ಕೂದಲು ಉದುರುವ ಸಮಸ್ಯೆ, ಗರ್ಭ ಧರಿಸದಿರುವ  ಸಮಸ್ಯೆಯುಳ್ಳ ಅನೇಕ ಮಹಿಳೆಯರನ್ನು ನಾನು ನೋಡಿದ್ದೇನೆ. ಅದು ಇಡೀ ವಿಶ್ವದಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಈ ಸಾಮಾನ್ಯ ವೈದ್ಯಕೀಯ ಸಮಸ್ಯೆಗೆ ಅಷ್ಟು ಹೆಚ್ಚಾಗಿ ತಿಳಿಯದ ಹೆಸರಿದೆ. ಅದು ಪಿಸಿಓಎಸ್‌……..!

ನನ್ನ ಅಭಿಪ್ರಾಯದಲ್ಲಿ ಅದು ಬಹಳ ಗಂಭೀರವಾದ ಸಮಸ್ಯೆ. ಮಹಿಳೆಯರ ಯೋಗಕ್ಷೇಮಕ್ಕಾಗಿ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಬಹಳಷ್ಟು ಜನಕ್ಕೆ ಪಿಸಿಓಎಸ್‌ ಎಷ್ಟು ಗಂಭೀರವಾದದ್ದೆಂದು ತಿಳಿದಿಲ್ಲ. ಯಾರನ್ನೂ ಹೆದರಿಸಲು ನಾನು ಈ ಲೇಖನವನ್ನು ಬರೆಯುತ್ತಿಲ್ಲ. ಒಂದುವೇಳೆ ಈ ಸಮಸ್ಯೆ ಯಾವ ಮಹಿಳೆಗಾದರೂ ಬಂದರೆ ಅವರು ಅದರಿಂದ ಪಾರಾಗಲು ಯಾವ ಕ್ರಮಗಳನ್ನು ಕೈಗೊಳ್ಳಬಹುದೆಂದು ಜಾಗೃತಗೊಳಿಸುತ್ತಿದ್ದೇನೆ. ಅದು ಪಾಲಿಸಿಸ್ಟಿಕ್‌ ಓವೇರಿಯನ್‌ ಸಿಂಡ್ರೋಮ್. ಅದು ಸಂತಾನೋತ್ಪತ್ತಿ ಮಾಡುವ ವಯಸ್ಸಿನ ಸುಮಾರು ಶೇ.5 ರಿಂದ ಶೇ.10ರಷ್ಟು ಮಹಿಳೆಯರಲ್ಲಿ ರೋಗಲಕ್ಷಣಗಳನ್ನು ಮೂಡಿಸುತ್ತದೆ. (ಸುಮಾರು 12 ರಿಂದ 45 ವಯಸ್ಸಿನವರೆಗೆ) ಗರ್ಭಧಾರಣೆಯಾಗದ ಸಮಸ್ಯೆ ಪ್ರಮುಖವಾಗಿದೆ. ಅಲ್ಟ್ರಾಸೌಂಡ್‌ನಲ್ಲಿ ಓವರಿಗಳು ಪಾಲಿಸಿಸ್ಟಿಕ್‌ ಆಗಿ ಕಾಣಿಸುವುದು ಸಾಧಾರಣ. ಆದರೆ ಅದು ಸಮಸ್ಯೆಯ ಎಲ್ಲ ಲಕ್ಷಣಗಳಲ್ಲಿ ಸಂಪೂರ್ಣವಾಗಿ ಅಪೇಕ್ಷಣೀಯವಲ್ಲ. ಅಮೆರಿಕಾದಲ್ಲಿ ಹತ್ತರಲ್ಲಿ ಒಬ್ಬಾಕೆ ಮತ್ತು ಭಾರತದಲ್ಲಿ ಹತ್ತಕ್ಕೆ ಮೂBರು ಮಹಿಳೆಯರು ಪಾಲಿಸಿಸ್ಟಿಕ್‌ನಿಂದ ನರಳುತ್ತಿದ್ದಾರೆ. ಅಂದರೆ ಇಡೀ ವಿಶ್ವದ ಎಷ್ಟು ಮಹಿಳೆಯರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆಂದು ಊಹಿಸಬಹುದು. (ಶೀಘ್ರವಾಗಿ ಲೆಕ್ಕ ಹಾಕಿದರೆ ಒಂದು ಬಿಲಿಯನ್‌ಗಿಂತಲೂ ಹೆಚ್ಚು).ಪಿಸಿಓಎಸ್‌ ವೈದ್ಯಕೀಯ ಸಮಸ್ಯೆ ಪ್ರತಿವರ್ಷ ಹೆಚ್ಚು ಮಹಿಳೆಯರನ್ನು ಬಾಧಿಸುತ್ತಿದೆ. ಅದಕ್ಕೆ ಚಿಕಿತ್ಸೆ ನೀಡಬಹುದಾದರೂ ವಾಸಿಮಾಡಲು ಸಾಧ್ಯವಿಲ್ಲ. ಅತ್ಯಂತ ಸಾಮಾನ್ಯ ಲಕ್ಷಣಗಳೆಂದರೆ ಆ್ಯಕ್ನೆ, ದೇಹದ ಮೇಲೆ ಹೆಚ್ಚು ಕೂದಲು, ಕೂದಲುದುರುವುದು, ನೆತ್ತಿಯ ಮೇಲೆ ವಿರಳ ಕೂದಲು, ಗರ್ಭಧಾರಣೆಯಾಗದಿರುವುದು, ಅನಿಯಮಿತ ಮುಟ್ಟು, ಸ್ಥೂಲತೆ ಮತ್ತು ಖಿನ್ನತೆ ಇತ್ಯಾದಿ.

ಹೆಸರಾಂತ ಆಸ್ಪತ್ರೆಯ ವೈದ್ಯ ಡಾ. ಸತೀಶ್‌ ಪ್ರಕಾರ, “ಪಿಸಿಓಎಸ್‌ನ್ನು ಸಾಮಾನ್ಯವಾಗಿ ಪಿಸಿಓಡಿ ಎಂದು ಉಲ್ಲೇಖಿಸಲಾಗುತ್ತದೆ. ಅದು ಸಂತಾನೋತ್ಪತ್ತಿ ಮಾಡುವ ವಯಸ್ಸಿನ ಮಹಿಳೆಯರಲ್ಲಿನ ಅತ್ಯಂತ ಸಾಮಾನ್ಯ ಎಂಡೋಕ್ರೈನ್‌ ಸಮಸ್ಯೆಯಾಗಿದೆ.”

ಗೈನಕಾಲಜಿಸ್ಟ್ ಮತ್ತು ಇನ್‌ಫರ್ಟಿಲಿಟಿ ಸ್ಪೆಷಲಿಸ್ಟ್ ಡಾ. ಪೈ ಹೀಗೆ ಹೇಳುತ್ತಾರೆ, “ಅದು ಶೇ.25 ರಿಂದ 35 ರಷ್ಟು ಯುವತಿಯರಲ್ಲಿ ಕಂಡುಬರುತ್ತದೆ. ಆ್ಯಕ್ನೆ, ತೂಕ ಹೆಚ್ಚಾಗುವಿಕೆ, ಮುಖದ ಮೇಲೆ ಕೂದಲು ಇತ್ಯಾದಿಗಳಿಂದ ವಿಚಲಿತರಾಗುವ ಯುವತಿಯರ ಕಾಸ್ಮೆಟಿಕ್ಸ್ ಸಂಬಂಧಿತ ಲಕ್ಷಣಗಳು ಕಂಡುಬರುತ್ತವೆ. ಅದರಿಂದ ಹಾರ್ಮೋನ್‌ಗಳು ಅಸಾಮಾನ್ಯ ಸ್ಥಿತಿ ಹೊಂದಿದ್ದು ಗಂಡು ಹಾರ್ಮೋನ್‌ನ ಆಧಿಪತ್ಯ ಇರುತ್ತದೆ. ಇದರ ಪರಿಣಾಮವಾಗಿ ಈ ರೋಗ ಲಕ್ಷಣವಿರುವ ಯುವತಿಯರು ಆ್ಯಕ್ನೆ, ಮುಖದ ಮೇಲೆ ಹೆಚ್ಚು ಕೂದಲು, ಸ್ಥೂಲತೆ, ಅನಿಯಮಿತ ಅಥವಾ ವಿರಳ ಮುಟ್ಟು ಇತ್ಯಾದಿ ಸಮಸ್ಯೆ ಹೊಂದಿರುತ್ತಾರೆ.

”ಗೈನಕಾಲಜಿಸ್ಟ್ ಮತ್ತು ಆಬ್‌ಸ್ಟಿಟ್ರಿಶಿಯನ್‌ ಡಾ. ಅರ್ಚನಾ ಹೀಗೆ ಹೇಳುತ್ತಾರೆ, “ಸುಮಾರು ಶೇ.5 ರಿಂದ ಶೇ.10 ರಷ್ಟು ಗರ್ಭಧಾರಣೆಯ ವಯಸ್ಸಿನ ಮಹಿಳೆಯರಿಗೆ ಪಿಸಿಓಎಸ್‌ ಇದೆ. ಪಿಸಿಓಎಸ್‌ ಇರುವ ಅನೇಕ ಮಹಿಳೆಯರಿಗೆ ಅದು ಇರುವುದೇ ತಿಳಿದಿರುವುದಿಲ್ಲ. ಅನೇಕರು ತಾವು ಗರ್ಭಿಣಿಯಾಗಲು ಪ್ರಯತ್ನಿಸುವವರೆಗೆ ಡಯಾಗ್ನೋಸ್‌ ಮಾಡಿಸಿಕೊಳ್ಳುವುದಿಲ್ಲ. ಪಿಸಿಓಎಸ್‌ ಹೊಂದಿರುವ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಐವಿಎಂ/ಐವಿಎಫ್‌ ಖಂಡಿತ ಒಂದು ಮೈಲಿಗಲ್ಲಾಗಲಿದೆ.”

ನಿಮಗೆ ಪಿಸಿಓಎಸ್‌ ಇದ್ದು ಚಿಕಿತ್ಸೆ ಪಡೆಯದಿದ್ದರೆ ಹೃದಯದ ಕಾಯಿಲೆ ಮತ್ತು ಸ್ಥೂಲತೆ ಉಂಟಾಗುತ್ತದೆ. ನೀವು ಈ ಸಮಸ್ಯೆ ಹೊಂದಿದ್ದರೆ :

– ವೈದ್ಯರನ್ನು ಭೇಟಿಯಾಗುವುದನ್ನು ತಪ್ಪಿಸಬೇಡಿ.

– ಹೆಚ್ಚು ಸಿಹಿ ಪದಾರ್ಥಗಳನ್ನು ತಿನ್ನಬೇಡಿ.

– ನಿಮ್ಮ ಮಾಸಿಕ ಸ್ರಾವದ ಬಗ್ಗೆ ನಿಗಾ ಇಡಿ.

– ನಿಮಗೆ ನಿಯಮಿತವಾಗಿ ಮಾಸಿಕ ಸ್ರಾವವಾಗದಿದ್ದರೆ ಅಥವಾ ಹಿಂದಿನ ಪೀರಿಯಡ್‌ಗಿಂತ 40 ರಿಂದ 50 ದಿನಗಳು ಮುಟ್ಟಾಗದಿದ್ದರೆ ವೈದ್ಯರಿಗೆ ತಿಳಿಸಿ. (ನೀವು ಗರ್ಭಿಣಿಯಾಗಿರಬಹುದು).

– ನಿದ್ದೆ ಬಹು ಮುಖ್ಯ, 8 ಗಂಟೆಗಳು ನಿದ್ದೆ ಮಾಡಿ.

– ಧೂಮಪಾನ ಮಾಡಬೇಡಿ. ಹಾಟ್‌ ಡ್ರಿಂಕ್ಸ್ ಕುಡಿಯಬೇಡಿ.

ಪಿಸಿಓಎಸ್‌ ಭಾಗಶಃ ಜೆನಿಟಿಕ್‌ ಆಗಿದೆ. ನನ್ನ ಮಾಹಿತಿಯ ಪ್ರಕಾರ ಅದು ಪುರುಷರನ್ನೂ ಬಾಧಿಸುತ್ತಿದೆ. (ಅಥವಾ ಸಮಾನ ರೀತಿಯ ಪರಿಸ್ಥಿತಿ ಹೊಂದಿದೆ). ಬಹಳಷ್ಟು ಪುರುಷರು ಕೂದಲುದುರುವುದು, ಸ್ಥೂಲತೆ ಸಮಸ್ಯೆ ಹೊಂದಿದ್ದು ಅವರು ಪಿಸಿಓಎಸ್‌ನ ಮೇಲ್‌ ಈಕ್ವಿಲೆಂಟ್‌ ಹೊಂದಿರುತ್ತಾರೆ. ಆದರೂ ಪುರುಷರ ಪಿಸಿಓಎಸ್‌ ಸಮಸ್ಯೆಗೆ ಯಾರೂ ಗಮನ ಕೊಡುವುದಿಲ್ಲ. ಏಕೆಂದರೆ ಮುಖದ ಮೇಲೆ ಹಾಗೂ ದೇಹದ ಮೇಲೆ ಕೂದಲಿರುವುದು ಪುರುಷರಿಗೆ ಸಾಮಾನ್ಯ ಸಂಗತಿ. ಪುರುಷರಿಗೆ ಅನಿಯಮಿತ ಮುಟ್ಟು ಇರುವುದಿಲ್ಲ. ಆದರೆ ಅವರಿಗೆ ಚಯಾಪಚಯ ಬದಲಾವಣೆಗಳಿರುತ್ತವೆ.

ನನ್ನ ಅಭಿಪ್ರಾಯದಲ್ಲಿ ಪಿಸಿಓಎಸ್‌ ಕಠಿಣ ಪರಿಸ್ಥಿತಿಯಾಗಿದ್ದು ಅರ್ಥ ಮಾಡಿಕೊಳ್ಳುವುದು ಕಷ್ಟ. ಸರಿಯಾದ ಚಿಕಿತ್ಸೆ ನೀಡುವುದೂ ಕಷ್ಟ. ಆದರೆ ಪಿಸಿಓಎಸ್‌ನ್ನು ಅರ್ಥ ಮಾಡಿಕೊಂಡು, ಸಹಿಸಿಕೊಂಡು ಅದರ ಕಷ್ಟಗಳನ್ನು ಪರಿಹರಿಸಬಹುದು. ಬಹಳ ಮುಖ್ಯವಾದ ವಿಷಯವೆಂದರೆ ಹೊಸ ಚಿಕಿತ್ಸೆಗಳ ಬಗ್ಗೆ ತಿಳಿದಿರುವ ವೈದ್ಯರನ್ನು ಸಂಪರ್ಕಿಸುವುದು. ಹೆಚ್ಚು ಗಾಬರಿಗೊಳಗಾಗುವ, ಗೊಂದಲಕ್ಕೊಳಗಾಗುವ ಅಗತ್ಯವಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ