ಈ ಸಲದ ಹಬ್ಬದ ಸಂಭ್ರಮಕ್ಕೆ ನಿಮ್ಮ ಮನೆಯನ್ನು ಅಲಂಕರಿಸಲು ಸಾಕಷ್ಟು ಹಣ ಖರ್ಚು ಮಾಡಿ ಅದನ್ನು ಆಕರ್ಷಕಗೊಳಿಸಿದ್ದೀರಿ. ಆದರೆ ಒಂದಿಷ್ಟು ಬ್ಯೂಟಿ ಟ್ರೀಟ್‌ಮೆಂಟ್‌ನಿಂದ ನಿಮಗೂ ಆಕರ್ಷಕ ಲುಕ್ಸ್ ದೊರೆಯುವುದೆಂದು ತಿಳಿದಿದೆಯೇ? ಬನ್ನಿ, ನಿಮ್ಮ ಸೌಂದರ್ಯಕ್ಕೆ ಕಳೆ ನೀಡಲು ಇಲ್ಲಿವೆ ಕೆಲವು ಆಧುನಿಕ ವಿಧಾನಗಳು. ಆದರೆ ಎಚ್ಚರಿಕೆ, ಈ ಟ್ರೀಟ್‌ಮೆಂಟ್‌ಗಳನ್ನು ಒಳ್ಳೆಯ ತಜ್ಞರಿಂದಲೇ ಪಡೆದುಕೊಳ್ಳಿ.
ಲಿಪ್ ಆಗ್‌ಮೆಂಟೇಶನ್ : ತುಟಿಗಳನ್ನು ಸುಂದರಗೊಳಿಸುವ ಆಧುನಿಕ ವಿಧಾನವೆಂದರೆ, ಲಿಪ್ ಆಗ್‌ಮೆಂಟೇಶನ್. ಇದೊಂದು ಸರಳ ಪ್ರಕ್ರಿಯೆಯಾಗಿದ್ದು, ಕೆಲವೇ ನಿಮಿಷಗಳಗಳಲ್ಲಿ ತುಟಿಗಳಿಗೆ ಆಕರ್ಷಕ ಲುಕ್ಸ್ ನೀಡಬಹುದಾಗಿದೆ. ಇದಕ್ಕಾಗಿ ಇಂಜೆಕ್ಷನ್‌ನಲ್ಲಿ ಫಿಲರ್‌ನ್ನು ತುಂಬಿಸಲಾಗುತ್ತದೆ. ಈ ಫಿಲರ್‌ಗಳೂ ಬಗೆಬಗೆಯಾಗಿದ್ದು, ವಿವಿಧ ಪ್ರಕಾರದ ಪರಿಣಾಮಗಳನ್ನು ನೀಡುತ್ತದೆ.
ಇದು ಮುಖ್ಯವಾಗಿ ಎಚ್‌ಎ ಫಿಲರ್‌ನೊಂದಿಗೆ ಕೆಲಸ ಮಾಡುತ್ತದೆ. ಹೀಗೆ ಎಚ್‌ಎ ಫಿಲರ್‌ನ ಮೂಲಕ ಮಾಡಲಾದ ಲಿಪ್ ಎನ್‌ಹ್ಯಾನ್ಸ್ ಮೆಂಟ್ 8 ರಿಂದ 10 ತಿಂಗಳ ಕಾಲ ಇರುತ್ತದೆ. ನಂತರ ಅದನ್ನು ಮತ್ತೊಮ್ಮೆ ಮಾಡಿಸಬೇಕಾಗುತ್ತದೆ. ಈ ಅವಧಿಯು ಬಳಸಲಾಗುವ ಫಿಲರ್ ಮೇಲೆ ಅವಲಂಬಿತವಾಗಿರುತ್ತದೆ. ಲಿಪ್ ಎನ್‌ಹ್ಯಾನ್ಸ್ ಮೆಂಟ್‌ನಿಂದ ತುಟಿಗಳು ಸದೃಢವಾಗಿ ತುಂಬಿದಂತೆ ಕಾಣುತ್ತವೆ. ಜೊತೆಗೆ ಬಾಯಿಯ ಅಕ್ಕಪಕ್ಕದ ಸುಕ್ಕುಗಳೂ ಕಡಿಮೆಯಾಗುತ್ತವೆ. ತುಟಿ ತೆಳುವಾಗಿರುವುದು ಅಥವಾ ಅದರ ಆಕಾರ ಸರಿ ಇಲ್ಲದಿರುವುದು ಅಥವಾ ಬಾಯಿಯ ಸುತ್ತ ಗೆರೆಗಳು ಮೂಡಿರುವುದು. ಇಂತಹ ಸಮಸ್ಯೆ ಉಳ್ಳವರಿಗೆ ಲಿಪ್ ಆಗ್‌ಮೆಂಟೇಶನ್ ಬಹಳ ಪ್ರಯೋಜನಕಾರಿ.
ಖರ್ಚು ಮತ್ತು ಸಮಯ : ಈ ಪ್ರಕ್ರಿಯೆಗೆ 20-25 ನಿಮಿಷಗಳ ಕಾಲ ಹಿಡಿಯುತ್ತದೆ ಮತ್ತು ಅದಕ್ಕೆ ಸುಮಾರು 20-25 ಸಾವಿರ ರೂ. ಖರ್ಚು ಬರುತ್ತದೆ.
ನೋಸ್ ಶೇಪಿಂಗ್ : ನಿಮ್ಮ ಮೂಗಿನ ಆಕಾರ ಸರಿಯಿಲ್ಲದಿದ್ದರೆ, ನೋಸ್ ಶೇಪಿಂಗ್ ಟ್ರೀಟ್‌ಮೆಂಟ್‌ನ ಸಹಾಯದಿಂದ 1-2 ಗಂಟೆಗಳಲ್ಲಿ ಸರಿಯಾದ ಶೇಪ್ ಪಡೆದುಕೊಳ್ಳಬಹುದು. ಇದರ ಜೊತೆಗೆ ನಿಮ್ಮ ಮೇಲ್ತುಟಿ ಮತ್ತು ಮೂಗಿನ ನಡುವೆ ನೋಸ್ ಪಾಯಿಂಟ್‌ನ ಆ್ಯಂಗಲ್‌ನ್ನೂ ಸರಿಪಡಿಸಿಕೊಳ್ಳಬಹುದು. ಇದಕ್ಕಾಗಿ ನೀವು 1 ದಿನ ಅಡ್ಮಿಟ್ ಆಗಬೇಕಾಗುತ್ತದೆ. ಊತ ಪೂರ್ತಿಯಾಗಿ ಹೋಗಲು 2 ತಿಂಗಳು ಹಿಡಿಯುತ್ತದೆ. ಆದರೆ 2-3 ವಾರಗಳ ನಂತರ ನೀವು ನಿಮ್ಮ ಕೆಲಸಕ್ಕೆ ಹೋಗಬಹುದು.
ಖರ್ಚು ಮತ್ತು ಸಮಯ : ಈ ಪ್ರಕ್ರಿಯೆಗೆ 1-2 ಗಂಟೆ ಸಮಯ ಬೇಕಾಗುತ್ತದೆ ಮತ್ತು ಇದರ ಖರ್ಚು 30-40 ಸಾವಿರ ರೂ. ಆಗುತ್ತದೆ.
ಕೈಗಳಿಗೆ ಫಿಲಿಂಗ್ : ನಿಮ್ಮ ವಯಸ್ಸನ್ನು ಮುಚ್ಚಿಡಲು ನೀವು ಎಷ್ಟೋ ಪ್ರಯತ್ನಪಡುತ್ತೀರಿ. ಆದರೆ ನಿಮ್ಮ ಕೈಗಳ ಚರ್ಮ ಗುಟ್ಟನ್ನು ಬಿಟ್ಟುಕೊಡುತ್ತದೆ. ನಿಮ್ಮ ಸಮಸ್ಯೆಯನ್ನು ಕೆಲವೇ ನಿಮಿಷಗಳಲ್ಲಿ ದೂರ ಮಾಡುವ ಪ್ರಕ್ರಿಯೆಗಳು ಈಗ ಲಭ್ಯವಿವೆ. ಇದರಿಂದ ಮದುವೆ ಅಥವಾ ಮತ್ತಾವುದೇ ಕಾರ್ಯಕ್ರಮದಲ್ಲಿ ನಿಮ್ಮ ಕೈಗಳ ಸೌಂದರ್ಯ ನಿಮ್ಮ ಕಾಂತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಹ್ಯಾಂಡ್ ಫಿಲಿಂಗ್‌ಗೆಂದೇ ಆಟೊಮ್ಯಾಟಿಕ್ ಇಂಜೆಕ್ಷನ್ ದೊರೆಯುತ್ತದೆ. ಈ ಟೆಕ್ನಿಕ್‌ನಿಂದ ನಿಮ್ಮ ಕೈಗಳು ಮೊದಲಿನಂತೆ ಮೃದುವಾಗಿಯೂ, ತುಂಬಿದಂತೆಯೂ ತೋರುತ್ತವೆ ಮತ್ತು ಆಕರ್ಷಕವಾಗಿ ಕಾಣುತ್ತವೆ.
ಖರ್ಚು ಮತ್ತು ಸಮಯ : ಇದಕ್ಕೆ 15-30 ಸಾವಿರ ರೂ. ಖರ್ಚಾಗುತ್ತದೆ ಮತ್ತು 20-40 ನಿಮಿಷಗಳ ಸಮಯ ಹಿಡಿಯುತ್ತದೆ. ಈ ಪ್ರಕ್ರಿಯೆಗೆ ಪ್ರಾರಂಭದಲ್ಲಿ 4 ತಿಂಗಳವರೆಗೆ ಪ್ರತಿ ತಿಂಗಳೂ 4 ಸಲ ಮಾಡಿಸಬೇಕಾಗುತ್ತದೆ. ಆಮೇಲೆ ವರ್ಷದಲ್ಲಿ 1 ಸಲ ಟ್ರೀಟ್‌ಮೆಂಟ್ ಮಾಡಿಸಬಹುದು.
ಫೇಸ್ ಲಿಫ್ಟ್ : ಇದು ಕಾಸ್ಮೆಟಿಕ್ ಸರ್ಜರಿಗೆ ಸಂಬಂಧಿಸಿದ ಒಂದು ಶಸ್ತ್ರಕ್ರಿಯೆ. ಈ ಕಾಸ್ಮೆಟಿಕ್ ಸರ್ಜರಿಯ ಮೂಲಕ ಸಡಿಲವಾದ ಚರ್ಮವನ್ನು ಎಳೆದು ಬಿಗಿಗೊಳಿಸಲಾಗುತ್ತದೆ. ಹೀಗೆ ಚರ್ಮವನ್ನೂ ಎಳೆಯುವುದರಿಂದ ಸುಕ್ಕುಗಳು ಮಾಯವಾಗಿ ಚರ್ಮದಲ್ಲಿ ತಾರುಣ್ಯಾವಸ್ಥೆಯ ಲಕ್ಷಣಗಳು ತೋರಿಬರುತ್ತವೆ. ವೃದ್ಧ ವ್ಯಕ್ತಿಗೂ ಸಹ ಫೇಸ್ ಲಿಫ್ಟ್ ಮಾಡಿ ಅವರ ಚರ್ಮಕ್ಕೆ ಯೌವನದ ರೂಪವನ್ನು ಕೊಡಬಹುದಾಗಿದೆ. ಒಂದು ಸಲ ಫೇಸ್ ಲಿಫ್ಟ್ ಮಾಡಿಸಿದರೆ 10 ವರ್ಷಗಳ ಕಾಲ ಅದರ ಪ್ರಭಾವ ಉಳಿದಿರುತ್ತದೆ. ನಂತರ ಮತ್ತೆ ಫೇಸ್ ಲಿಫ್ಟ್ ಮಾಡಿಸಬೇಕಾಗುತ್ತದೆ. ಫೇಸ್ ಲಿಫ್ಟ್ ಆಪರೇಶನ್‌ನ ಜೊತೆಗೆ ಪ್ರೌಢಾವಸ್ಥೆಯ ಇತರೆ ಲಕ್ಷಣಗಳನ್ನೂ ನಿವಾರಿಸುವ ಆಪರೇಶನ್‌ನ್ನೂ ಸಹ ಮಾಡಲಾಗುತ್ತದೆ. ಬಾಗಿದ ಹುಬ್ಬನ್ನು ಮೇಲೆತ್ತುವುದು, ರೆಪ್ಪೆಯ ಕೆಳಭಾಗದಲ್ಲಿ ಉಂಟಾಗುವ ಊತವನ್ನು ಹೋಗಲಾಡಿಸುವುದು ಮುಂತಾದ ಪ್ರಕ್ರಿಯೆಗಳಿಂದ ಕಣ್ಣುಗಳಿಗೆ ಯೌವನದ ಕಾಂತಿ ಮರಳುತ್ತದೆ. ಗಲ್ಲ ಮತ್ತು ಕುತ್ತಿಗೆಯ ಕೆಳಗಿನ ಚರ್ಮವನ್ನು ಬಿಗಿಗೊಳಿಸಲಾಗುತ್ತದೆ.
ಖರ್ಚು ಮತ್ತು ಸಮಯ : ಈ ಪ್ರಕ್ರಿಯೆಗೆ ಸುಮಾರು 15 ಸಾವಿರ ರೂ. ನಿಂದ 1 ಲಕ್ಷ ರೂ.ವರೆಗೆ ಖರ್ಚು ಬರುತ್ತದೆ ಮತ್ತು 1 ರಿಂದ ಒಂದೂವರೆ ಗಂಟೆ ಸಮಯ ಹಿಡಿಯುತ್ತದೆ.
ಆ್ಯಂಟಿಏಜಿಂಗ್ ಫೇಶಿಯಲ್ : ದಿನನಿತ್ಯದ ಕಾರ್ಯ ಚಟುವಟಿಕೆಗಳಿಂದಾಗಿ ಚರ್ಮ ಬಿಸಿಲು, ಹೊಗೆ ಮತ್ತು ಮಾಲಿನ್ಯಗಳಿಂದ ಪ್ರಭಾವಿತವಾಗುತ್ತದೆ. ಯುವಿ ಕಿರಣಗಳು ಮತ್ತು ಮಾಲಿನ್ಯದ ಅಂಶಗಳು ಚರ್ಮಕ್ಕೆ ಹಾನಿ ಉಂಟು ಮಾಡುತ್ತದೆ. ಸೂರ್ಯನ ಕಿರಣಗಳು ಮತ್ತು ಫ್ರೀ ರಾಡಿಕಲ್ಸ್ ನಿಂದಾಗಿ ಹಾನಿಗೊಂಡ ಚರ್ಮದ ರಕ್ಷಣೆಗೆ ಆ್ಯಂಟಿ ಏಜಿಂಗ್ ಮೆಡಿಫೇಶಿಯಲ್ ಟ್ರೀಟ್‌ಮೆಂಟ್ ಲಭ್ಯವಿದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್, ವಿಟಮಿನ್ ಸಿ ಮತ್ತು ರೆಟಿನಾಲ್‌ನ್ನು ಬಳಸಲಾಗುತ್ತದೆ. ಇದೇ ರೀತಿ ಹೈಡ್ರೇಟಿಂಗ್ ಫೇಶಿಯಲ್, ಸನ್ ಡ್ಯಾಮೇಜ್ ಫೇಶಿಯಲ್, ಸೂಕ್ಷ್ಮ ಚರ್ಮಕ್ಕೆ ಫೇಶಿಯಲ್, ಮೆನೋಪಾಸ್‌ನ ನಂತರ ಉಂಟಾಗುವ ಪರಿವರ್ತನೆಗಳಿಗಾಗಿ ರಿನ್ಯೂಯಲ್ ಫೇಶಿಯಲ್ ಮತ್ತು ಆ್ಯಕ್ನೆ ಟ್ರೀಟ್‌ಮೆಂಟ್‌ನ್ನೂ ಸಹ ಕೊಡಲಾಗುತ್ತದೆ. ಇದಲ್ಲದೆ ಕೆಮಿಕಲ್ ಪೀಲ್‌ನಿಂದ ಹಿಡಿದು ಹೇರ್ ರಿಮೂವಲ್, ಡರ್ಮಾರೋಲರ್, ಬೊಟೊಕ್ಸ್ ಇಂಜೆಕ್ಷನ್ ಇತ್ಯಾದಿಗಳನ್ನೂ ಕೊಡಲಾಗುತ್ತದೆ. ತರಬೇತಿ ಪಡೆದ ವ್ಯಕ್ತಿಯೇ ಮೆಡಿಫೇಶಿಯಲ್ ಕೊಡುತ್ತಾರೆ. ಅವರಿಗೆ ಚರ್ಮ ಮತ್ತು ಅದರ ಸಮಸ್ಯೆಗಳ ಅರಿವಿರುತ್ತದೆ. ಜೊತೆಗೆ ಅದಕ್ಕೆ ಅಗತ್ಯವಾದ ಕಾಸ್ಮೆಟಿಕ್ ಮತ್ತು ಮೆಡಿಕಲ್ ಟ್ರೀಟ್‌ಮೆಂಟ್‌ನ ತಿಳಿವಳಿಕೆಯೂ ಇರುತ್ತದೆ. ಸಮಸ್ಯೆಗೆ ತಕ್ಕಂತೆ ಸೂಕ್ತವಾದ ಮೆಡಿಕಲ್ ಫೇಶಿಯಲ್‌ನ್ನು ಆರಿಸಿಕೊಳ್ಳಲಾಗುತ್ತದೆ.
ಖರ್ಚು ಮತ್ತು ಸಮಯ : ಇದರ ಖರ್ಚು 8 ಸಾವಿರ ರೂ.ನಿಂದ ಪ್ರಾರಂಭವಾಗುತ್ತದೆ ಮತ್ತು 1-2 ಗಂಟೊಳಗೆ ಈ ಟ್ರೀಟ್‌ಮೆಂಟ್ ಮುಗಿಯುತ್ತದೆ.
– ಡಾ. ವಿನೋದಿನಿ