ನಾಯಕಿಗಿರಬೇಕಾದ ಎಲ್ಲ ಕ್ವಾಲಿಟೀಸ್ ಇರುವಂಥ ಬೆಡಗಿ ಕಾರುಣ್ಯಾ. ಹೌದು, ಕನ್ನಡದ ಹುಡುಗಿ. ನೀವು `ವಜ್ರಕಾಯ' ಸಿನಿಮಾ ನೋಡಿದ್ದರೆ ಈ ನಟಿಯ ಪರಿಚಯವಿರುತ್ತೆ. ಇದೀಗ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಈ ನಟಿಯ ಮತ್ತೊಂದು ಜನಪ್ರಿಯ ಚಿತ್ರ `ಕಿರಗೂರಿನ ಗಯ್ಯಾಳಿಗಳು.' ಇದೆಲ್ಲದರ ಜೊತೆಗೆ ಇನ್ನಷ್ಟು ಜನಪ್ರಿಯವಾಗಿದ್ದು `ಬಿಗ್‌ಬಾಸ್' ಮನೆಯೊಳಗೆ ಹೋಗಿ ಬಂದ ಮೇಲೆ.
ಸಿನಿಮಾ, ಗ್ಲಾಮರ್ ಬಗ್ಗೆ ತುಂಬಾನೆ ಕ್ರೇಜ್ ಇದ್ಯಾ ಅಂತ ಕೇಳಿದರೆ, ಅಷ್ಟೇ ಆಶ್ಚರ್ಯ ತರಿಸುವಂಥ ಉತ್ತರ ಕಾರುಣ್ಯಾಳಿಂದ ಹೊರಬಂದಿತು.
``ನಿಜ ಹೇಳಬೇಕೆಂದರೆ ನನ್ನ ಮನೆಯಲ್ಲಿ ಆ ವಾತಾವರಣವಿರಲಿಲ್ಲ. ಸಿನಿಮಾ ಕೂಡ ನೋಡುತ್ತಿರಲಿಲ್ಲ. ಸ್ಕೂಲಾಯ್ತು, ಮನೆಯಾಯ್ತು. ಆಟ ಪಾಠ ಅಷ್ಟೆ. ನಾನು ಒಂಬತ್ತನೇ ಕ್ಲಾಸಿಗೆ ಬಂದ ಮೇಲೆ ಸಿನಿಮಾ ನೋಡಿದ್ದು ಅಷ್ಟೆ. ಆದರೆ ಸ್ಕೂಲಲ್ಲಿ ನಾಟಕ, ಡ್ಯಾನ್ಸು ಅಂತ ತುಂಬಾ ಮಾಡ್ತಿದ್ದೆ. ನಾನು ಸ್ಟೇಜ್ ಮೇಲೆ ಬಂದ್ರೆ ಸಾಕು ಎಲ್ಲರೂ ಹೋ ಅಂತಿದ್ರು. ಯಾವಾಗ ಕಾಲೇಜು ಮೆಟ್ಟಿಲು ಹತ್ತಿದೆನೋ ಆಗ ನಿರ್ದೇಶಕರೊಬ್ಬರು ನನ್ನನ್ನು ಗುರುತಿಸಿ ಆ್ಯಕ್ಟ್ ಮಾಡ್ತೀಯಾ ಅಂತ ಆಫರ್ ಮಾಡಿದರು. ಅಲ್ಲಿಯವರೆಗೂ ಸಿನಿಮಾ ಬಗ್ಗೆ ನನಗೇನೂ ಗೊತ್ತಿರಲಿಲ್ಲ. ನಾನು ನಟಿಯಾಗ್ತೀನಿ ಅಂತಾನೂ ಕನಸಿನಲ್ಲೂ ಕಂಡವಳಲ್ಲ.''
ಮೊದಲ ಚಿತ್ರ?
`10ನೇ ಕ್ಲಾಸ್ ಹುಡ್ಗಿ|.' ಅಂತ ಒಂದು ಸಿನಿಮಾ ಮಾಡ್ದೆ. ಅದಾದ ಮೇಲೆ ಸಾಕಷ್ಟು ಚಿತ್ರಗಳು ಬಂತು. ಆದರೆ ನನ್ನ ಎಜುಕೇಶನ್‌ಗೆ ತೊಂದರೆಯಾಗುತ್ತೆ ಅಂತ ಹೆಚ್ಚು ಆಸಕ್ತಿ ತೋರಿಸಲಿಲ್ಲ. ಅದಾದ ಮೇಲೆ 2015ರಲ್ಲಿ `ವಜ್ರಕಾಯ' ಚಿತ್ರದ ಮೂಲಕ ಎಂಟ್ರಿಯಾದೆ. ಈ ಚಿತ್ರದಿಂದ ನನ್ನ ವೃತ್ತಿಗೆ ಒಂದು ರೀತಿ ಟರ್ನಿಂಗ್ ಪಾಯಿಂಟ್ ಸಿಕ್ತು ಎನ್ನಬಹುದು. ಸಿನಿಮಾದ ನಟನೆ ಬಗ್ಗೆ ಸಾಕಷ್ಟು ತಿಳಿದುಕೊಂಡೆ. ಇದೇ ನನ್ನ ಮೊದಲ ಬ್ರೇಕ್ ಅಂತಾನೂ ಹೇಳಬಹುದು. ಸಿನಿಮಾ ವೃತ್ತಿಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡೆ.
ಈಗ ಎಷ್ಟು ಚಿತ್ರಗಳಾಯ್ತು?
ಆರು ಚಿತ್ರಗಳಾಗಿವೆ. ಇತ್ತೀಚೆಗೆ `ಎರಡು ಕನಸು' ಬಿಡುಗಡೆಯಾಯ್ತು. ಈಗ `ಕೆಫೆ ಗ್ಯಾರೇಜ್' ಅಂತ ಸಿನಿಮಾ ಮಾಡ್ತಿದ್ದೀನಿ. ನನ್ನ ಪ್ರಕಾರ ತುಂಬಾನೆ ಚೆನ್ನಾಗಿದೆ. ಪಾತ್ರ ತುಂಬಾ ವಿಭಿನ್ನವಾಗಿದೆ. ಇಂಥ ಪಾತ್ರವನ್ನು ನಾನಿಲ್ಲಿಯತನಕ ಮಾಡಿರಲಿಲ್ಲ. ನನ್ನ ಪಾತ್ರದ ಹೆಸರು ಚೆರ್ರಿ ಅಂತ, ತುಂಬಾನೇ ಬೋಲ್ಡ್ ರೋಲ್. ಸ್ಟೈಲಿಶ್ ಹುಡುಗಿ, ತನಗೆ ಏನಾದ್ರೂ ಬೇಕೂ ಅಂದ್ರೆ ಪಡೆದುಕೊಳ್ಳುವಷ್ಟು ದಿಟ್ಟ ಹುಡುಗಿ ಪಾತ್ರ. ನನ್ನ ಕಾಸ್ಟ್ಯೂಮ್, ಹೇರ್‌ಸ್ಟೈಲ್ ಎಲ್ಲ ಡಿಫರೆಂಟಾಗಿದೆ. ರಿಯಲ್ ಕ್ಯಾರೆಕ್ಟರ್ ಕೂಡಾ ನಂದು ಅದೇ ರೀತಿ ಇರೋದ್ರಿಂದ ನಟಿಸುವಾಗ ತುಂಬಾ ಸುಲಭ ಅನಿಸ್ತು.
ಸಿನಿಮಾ ರಂಗಕ್ಕೆ ಬಂದ ಮೇಲೆ ತೃಪ್ತಿ ಅನ್ನೋದು ಸಿಕ್ಕಿದ್ಯಾ?
ಕಲಾವಿದರಿಗೆ ತೃಪ್ತಿ ಅನ್ನೋದು ಇರಬಾರದು ಅಂತಾರೆ, ನಿಜ. ಆದರೆ ನಿರೀಕ್ಷಿಸಿದ ಹಾಗೆ ನಾನು ಹಾಕುವ ಶ್ರಮಕ್ಕೆ ತಕ್ಕದಾದ ಅವಕಾಶಗಳು, ತೃಪ್ತಿಕರವಾದ ಪ್ರೋತ್ಸಾಹ ಸಿಗುತ್ತಿಲ್ಲ ಅನ್ಸುತ್ತೆ. ಒಂದು ಹತ್ತು ಪರ್ಸೆಂಟ್‌ನಷ್ಟು ನಾನು ರೀಚ್ ಆಗಿದ್ದೀನಿ ಅಂತ ಹೇಳಬಹುದು. ನಾನಿನ್ನು ಒಳ್ಳೊಳ್ಳೆ ನಿರ್ದೇಶಕರ ಜೊತೆ ಕೆಲಸ ಮಾಡಬೇಕು, ದೊಡ್ಡ ದೊಡ್ಡ ನಟರ ಚಿತ್ರಗಳಲ್ಲಿ ನಟಿಸಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅದೃಷ್ಟ ಇರಬೇಕು.