ್ಳೆ ಅವಕಾಶ ಪಡೋರು ಇದ್ದಾರೆ. ಅಂಥವರಲ್ಲಿ ಕೆಲವರಿಗೆ ತುಂಬಾ ಒಳ್ಳೆ ಅವಕಾಶಗಳು ಸಿಗುತ್ತವೆ. ಅದೃಷ್ಟ ದೇವತೆ ಒಲಿಯಬೇಕಷ್ಟೆ. ಇದೆಲ್ಲದರ ಜೊತೆಗೆ ಪರಭಾಷಾ ನಟಿಯರ ಹಾವಳಿ.

ತುಂಬಾ ಖುಷಿಕೊಟ್ಟ ಚಿತ್ರ?

`ವಜ್ರಕಾಯ’ ಜನ ನನ್ನನ್ನು ಗುರ್ತಿಸಿದ್ದೇ ಈ ಚಿತ್ರದಿಂದ, ಬ್ರೇಕ್‌ ಕೊಟ್ಟಿತಲ್ಲದೇ ನನ್ನನ್ನು ಜನಪ್ರಿಯಗೊಳಿಸಿದ ಚಿತ್ರವಿದು. ಹರ್ಷ ಮಾಸ್ಟರ್‌ರನ್ನು ನಾನೆಂದಿಗೂ ಮರೆಯಲಾರೆ. ಈಗ `ಕೆಫೆ ಗ್ಯಾರೇಜ್‌’ ನಿಜಕ್ಕೂ ಒಂದೊಳ್ಳೆ ಚಿತ್ರ. ನಿರ್ಮಾಪಕರಾದ ನಾರಾಯಣ ಸ್ವಾಮಿ, ಶ್ರೀಧರ್‌ ಅವರಿಗೆ ನಿಜಕ್ಕೂ ಥ್ಯಾಂಕ್ಸ್ ಹೇಳ್ಬೇಕು. ಒಳ್ಳೆ ಎಕ್ಸ್ ಪೀರಿಯನ್ಸ್ ನನ್ನನ್ನು ಮನೆ ಹುಡುಗಿ ತರಹ ನೋಡ್ಕೊಂಡಿದ್ದಾರೆ.

ಪರಭಾಷೆಯಿಂದ ಆಫರ್ಸ್‌ ಬಂದಿದ್ಯಾ?

ಮಲೆಯಾಳಂ, ತಮಿಳು ಚಿತ್ರಗಳಲ್ಲಿ ನಟಿಸುವ ಅವಕಾಶ ಬಂದಿದೆ.

ಬೇರೆ ಏನು ಹವ್ಯಾಸವಿದೆ?

ಆ್ಯಕ್ಟಿಂಗ್‌ನ್ನು ಹೇಗೆ ಯಾವ ರೀತಿ ಇಂಪ್ರೂವ್‌ ಮಾಡ್ಕೊಂಡ್ರೆ ಚೆನ್ನಾಗಿರುತ್ತೆ ಅಂತ ವರ್ಕ್‌ ಮಾಡ್ತೀನಿ. ಈ ರಂಗಕ್ಕೆ ಬಂದಾಗಿದೆ. ಏನಾದರೂ ಸಾಧಿಸಬೇಕೆನ್ನುವ ಛಲವಿದೆ. ಖಂಡಿತ ಮಾಡೇ ಮಾಡ್ತೀನಿ ಎನ್ನುವ ನಂಬಿಕೇನೂ ಇದೆ. ಇದೆಲ್ಲದರ ಜೊತೆಗೆ ಫ್ಯಾಷನ್‌ ಡಿಸೈನಿಂಗ್‌ ಮಾಡ್ತೀನಿ.

ಯಾ ತಾರೆಯಿಂದ ಇನ್‌ಸ್ಪೈರ್‌ ಆಗಿದ್ದೀಯಾ?

ಸೌಂದರ್ಯಾ ಮತ್ತು ಮಾಧುರಿ ದೀಕ್ಷಿತ್‌ ನನ್ನ ಅಚ್ಚುಮೆಚ್ಚಿನ ತಾರೆಯರು. ಸೌಂದರ್ಯಾರ ಚಿತ್ರಗಳನ್ನು ತುಂಬಾನೆ ನೋಡ್ತೀನಿ. ಅವರಿಂದ ನಾನು ತುಂಬಾ ಇನ್‌ಸ್ಪೈರ್‌ ಆಗಿದ್ದೀನಿ.

ಸಾಧಿಸಿ ತೋರಿಸ್ತೀನಿ ಎಂದು ಛಲದಿಂದ ಹೇಳಿಕೊಳ್ಳುವ ಕಾರುಣ್ಯಾಳಿಗೆ ಒಳ್ಳೆ ಅವಕಾಶ ಸಿಗಲಿ, ಈ ಕನ್ನಡದ ಹುಡುಗಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸೋಣ.

 ಜಾಗೀರ್‌ದಾರ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ