ಕುಟುಂಬದೊಂದಿಗೆ ಮಾತ್ರ ಹಬ್ಬಗಳ ಮಜಾ!
ಬಾಲಿವುಡ್ ಪ್ರವೇಶಿಸಿ ಪ್ರತಿಯೊಬ್ಬರ ಹೃದಯ ಗೆದ್ದಿರುವ ದೀಪಿಕಾ ಪಡುಕೋಣೆ, ತನ್ನ ಅದ್ಭುತ ನಟನೆ, ಗ್ಲಾಮರ್, ರೂಪಲಾವಣ್ಯಗಳಿಂದಾಗಿ `ಪದ್ಮಾವತಿ’ ಚಿತ್ರದಲ್ಲಿ ಸೈ ಎನಿಸಿದ್ದಾಳಂತೆ. ಅಷ್ಟೊಂದು ವಿರೋಧ ಹಾಗೂ ಹಿಂಸೆಗಳ ನಡುವೆಯೂ ಈ ಐತಿಹಾಸಿಕ ಚಿತ್ರ ಪ್ರದರ್ಶನಕ್ಕೆ ಸಿದ್ಧವಾಗಿದೆ. ದೀಪಿಕಾಳನ್ನು ಇಷ್ಟೊಂದು ಬಿಝಿ ಶೆಡ್ಯೂಲ್ ಮಧ್ಯೆ ಕುಟುಂಬಕ್ಕಾಗಿ ಹೇಗೆ ಸಮಯ ಮೀಸಲಿಡುತ್ತೀಯಾ ಎಂದು ಕೇಳಿದಾಗ, ಹಬ್ಬಗಳ ಸಂದರ್ಭದಲ್ಲಿ ಶೂಟಿಂಗ್ ಇಲ್ಲದಾಗ, ನಾನು ಎಲ್ಲೇ ಇದ್ದರೂ ಬೆಂಗಳೂರಿನ ನನ್ನ ಮನೆಗೆ ಹಾರಿ, ತಾಯಿತಂದೆಯರ ಜೊತೆ ಹಬ್ಬ ಆಚರಿಸುತ್ತೇನೆ ಎನ್ನುತ್ತಾಳೆ.
ಈ ಚಿತ್ರದಲ್ಲಿ ಕ್ಯಾಟ್‌ಫೈಟ್ ನಡೆಯುತ್ತಾ?
ಸತತ 4 ಫ್ಲಾಪ್ ಚಿತ್ರಗಳ ನಂತರ ಯಾರಿಗಾದರೂ ಹೊಸ ಚಿತ್ರಕ್ಕೆ ಆಫರ್ ಬರುತ್ತದೆ ಎಂದರೆ ಅದು ಶಾರೂಖ್ ಆಗಿರಲೇಬೇಕು. `ಹ್ಯಾರಿ ಮೀಟ್ ಸೇಜ್’ ಚಿತ್ರದ ನಂತರ ಈತ ಎಲ್. ಆನಂದ್‌ರ ಹೊಸ ಚಿತ್ರದಲ್ಲಿ ಬಿಝಿ. ಈ ಚಿತ್ರದಲ್ಲಿ ಇಂದಿನ ಕಾಲದ ಮೂವರು ನಾಯಕಿಯರೊಂದಿಗೆ ಈತ ರೊಮಾನ್ಸ್ ನಡೆಸಲಿದ್ದಾನೆ. ನಂಬಲರ್ಹ ಸುದ್ದಿಗಳ ಪ್ರಕಾರ, ಕತ್ರೀನಾ ಹಾಗೂ ಅನುಷ್ಕಾ ಶರ್ಮ ನಂತರ ಈ ಚಿತ್ರಕ್ಕೆ ಎಂಟ್ರಿ ಪಡೆದವಳು ದೀಪಿಕಾ. ಕತ್ರೀನಾ ದೀಪಿಕಾ ಇಬ್ಬರೂ ಒಟ್ಟಿಗೆ ಈ ಚಿತ್ರದಲ್ಲಿ ನಟಿಸುತ್ತಿರುವುದೇ ಒಂದು ವಿಶೇಷ. ಏಕೆಂದರೆ ಇವರಿಬ್ಬರ ಕೋಳಿ ಜಗಳದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಹಾಗಿರುವಾಗ ಕ್ಯಾತೆ ತೆಗೆಯದೆ ಒಟ್ಟೊಟ್ಟಿಗೆ ಈ ಚಿತ್ರದಲ್ಲಿ ಹೇಗೆ ನಟಿಸಲಿದ್ದಾರೆ ಎಂಬುದೇ ಕುತೂಹಲಕಾರಿ ಅಂಶ. ಈಗಾಗಲೇ ಅನುಷ್ಕಾಳ ಜೊತೆ ಕತ್ರೀನಾ `ಜಬ್ ತಕ್ ಹೈ ಜಾನ್’ ಚಿತ್ರದಲ್ಲಿ ನಟಿಸಿದ್ದಾಗಿದೆ. ಆದರೆ ದೀಪಿಕಾಳ ಜೊತೆ ಇದು ಅವಳ ಮೊದಲನೇ ಚಿತ್ರ. ಮತ್ತೊಂದು ವಿಶೇಷ ಎಂದರೆ ಈ ಚಿತ್ರದಲ್ಲಿ ದೀಪಿಕಾಳದು ಅತಿಥಿ ಪಾತ್ರವಂತೆ. ಹೀಗಾಗಿ ಆಕೆ ತನ್ನ ಭಾಗದ ಚಿತ್ರೀಕರಣ ಈಗಾಗಲೇ ಪೂರೈಸಿ ಆಗಿದೆ, ಈಗ ತಾನು ಕತ್ರೀನಾಳ ಮುಖಾಮುಖಿ ಆಗಬೇಕಿಲ್ಲ ಎಂಬುದವಳ ತರ್ಕ.
ಅಭಿ ಜೊತೆ ನಟಿಸಲೊಪ್ಪದ ಪ್ರಿಯಾಂಕಾ
ಯಾವ ಚಿತ್ರಕ್ಕಾಗಿ ಅತಿ ಉತ್ಸಾಹದಿಂದ ಪ್ರಿಯಾಂಕಾ ಚೋಪ್ರಾ ಸಹಿ ಹಾಕಿ ನಟಿಸಲು ಸಿದ್ಧಳಾಗುತ್ತಿದ್ದಳೋ, ಇದ್ದಕ್ಕಿದ್ದಂತೆ ಆ ಚಿತ್ರವೇ ಬೇಡವೆಂದು ಅಲ್ಲಿಂದ ಹೊರಬಂದದ್ದಾದರೂ ಏಕೆ? ಅದಕ್ಕೆ ಕಾರಣರಾದವರು ಬೇರಾರೂ ಅಲ್ಲ, ಅಭಿಷೇಕ್ ಬಚ್ಚನ್! ಈತನ ಜೊತೆ ಈಗಾಗಲೇ ಪ್ರಿಯಾಂಕಾ ದ್ರೋಣ್, ದೋಸ್ತಾನಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರೂ ಈ ಬಾರಿ ಆತನ ಹೆಸರು ಕೇಳಿ ಈ ಚಿತ್ರವೇ ಬೇಡವೆಂದಳಂತೆ. ಅಸಲಿಗೆ, ಅಭಿಷೇಕ್ ಸಾಹಿರ್ ಲುಧಿಯಾನ್ವಿಯ ಬಯೋಪಿಕ್ ಚಿತ್ರಕ್ಕಾಗಿ ಬಿಝಿಯಾಗಿದ್ದಾನೆ. ಈ ಚಿತ್ರಕ್ಕಾಗಿಯೇ ಆತ ಜೆ.ಪಿ. ದತ್ತಾರ `ಪಲ್ಟನ್’ ಚಿತ್ರ ಸಹ ಬಿಟ್ಟಿದ್ದ. ಈ ಚಿತ್ರದಲ್ಲಿ ಅಭಿಷೇಕ್‌ಗೆ ಮೊದಲೇ ಇರ್ಫಾನ್ ಮತ್ತು ಫರ್ಹಾನ್ ಎಂಟ್ರಿ ಪಡೆದಿದ್ದರು. ಅವರುಗಳ ಜೊತೆ ನಟಿಸಲು ಪ್ರಿಯಾಂಕಾ ಉತ್ಸಾಹಿತಳಾಗಿದ್ದಳು. ಆದರೆ ಆ ಚಿತ್ರದ ನಾಯಕ ಅಭಿ ಎಂದು ಗೊತ್ತಾಗುತ್ತಲೇ, ಈ ಚಿತ್ರದ ಸಹವಾಸವೇ ಬೇಡವೆಂದು ಈಕೆ ಕೈ ತೊಳೆದುಕೊಂಡಳಂತೆ.
ಎಲ್ಲಕ್ಕೂ ಸೈನಾ ಚಿತ್ರವೇ ಆಧಾರ
ಶಕ್ತಿ ಕಪೂರ್‌ನ ಮಗಳು ಶ್ರದ್ಧಾಳ ಚಿತ್ರಗಳು ಬಂದು ಸತತ ತೋಪೆದ್ದು ಹೋದವು. ಅದಾದ ಮೇಲೆ ಅವಳ ಅದೆಷ್ಟು ಚಿತ್ರಗಳು ಬಂದುಹೋದವೋ? ಈಗ ಶ್ರದ್ಧಾಳ ಶ್ರದ್ಧೆ ಪೂರ್ತಿ `ಸೈನಾ ನೇಹ್‌ವಾಲ್’ ಕುರಿತ ಅಮೋಲ್ ಗುಪ್ತೆಯವರ ಬಯೋಪಿಕ್ ಚಿತ್ರದ್ದೇ ಆಗಿದೆ. ಇತ್ತೀಚೆಗೆ ಶ್ರದ್ಧಾ ಸೈನಾಳ ಮನೆಯವರು ಹಾಗೂ ಬ್ಯಾಡ್‌ಮಿಂಟನ್ ಕುರಿತು ಟಿಪ್ಸ್ ಪಡೆಯಲು ಹೈದರಾಬಾದ್‌ಗೆ ಹೋಗಿದ್ದಳಂತೆ. ಈ ಚಿತ್ರ ಮಾತ್ರವಲ್ಲ, ಶ್ರದ್ಧಾ ಈಗ ದಕ್ಷಿಣದ ಪ್ರಭಾವಶಾಲಿ ಪ್ರಭಾಸ್ ನಟಿಸುತ್ತಿರುವ `ಸಾಹೋ’ ಚಿತ್ರದಲ್ಲೂ ಎರಡನೇ ನಾಯಕಿಯಂತೆ.
ಮಾತು ತಿರುಗಿಸಿದ ಪ್ರಕಾಶ್ ರೈ
ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್‌ರ ಅಮಾನುಷ ಹತ್ಯೆಯ ವಿರುದ್ಧ ನಟ ಪ್ರಕಾಶ್ ರೈ ಮಾತನಾಡುವಾಗ, ಈ ಹತ್ಯಾಕಾಂಡದ ಸಮರ್ಪಕ ಪರೀಕ್ಷೆ ಆಗದಿದ್ದರೆ ಹಾಗೂ ಪ್ರಧಾನಿ ಮೋದಿ ಏನೂ ಮಾಡದೆ ಇದ್ದರೆ, ಅದನ್ನು ಪ್ರತಿಭಟಿಸುವ ಸಲುವಾಗಿ ತಾವು ತಮಗೆ ಬಂದಿರುವ ಎಲ್ಲಾ ರಾಷ್ಟ್ರ ಪ್ರಶಸ್ತಿಗಳನ್ನೂ ಮರಳಿಸುವುದಾಗಿ ಹೇಳಿದ್ದರು. ಆದರೆ 2 ದಿನಗಳ ನಂತರ ಅವರು ತಮ್ಮ ಮಾತು ತಿರುಗಿಸಿಬಿಟ್ಟರು. ಈಗ ಅವರು, “ನಾನೇಕೆ ಪ್ರಶಸ್ತಿಗಳನ್ನು ಮರಳಿಸಲಿ? ಸರ್ಕಾರ ತನ್ನ ಕೆಲಸ ಮಾಡುತ್ತಿದೆ,” ಎಂದರು. ಈಗ ಪ್ರಕಾಶ್ ರೈ ಇಷ್ಟು ಬೇಗ ಮಾತು ತಿರುಗಿಸಿದ್ದರಿಂದ ಸರ್ಕಾರ ಇವರ ಮೇಲೆ ಹೆಚ್ಚಿನ ಒತ್ತಡ ಹೇರಿಲ್ಲವಷ್ಟೆ? ಏಕೆಂದರೆ ಇತ್ತೀಚೆಗೆ ಯಾರೇ ಆಡಳಿತದ ವಿರುದ್ಧ ಮಾತನಾಡಿದರೂ ಅವರ ಧ್ವನಿಯನ್ನು ನರೇಂದ್ರ ದೋಭೋಲ್‌ಕರ್, ಎಂ.ಎಂ. ಕಲಬುರ್ಗಿ, ಗೋವಿಂದ್ ಪನ್ಸಾರೆ ತರಹ ಶಾಶ್ವತವಾಗಿ ನಿಲ್ಲಿಸಲಾಗುತ್ತದೆ ಅಥವಾ ಪ್ರಕಾಶ್ ರೈ ತರಹ ತಮ್ಮ ಹೇಳಿಕೆ ಬದಲಾಯಿಸಲು ಒತ್ತಾಯ ಹೇರಿದಂತಾಗುತ್ತದೆ.
ನನಗಂತೂ ಪಟಾಕಿ ಅಂದ್ರೆ ಭಯ!
ಪಿವಿಆರ್ ಸಿನಿಮಾದ ಲಾಯಲ್ಟಿ ಪ್ರೋಗ್ರಾಂ ಪಿವಿಆರ್ ಪ್ರಿವಿಲೇಜ್ ಸಂದರ್ಭದಲ್ಲಿ ದೆಹಲಿಗೆ ಆಗಮಿಸಿದ್ದ ಸೂಪರ್ ಸ್ಟಾರ್ ಆಮೀರ್ ಖಾನ್ ಹೇಳಿದರು, ಪಿವಿಆರ್ ಥಿಯೇಟರ್‌ನಿಂದಲೇ ಅವರ ಚಿತ್ರ `ತಾರೆ ಝಮೀನ್ ಪರ್’ನ ಮೊದಲ ಪ್ರೀಮಿಯರ್ ಆಗಿತ್ತು. ಸುಪ್ರೀಂಕೋರ್ಟ್ ದೆಹಲಿಯಲ್ಲಿ ಪಟಾಕಿ ಹಚ್ಚಬಾರದೆಂದು ಹೊರಡಿಸಿರುವ ಆದೇಶದ ಬಗ್ಗೆ ಕೇಳಿದಾಗ, “ನಾನು ದೀಪಾವಳಿ ಆಚರಿಸುತ್ತೇನೆ. ಆದರೆ ಸದ್ದುಗದ್ದಲ ಇಲ್ಲದೆ ಸರಳ ರೀತಿಯಲ್ಲಿ. ಏಕೆಂದರೆ ಚಿಕ್ಕಂದಿನಿಂದಲೂ ನನಗೆ ಪಟಾಕಿ ಅಂದ್ರೆ ಬಹಳ ಭಯ!”
ನಖ್ರಾ ಸಹಿಸುವ ಪತಿ ಬೇಕು
ಇತ್ತೀಚೆಗೆ `ಕಮಾಂಡೋ-2′ ಚಿತ್ರದ ನಾಯಕಿಯಾಗಿ ಹೆಸರು ಮಾಡಿರುವ ಅದಾ ಶರ್ಮಾಳಿಗೆ ಕೈಕಟ್ ಬಾಯ್ ಮುಚ್ ಪತಿಯೇ ಬೇಕಂತೆ. ತನ್ನೆಲ್ಲ ನಖ್ರಾಗಳನ್ನು ಸಹಿಸಿಕೊಂಡು ತನಗೆ ಒತ್ತಾಸೆಯಾಗಿ ನಿಲ್ಲುವಂಥ ವ್ಯಕ್ತಿಯನ್ನೇ ಪತಿಯಾಗಿ ಆರಿಸುತ್ತೇನೆ ಎನ್ನುತ್ತಾಳೆ. `1920′ ಚಿತ್ರದಿಂದ ಬಾಲಿವುಡ್‌ನಲ್ಲಿ ಎಂಟ್ರಿ ಪಡೆದ ಈಕೆ, ತಾನು ಪತಿಯಾಗಿ ಆರಿಸುವ ವ್ಯಕ್ತಿ ಹೇಗಿರಬೇಕೆಂಬ ಅತಿಯಾದ ಮಹತ್ವಾಕಾಂಕ್ಷೆ ಹೊಂದಿದ್ದಾಳೆ. ಆತ ಶ್ರೀಮಂತನಲ್ಲದೆ, ಅತಿ ಸ್ಮಾರ್ಟ್ ಅಲ್ಲದಿದ್ದರೂ ಪರವಾಗಿಲ್ಲ, ಸದಾ ತನಗೆ ಅಡ್ಜಸ್ಟ್ ಆಗಿರುವಂತಿರಬೇಕು ಎನ್ನುತ್ತಾಳೆ. ಜೊತೆಗೆ ಆತ ಸಾಕುಪ್ರಾಣಿಗಳನ್ನು ನೋಡಿಕೊಳ್ಳಬೇಕು, ಅಡುಗೆ ಮಾಡಬೇಕು, ಗಾರ್ಡನಿಂಗ್ ಕಡೆಯೂ ಗಮನ ಕೊಡಬೇಕಂತೆ! ಅಬ್ಬಬ್ಬಾ….! ಇಷ್ಟೆಲ್ಲ ವೈಶಿಷ್ಟ್ಯಗಳುಳ್ಳ ಪತಿ ಅದೂ ಈ ಕಾಲದಲ್ಲಿ….. ಬಾಲಿವುಡ್‌ನಲ್ಲಂತೂ ಈಕೆಗೆ ಇಂಥವರು ಸಿಗುತ್ತಿಲ್ಲ, ನೆರೆಯ ಬೇರೆ ಭಾಷೆಗಳ ಚಿತ್ರರಂಗದ ಕಡೆ ಕಣ್ಣು ಹಾಯಿಸಬೇಕಷ್ಟೆ. ಪತಿ ಆದವನು ಹೇಗೆ ಇರಲಿ, ಮದುವೆ ನಂತರ ಅವನು ಪತ್ನಿಯ ಶರಣು ಶರಣಾರ್ಥಿ ಆಗುತ್ತಾನೆಂದು ಇವಳಿಗೆ ಗೊತ್ತಿಲ್ಲವೇ?
ಏನು ಮಾಡಲಿಕ್ಕೂ ರೆಡಿ ಎನ್ನುವವರು ಇಷ್ಟವಿಲ್ಲ
`ಗ್ಯಾಂಗ್ಸ್ ಆಫ್ ವಾಸಿಪುರ್,’ `ಫಕ್ರೆ’ ಚಿತ್ರಗಳಿಂದ ತನ್ನ ಗ್ಲಾಮರ್ ಕಾರಣ ಬಾಲಿವುಡ್‌ನಲ್ಲಿ ಖ್ಯಾತಳಾದ ರಿಚಾ ಚಡ್ಡಾ ತನ್ನದೇ ಆದ ಹೇಳಿಕೆಗಳಿಂದಲೂ ಹೆಸರು ಗಳಿಸಿದ್ದಾಳೆ. ತನ್ನ ಸತತ ಚಿತ್ರಗಳ ನಡುವೆ ಬಿಡುವು ಮಾಡಿಕೊಂಡು ಹೇಳುತ್ತಾಳೆ, “ಈಗೆಲ್ಲ ಹೊಸ ನಾಯಕಿಯರು ಹೇಗೆ ತಯಾರಾಗಿರುತ್ತಾರೆಂದರೆ…. ಅವಕಾಶ ಗಿಟ್ಟಿಸಲು ಏನು ಮಾಡಲಿಕ್ಕೂ ರೆಡಿ! ನಿರ್ಮಾಪಕ, ನಿರ್ದೇಶಕರ ಕೃಪೆಗಾಗಿ ಎಲ್ಲವನ್ನೂ ಬಿಟ್ಟುಕೊಡಲು ಸಿದ್ಧ. ಇಂಥವರನ್ನು ಕಂಡರೆ ನನಗೆ ಖಂಡಿತಾ ಇಷ್ಟವಾಗೋಲ್ಲ. ನಟಿಯಾದವಳ ನಟನೆಯಲ್ಲಿ ದಮ್ ಇದ್ದರೆ ಕೆಲಸ ನಿಮ್ಮನ್ನು ಹುಡುಕಿಕೊಂಡು ತಾನಾಗಿ ಬರುತ್ತದೆ. ಹೀಗೆ ಶಾರ್ಟ್‌ಕಟ್ ಮೂಲಕ ಎಂಟ್ರಿ ಪಡೆದವರು ಅಷ್ಟೇ ಬೇಗ ಮಾಯವಾಗ್ತಾರೆ.”
ಬಾಹುಬಲಿಯಂಥ ಚಿತ್ರ ಮಾಡುವಾಸೆ!
ಅನುಷ್ಕಾ, ದಿಯಾ ಮಿರ್ಜಾರಂಥ ನಿರ್ಮಾಪಕಿಯರಾದ ನಟಿಯರನ್ನು ಗಮನಿಸಿಕೊಂಡು ಇದೀಗ ನಟಿ ಸೋನಂ ಕಪೂರ್ ಸಹ ನಿರ್ಮಾಪಕಿ ಆಗಲು ಹೊರಟಿದ್ದಾಳೆ. ಇತ್ತೀಚೆಗಷ್ಟೆ ಈಕೆ ಸಿಂಗಾಪುರದಲ್ಲಿ ವಾಸಿಸುವ ಲೇಖಕಿ ಕೃಷ್ಣಾ ಉದಯ್‌ಶಂಕರ್‌ರ ಬೆಸ್ಟ್ ಸೆಲ್ಲರ್ ಎನಿಸಿರುವ `ದಿ ಆರ್ಯ್ರತ್ ಕ್ರಾನಿಕ್’ ಕೃತಿಯನ್ನು ತೆರೆಗಿಳಿಸುವ ಹಕ್ಕು ಪಡೆದಿದ್ದಾಳೆ. ಕುರುಕ್ಷೇತ್ರದ ಮಹಾಯುದ್ಧದ ಕಥಾಹಂದರ ಹೊಂದಿರುವ ಈ ಕೃತಿಯನ್ನು ಸೋನಂ ಆಧುನಿಕ ರಂಗುರೂಪ ನೀಡಿ ಬಾಹುಬಲಿಯಂಥ ಮಹಾನ್ ಚಿತ್ರವನ್ನು ಹಿಂದಿಯಲ್ಲಿ ನಿರ್ಮಿಸುವ ಹುನ್ನಾರದಲ್ಲಿದ್ದಾಳೆ.
“ಇಷ್ಟು ದೊಡ್ಡ ಕಥೆಯನ್ನು ಒಂದೇ ಚಿತ್ರದಲ್ಲಿ ತೋರಿಸಲಾಗದು, ಹೀಗಾಗಿ ಇದನ್ನು 3 ಭಾಗಗಳಲ್ಲಿ ಪ್ರಸ್ತುತಪಡಿಸುತ್ತೇನೆ,” ಎನ್ನುತ್ತಾಳೆ ಸೋನಂ.
ಬಾಲಿವುಡ್‌ನಲ್ಲಿ ದಿಯಾ, ಅನುಷ್ಕಾರ ಪ್ರೊಡಕ್ಷನ್ ಹೌಸ್ ಫ್ಲಾಪ್ ಎನಿಸಿತು. ಹೀಗಾಗಿ ಸೋನಂಳ ಈ ಕನಸು ಏನಾಗುವುದೋ…. ನೋಡಬೇಕು. ಮುಖ್ಯವಾಗಿ ಇದು ಇವಳ ತಮ್ಮ ಹರ್ಷರ್ಧನನ ಮುಳುಗುತ್ತಿರುವ ಕೆರಿಯರ್‌ಗೆ ಬೆನ್ನೆಲುಬಾಗಿ ನಿಲ್ಲುವಂತಿದೆ. ಅದೇನಾದರೂ ಹಾಗೇ ಆದರೆ, ಇತ್ತೀಚೆಗೆ ಓಂಪ್ರಕಾಶ್ ಮೆಹ್ತಾರ `ಮಿರ್ಜಿಯಾ’ಗೆ ಆದ ಗತಿ ಈ ಹೊಸ ಹೋಂ ಪ್ರೊಡಕ್ಷನ್‌ಗೂ ಆಗಬಾರದು.
ನಾನು ಮುಂದುವರಿಯಬೇಕು ಎನ್ನುತ್ತಾರೆ ಜನ
ತನ್ನ ಹಾಟ್ ಫೋಟೋಶೂಟ್‌ನಿಂದ ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿರುವ ಈಶಾ ಗುಪ್ತ ಹೇಳುತ್ತಾಳೆ, “ಇಷ್ಟು ವರ್ಷಗಳು ಇದೇ ಇಂಡಸ್ಟ್ರಿಯಲ್ಲಿ ದುಡಿದಿದ್ದರೂ ಸಹ ನಾನು ಹೊರಗಿನವಳು ಎಂದೇ ಅನಿಸುತ್ತಿದೆ. ನಾನು ಸಿನಿಮಾಗಾಗಿ ಏನೇ ಮಾಡಿದ್ದರೂ ಅದಕ್ಕಾಗಿ ಬಹಳ ಕಷ್ಟಪಡುತ್ತೇನೆ. ಏಕೆಂದರೆ ನನ್ನ ಹೆಸರಿನ ಹಿಂದೆ ಯಾವುದೇ ಬಾಲಿವುಡ್‌ನ ಸರ್‌ನೇಮ್ ಇಲ್ಲ, ಯಾವ ಗಾಡ್‌ಫಾದರ್ ಸಹ ರಕ್ಷಣೆಗಿಲ್ಲ. ಹಾಗಿದ್ದಿದ್ದರೆ ಕೆಲಸ ಗಿಟ್ಟಿಸಲು ನಾನು ಇಷ್ಟೆಲ್ಲ ಸರ್ಕಸ್ ಮಾಡಬೇಕಿರಲಿಲ್ಲ. ಬಾಲಿವುಡ್ ಭೂಪತಿಗಳು ನನ್ನನ್ನು ಇನ್ನಷ್ಟು ಓಪನ್ ಮೈಂಡೆಡ್ ಆಗಿ ಎಲ್ಲರೊಂದಿಗೆ ಬೆರೆಯಲು ಹೇಳುತ್ತಾರೆ. ಅವರು ಏನನ್ನು ಸೂಚಿಸುತ್ತಿದ್ದಾರೆ ಎಂದು ಅರಿಯದಷ್ಟು ನಾನು ಹಸುಗೂಸಲ್ಲ. ಇರಲಿ, ನನ್ನ ಸ್ವಂತ ಪ್ರತಿಭೆ, ಯೋಗ್ಯತೆಗಳಿಂದ ನಾನು ಮುನ್ನೇರ ಬಯಸುತ್ತೇನೆ.”
ಅನುಷ್ಕಾ ಏನೆಲ್ಲ ಮಾಡಿಯಾಳು?
ಶಿಲ್ಪಾ-ಮಾಧುರಿಯರ ತರಹ ಈಗ ಅನುಷ್ಕಾಳಿಗೂ ಬಿಸ್‌ನೆಸ್ ಮಾಡಬೇಕೆನ್ನುವ ಐಡಿಯಾ ತಲೆಗೇರಿದೆ. `ಫಿಲ್ಲೋರಿ’ ಚಿತ್ರದಿಂದ ಈಕೆ ನಿರ್ಮಾಣಕ್ಕೆ ಇಳಿದಿದ್ದೂ ಆಯ್ತು. ಅದಾದ ಮೇಲೆ ಸ್ಟೈಲಿಶ್ ರೆಡಿಮೇಡ್ ಉಡುಗೆಗಳ ಬಿಸ್‌ನೆಸ್ ಆಯ್ತು. ಈಗ ಹೊಸ ಸುದ್ದಿ ಎಂದರೆ ಈಕೆ ಐಪಿಎಲ್ ಕ್ರಿಕೆಟ್ ತಂಡವನ್ನು ಖರೀದಿಸ ಹೊರಟಿದ್ದಾಳೆ. ಇದೆಲ್ಲ ವಿರಾಟ್ ಕೊಹ್ಲಿಯ ಸ್ನೇಹದ ಪ್ರಭಾವವೇ? ಅನುಷ್ಕಾ ಹೇಳುತ್ತಾಳೆ, “ನಾನು ಏನೇ ಮಾಡಿದರೂ ಮನಸ್ಸಿಟ್ಟು ಮಾಡುತ್ತೇನೆ. ಮುಂದೆ ಇನ್ನೂ ಏನೇನೋ ಮಾಡಬೇಕೆಂಬ ಐಡಿಯಾ ಇದೆ. ಆದರೆ ಈ ಬಿಸ್‌ನೆಸ್ ರಿಸೆಲ್ಟ್ ಒಂದು ಬರಲಿ, ಮುಂದೆ ನೋಡೋಣ.” ಈಕೆಯ ನಿರ್ಮಾಣದ ಮೊದಲ ಚಿತ್ರ ಸೂಪರ್ ಫ್ಲಾಪ್ ಎನಿಸಿತ್ತು. ಈಗ ಎರಡನೇ ಚಿತ್ರ `ಪರಿ’ಯ ಹಣೆಬರಹ ನೋಡಿಕೊಂಡು ಮುಂದೆ ಹೆಜ್ಜೆ ಇರಿಸುತ್ತಾಳಂತೆ.
ರಣವೀರ್ ಡ್ರೈವರ್‌ನ ಹಂಗಾಮ
ಸಿನಿಮಾಗಳಿಂದ ಕೋಟಿಗಟ್ಟಲೆ ವಸೂಲಿ ಮಾಡುವ ರಣವೀರ್ ಸಿಂಗ್, ತನ್ನ ಕಾರ್ ಡ್ರೈವರ್‌ಗೆ 2 ತಿಂಗಳಿನಿಂದ ಸಂಬಳವನ್ನೇ ಕೊಟ್ಟಿಲ್ಲವಂತೆ! ಹೀಗೆ ಸಂಬಳ ಸಿಗದೆ ಹತಾಶನಾದ ಆ ಡ್ರೈವರ್, ನೇರವಾಗಿ `ಪದ್ಮಾವತಿ’ ಚಿತ್ರದ ಸೆಟ್‌ಗೆ ಹೋಗಿ ರಣವೀರನ ಪರ್ಸನಲ್ ಮ್ಯಾನೇಜರ್‌ನ ಬಳಿ ಬೇಡಿಕೊಂಡಾಗ, ಆತ ರಣವೀರನ ಬಾಡಿಗಾರ್ಡ್ ಜೊತೆಗೂಡಿ ಈ ಬಡಪಾಯಿಯನ್ನು ಸಾಯ ಹೊಡೆದಿದ್ದಾನೆ. ಈ ಹಗರಣ ತಾರಕಕ್ಕೇರಿದಾಗ, ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ, ಹೇಗೋ ವಾತಾವರಣವನ್ನು ಶಾಂತಗೊಳಿಸಿ, ಡ್ರೈವರ್‌ಗೆ ಸಂಬಳದ ಭರವಸೆ ನೀಡಿ ಕಳುಹಿಸಿದರು. ಈ ಹೊಡೆತ, ಅವಮಾನಗಳಿಂದ ಕಂಗೆಟ್ಟ ಡ್ರೈವರ್ ಇದೀಗ ರಣವೀರನ ವಿರುದ್ಧ ಯೂನಿಯನ್‌ಗೆ ಹೋಗಿ ದೂರು ಕೊಟ್ಟಿದ್ದಾನೆ. ನ್ಯಾಯ ಎಲ್ಲಿದೆ….?
ನಡುರಾತ್ರಿಯಲ್ಲಿ ನನ್ನನ್ನು ಮನೆಯಿಂದ ಓಡಿಸಿದ್ದರು
ಕೆಲವು ತಿಂಗಳ ಹಿಂದಷ್ಟೆ ಬೆಂಗಳೂರಿನಿಂದ ಮುಂಬೈಗೆ ಹಾರಿದ ನಿಧಿ ಅಗರ್ವಾಲ್ ವಾಸಕ್ಕೆ ಮನೆ ಸಿಗದೆ ಕಂಗಾಲಾಗಿದ್ದಾಳೆ. ಆಕೆ ಹೇಳುತ್ತಾಳೆ, “ಹಿಂದೆ ನಾನು ಸಿಂಗಲ್ ಆಗಿದ್ದೆ ಎಂದು ಬಲು ಕಷ್ಟದಿಂದ ಹೇಗೋ ಮನೆ ಹುಡುಕಿದ್ದಾಯ್ತು. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಮಾಲೀಕ ಬಂದು ಮನೆ ಖಾಲಿ ಮಾಡುವಂತೆ ಒತ್ತಾಯಿಸಿ ನಡುರಾತ್ರಿ ಹೊರಗೆ ಹಾಕಿದ. ಆ ರಾತ್ರಿ ನಾನು ಹೇಗಪ್ಪ ಕಳೆದೆ ಎಂದು ನೆನೆಸಿಕೊಂಡರೆ ಈಗಲೂ ಭಯವಾಗುತ್ತೆ.” ನಿಧಿ ಈಗಾಗಲೇ ಟೈಗರ್ ಶ್ರಾಫ್‌ನ `ಮುನ್ನಾ ಮೈಕೆಲ್’ ಚಿತ್ರದಲ್ಲಿ ಮೊದಲು ಅವಕಾಶ ಗಿಟ್ಟಿಸಿದ್ದಳು. ಪಾಪ, ಇವಳ ಅದೃಷ್ಟಕ್ಕೆ ಅದೂ ಫ್ಲಾಪ್ ಆಗಬೇಕೇ?
ಮಲ್ಲಿಕಾ ಕಾಮಿಡಿ ರತ್ನಗಳ ಪರೀಕ್ಷಳೀಗ!
ರಾಜು ಶ್ರೀವಾಸ್ತವ್ ಹಾಗೂ ಸುನೀಲ್ ಪಾಲ್‌ರಂಥ ಕಲಾವಿದರಿಗೆ ಐಡೆಂಟಿಟಿ ನೀಡಿದ `ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್’ ಮತ್ತೊಮ್ಮೆ ಕಾಮಿಡಿ ದಿಗ್ಗಜರನ್ನು ಆರಿಸಿ ತೆಗೆಯುವ ಯತ್ನ ನಡೆಸಿದೆ. ಸೂಪರ್ ಜಡ್ಜ್ ಅಕ್ಷಯ್‌ಕುಮಾರ್ ಜೊತೆ ಮೂರು ಮೆಂಟರ್‌ಗಳ ತಂಡ ಕಾಮಿಡಿಯ ಮಹಾರಥಿಗಳನ್ನು ಆರಿಸಲಿದೆ. ಹುಸೇನ್ ದಾವ್, ಜಾಕಿರ್ ಖಾನ್‌ರ ಜೊತೆ ಕಿರುತೆರೆಯಲ್ಲಿ ಮೇಕಪ್ ದೀದೀ ಎಂದೇ ಖ್ಯಾತರಾದ ಮಲ್ಲಿಕಾ ಕಾಮಿಡಿ ರತ್ನಗಳನ್ನು ಆರಿಸಲಿದ್ದಾರೆ.
ಶೋನ ಪ್ರಮೋಶನ್‌ಗಾಗಿ ಬಂದಿದ್ದ ಮಲ್ಲಿಕಾ, “ಭಾರತದ ಪ್ರತಿ ಕ್ಷೇತ್ರದಿಂದಲೂ ಕಾಮಿಡಿಯ ದಿಗ್ಗಜರು ಕಾಣಿಸಲಿದ್ದಾರೆ. ನಾನೂ ಸಹ ಮಾಸ್‌ಕಾಮ್ ವಿದ್ಯಾರ್ಥಿನಿ. ಅಲ್ಲಿ ಹೆಚ್ಚು ಅಡ್ಜಸ್ಟ್ ಆಗದಿದ್ದಾಗ ಜಾಹೀರಾತುಗಳಿಗೆ ಬಂದುಬಿಟ್ಟೆ. ನನಗನಿಸುತ್ತೆ, ನನ್ನಲ್ಲಿ ಅನೇಕ ಪಾತ್ರಗಳ ಪರಕಾಯ ಪ್ರವೇಶ ಆಗಿದೆ ಅಂತ. ನಾನು ಒಬ್ಬಳೇ ಇರುವಾಗ ಮನೆಯಲ್ಲಿ ವಿವಿಧ ಪಾತ್ರಗಳಂತೆ ಅಭಿನಯಿಸಿ ಅದನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದಾಗ ಸಾಕಷ್ಟು ಜನ ರೆಸ್ಪಾನ್ಸ್ ನೀಡಿದರು. ಇದಾದ ಮೇಲೆ ನಾನು ಮುಂಬೈಗೆ ಬಂದು ಕಾಮಿಡಿಯನ್ನೇ ಕೆರಿಯರ್ ಆಗಿಸಲು ಬಯಸಿದೆ.”
ಮುಂಬೈ ಆಗಿದೆ ಅಹಮದಾಬಾದ್
ಸೋನಿ ಟಿ.ವಿಯಲ್ಲಿ ಬರುತ್ತಿರುವ `ಯಹ್ ಉನ್ ದಿನೋಂಕಿ ಬಾತ್ ಹೈ’ ಧಾರಾವಾಹಿ 90ರ ದಶಕದ ಅಹಮದಾಬಾದ್ ನಗರದ ಕಥಾಹಂದರ ಹೊಂದಿದೆ. ಹೈಸ್ಕೂಲ್ ವಿದ್ಯಾರ್ಥಿಗಳ ಈ ಲವ್ ಸ್ಟೋರಿಯಲ್ಲಿ ಅಂದಿನ ಜನ ಮೊಬೈಲ್ ಬಳಕೆ ತಿಳಿಯದವರು.
ಶೋನ ನಿರ್ಮಾಪಕಿ, ಲೇಖಕಿ ಶಶಿಮಿತ್ತಲ್ ಹೇಳುತ್ತಾರೆ, “ನಾನು ಮೂಲತಃ ಅಹಮದಾಬಾದಿನವಳು. ಹೀಗಾಗಿ ನನಗೆ 90ರ ದಶಕದ ಮಧ್ಯಮ ವರ್ಗದ ಪ್ರತಿ ಘಟನೆಯೂ ಚೆನ್ನಾಗಿ ನೆನಪಿದೆ. ನಾನು ಬಾಲ್ಯದಲ್ಲಿ ಕಳೆದ ಅಂದಿನ ಪರಿಸರ, ಪ್ರತಿ ವಸ್ತು ಚೆನ್ನಾಗಿ ನೆನಪಿದೆ. 2001ರ ಭೂಕಂಪದಲ್ಲಿ ಆ ಭಾಗ ಸರ್ನನಾಶವಾಯ್ತು. ನಮ್ಮ ಶೂಟಿಂಗ್ ಸೆಟ್‌ನಲ್ಲಿ ಅದನ್ನು ಪುನಃ ನಿರ್ಮಿಸಿದೆ. ಅಹಮದಾಬಾದ್‌ನ ಆ ಪರಿಸರಕ್ಕೆ ನಾನು ಭಾವನಾತ್ಮಕವಾಗಿ ಬಹಳ ಹೊಂದಿಕೊಂಡಿದ್ದೇನೆ. ಹೀಗಾಗಿ ಮುಂಬೈ ಸೆಟ್‌ನಲ್ಲಿ ಅಹಮದಾಬಾದ್ ಮರಳಿರುವುದರಲ್ಲಿ ಆಶ್ಚರ್ಯವಿಲ್ಲ.”
ಕಿರುತೆರೆಗೆ ಬಂದ ಜಾಯದ್‌ಖಾನ್
ಬಾಲಿವುಡ್‌ನಿಂದ ಎಷ್ಟೋ ವರ್ಷಗಳ ಹಿಂದೆಯೇ ಕಣ್ಮರೆಯಾಗಿದ್ದ ಜಾಯದ್‌ಖಾನ್, ಇದೀಗ ರೊಮ್ಯಾಂಟಿಕ್ ಥ್ರಿಲ್ಲರ್ ಶೋ `ಹಾಲ್”ನಲ್ಲಿ ಹೊಸ ಗೆಟಪ್ ನಲ್ಲಿ ಕಾಣಿಸಲಿದ್ದಾನೆ. ಆತನ ಜೊತೆ ಇಲ್ಲಿ ಸೇಠ್, ನಿಕಿತಾ ದತ್ತಾ ಸಹ ಇದ್ದಾರೆ. ರಿಯಲ್ ಲೊಕೇಶನ್‌ನಲ್ಲೇ ಶೂಟಿಂಗ್ ನಡೆಸಲಾಗಿದೆ. ಈ ಕುರಿತು ನಿಕಿತಾ, “ಯಾವುದೇ ಹೈಫೈ ಸೆಟ್ ಇಲ್ಲದೆ ಈ ಧಾರಾವಾಹಿ ರೆಡಿ ಆಗ್ತಿದೆ, ಆ ನಿಟ್ಟಿನಲ್ಲಿ ಇದೇ ಮೊದಲು. ಹೀಗೆ ಪೂರ್ವ ನಿರ್ಧಾರಿತ ಸೆಟ್ ಇಲ್ಲದಿರುವುದರಿಂದ ಶೂಟಿಂಗ್ ಲೊಕೇಶನ್ ಒಂದಕ್ಕಿಂತ ಒಂದು ಬೊಂಬಾಟ್ ಆಗಿದೆ. ನಾವು 2 ವಾರ ಮಾರಿಶಸ್‌ನಲ್ಲೂ ಶೂಟ್ ಮಾಡಿದೆ. ಅಲ್ಲಿ ಇಡೀ ಯೂನಿಟ್ ಪೂರ್ತಿ ಮೋಜು ಮಸ್ತಿ ಮಾಡಿದ್ದೇ ಬಂತು!” ಎನ್ನುತ್ತಾಳೆ.
ಒಂದು ಕಿರು ಸಂದರ್ಶನ
ಗುರುದೀಪ್ ಕೊಹ್ಲಿ (ನಟಿ, ನಿರೂಪಕಿ) `ರೌಡಿ ರಾಠೋರ್’ನಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಆಗಿದ್ದ ಗುರುದೀಪ್ ಮಾಡೆಲಿಂಗ್ ಮಾಡುತ್ತಲೆ ಆ್ಯಕ್ಟಿಂಗ್ ಕ್ಷೇತ್ರಕ್ಕೂ ಬಂದವಳು. ಕಳೆದ ಕೆಲವು ವರ್ಷಗಳಿಂದ ಆಕೆ ಕಣ್ಮರೆ ಆಗಿದ್ದಳು. ಹಲವು ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡ ಈಕೆ ಇತ್ತೀಚೆಗೆ ಝೀ ಟಿ.ವಿ.ಯ `ಸೇಠ್‌ಜಿ’ಯಲ್ಲಿ ಮರಳಿ ಕಾಣಿಸಿದ್ದಾಳೆ.
ಇಷ್ಟು ಲಾಂಗ್ ಬ್ರೇಕ್‌ಗೆ ಕಾರಣ….?
ಏನೂ ವಿಶೇಷ ಇಲ್ಲ ಬಿಡಿ. ಕುಟುಂಬಕ್ಕೆ ನನ್ನ ಅಗತ್ಯವಿತ್ತು. ಆ್ಯಕ್ಟಿಂಗ್ ಕಾರಣ ಮನೆಯವರಿಗೆ ಹೆಚ್ಚು ಸಮಯ ನೀಡಲಾಗುತ್ತಿರಲಿಲ್ಲ. ಹೀಗಾಗಿ ಬ್ರೇಕ್ ತೆಗೆದುಕೊಂಡೆ. ನಾನು ಧಾರಾವಾಹಿಗಳಿಂದ ಬ್ರೇಕ್ ತೆಗೆದುಕೊಂಡಿದ್ದೆನೇ ಹೊರತು ನಟನೆಯಿಂದಲ್ಲ.
ವಾಪಸ್ಸು ಬಂದ ಮೇಲೆ ಏನಾದರೂ ಬದಲಾವಣೆ ಕಾಣಿಸಿತೇ?
ನಮ್ಮ ಕಿರುತೆರೆಯಲ್ಲಂತೂ ಪ್ರತಿದಿನ ಬದಲಾವಣೆ ಇದ್ದದ್ದೇ! ಪ್ರತಿದಿನ ಹೊಸ ಕಲಾವಿದರು ಕಾಣಿಸುತ್ತಾರೆ. ನೀವು ಇಲ್ಲಿಂದ ಬ್ರೇಕ್ ತೆಗೆದುಕೊಂಡಿದ್ದರೆ, ತುಸು ಹಿಂದೆ ಉಳಿಯುತ್ತೀರಿ. ಆದರೆ ಕಾಲಕ್ಕೆ ತಕ್ಕಂತೆ ನಾನೂ ಬದಲಾಗಿದ್ದೇನೆ. ನಾನಿಂದು 38 ವರ್ಷದವಳೆಂದು ಗೊತ್ತು. ಹೀಗಾಗಿ ಧಾರಾವಾಹಿಯ ನಾಯಕಿ ಪಾತ್ರ ಸಿಗಲ್ಲ ಅಂತ ಗೊತ್ತು. ಇದಕ್ಕಾಗಿ ಹೊಸ ಹುಡುಗಿಯರು ಸಾಲುಗಟ್ಟಿ ನಿಂತಿದ್ದಾರೆ.
ಬಿಡುವಿದ್ದಾಗ ನೀವೇನು ಮಾಡಿದಿರಿ?
ಮಕ್ಕಳಿಗಾಗಿಯೇ ನಾನು ಬ್ರೇಕ್ ಪಡೆದಿದ್ದೆ. ಮನೆಯಲ್ಲೂ ನಾನು ಸುಮ್ಮನೆ ಕುಳಿತವಳಲ್ಲ. ಖಾನಾ ಖಜಾನಾಗಾಗಿ ಬೇಕಾದಷ್ಟು ಕುಕರಿ ಶೋ ನೀಡಿದೆ. ಯೂಟ್ಯೂಬ್‌ಗಾಗಿ ಅನೇಕ ಕುಕರಿ ಕ್ಲಾಸಸ್ ತೆಗೆದುಕೊಂಡೆ. ಹಲವಾರು ಜಾಹೀರಾತುಗಳಲ್ಲಿ ಪಾಲ್ಗೊಂಡೆ. ಆದರೆ ಧಾರಾವಾಹಿಗಳನ್ನು ಬಹಳ ಮಿಸ್ ಮಾಡಿಕೊಳ್ತಿದ್ದೆ.
ನಿಮ್ಮ ಸಹ ನಟ ಅನುಜ್ ಬಗ್ಗೆ ಹೇಳಿ.
ನಾವು ಮೊದಲ ಸಲ ಸಂಜೀವಿನಿ ಶೋನಲ್ಲಿ ಭೇಟಿ ಆದಾಗ, ಆಗಿನಿಂದ ಈಗಿನವರೆಗೂ ಪ್ರತಿ ಹಂತದಲ್ಲೂ ಅನುಜ್ ನನ್ನ ಜೊತೆ ಇದ್ದಾನೆ. ಆತನ ಸಹಕಾರ ಇಲ್ಲದಿದ್ದರೆ, ಇಷ್ಟು ವರ್ಷಗಳ ನಂತರ ನಾನು ಮತ್ತೆ ಧಾರಾವಾಹಿಗೆ ಮರಳಿ ಬರಲು ಆಗುತ್ತಿರಲಿಲ್ಲ.