ರಂಗೋಲಿ ಪುಡಿಯಿಂದ ನಿಮ್ಮ ಮನೆಯಂಗಳದಲ್ಲಿ ಅದೆಷ್ಟೋ ಬಾರಿ ರಂಗೋಲಿ ಬಿಡಿಸಿಯೇ ಇರುತ್ತೀರಿ. ಆದರೆ ಆ ಬಾರಿ ಹಬ್ಬದಲ್ಲಿ ಒಂದು ಹೊಸ ಪ್ರಯೋಗ ಮಾಡಿನೋಡಿ. ಆಗ ನಿಮ್ಮ ಮನೆಗೆ ಬಂದ ಅತಿಥಿಗಳ ದೃಷ್ಟಿ ನಿಮ್ಮ ನವೀನ ಶೈಲಿಯ ರಂಗೋಲಿಯ ಮೇಲೆಯೇ ಕೀಲಿಸುತ್ತದೆ. ಬನ್ನಿ, ವಿವಿಧ ಬಗೆಯ ರಂಗೋಲಿ ರಚನೆಯ ಬಗೆಗೆ ತಿಳಿದುಕೊಳ್ಳೋಣ :

ಕುಂದನ್‌ ರಂಗೋಲಿ : ಡಿಸೈನರ್‌ ಡ್ರೆಸ್‌ಗಳಂತೆ ಡಿಸೈನರ್‌ ರಂಗೋಲಿಯಿಂದ ನೀವು ನಿಮ್ಮ ಮನೆಯನ್ನು ಸಿಂಗರಿಸಲು ಬಯಸುವಿರಾದರೆ, ಮಾರುಕಟ್ಟೆಯಲ್ಲಿ ರೆಡಿಮೇಡ್‌ ಕುಂದನ್‌ ರಂಗೋಲಿ ದೊರೆಯುತ್ತದೆ. ಅದನ್ನು ತಯಾರಿಸಲು ಬಣ್ಣಬಣ್ಣದ ಕುಂದನ್‌ಗಳನ್ನು ಬಳಸಿರುವುದರಿಂದ ಅದು ನೋಡಲು ಬಲು ಆಕರ್ಷಕವಾಗಿರುತ್ತದೆ.

ಪ್ಲೇಟಿಂಗ್‌ ರಂಗೋಲಿ : ಮಾರುಕಟ್ಟೆಯಲ್ಲಿ ದೊರೆಯುವ ರೆಡಿಮೇಡ್‌ ಪ್ಲೇಟಿಂಗ್‌ ರಂಗೋಲಿಗೆ ಈಗ ಹೆಚ್ಚಿನ ಬೇಡಿಕೆ ಇದೆ. ಅದನ್ನು ಕೊಂಡುಕೊಂಡು ನೀರು ತುಂಬಿದ ಬೌಲ್‌ನಲ್ಲಿ ಇರಿಸಿದರಾಯಿತು. ಅದು ನೀರಿನಲ್ಲಿ ತೇಲುತ್ತಾ ಇರುತ್ತದೆ. ಮನೆಯ ಮುಂಬಾಗಿಲು ಅಥವಾ ಅಂಗಳಕ್ಕೆ ಅದು ಶೋಭೆ ನೀಡುತ್ತದೆ. ಪ್ಲೇಟಿಂಗ್‌ ರಂಗೋಲಿಯಿಂದ ಕೂಡಿದ ನೀರಿನ ಬೌಲ್‌ನ್ನು ಮೇಜಿನ ಮೇಲೆ ಇರಿಸಿ ಟೇಬಲ್ ಡೆಕೋರೇಶನ್‌ ಕೂಡ ಮಾಡಬಹುದು.

ಸ್ಟಿಕರ್‌ ರಂಗೋಲಿ : ನಿಮಗೆ ರಂಗೋಲಿ ಬಿಡಿಸಲು ಬರದಿದ್ದರೆ ಅಥವಾ ಅದಕ್ಕೆ ಸಮಯವಿಲ್ಲದಿದ್ದರೆ ಚಿಂತಿಸಬೇಡಿ. ರಂಗೋಲಿಯ ಸ್ಟಿಕರ್‌ ನಿಮ್ಮ ಸಹಾಯಕ್ಕೊದಗುತ್ತದೆ. ನಿಮ್ಮ ಜಾಗಕ್ಕೆ ತಕ್ಕಂತೆ ಚಿಕ್ಕ ಅಥವಾ ದೊಡ್ಡ ರಂಗೋಲಿ ಸ್ಟಿಕರ್‌ನ್ನು ಕೊಂಡು ತನ್ನಿ ಮತ್ತು ಅದನ್ನು ಮನೆಯ ಮುಂದೆ ಅಥವಾ ಅಂಗಳದಲ್ಲಿ ಅಂಟಿಸಿ. ಸಾಧಾರಣ ರಂಗೋಲಿಯು ಮರುದಿನಕ್ಕೆ ಹರಡಿಕೊಂಡಿರುತ್ತದೆ. ಆದರೆ ಸ್ಟಿಕರ್‌ ರಂಗೋಲಿಯು ತಿಂಗಳುಗಳ ಕಾಲ ಹಾಗೆಯೇ ಉಳಿದಿರುತ್ತದೆ.

ಚಾಕ್‌ನಿಂದ ರಂಗೋಲಿ : ನೀವು ಡ್ರಾಯಿಂಗ್‌ನಲ್ಲಿ ನಿಪುಣರಾಗಿದ್ದರೆ ಚಾಕ್‌ನಿಂದಲೂ ರಂಗೋಲಿ ಬಿಡಿಸಬಹುದು. ಇದಕ್ಕಾಗಿ ಬಣ್ಣ ಬಣ್ಣದ ಚಾಕ್‌ಗಳನ್ನು ಕೊಂಡು ತಂದು ಕೆಲವು ನಿಮಿಷ ನೀರಿನಲ್ಲಿ ನೆನೆಸಿ. ನಂತರ ನಿಧಾನವಾಗಿ ರಂಗೋಲಿ ಬಿಡಿಸಿ. ಒದ್ದೆ ಚಾಕ್‌ಪೀಸ್‌ನಿಂದ ಬರೆದ ಡಿಸೈನ್‌ ಒಣಗುತ್ತಾ ಹೋದಂತೆ ರಂಗೋಲಿಯ ಬಣ್ಣ ಹೆಚ್ಚು ಹೆಚ್ಚು ಗಾಢವಾಗಿ ಗೋಚರಿಸುತ್ತದೆ.

ಗ್ಲಾಸ್‌ ಪೇಂಟಿಂಗ್‌ ರಂಗೋಲಿ : ಗ್ಲಾಸ್‌ ಮೇಲೆ ಪೇಂಟಿಂಗ್‌ ಬ್ರಶ್‌ನಿಂದ ಮಾಡಲಾಗಿರುವ ಬಣ್ಣ ಬಣ್ಣದ ರಂಗೋಲಿಯು ಬಹಳ ಸುಂದರವಾಗಿ ಕಾಣುತ್ತದೆ. ಈಚೆಗೆ ಗ್ಲಾಸ್‌ ಪೇಂಟಿಂಗ್‌ ರಂಗೋಲಿ ಹೆಚ್ಚಿನ ಚಾಲ್ತಿಯಲ್ಲಿದೆ. ಮಾರುಕಟ್ಟೆಯಲ್ಲಿ ಬಗೆಬಗೆಯ ರೀತಿಗಳಲ್ಲಿ ಮತ್ತು ಬಣ್ಣಗಳಲ್ಲಿ ಇದು ದೊರೆಯುತ್ತದೆ. ನೀವು ಇದನ್ನು ಒಮ್ಮೆ ತಂದು ಪ್ರಯತ್ನಿಸಿ ನೋಡಿ, ಇದೇ ನಿಮ್ಮ ಅಚ್ಚುಮೆಚ್ಚಿನ ಆಯ್ಕೆಯಾಗಬಹುದು.

ಪುಷ್ಪ ರಂಗೋಲಿ : ಬಣ್ಣಬಣ್ಣದ ಹೂಗಳಿಂದ ರಂಗೋಲಿ ಸೃಷ್ಟಿಸಿ ನೀವು ಅತಿಥಿಗಳ ಮನಸೆಳೆಯಬಹುದು. ಇದನ್ನು ಮಾಡಲು ಗುಲಾಬಿ, ತಾವರೆ, ಚೆಂಡು ಮತ್ತು ಆಸ್ಟರ್‌ ಹೂಗಳ ದಳಗಳನ್ನು ಬಳಸಲಾಗುತ್ತದೆ. ಜೊತೆಗೆ ಎಲೆಗಳನ್ನು ಸೇರಿಸಿ ಮತ್ತಷ್ಟು ಆಕರ್ಷಕಗೊಳಿಸಬಹುದು. ಬಣ್ಣಗಳೊಂದಿಗೆ ಹೂವಿನ ಪರಿಮಳ ಈ ಪುಷ್ಪ ರಂಗೋಲಿಯ ವೈಶಿಷ್ಟ್ಯ.  ನೀರಿನಲ್ಲಿ ತೇಲಿಬಿಟ್ಟ ಹೂಗಳಿಂದ ರಚಿತವಾದ ರಂಗೋಲಿ ಬಹಳ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಡೆನ್‌ ರಂಗೋಲಿ : ಮರದ ಹಲಗೆ ಮೇಲೆ ಸ್ಟೋನ್‌, ಪರ್ಲ್, ಸ್ಪಾರ್ಕ್‌ ಇತ್ಯಾದಿಗಳನ್ನು ಬಳಸಿ ಬಿಡಿಸಲಾಗಿರುವ ರಂಗೋಲಿಯು ಎಲ್ಲರ ಮನಸ್ಸನ್ನು ಮೋಹಗೊಳಿಸುತ್ತದೆ. ಮಾರುಕಟ್ಟೆಯಲ್ಲಿ ಇದು ಬೇರೆ ಬೇರೆ ಬಗೆಗಳಲ್ಲಿ  (ಹೂ ಅಥವಾ ಎಲೆ) ದೊರೆಯುತ್ತದೆ. ಅದನ್ನು ಕೊಂಡು ತಂದು ಮನೆಯಲ್ಲಿ ಸೆಟ್‌ ಮಾಡಿದರಾಯಿತು. ಡೆನ್‌ ಫ್ಲೋರಿಂಗ್‌ ಇರುವ ಕೋಣೆಯಲ್ಲಿ ಈ ಡೆನ್‌ ರಂಗೋಲಿ ಚೆನ್ನಾಗಿ ಶೋಭಿಸುತ್ತದೆ. ಹಬ್ಬದ ಕಾರ್ಯಕ್ರಮ ಮುಗಿದ ನಂತರ ಡೆಕೋರೇಶನ್‌ ಪೀಸ್‌ನಂತೆ ಇದನ್ನು ಗೋಡೆಗೆ ತೂಗುಹಾಕಬಹುದು.

ಧಾನ್ಯದ ರಂಗೋಲಿ : ಬೇಳೆ, ಗೋಧಿ, ಅಕ್ಕಿ, ರವೆ ಅಲ್ಲದೆ ಹಿಟ್ಟಿನಿಂದಲೂ ರಂಗೋಲಿ ಚಿತ್ರಿಸಬಹುದು. ಇದಕ್ಕಾಗಿ ಬೇರೆ ಬೇರೆ ಬಣ್ಣದ ಬೇಳೆ ಕಾಳುಗಳಾದ ತೊಗರಿ, ಹೆಸರು, ಕಡಲೆ, ಬಟಾಣಿ, ಉದ್ದು, ಮುಂತಾದವನ್ನು ಬಳಸಬಹುದು. ಹಾಗೆಯೇ ಅಕ್ಕಿಗೆ ಕುಂಕುಮ ಅಥವಾ ಅರಿಶಿನ ಸೇರಿಸಿ ಕೆಂಪು ಅಥವಾ ಹಳದಿ ಬಣ್ಣ ಬರಿಸಿ ರಂಗೋಲಿ ಬಿಡಿಸಿ. ಇದೇ ರೀತಿ ಗೋದಿ, ಅಕ್ಕಿ, ಕಡಲೆ ಹಿಟ್ಟುಗಳಿಂದಲೂ ರಂಗೋಲಿ ಬಿಡಿಸಬಹುದು.

ಮಿಶ್ರ ರಂಗೋಲಿ : ಹೂ, ಧಾನ್ಯ ಮತ್ತು ದೀಪಗಳನ್ನು ಬಳಸಿ ಸುಂದರ ರಂಗೋಲಿಯನ್ನು ಚಿತ್ರಿಸಬಹುದು. ಇದಕ್ಕಾಗಿ ಮೊದಲು ಚಾಕ್‌ಪೀಸ್‌ನಿಂದ ನೆಲದ ಮೇಲೆ ಚಿತ್ರ ಬರೆಯಿರಿ. ಆಮೇಲೆ ಅದರ ಒಂದು ಭಾಗದಲ್ಲಿ ಹೂ ದಳಗಳು, ಇನ್ನೊಂದರಲ್ಲಿ ಎಲೆಗಳು, ಮತ್ತೊಂದರಲ್ಲಿ ಧಾನ್ಯಗಳು ಹೀಗೆ ತುಂಬಿಸಿ ಅದಕ್ಕೊಂದು ಸುಂದರ ರೂಪ ಕೊಡಿ. ಕಡೆಯಲ್ಲಿ ಅದರ ಮೇಲೆ ದೀಪಗಳನ್ನಿರಿಸಿ ಬೆಳಗಿಸಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ