ಬಾಲಿವುಡ್‌ನಿಂದ ಹಾಲಿವುಡ್‌ ಲೋಕಕ್ಕೂ ಹೆಜ್ಜೆ ಇಟ್ಟಿರುವ ಸಿನಿಮಾ ತಾರೆ ಪ್ರಿಯಾಂಕಾ ಛೋಪ್ರಾ, ಪತ್ರಿಕಾ ಮಾಧಮ್ಯಗಳು ಮತ್ತು ಟಿ.ವಿ. ಛಾನೆಲ್‌ಗಳಲ್ಲಿ ಸುದ್ದಿಯಲ್ಲಿರುತ್ತಾಳೆ. ಅದು ಅವಳ ವಿದೇಶೀ ಧಾರಾವಾಹಿ `ಕ್ವಾಂಟಿಕೊ’ದ ವಿಷಯವಾಗಿರಬಹುದು ಅಥವಾ ಅವಳ ಸ್ವಚ್ಛ ಮತ್ತು ಕೋಮಲ ಆರ್ಮ್ ಪಿಟ್ಸ್ ಅಂದರೆ ಕಂಕುಳ ಬಗ್ಗೆ ಇರಬಹುದು. ಪ್ರತಿಯೊಬ್ಬ ಮಹಿಳೆಯೂ, ಕನ್ನಡಿಯಲ್ಲಿ ತನ್ನನ್ನು ನಿರುಕಿಸಿಕೊಂಡಾಗ, ಕೋಮಲ ಕಾಂತಿಯುತ ಚರ್ಮ ಮತ್ತು ಕೂದಲುರಹಿತ ಸ್ವಚ್ಛ ಕಂಕುಳನ್ನು ಹೊಂದಲು ಬಯಸುತ್ತಾಳೆ.

ಕೆಲವು ಸಲ ಈ ಬಗೆಗಿನ ಚಿಕ್ಕ ಚಿಕ್ಕ ವಿಷಯಕ್ಕೆ ಸ್ನೇಹ ಸಂಬಂಧ ಕೆಡುವುದುಂಟು. ಎದುರಿಗೆ ಇರುವವರು ನಿಮ್ಮ ಬೆವರಿನಿಂದ ದುರ್ಗಂಧ ಬರುತ್ತಿದೆ ಎಂದು ಹೇಳಲಾರದೆ ಕಷ್ಟಪಡುತ್ತಾರೆ. ಅಲ್ಲದೆ ನಿಮ್ಮ ಬೆವರಿನಿಂದ ದುರ್ಗಂಧ ಬರುತ್ತದೆ ಎಂಬ ಮಾತನ್ನು ಒಪ್ಪಿಕೊಳ್ಳಲು ನೀವು ಸಿದ್ಧರಿರುವುದಿಲ್ಲ, ಏಕೆಂದರೆ ನಿಮಗೆ ಹಾಗನ್ನಿಸುವುದೇ ಇಲ್ಲ.

ನಿಯಮಿತ ಸ್ವಚ್ಛತೆ

ನಮ್ಮ ಶರೀರದಲ್ಲಿ ಬೆವರನ್ನು ಹೊರ ಹಾಕುವ ಅನೇಕ ಗ್ರಂಥಿಗಳಿವೆ. ಇವು ಶರೀರದ ತಾಪಮಾನವನ್ನು ನಿಯಂತ್ರಿಸುವ ಕಾರ್ಯ ನಿರ್ವಹಿಸುತ್ತವೆ. ಕಾಸ್ಮೆಟಿಕ್‌ ಡರ್ಮಟಾಲಜಿಸ್ಟ್ ರ ಪ್ರಕಾರ, ಬೆವರಿನ ಗ್ರಂಥಿಗಳು ಶರೀರದ ಇತರೆ ಭಾಗಗಳಿಗಿಂತ ಕಂಕುಳಲ್ಲಿ ಬಹಳಷ್ಟು ಹೆಚ್ಚಾಗಿರುತ್ತವೆ. ಸುಡು ಬಿಸಿಲು, ಅತಿಯಾದ ಭಯ, ಅತೀ ಕುತೂಹಲ ಮುಂತಾದ ಸ್ಥಿತಿ ಎದುರಿಸಬೇಕಾದಾಗ ಕಂಕುಳಿನಿಂದ ಬೆವರು ಹೆಚ್ಚಾಗಿ ಹೊರಬರುತ್ತದೆ. ಭಯಗೊಂಡಾಗ ಮುಖ, ಹಣೆ, ಕೈಕಾಲುಗಳೂ ಬೆವರುತ್ತವೆ. ಆದರೆ ಆರ್ಮ್ ಪಿಟ್ಸ್ ನಿಂದ ಹೊರಬರುವ ಬೆವರು ದುರ್ಗಂಧದಿಂದ ಕೂಡಿರುತ್ತದೆ.

ಕಂಕುಳನ್ನು ನಿತ್ಯ ಸರಿಯಾಗಿ ಸ್ವಚ್ಛಗೊಳಸದಿದ್ದರೆ ಅಲ್ಲಿ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ. ಕೆಲವು ಬಾರಿ ಅದು ಫಂಗಸ್‌ಗೂ ಕಾರಣವಾಗುತ್ತದೆ. ಶರೀರದ ಇತರ ಭಾಗಗಳಿಗಿಂತ ಕಂಕುಳಿನ ಬಣ್ಣ ಗಾಢವಾಗಿ ಅಥವಾ ಕಪ್ಪಾಗಿ ಕಾಣಿಸಿಕೊಳ್ಳುತ್ತದೆ.

ಡರ್ಮಟಾಲಜಿಸ್ಟ್ ಡಾ. ದೀಪಕ್‌ರ ಪ್ರಕಾರ ಬಿಗಿಯಾದ ಉಡುಪು ಧರಿಸಿದಾಗ ಶರೀರದ ಅಂಗಾಂಗಗಳಲ್ಲಿ ವಾಯು ಸಂಚಾರಕ್ಕೆ ಆಸ್ಪದವಿಲ್ಲದೆ ಚರ್ಮದಲ್ಲಿರುವ ಬ್ಯಾಕ್ಟೀರಿಯಾ ಬೆವರಿನೊಂದಿಗೆ ಸೇರಿ ದುರ್ಗಂಧವನ್ನು ಹೊರಡಿಸುತ್ತದೆ ಮತ್ತು ಕಂಕುಳಿನ ಚರ್ಮ ಕಪ್ಪಾಗತೊಡಗುತ್ತದೆ.

ದುರ್ಗಂಧಮಯ ಬೆವರು

ಡಯೆಟಿಶಿಯನ್‌  ಅಂಜಲಿಯವರ ಅಭಿಪ್ರಾಯದಲ್ಲಿ, ಆಹಾರದಲ್ಲಿ ವಿಶೇಷ ಪೋಷಕಾಂಶಗಳಾದ ಮೆಗ್ನೀಶಿಯಮ್ ಅಥವಾ ಝಿಂಕ್‌ನ ಕೊರತೆಯು ದುರ್ಗಂಧಕ್ಕೆ ಕಾರಣವಾಗಬಹುದು. ಮಧುಮೇಹ, ಮಲಬದ್ಧತೆಗಳು ಬೆವರಿನ ದುರ್ಗಂಧಕ್ಕೆ ಒಂದು ಕಾರಣವಾದರೆ, ಮಾಂಸಾಹಾರದ ಅತಿಯಾದ ಸೇವನೆಯು ಇನ್ನೊಂದು ಕಾರಣವಾಗುತ್ತದೆ. ಮಾಂಸಾಹಾರ ಪದಾರ್ಥದಲ್ಲಿರುವ ಪ್ರೊಟೀನ್‌ನಲ್ಲಿ ಕೊಲೀನ್‌ ಎಂಬ ಅಂಶ ಅಧಿಕವಾಗಿರುತ್ತದೆ. ಅದರಿಂದ ಬೆವರಿನ ದುರ್ಗಂಧ ಹೆಚ್ಚುವ ಸಂಭವವಿರುತ್ತದೆ.

ತಜ್ಞರ ಅಭಿಪ್ರಾಯ

ಕಂಕುಳ ಚರ್ಮದ ಬಣ್ಣ ಕಪ್ಪಾಗಲು ಅನೇಕ ಕಾರಣಗಳಿರುತ್ತವೆ. ಸ್ಥೂಲತೆಯಿಂದಾಗಿ ಅತಿಯಾಗಿ ಬೆವರುವುದು, ಪದೇ ಪದೇ ಕಂಕುಳ ಕೂದಲನ್ನು ಶೇವ್ ಮಾಡುವುದು, ವ್ಯಾಕ್ಸಿಂಗ್‌ ಮಾಡುವುದು, ಕೆಮಿಕಲ್‌ಯುಕ್ತ ಹೇರ್‌ ರಿಮೂವಿಂಗ್‌ ಕ್ರೀಮ್, ಡಿಯೊಡರೆಂಟ್‌ಗಳನ್ನು ಬಳಸುವುದು, ಅತಿಯಾಗಿ ಪೌಡರ್‌ ಹಾಕಿಕೊಳ್ಳುವುದು, ಹವಾಮಾನ ಬದಲಾವಣೆ, ಇವುಗಳೆಲ್ಲ ಆರ್ಮ್ ಪಿಟ್ಸ್ ನ ಗಾಢವಾದ ಬಣ್ಣಕ್ಕೆ ಕಾರಣವೆಂದು ಎಲ್ಲ ತಜ್ಞರೂ ಅಭಿಪ್ರಾಯಪಡುತ್ತಾರೆ.

ಚರ್ಮರೋಗ ತಜ್ಞರ ಪ್ರಕಾರ, ಇದು ವಾಸಿಯಾಗದ ಕಾಯಿಲೆ ಏನಲ್ಲ. ಕೆಳಗಿನ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ ಆರ್ಮ್ ಪಿಟ್ಸ್ ಬಗೆಗಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು :

– ಆರ್ಮ್ ಪಿಟ್ಸ್ ನ ಸ್ವಚ್ಛತೆಯ ಬಗ್ಗೆ ವಿಶೇಷ ಗಮನ ನೀಡಿ.

– ಸ್ನಾನ ಮಾಡುವಾಗ ಬ್ರಶ್‌ ಬಳಸಿ. ಅದರಿಂದ ಕಂಕುಳನ್ನು ಚೆನ್ನಾಗಿ ಉಜ್ಜಿ ತೊಳೆಯಿರಿ.

– ಒಳ್ಳೆಯ ನ್ಯಾಚುರಲ್ ಮಾಯಿಶ್ಚರೈಸರ್‌ ಹಚ್ಚಿ.

– ಬಿಗಿಯಾದ ಉಡುಪು ಧರಿಸಬೇಡಿ.

– ಹತ್ತಿಯ ಉಡುಪನ್ನೇ ಆದಷ್ಟು ಬಳಸಿ. ಸಿಂಥೆಟಿಕ್‌ ಡ್ರೆಸ್‌ ಬಳಸುವುದನ್ನು ಕಡಿಮೆ ಮಾಡಿ.

– ಗ್ಲೈಕಾಲಿಕ್‌ ಅಥವಾ ಏಜೆಲಿಕ್‌ ಆ್ಯಸಿಡ್‌ಯುಕ್ತ ಕ್ರೀಮ್ ಬಳಸಿ.

– ಹೊರಗೆ ಹೋಗುವಾಗ ಸಡಿಲ ತೋಳಿರುವ ಬಟ್ಟೆಯನ್ನೇ ಧರಿಸಿ.

– ಒಳ್ಳೆಯ ಡರ್ಮಟಾಲಜಿಸ್ಟ್ ರಿಂದ ಟ್ರೀಟ್‌ಮೆಂಟ್‌ ಪಡೆಯಿರಿ. ಕಾಸ್ಮೆಟಿಕ್‌ ಸರ್ಜರಿ ಮಾಡಿಸಿಕೊಳ್ಳಿ.

– ಬೆವರಿನ ದುರ್ಗಂಧ ಮತ್ತು ಕಪ್ಪುಬಣ್ಣವನ್ನು ದೂರ ಮಾಡಲು ಪರ್ಮನೆಂಟ್‌ ಲೇಸರ್‌ ಹೇರ್‌ ರಿಮೂವರ್‌ ಟ್ರೀಟ್‌ಮೆಂಟ್‌ ಒಂದು ಉತ್ತಮ ಉಪಾಯ. ಇದರಿಂದ ಯಾವುದೇ ರೀತಿಯ ಸೈಡ್‌ ಎಫೆಕ್ಟ್ಸ್ ಉಂಟಾಗುವುದಿಲ್ಲ.

– ಕೇಸರಿ ಚರ್ಮವನ್ನು ಸ್ವಚ್ಛಗೊಳಿಸುವ ಗುಣ ಹೊಂದಿದೆ. ಕೇಸರಿಯ ಕೆಲವು ರೇಕುಗಳನ್ನು 2 ಚಮಚ ಲೋಶನ್‌ಗೆ ಸೇರಿಸಿ ಅಂಡರ್‌ ಆರ್ಮ್ ಗೆ ಹಚ್ಚಿ ಕೊಂಚ ಹೊತ್ತು ಬಿಡಿ. ಹೀಗೆ ನಿಯಮಿತವಾಗಿ ಕೆಲವು ದಿನಗಳ ಕಾಲ ಮಾಡುವುದರಿಂದ ಚರ್ಮದ ಕಪ್ಪು ಬಣ್ಣ ನಿಧಾನವಾಗಿ ದೂರವಾಗುತ್ತದೆ ಮತ್ತು ಬೆವರಿನ ದುರ್ಗಂಧ ಹೋಗುತ್ತದೆ.

– ಹಸಿರು ಸೇಬನ್ನು ಸ್ವಲ್ಪ ಸ್ಟೀಮ್ ಮಾಡಿ ಮಸೆಯಿರಿ. ಈ ತಿರುಳನ್ನು ಅಂಡರ್‌ ಆರ್ಮ್ಸ್ ಗೆ ಹಚ್ಚಿ. ಕೆಲವು ದಿನಗಳು ಹೀಗೆ ಮಾಡುವುದರಿಂದ ಕಪ್ಪು ಬಣ್ಣ ಕಡಿಮೆಯಾಗುತ್ತದೆ.

– ಸ್ವಲ್ಪ ಆಲಿವ್ ಆಯಿಲ್‌‌ಗೆ ಸಕ್ಕರೆ ಸೇರಿಸಿ ವಾರಕ್ಕೊಮ್ಮೆ ಕಂಕುಳಿನ ಭಾಗದಲ್ಲಿ ಫೇಶಿಯಲ್‌ನಂತೆ ಉಜ್ಜಿ. ಕೆಲವೇ ದಿನಗಳಲ್ಲಿ ಅದರ ಫಲಿತಾಂಶ ಕಾಣುವುದು.

– ಮೊಸರನ್ನು ಹಚ್ಚಿ ಚೆನ್ನಾಗಿ ಉಜ್ಜಿ, ಆಮೇಲೆ ತೊಳೆದು ಒರೆಸಿ.

– ಕಪ್ಪು ಬಣ್ಣ ದೂರಾಗಲು ಹುಣಿಸೆಯ ಪೇಸ್ಟ್ ಬಹಳ ಸಹಕಾರಿ.

– ಸ್ವಲ್ಪ ಸೌತೆಕಾಯಿಯ ರಸವನ್ನು ನಿಂಬೆರಸದೊಂದಿಗೆ ಸೇರಿಸಿ ಕಪ್ಪು ಚರ್ಮಕ್ಕೆ ಹಚ್ಚಿ. ಶೇವಿಂಗ್‌ ಅಥವಾ ವ್ಯಾಕ್ಸಿಂಗ್‌ಗೆ  ಮೊದಲು ಅಥವಾ ನಂತರ ಸಿಟ್ರಿಕ್‌ ಆ್ಯಸಿಡ್‌ ಅಂದರೆ ನಿಂಬೆರಸ ಬಳಸಬೇಡಿ. ಕೆಲವು ಬಾರಿ ಶೇವ್ ಮಾಡಿದಾಗ ಫಾಲಿಕ್ಯೂಲೈಟಿಸ್‌ ಉಂಟಾಗಬಹುದು. ಆದ್ದರಿಂದ ಆ ಸಮಯದಲ್ಲಿ ಸಿಟ್ರಿಕ್‌ ಆ್ಯಸಿಡ್‌ ಉಪಯೋಗಿಸಬೇಡಿ.

– ಕಡಲೆಹಿಟ್ಟಿಗೆ ಕೊಂಚ ನಿಂಬೆರಸ ಮತ್ತು ಅರಿಶಿನ ಸೇರಿಸಿ ಪೇಸ್ಟ್ ಮಾಡಿ ಕಂಕುಳಿಗೆ ಹಚ್ಚಿ. ನಿಯಮಿತವಾಗಿ ಹಚ್ಚುವುದರಿಂದ ಪ್ರಯೋಜನವಾಗುತ್ತದೆ.

– ಮೂಲಂಗಿಯ ರಸ ಕಪ್ಪು ಬಣ್ಣವನ್ನು ಹೋಗಲಾಡಿಸುತ್ತದೆ.

– ಕಿತ್ತಳೆಯ ಒಣ ಸಿಪ್ಪೆಯನ್ನು ಪುಡಿ ಮಾಡಿ ಅದಕ್ಕೆ ರೋಸ್‌ವಾಟರ್‌ ಸೇರಿಸಿ ಪೇಸ್ಟ್ ತಯಾರಿಸಿ. ಅದನ್ನು ಕಂಕುಳಿಗೆ ಹಚ್ಚಿ 10 ನಿಮಿಷಗಳ ಕಾಲ ಬಿಡಿ. ಕಿತ್ತಳೆಯಲ್ಲಿರುವ ವಿಟಮಿನ್‌ ಸಿ ಚರ್ಮವನ್ನು ಬ್ಲೀಚ್‌ ಮಾಡುತ್ತದೆ. ಹೀಗೆ ನಿಮ್ಮ ಆರ್ಮ್ ಪಿಟ್‌ ನಿರ್ಮಲವಾಗುತ್ತದೆ.

ಆರ್ಮ್ ಪಿಟ್ಸ್ ನಲ್ಲಿ ನವೆ, ಉರಿ, ಗುಳ್ಳೆಗಳಾಗದಿರಲು ಶರೀರದ ಸ್ವಚ್ಛತೆಯ ಕಡೆ ಗಮನ ನೀಡಿ. ಆಹಾರದಲ್ಲಿ ಪೌಷ್ಟಿಕಾಂಶಗಳು ಇರಬೇಕು.

– ಅನುರಾಧಾ ಜಿ.ಎಂ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ