ಕುಟುಂಬದೊಂದಿಗೆ ಮಾತ್ರ ಹಬ್ಬಗಳ ಮಜಾ!
ಬಾಲಿವುಡ್ ಪ್ರವೇಶಿಸಿ ಪ್ರತಿಯೊಬ್ಬರ ಹೃದಯ ಗೆದ್ದಿರುವ ದೀಪಿಕಾ ಪಡುಕೋಣೆ, ತನ್ನ ಅದ್ಭುತ ನಟನೆ, ಗ್ಲಾಮರ್, ರೂಪಲಾವಣ್ಯಗಳಿಂದಾಗಿ `ಪದ್ಮಾವತಿ' ಚಿತ್ರದಲ್ಲಿ ಸೈ ಎನಿಸಿದ್ದಾಳಂತೆ. ಅಷ್ಟೊಂದು ವಿರೋಧ ಹಾಗೂ ಹಿಂಸೆಗಳ ನಡುವೆಯೂ ಈ ಐತಿಹಾಸಿಕ ಚಿತ್ರ ಪ್ರದರ್ಶನಕ್ಕೆ ಸಿದ್ಧವಾಗಿದೆ. ದೀಪಿಕಾಳನ್ನು ಇಷ್ಟೊಂದು ಬಿಝಿ ಶೆಡ್ಯೂಲ್ ಮಧ್ಯೆ ಕುಟುಂಬಕ್ಕಾಗಿ ಹೇಗೆ ಸಮಯ ಮೀಸಲಿಡುತ್ತೀಯಾ ಎಂದು ಕೇಳಿದಾಗ, ಹಬ್ಬಗಳ ಸಂದರ್ಭದಲ್ಲಿ ಶೂಟಿಂಗ್ ಇಲ್ಲದಾಗ, ನಾನು ಎಲ್ಲೇ ಇದ್ದರೂ ಬೆಂಗಳೂರಿನ ನನ್ನ ಮನೆಗೆ ಹಾರಿ, ತಾಯಿತಂದೆಯರ ಜೊತೆ ಹಬ್ಬ ಆಚರಿಸುತ್ತೇನೆ ಎನ್ನುತ್ತಾಳೆ.
ಈ ಚಿತ್ರದಲ್ಲಿ ಕ್ಯಾಟ್‌ಫೈಟ್ ನಡೆಯುತ್ತಾ?
ಸತತ 4 ಫ್ಲಾಪ್ ಚಿತ್ರಗಳ ನಂತರ ಯಾರಿಗಾದರೂ ಹೊಸ ಚಿತ್ರಕ್ಕೆ ಆಫರ್ ಬರುತ್ತದೆ ಎಂದರೆ ಅದು ಶಾರೂಖ್ ಆಗಿರಲೇಬೇಕು. `ಹ್ಯಾರಿ ಮೀಟ್ ಸೇಜ್' ಚಿತ್ರದ ನಂತರ ಈತ ಎಲ್. ಆನಂದ್‌ರ ಹೊಸ ಚಿತ್ರದಲ್ಲಿ ಬಿಝಿ. ಈ ಚಿತ್ರದಲ್ಲಿ ಇಂದಿನ ಕಾಲದ ಮೂವರು ನಾಯಕಿಯರೊಂದಿಗೆ ಈತ ರೊಮಾನ್ಸ್ ನಡೆಸಲಿದ್ದಾನೆ. ನಂಬಲರ್ಹ ಸುದ್ದಿಗಳ ಪ್ರಕಾರ, ಕತ್ರೀನಾ ಹಾಗೂ ಅನುಷ್ಕಾ ಶರ್ಮ ನಂತರ ಈ ಚಿತ್ರಕ್ಕೆ ಎಂಟ್ರಿ ಪಡೆದವಳು ದೀಪಿಕಾ. ಕತ್ರೀನಾ ದೀಪಿಕಾ ಇಬ್ಬರೂ ಒಟ್ಟಿಗೆ ಈ ಚಿತ್ರದಲ್ಲಿ ನಟಿಸುತ್ತಿರುವುದೇ ಒಂದು ವಿಶೇಷ. ಏಕೆಂದರೆ ಇವರಿಬ್ಬರ ಕೋಳಿ ಜಗಳದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಹಾಗಿರುವಾಗ ಕ್ಯಾತೆ ತೆಗೆಯದೆ ಒಟ್ಟೊಟ್ಟಿಗೆ ಈ ಚಿತ್ರದಲ್ಲಿ ಹೇಗೆ ನಟಿಸಲಿದ್ದಾರೆ ಎಂಬುದೇ ಕುತೂಹಲಕಾರಿ ಅಂಶ. ಈಗಾಗಲೇ ಅನುಷ್ಕಾಳ ಜೊತೆ ಕತ್ರೀನಾ `ಜಬ್ ತಕ್ ಹೈ ಜಾನ್' ಚಿತ್ರದಲ್ಲಿ ನಟಿಸಿದ್ದಾಗಿದೆ. ಆದರೆ ದೀಪಿಕಾಳ ಜೊತೆ ಇದು ಅವಳ ಮೊದಲನೇ ಚಿತ್ರ. ಮತ್ತೊಂದು ವಿಶೇಷ ಎಂದರೆ ಈ ಚಿತ್ರದಲ್ಲಿ ದೀಪಿಕಾಳದು ಅತಿಥಿ ಪಾತ್ರವಂತೆ. ಹೀಗಾಗಿ ಆಕೆ ತನ್ನ ಭಾಗದ ಚಿತ್ರೀಕರಣ ಈಗಾಗಲೇ ಪೂರೈಸಿ ಆಗಿದೆ, ಈಗ ತಾನು ಕತ್ರೀನಾಳ ಮುಖಾಮುಖಿ ಆಗಬೇಕಿಲ್ಲ ಎಂಬುದವಳ ತರ್ಕ.
ಅಭಿ ಜೊತೆ ನಟಿಸಲೊಪ್ಪದ ಪ್ರಿಯಾಂಕಾ
ಯಾವ ಚಿತ್ರಕ್ಕಾಗಿ ಅತಿ ಉತ್ಸಾಹದಿಂದ ಪ್ರಿಯಾಂಕಾ ಚೋಪ್ರಾ ಸಹಿ ಹಾಕಿ ನಟಿಸಲು ಸಿದ್ಧಳಾಗುತ್ತಿದ್ದಳೋ, ಇದ್ದಕ್ಕಿದ್ದಂತೆ ಆ ಚಿತ್ರವೇ ಬೇಡವೆಂದು ಅಲ್ಲಿಂದ ಹೊರಬಂದದ್ದಾದರೂ ಏಕೆ? ಅದಕ್ಕೆ ಕಾರಣರಾದವರು ಬೇರಾರೂ ಅಲ್ಲ, ಅಭಿಷೇಕ್ ಬಚ್ಚನ್! ಈತನ ಜೊತೆ ಈಗಾಗಲೇ ಪ್ರಿಯಾಂಕಾ ದ್ರೋಣ್, ದೋಸ್ತಾನಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರೂ ಈ ಬಾರಿ ಆತನ ಹೆಸರು ಕೇಳಿ ಈ ಚಿತ್ರವೇ ಬೇಡವೆಂದಳಂತೆ. ಅಸಲಿಗೆ, ಅಭಿಷೇಕ್ ಸಾಹಿರ್ ಲುಧಿಯಾನ್ವಿಯ ಬಯೋಪಿಕ್ ಚಿತ್ರಕ್ಕಾಗಿ ಬಿಝಿಯಾಗಿದ್ದಾನೆ. ಈ ಚಿತ್ರಕ್ಕಾಗಿಯೇ ಆತ ಜೆ.ಪಿ. ದತ್ತಾರ `ಪಲ್ಟನ್' ಚಿತ್ರ ಸಹ ಬಿಟ್ಟಿದ್ದ. ಈ ಚಿತ್ರದಲ್ಲಿ ಅಭಿಷೇಕ್‌ಗೆ ಮೊದಲೇ ಇರ್ಫಾನ್ ಮತ್ತು ಫರ್ಹಾನ್ ಎಂಟ್ರಿ ಪಡೆದಿದ್ದರು. ಅವರುಗಳ ಜೊತೆ ನಟಿಸಲು ಪ್ರಿಯಾಂಕಾ ಉತ್ಸಾಹಿತಳಾಗಿದ್ದಳು. ಆದರೆ ಆ ಚಿತ್ರದ ನಾಯಕ ಅಭಿ ಎಂದು ಗೊತ್ತಾಗುತ್ತಲೇ, ಈ ಚಿತ್ರದ ಸಹವಾಸವೇ ಬೇಡವೆಂದು ಈಕೆ ಕೈ ತೊಳೆದುಕೊಂಡಳಂತೆ.