ಈ ಹೊಸ ವರ್ಷದಲ್ಲಿ ಕೃತಕ ಸೌಂದರ್ಯ ಸಾಧನಗಳ ಕಬಂಧ ಬಾಹುವಿಗೆ ಶರಣಾಗಿ ನಿಮ್ಮ ನೈಸರ್ಗಿಕ ಆರೋಗ್ಯ ಚೆಲುವನ್ನು ಹಾಳು ಮಾಡಿಕೊಳ್ಳಬೇಡಿ. ಅದಕ್ಕಾಗಿ ಇಲ್ಲಿನ ಒಂದಿಷ್ಟು ಮಾಹಿತಿಯನ್ನು ಆಗತ್ಯ ಪರಿಶೀಲಿಸಿ…..!
ಹೊಸ ವರ್ಷ ಇದೋ ಬಂದೇಬಿಟ್ಟಿತು! ಹೊಸ ಉತ್ಸಾಹ, ಹೊಸ ಉಲ್ಲಾಸ, ಹೊಸ ಸೌಂದರ್ಯದಿಂದ ಬೀಗುವ ಅವಕಾಶ ಯಾರಿಗೆ ತಾನೇ ಬೇಡ…..? ಪ್ರತಿಯೊಬ್ಬ ಹೆಣ್ಣಿಗೆ ನಾನು ಎಲ್ಲರಿಗಿಂತ ಅತಿ ಬ್ಯೂಟಿಫುಲ್ ಎನಿಸಿಕೊಳ್ಳಬೇಕೆಂಬ ಆಸೆ ಸಹಜ. ಅದರಲ್ಲೂ ನ್ಯೂ ಇಯರ್ ಪಾರ್ಟಿಯಲ್ಲಿ ಮಿಂಚಲು ಯಾರಿಗೆ ತಾನೇ ಹೆಚ್ಚಿನ ಆಸೆ ಇರುವುದಿಲ್ಲ? ಕೆಲವರು ನೈಸರ್ಗಿಕವಾಗಿ ಅಮೂಲ್ಯ ಸೌಂದರ್ಯ ಪಡೆದಿದ್ದರೆ, ಕೆಲವರು ತಮ್ಮ ದೈಹಿಕ ಕುಂದುಕೊರತೆಗಳನ್ನು ತಿದ್ದಿಕೊಳ್ಳಬೇಕಾಗುತ್ತದೆ, ಕೆಲವದರ ಜೊತೆ ಕಾಂಪ್ರಮೈಸ್ ಮಾಡಿಕೊಳ್ಳಬೇಕಾಗುತ್ತದೆ. ಕೆಲವೊಂದು ಸಲ ಯಾವುದೋ ಮಾತಿಗೆ ಮರುಳಾಗಿ, ಅತಿ ಸುಂದರ ಎನಿಸಿಕೊಳ್ಳಲು ಹೋಗಿ ಇದ್ದುದನ್ನೂ ಕಳೆದುಕೊಳ್ಳಬೇಕಾಗುತ್ತದೆ.
ನೀವು ಸಹ ಈ ಹೊಸ ವರ್ಷದಲ್ಲಿ ನಿಮ್ಮ ಸೌಂದರ್ಯವನ್ನು ಒಪ್ಪವಾಗಿಸುವಲ್ಲಿ ಕ್ರಿಯಾಶೀಲರಾಗಿ. ಆದರೆ ಇದು ನೈಸರ್ಗಿಕ ಆಗಿರಲಿ, ಕೃತಕ ವಿಧಾನಗಳಿಂದ ಖಂಡಿತಾ ಬೇಡ. ಯಾವುದೋ ಇಂಜೆಕ್ಷನ್, ಆಪರೇಷನ್, ಪ್ಲಾಸ್ಟಿಕ್ ಸರ್ಜರಿಗಳಿಂದ ನಿಮ್ಮ ಇರುವ ಸಹಜ ಸೌಂದರ್ಯವನ್ನು ಖಂಡಿತಾ ಹಾಳಾಗಲು ಬಿಡಬೇಡಿ.
ಇಂದಿನ ಆಧುನಿಕ ಕಾಲಕ್ಕೆ ತಕ್ಕಂತೆ ಎಷ್ಟೋ ಕೆಲಸಗಳ ಸಲುವಾಗಿ ಹೆಂಗಸರು ಸದಾ ಪ್ರೆಸೆಂಟೆಬಲ್ ಆಗಿರಲೇಬೇಕಾಗುತ್ತದೆ. ಇದರ ಸಲುವಾಗಿ ತಮ್ಮ ಆರೋಗ್ಯದ ಜೊತೆಗೂ ಕಾಂಪ್ರಮೈಸ್ ಮಾಡಿಕೊಳ್ಳಬೇಕಾಗುತ್ತದೆ. ಉದಾ : ಏರ್ ಹೋಸ್ಟೆಸ್ ಗೆ ಸದಾ 12 ಗಂಟೆಗಳ ಕಾಲ ಹೈಹೀಲ್ಸ್ ಧರಿಸಿಕೊಂಡೇ ಇರಬೇಕಾಗುತ್ತದೆ, ಇದರಿಂದ ಅವರ ಆರೋಗ್ಯ ಖಂಡಿತಾ ಕೆಡುತ್ತದೆ. ಇದೇ ಕಾರಣದಿಂದ, ಇತ್ತೀಚೆಗೆ ಕೈಗೊಂಡ ನಿರ್ಣಯವೆಂದರೆ, ಯಾವ ರೀತಿ ಯುಕ್ರೇನಿನ ಸ್ಕೈ ಅಪ್ ಏರ್ ಲೈನ್ಸ್ ನ ಮಹಿಳಾ ಕ್ರೂ ಸದಸ್ಯೆಯರು ಈಗ ಪೆನ್ಸಿಲ್ ಸ್ಕರ್ಟ್, ಹೈ ಹೀಲ್ಸ್ ಹಾಗೂ ಬ್ಲೇಝರ್ ಗೆ ಬದಲಾಗಿ ಆರಾಮದಾಯಕ ಉಡುಗೆಯಾದ ಪ್ಯಾಂಟ್ ಸೂಟ್‌ಸ್ನೀಕರ್ಸ್‌ಧರಿಸಬಹುದಾಗಿದೆ.
ಇದೇ ತರಹ ಸಿನಿಮಾ ನಟಿಯರು ಗಂಟೆಗಟ್ಟಲೆ ಮೇಕಪ್ ನಲ್ಲಿ ಇರಬೇಕಾಗುತ್ತದೆ. ಹಾಗಾಗಿ ಅವರ ಮುಖ ಬೇಗ ಅಂದಗೆಡುತ್ತದೆ. ಕರೀನಾ ಕಪೂರ್ ಳ ಮುಖ ಗಮನಿಸಿ, ಹಲವಾರು ಕಾರ್ಯಕ್ರಮಗಳಲ್ಲಿ ಆಕೆ ಮೇಕಪ್ ಇಲ್ಲದೇ ಹಾಜರಾದಾಗ ಇವಳೇನಾ ಕರೀನಾ ಎಂದು ಸಂದೇಹ ಪಡುವಂತೆ ಮುಖವಿತ್ತು, ಅದು ಎಲ್ಲೆಡೆ ವೈರಲ್ ಆಯಿತು. ಹೀಗೇ ಅನೇಕ ನಾಯಕಿಯರ ಸ್ಥಿತಿಯೂ ಆಗಿದೆ. ಅಸಲಿಗೆ, ಅನೇಕ ವರ್ಷಗಳ ಕಾಲ ಸತತ ಮೇಕಪ್ ಮಾಡುವುದರಿಂದ ಮುಖದ ಚರ್ಮ ಅಂದಗೆಡುತ್ತದೆ.
ಇದೇ ತರಹ ಕೃತಕ ಬ್ಯೂಟಿ ವಿಧಾನ ಅಂದ್ರೆ ಬ್ರೆಸ್ಟ್ ಇಂಪ್ಲಾಂಟ್ಸ್ ಇತ್ಯಾದಿಗಳಿಂದಾಗಿಯೂ ಹೆಂಗಸರು ತಮ್ಮ ಆರೋಗ್ಯ ಕೆಡಿಸಿಕೊಳ್ಳುತ್ತಾರೆ. ಎಷ್ಟೋ ಸಲ ಹೆಂಗಸರು ಬೇಕೆಂದೇ ಅಥವಾ ಅರಿಯದೆಯೇ, ವರ್ಕ್ ಕಲ್ಚರ್ ಸಲುವಾಗಿ ಗಂಡಸರ ಮುಂದೆ ಮಿಂಚಬೇಕೆಂದು ತಮ್ಮನ್ನು ತಾವು ಅಧಿಕ ಬ್ಯೂಟಿಫುಲ್, ಪ್ರೆಸೆಂಟೆಬಲ್ ಹಾಗೂ ಸೆನ್ಶುಯಸ್ ಆಗಿಸಲು ಹೀಗೆ ಮಾಡುತ್ತಾರೆ. ಸುಂದರವಾಗಿ ಕಾಣಿಸಿಕೊಳ್ಳಲೇಬೇಕೆಂದು ಹೆಂಗಸರು ಇಂಥ ಅನಗತ್ಯ ಪ್ರಯತ್ನಗಳಿಗೆ ಕೈ ಹಾಕುತ್ತಾರೆ.
ಕೆಲವರು ಸರ್ಜರಿ ಹೆಸರಲ್ಲಿ ಕೋಟ್ಯಂತರ ಖರ್ಚು ಮಾಡುತ್ತಾರೆ. ಮತ್ತೆ ಹಲವರು ಆ ಕ್ರೀಂ ಈ ಕ್ರೀಂ ಎಂದು ಎಲ್ಲಾ ಕಾಸ್ಮೆಟಿಕ್ಸ್ ಬಳಸುತ್ತಾರೆ. ಮತ್ತೆ ಎಷ್ಟೋ ಹೆಂಗಸರು ಅಗ್ಗದ ಆಸೆಗೆ ಮುಗಿಬಿದ್ದು, ಕಂಡದ್ದನ್ನು ಕೊಂಡು ಬಳಿದುಕೊಳ್ಳುತ್ತಾರೆ. ಇದರಿಂದ ಹಾನಿ ತಪ್ಪಿದ್ದಲ್ಲ. ಮೊದಲೇ ತುಸು ಲಕ್ಷಣವಾಗಿರುವ ತರುಣಿಯರು ಇನ್ನಷ್ಟು ಗ್ಲಾಮರ್ ಗೆ ಆಸೆ ಬಿದ್ದು, ಏನೇನೋ ಪ್ರಯೋಗ ಮಾಡಲು ಹೋಗಿ, ಇರುವ ಅಂದಕ್ಕೂ ಬರೆ ಎಳೆದುಕೊಳ್ಳುತ್ತಾರೆ.
ಬ್ಯೂಟಿ ಹೆಚ್ಚುವ ಬದಲು……
ಒಬ್ಬ ವಿದೇಶೀ ಏರ್ ಹೋಸ್ಟೆಸ್ ಒಲಿವಿಯಾ ಜೊತೆಗೆ ಹೀಗೇ ಆಯಿತು. ಈಕೆ ಇನ್ನೂ ಹೆಚ್ಚಿನ ಗ್ಲಾಮರ್ ಗಾಗಿ, ತನ್ನ ತುಟಿಗಳ ಸರ್ಜರಿಗೆ ಮುಂದಾದಳು. ಆದರೆ ದುರಾದೃಷ್ಟವಶಾತ್ ಸರ್ಜರಿ ನಂತರ ಇವಳ ತುಟಿಗಳು ಗಾತ್ರದಲ್ಲಿ 3 ಪಟ್ಟು ದೊಡ್ಡದಾಯ್ತು.
ಇವಳನ್ನು ಕಂಡು ಎಲ್ಲರೂ ಗೇಲಿ ಮಾಡತೊಡಗಿದರು. ನೆಮ್ಮದಿಯಾಗಿ ಕೆಲಸ ಮಾಡಲಾರದೆ ಹೋದಳು. 21 ವರ್ಷದ ಈಕೆ 10 ಸಾವಿರ ಡಾಲರ್ ಖರ್ಚು ಮಾಡಿದ್ದಳು. ತುಸು ದಪ್ಪ ತುಟಿ ಬಯಸಿದ್ದಳು. ಬ್ಯೂಟೀಶಿಯನ್ ಸರ್ಜರಿ ನಂತರ ಎಲ್ಲಾ ಸರಿ ಹೋಗುತ್ತದೆ ಎಂದು ನಂಬಿಸಿದ್ದಳು. ಆದರೆ ಹಾಗೆ ಆಗಲೇ ಇಲ್ಲ! ಹೆಚ್ಚಿನ ಬ್ಯೂಟಿಗಾಗಿ ಮಾಡಿಸಿದ ಸರ್ಜರಿ ಮೂಲ ಸೌಂದರ್ಯಕ್ಕೂ ಮುಳುವಾಯಿತು. ಅವಳ ಮುಖ ಇಂಗು ತಿಂದ ಮಂಗನಂತೆ, ತುಟಿ ಭಾಗದಲ್ಲಿ ಊದಿಕೊಂಡಿತು.
ಇದರ ಜೊತೆ ಅವಳು ಸಹಿಸಿದ ನೋವು 4-5 ದಿನ ಏನನ್ನೂ ತಿನ್ನಲಿಕ್ಕಾಗದೆ ಲಿಕ್ವಿಡ್ ಡಯೆಟ್ ನಲ್ಲಿ ಪಾಡುಪಟ್ಟಳು. ಅದಾದ ಮೇಲೆ ನಾರ್ಮಲ್ ಆಗಲು ಅವಳಿಗೆ ಎಷ್ಟೋ ದಿನ ಬೇಕಾಯಿತು. ಇಷ್ಟು ಸಾಲದೆಂಬಂತೆ ಸರ್ಜರಿಗೆ ಮೊದಲೇ ಅವಳು ತನ್ನ ತುಟಿಗಳಿಗೆ ಫಿಲರ್ಸ್ ಸಹ ಹಾಕಿಸಿಕೊಂಡಿದ್ದಳು.
ನಕಲಿ ಸರ್ಜನ್ ಗಳ ಮೋಡಿ
ತನ್ನನ್ನು ತಾನು ಬಾರ್ಬಿ ಸರ್ಜನ್ ಎನ್ನುತ್ತಾ ಓಲ್ಲೀಸಾ ಸದಾ ಇನ್ ಸ್ಟಾಗ್ರಾಮ್ ನಲ್ಲಿ ತನ್ನದೇ ಗ್ಲಾಮರಸ್ ಫೋಟೋ ಹಾಕುತ್ತಿದ್ದಳು. ಸಾಧಾರಣ ಹುಡುಗಿಯರನ್ನು ಸದಾ ಪುಸಲಾಯಿಸುತ್ತಾ, ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ನೀವು ನನ್ನಂತೆ ಆಗಬಹುದು ಎನ್ನುತ್ತಿದ್ದಳು. ಆದರೆ ಈ ಕುರಿತಾಗಿ ಇವಳ ಬಳಿ ಯಾವ ಡಿಗ್ರಿಯೂ ಇರಲಿಲ್ಲ. ಇವಳ ಮಾತು ನಂಬಿ ಮರುಳಾದ ಎಷ್ಟೋ ಪೇಶೆಂಟ್ಸ್ ಸ್ಥಿತಿ ಇಂದು ಶೋಚನೀಯವಾಗಿದೆ.
ಅಂಥ ನೋಂಡ ಒಬ್ಬಾಕೆ, ತಾನು ಇವಳ ಬಳಿ ಮೂಗು ಮತ್ತು ಹುಬ್ಬಿನ ಅಪ್ ಲಿಫ್ಟ್ ಮೆಂಟ್ ಸರ್ಜರಿ ಮಾಡಿಸಿಕೊಂಡಳು. ಇದಾದ ನಂತರ ಪೇಶೆಂಟ್ ನ ಎಡ ಮುಖ ಸದಾ ಉರಿಯುತ್ತಿತ್ತು. 7 ದಿನಗಳ ಕಾಲ ಆಕೆ ಕಣ್ಣು ಬಿಡದಂತಾದಳು. ಇಂಥದೇ ಹಲವು ಸಮಸ್ಯೆಗಳನ್ನು ಎದುರಿಸಿದ ಇನ್ನೂ 11 ಮಂದಿ ಇವಳ ವಿರುದ್ಧ ದೂರಿತ್ತರು. ಕೊನೆಗೆ ಅವಳು ತನ್ನ ಕ್ಲಿನಿಕ್ ಮುಚ್ಚಿ ಓಡಿಹೋದಳು.
ಬ್ಯೂಟಿಗಾಗಿ ಕಾಲೇ ಹೋಯ್ತು
ಇದೇ ತರಹದ ಸಮಸ್ಯೆ ಸೇವಿಂಕ್ ಸೆಕ್ಲಿಕ್ ಎಂಬ ಹುಡುಗಿಗೂ ಎದುರಾಯಿತು. ಇವಳು ತನ್ನ ಮುಖವನ್ನು ಇನ್ನಷ್ಟು ಬ್ಯೂಟಿಫುಲ್ ಆಗಿಸುವ ಧಾವಂತದಲ್ಲಿ, (ಶ್ರೀದೇವಿ ಹಿಂದೆ ಮಾಡಿಸಿದ್ದಂತೆ) ತನ್ನ ಮೂಗಿನ ಪ್ಲಾಸ್ಟಿಕ್ ಸರ್ಜರಿಗೆ ಸಿದ್ಧಳಾದಳು. ಒಂದು ಟರ್ಕಿಶ್ ಪ್ಲಾಸ್ಟಿಕ್ ಸರ್ಜರಿ ಕ್ಲಿನಿಕ್ ನಿಂದ ಮೂಗಿನ ಸರ್ಜರಿ ಮಾಡಿಸಿದಳು. ಅದೇನಾಯಿತೋ ಏನೋ….? ಈ ಸರ್ಜರಿ ನಂತರ ಅವಳ ಮಂಡಿಯ ಕೆಳಭಾಗದ ಕಾಲು ನಿಷ್ಕ್ರಿಯವಾಗಿ, ಕೊನೆಗೆ ಅದನ್ನು ಕತ್ತರಿಸಬೇಕಾಯಿತು! 25ರ ಹರೆಯದ ಈಕೆ ಇಸ್ತಾಂಬುಲ್ ನ ಒಂದು ಖಾಸಗಿ ಕ್ಲನಿಕ್ ಮುಖಾಂತರ ತನ್ನ ಮೂಗನ್ನು ನೇರ್ಪಾಗಿಸಲು `ನೋಸ್ ರಿಡಕ್ಷನ್ ಸರ್ಜರಿ’ ಮಾಡಿಸಿದ್ದೇ ಅವಳು ಕಾಲು ಕಳೆದುಕೊಳ್ಳಲು ಮೂಲವಾಯ್ತು.
ಸುಮಾರು 2 ಗಂಟೆ ಕಾಲ ನಡೆದ ಈ ಆಪರೇಶನ್ ನಂತರ ವೈದ್ಯರು ಅವಳನ್ನು ಮನೆಗೆ ಕಳಿಸಿದ್ದರು. ಮನೆಗೆ ಬಂದ 1-2 ಗಂಟೆಗಳಲ್ಲೇ ಅವಳಿಗೆ ವಿಪರೀತ ವೈರಲ್ ಫೀವರ್ ಕಾಡತೊಡಗಿತು. ಆದರೆ ಆ ಕ್ಲಿನಿಕ್ ನವರು ಮಾತ್ರ ಇದೆಲ್ಲ ಮಾಮೂಲಿ ಎಂದು ನಿರ್ಲಕ್ಷಿಸಿದರು. ಆದರೆ 12 ದಿನಗಳಲ್ಲಿ ಅವಳ ಸ್ಥಿತಿ ಚಿಂತಾಜನಕವಾಯಿತು.
ತಿಂದ ಯಾವ ಆಹಾರವೂ ದಕ್ಕದೆ, ಸತತ ಜ್ವರದಿಂದ ನರಳತೊಡಗಿದಳು. ಅವಳ ಕಾಲುಗಳು ಕ್ರಮೇಣ ಕಡುಕಪ್ಪು ಬಣ್ಣಕ್ಕೆ ತಿರುಗಿದವು! ಅವಳನ್ನು ಮತ್ತೆ ದೊಡ್ಡ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದರು. ಆಕೆ ಬ್ಲಡ್ ಪಾಯಿಸನಿಂಗ್ ಕಾಯಿಲೆಗೆ ತುತ್ತಾಗಿದ್ದಳು. ಹೀಗಾಗಿ ಅವಳ ಪ್ರಾಣ ಉಳಿಸಲು ಎರಡೂ ಕಾಲುಗಳನ್ನು ಕತ್ತರಿಸುವುದು ಅನಿವಾರ್ಯವಾಯಿುತು. ಅಂತೂ ಅವಳ ಜೀವ ಉಳಿಯಿತು, ಆದರೆ ಮೂಗಿನ ರಿಪೇರಿಗಾಗಿ ಹೋಗಿ ಕಾಲುಗಳೆರಡನ್ನೂ ಕಳೆದುಕೊಳ್ಳಬೇಕಾಯಿತು!
ಕೈ ತಪ್ಪಿದ ಪಾತ್ರಗಳು
ಇದೇ ತರಹ ಚೀನೀ ನಟಿ ಹಾಗೂ ಗಾಯಕಿ ಗಾಲೇ ಲಿಯೂ ಇತ್ತೀಚೆಗೆ ಕಾಸ್ಮೆಟಿಕ್ ಸರ್ಜರಿ ಮಾಡಿಸಿ, ಬಹಳ ಕೈ ಸುಟ್ಟುಕೊಂಡಳು. ಈಕೆಗೆ 50 ಲಕ್ಷ ಫಾಲೋಯರ್ಸ್ ಇದ್ದಾರೆ. ಸರ್ಜರಿಗೆ ಮುಂಚಿನ ಮತ್ತು ನಂತರದ ಫೋಟೋಗಳನ್ನು ಇವಳು ಪೋಸ್ಟ್ ಮಾಡಿದಾಗ, ಅವರೆಲ್ಲ ಬೆಚ್ಚಿಬಿದ್ದರು. ಏನೋ ತುಸು ಲೋಪವಿದ್ದ ಮೂಗು ನೋಡಲು ಸಹನೀಯವಾಗೇ ಇತ್ತು. ಅದನ್ನು ಸರಿಪಡಿಸಲು ಹೋಗಿ, ಇವಳು ತನ್ನ ಮೂಗಿನ ಒಂದು ಭಾಗ ಚಪ್ಪಟೆ ಆಗಿಸಿಕೊಂಡು ಇನ್ನೊಂದು ಭಾಗವನ್ನು ಕಪ್ಪಾಗಿಸಿಕೊಂಡಿದ್ದಳು.
ಅತಿ ದೀರ್ಘ 4 ಗಂಟೆಗಳ ಮೂಗಿನ ಸರ್ಜರಿ ನಂತರ, ಇವಳು ಬಯಸಿದಂಥ ಆಕಾರ ಮೂಗಿಗೆ ಬಂದಿರಲೇ ಇಲ್ಲ. ಇದರಿಂದ ಇವಳ ಮೂಗಿನ ಟಿಶ್ಯು ಡೆಡ್ ಆಯ್ತು. ನಂತರ ಅವಳಿಗೆ ತಿಳಿದ ವಿಷಯ, ಇಂಥ ಸರ್ಜರಿ ನಡೆಸಲು ಆ ಕ್ಲಿನಿಕ್ ಅನುಮತಿ ಪಡೆದಿರಲಿಲ್ಲ ಎಂಬುದು. ಈ ಸರ್ಜರಿ ಕಾರಣ ಇವಳು ಸತತ 2 ತಿಂಗಳು ಆಸ್ಪತ್ರೆ ವಾಸ ಎದುರಿಸಬೇಕಾಯಿತು.
ಈ ಸರ್ಜರಿ ನಂತರ ತನಗೆ ಸಿನಿಮಾಗಳಲ್ಲಿ ಹೆಚ್ಚು ಹೆಚ್ಚು ಅವಕಾಶ ಸಿಗುತ್ತದೆ ಎಂದೇ ನಂಬಿದ್ದಳು. ಆದರೆ ಆದದ್ದೇ ಉಲ್ಟಾ….. ಅವಳ ಬಳಿ ಇದ್ದ ಚಿತ್ರಗಳೂ ಕೈಬಿಟ್ಟು ಹೋದವು. ಕಾರಣ…. ವಿಕಾರವಾಗಿ ಚಪ್ಪಟೆಗೊಂಡು ಕಪ್ಪಾಗಿದ್ದ ಅವಳ ಮೂಗಿನ ಭಾಗಗಳು! ತಾನು ಈ ಘನವೆತ್ತ ಸರ್ಜರಿಗಾಗಿ ಸತತ 2 ತಿಂಗಳು ಆಸ್ಪತ್ರೆಯಲ್ಲೇ ಇದ್ದುದರಿಂದ, ಹಲವು ಕೋಟಿ ಬೆಲೆಬಾಳುವ ಪ್ರಾಜೆಕ್ಟ್ಸ್ ತಪ್ಪಿಹೋದವಂತೆ!
ಈ ತರಹದ ಪ್ಲಾಸ್ಟಿಕ್ ಸರ್ಜರಿ ಮಾಡಿಸುವವರಲ್ಲಿ ಯುವತಿಯರೇ ಹೆಚ್ಚು. ಸೋಶಿಯಲ್ ಮೀಡಿಯಾಗಳಲ್ಲಿ ಅತಿ ಬ್ಯೂಟಿಫುಲ್ ಆಗಿ ಕಾಣಿಸಬೇಕು, ಇನ್ ಫ್ಲೂಯೆನ್ಸರ್ ಆಗಬೇಕು ಎಂಬ ಹುಚ್ಚು ಧಾವಂತದಲ್ಲಿ ಹೀಗೆ ಮಾಡಿಕೊಳ್ಳುತ್ತಾರೆ. ಎಷ್ಟೋ ಹುಡುಗಿಯರೂ ತಾವು ಅಂದುಕೊಂಡ ಆಕಾರ ಪಡೆದಾಗ ಮಾತ್ರವೇ ತಾವು ಗುರಿ ಸೇರಲು ಸಾಧ್ಯ ಎಂದು ಭಾವಿಸುತ್ತಾರೆ. ವಿಷಯ ಪರಸ್ಪರರ ಸಂಬಂಧ ಅಥವಾ ಕೆರಿಯರ್ ಗೆ ಸಂಬಂಧಿಸಿದ್ದಿರಲಿ, ತಾವು ಅತಿ ಗ್ಲಾಮರಸ್ ಆದರೆ ಮಾತ್ರ ಅದರಲ್ಲಿ ಯಶಸ್ವಿ ಆಗುತ್ತೇವೆ ಎಂಬ ಮೂಢನಂಬಿಕೆ ಇವರದು.
ಈ ಕಾರಣದಿಂದಾಗಿಯೇ ಇವರುಗಳು ಇದರ ಸಲುವಾಗಿ ಎಂಥ ಅಪಾಯಕಾರಿ ಸ್ಥಿತಿ ಎದುರಿಸಲಿಕ್ಕೂ ತಯಾರಾಗಿ ನಿಂತಿರುತ್ತಾರೆ. ಕೊನೆಯಲ್ಲಿ ಪಶ್ಚಾತ್ತಾಪ ಒಂದು ಬಿಟ್ಟರೆ ಬೇರೇನೂ ಉಳಿಯುವುದಿಲ್ಲ. ಆದ್ದರಿಂದ ಕೈಗೆಟುಕದ ಗಗನ ಕುಸುಮಕ್ಕಾಗಿ ಕೈಚಾಚುವ ಬದಲು, ತಮಗೆ ಸಿಕ್ಕಿರುವ ಮೈಮಾಟ, ಇರುವ ಸೌಂದರ್ಯವನ್ನೇ `ಪಾಲಿಗೆ ಬಂದದ್ದು ಪಂಚಾಮೃತ’ ಎಂದು ಭಾವಿಸಿ ನೆಮ್ಮದಿ ಕಾಣಬೇಕು. ಕೇವಲ ಸರ್ಜರಿ ಅಥವಾ ನಾನಾ ಬಗೆಯ ಕ್ರೀಂ ಬಳಿದುಕೊಳ್ಳುವ ಬದಲು, ಬೌದ್ಧಿಕವಾಗಿ, ಉತ್ತಮ ಆದರ್ಶಗಣಗಳಿಂದ, ಪರೋಪಕಾರಿ ಸ್ವಭಾವದಿಂದ ನಿಮ್ಮನ್ನು ಎಲ್ಲರೂ ಮೆಚ್ಚುವ ಹಾಗೆ ನಡೆದುಕೊಳ್ಳಿ.
ಫಿಟ್ & ಫೈನ್ ಆಗಿರಿ
ಸೌಂದರ್ಯದ ಮೊದಲ ಗುರುತು ಎಂದರೆ ನಿಮ್ಮ ಚುರುಕಾದ ವ್ಯಕ್ತಿತ್ವ, ಆರೋಗ್ಯಕರ ಕಾಂತಿ ಚಿಮ್ಮುವ ನಸುನಗು ಬೆರೆತ ಮುಖ, ಡೀಸೆಂಟ್ ಮೈಮಾಟ. ಈ ರೀತಿ ಫಿಟ್ & ಫೈನ್ ಆಗಿದ್ದು ನಿಮ್ಮ ಸ್ನೇಹಪರ ವ್ಯಕ್ತಿತ್ವ ಉತ್ತಮ ನಡವಳಿಕೆಗಳಿಂದ ಎಲ್ಲರಿಗಿಂತ ಬೆಟರ್ ಎನಿಸುವಿರಿ. ನಡೆಯುವಾಗ ಅತಿಯಾಗಿ ತಲೆ ಬಾಗಿಸಬೇಡಿ, ಮಾತನಾಡುವಾಗ ದೃಷ್ಟಿಬೆರೆಸಿ ಮಾತನಾಡಿ, ಪ್ರತಿ ಕ್ರಿಯೆಯಲ್ಲೂ ಆತ್ಮವಿಶ್ವಾಸ ತುಂಬಿರಲಿ, ಹಿಂಜರಿಕೆ, ಸಂಕೋಚ, ಅತಿಯಾದ ನಾಚಿಕೆ ಇತ್ಯಾದಿ ಬೇಡ. ಹಾಗೇಂತ ಓವರ್ ಸ್ಮಾರ್ಟ್ ನೆಸ್ ಕೂಡ ಒಳ್ಳೆಯದಲ್ಲ. ನಿಮ್ಮ ದೇಹ ಬ್ಯಾಲೆನ್ಸ್ಡ್ ಆಗಿದ್ದರೆ, ಯಾವುದೇ ಡ್ರೆಸ್ ಸಹಜವಾಗಿಯೇ ನಿಮಗೆ ಫಿಟ್ ಆಗುತ್ತದೆ. ನಿಮ್ಮ ಮನಸ್ಸು ಒಪ್ಪದ, ನೀವು ಕಂಫರ್ಟ್ ಅಲ್ಲದ, ಅತ್ಯಾಧುನಿಕ ಡ್ರೆಸ್ ಗಳ ಗೊಡವೆಯೇ ಬೇಡ.
ಬ್ಯೂಟಿ ಎನಿಸಲು ಆಕರ್ಷಕ ವ್ಯಕ್ತಿತ್ವ ಹಾಗೂ ಇದಕ್ಕಾಗಿ ಫಿಟ್‌ಫೈನ್ ಬಾಡಿ, ಸ್ಮಾರ್ಟ್ ನೆಸ್ ಇದ್ದರೆ ಸರಿ. ಮೂಗು, ತುಟಿ, ಸ್ತನಗಳ ಆಕಾರ ಮುಖ್ಯವಲ್ಲ. ನಿಮ್ಮನ್ನು ನೀವು ಸದಾ ಸ್ಮಾರ್ಟ್ ಆಗಿ ಇರಿಸಿಕೊಳ್ಳಿ, ಇದು ಎಲ್ಲಕ್ಕಿಂತ ಬಹಳ ಮುಖ್ಯ.
ಏನಾದರೂ ಸಾಧಿಸುವ ಛಲವಿರಲಿ
ಬ್ಯೂಟಿ ಸದಾ ಕಂಗಳ ಕಾಂತಿಯಲ್ಲಿ ಅಡಗಿರುತ್ತದೆ. ನಿಮ್ಮ ಕಣ್ಣುಗಳು ಸದಾ ಉತ್ಸಾಹ ತುಂಬಿಕೊಂಡಿದ್ದರೆ, ನಿಮ್ಮ ಮಾತುಗಳಲ್ಲಿ ಸದಾ ವಿಶ್ವಾಸವಿದ್ದರೆ, ಕಂಗಳಲ್ಲಿ ನಗುವಿಗೆ ಉತ್ತರ ಕೊಡುವ ಸಾಮರ್ಥ್ಯವಿದ್ದರೆ, ಕಂಗಳಿಂದಲೇ ಎದುರಿಗಿರುವ ವ್ಯಕ್ತಿಯ ಮೇಲೆ ನೀವು ಪ್ರಭಾವ ಬೀರಬಲ್ಲವರಾಗಿದ್ದರೆ, ಸದಾ ನನಗೆ ಸೌಂದರ್ಯ, ಗ್ಲಾಮರ್ ಇಲ್ಲವಲ್ಲ ಎಂದು ಚಿಂತಿಸುವ ಅಗತ್ಯವೇ ಇಲ್ಲ. ಕಂಗಳಲ್ಲಿ ತುಂಬು ಆತ್ಮವಿಶ್ವಾಸ, ಏನಾದರೂ ಮಾಡಿಯೇ ಸಾಧಿಸುತ್ತೇನೆ ಎಂಬ ಛಲವಿದ್ದರೆ, ಖಂಡಿತವಾಗಿಯೂ ನೀವು ಆಕರ್ಷಣೆಯ ಕೇಂದ್ರಬಿಂದು ಆಗಬಲ್ಲಿರಿ.
ಮಾತಿನಲ್ಲಿ ನಯ ವಿನಯ, ಯಾವುದನ್ನು ಹೇಗೆ ಟ್ಯಾಕ್ ಮಾಡಬೇಕೆಂಬ ಪರಿಜ್ಞಾನ, ಮಾತನಾಡುವಾಗ ಆ ಭಾಷೆಯ ಮೇಲೆ ಹಿಡಿತ, ಸ್ಛುಟವಾದ ಉಚ್ಚಾರಣೆ, ಇಡೀ ವಾತಾವರಣ ಸಂತಸಮಯ ಆಗಿಟ್ಟುಕೊಳ್ಳು ಸಾಮರ್ಥ್ಯ ನಿಮ್ಮದಾಗ್ದಿದರೆ, ಎಲ್ಲರೂ ಸದಾ ನಿಮ್ಮ ಸಾಂಗತ್ಯ ಬಯಸುತ್ತಾರೆ. ನಿಮ್ಮಲ್ಲಿ ತುಂಬಿರುವ ಆತ್ಮವಿಶ್ವಾಸವೇ ಎಲ್ಲದಕ್ಕೂ ಕೀಲಿಕೈ.
ಸಕಾರಾತ್ಮಕ ದೃಷ್ಟಿಕೋನ
ಕೆಲವರ ಮಾತು ಎಷ್ಟು ಹಿತಕರ ಆಗಿರುತ್ತದೆಂದರೆ, ಎದುರಿಗಿನ ವ್ಯಕ್ತಿಗೆ ಕೇಳುತ್ತಿದ್ದರೆ ಕೇಳುತ್ತಲೇ ಇರೋಣ ಎನಿಸುತ್ತದೆ. ಇಬ್ಬರ ನಡುವೆ ಒಂದು ಪಾಸಿಟಿವ್ ಎನರ್ಜಿ ಡೆವಲಪ್ ಆಗುತ್ತದೆ. ಅಕ್ಕಪಕ್ಕದ ವಾತಾವರಣ ಸಕಾರಾತ್ಮಕ ಎನಿಸುತ್ತದೆ. ಫ್ರೆಂಡ್ಸ್, ಸಂಗಾತಿ ಅಥವಾ ಸಹೋದ್ಯೋಗಿಯೇ ಇರಲಿ, ಇಂಥವರ ಜೊತೆ ಹೆಚ್ಚು ನಿಕಟತೆ ಹೊಂದಲು ಬಯಸುತ್ತಾರೆ. ಹೀಗಾಗಿ ವ್ಯಕ್ತಿಯ ಸೌಂದರ್ಯಕ್ಕಿಂತ ಉತ್ತಮ ದೃಷ್ಟಿಕೋನದೊಂದಿಗೆ ಕೆಲಸ ಮಾಡುವುದು ಹೆಚ್ಚು ಮುಖ್ಯ. ನಿಮ್ಮದು ಸಕಾರಾತ್ಮಕ (ಪಾಸಿಟಿವ್‌ಅಪ್ರೋಚ್) ದೃಷ್ಟಿಕೋನ ಆಗಿದ್ದರೆ, ಎಲ್ಲಾ ಕೆಲಸಗಳನ್ನೂ ಸುಲಭವಾಗಿ ಜಯಿಸಿಕೊಳ್ಳಬಹುದು.
– ಜಿ. ಪಂಕಜಾ
ಡ್ರೆಸ್ಹೇರ್ ಸ್ಟೈಲ್ ಬೀರುವ ಮೋಡಿ
ನೀಲಪ ಬಹಳ ಬ್ಯೂಟಿ ಅಲ್ಲದಿದ್ದರೆ, ಸರ್ಜರಿ ಮಾಡಿಸುವ ಬದಲು, ಬ್ಯೂಟಿಫುಲ್ ಹೇರ್ ಸೆಲ್ ನಿಂದ ನಿಮ್ಮ ಗ್ಲಾಮರ್ ಹೆಚ್ಚಿಸಿಕೊಳ್ಳಿ. ನಿಮ್ಮ ಡ್ರೆಸ್ ಕಾಲಕ್ಕೆ ತಕ್ಕಂತಿರಲಿ, ಅತಿ ಸೆಕ್ಸಿ ಮುಖ್ಯಲ್ಲ, ಮಾಡ್‌ಗ್ಲಾಮ್ ಆಗಿರಲಿ, ನಿಮಗೆ ಕಂಫರ್ಟೆಬಲ್ ಆಗಿರುವುದು ಮುಖ್ಯ, ಡೀಸೆಂಟ್ ಆಗಿರಬೇಕಷ್ಟೆ. ಇದರಿಂದ ನಿಮ್ಮ ವ್ಯಕ್ತಿತ್ವ ಹೊಳೆಯುತ್ತದೆ.
ಸಿಕ್ಕುಗಟ್ಟಿದ ಕೂದಲು ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ನೀಡದು. ಇದರ ಬದಲು ಸ್ಟೈಲಿಶ್ ಆಗಿ ಕತ್ತರಿಸಲ್ಪಟ್ಟ ಹೊಳೆ ಹೊಳೆಯುವ, ಹೆಲ್ದಿ, ಉದ್ದನೆ, ದಟ್ಟ, ಒತ್ತಾದ ಕೂದಲು ನಿಮಗೆ ವಿಭಿನ್ನ ಸೌಂದರ್ಯ ತಂದುಕೊಡುತ್ತದೆ. ಇದರ ಕಡೆ ಹೆಚ್ಚಿನ ಗಮನವಿರಲಿ. ನಿಮ್ಮ ಮಾತಿನ ಮೋಡಿಯಿಂದ ಎಲ್ಲರನ್ನೂ ಕಟ್ಟಿಹಾಕಿ. ಕೆಲವರ ಮಾತನಾಡುವ ಶೈಲಿ ಎಷ್ಟು ಸೊಗಸಾಗಿರುತ್ತದೆ ಎಂದರೆ, ಜನ ಅವರತ್ತಲೇ ನೋಡುತ್ತಾ ಇದ್ದುಬಿಡುತ್ತಾರೆ. ಹೀಗಾಗಿ ನಿಮ್ಮ ಮಾತಲ್ಲಿ ಸದಾ ಮೃದುತ್ವ, ಸಿಹಿ ತುಂಬಿರಲಿ. ಆತ್ಮವಿಶ್ವಾಸದ ನುಡಿಗಳು ನಿಮ್ಮದಾಗಿರಲಿ. ಹೇಳುವುದನ್ನೇ ಸ್ಟೈಲಾಗಿ, ಸ್ವಾರಸ್ಯಕರವಾಗಿ ಹೇಳಿ. ಆಗ ಜನ ನಿಮ್ಮತ್ತ ಹೆಚ್ಚು ಆಕರ್ಷಿತರಾಗುತ್ತಾರೆ.
ಹುಟ್ಟಿನಿಂದ ಬಂದ ಸಹಜ ಸೌಂದರ್ಯವನ್ನು ಏನೋ ರಿಪೇರಿ ಮಾಡಿಸುತ್ತೇವೆ ಎಂದು ಹೊರಟರೆ ತೊಂದರೆ ತಪ್ಪಿದ್ದಲ್ಲ. ಹಣ ಹಾಳಾಗುವುದೊಂದೇ ಅಲ್ಲ, ನಿಮ್ಮ ಆರೋಗ್ಯ ಹೇಳ ಹೆಸರಿಲ್ಲದೆ ಹೋಗುತ್ತದೆ. ಒಂದು ಸಲ ಇಂಥ ಆಧುನಿಕ ಸರ್ಜರಿಯ ವ್ಯಾಮೋಹಕ್ಕೆ ಬಲಿಯಾದರೆ, ಅಕಸ್ಮಾತ್ ಅದು ಯಶಸ್ವಿ ಆಯಿತೆಂದೇ ಭಾವಿಸಿ, ಇನ್ನೊಮ್ಮೆ ಅಂಥ ಪ್ರಯತ್ನಕ್ಕೆ ಕೈ ಹಾಕಿದರೆ ನಷ್ಟ ತಪ್ಪಿದ್ದಲ್ಲ! ನಿಮ್ಮ ಕೆರಿಯರ್ ಗೆ ಇನ್ನಷ್ಟು ಹೆಚ್ಚಿನ ಬ್ಯೂಟಿ, ಗ್ಲಾಮರ್ ಬೇಕಿದ್ದರೆ, ಅದನ್ನು ಸಹಜವಾಗಿ ಗಿಟ್ಟಿಸಿಕೊಳ್ಳಲು ನೋಡಿ, ಸರ್ಜರಿಯಿಂದಲ್ಲ. ಯಾರನ್ನೋ ಆಕರ್ಷಿಸಬೇಕು ಎಂದು ಹೊರಟರೆ, ನವಿಲನ್ನು ನೋಡಿ ಕೆಂಭೂತ ಕುಣಿಯಿತು ಎಂದಾದೀತು. ಆದ್ದರಿಂದ ಇಂಥ ಸುಳಿಗೆ ಸಿಲುಕದೆ, ನಿಮ್ಮ ಬಳಿ ಇರುವ ಸೌಂದರ್ಯವನ್ನು ನೀಟಾಗಿ ಉಳಿಸಿಕೊಳ್ಳಿ.
ಕೃತಕ ಸೌಂದರ್ಯದ ಗೊಡವೆ ಬೇಡ!
ಸೌಂದರ್ಯ ತಜ್ಞೆಯರ ಪ್ರಕಾರ ಇಂದಿನ ಆಧುನಿಕ ತರುಣಿಯರು ಹೆಚ್ಚು ಬ್ಯೂಟಿ ಗ್ಲಾಮರ್ ಗಿಟ್ಟಿಸಬೇಕೆಂಬ ಹುಚ್ಚಿನಲ್ಲಿ ಕಾಸ್ಮೆಟಿಕ್ ಸರ್ಜರಿ ಅಥವಾ ಕೃತಕ ಬ್ಯೂಟಿ ವಿಧಾನಗಳಿಗೆ ಮೊರೆಹೋಗುತ್ತಾರೆ. ಇದರಿಂದ ಹಾನಿ ತಪ್ಪಿದ್ದಲ್ಲ. ಈ ಹೆಂಗಸರು ತಮ್ಮನ್ನು ತಾವು ಪ್ರೀತಿಸುವುದನ್ನು ಕಲಿಯಬೇಕು, ಆಗ ಈ ಹುಚ್ಚು ತಂತಾನೇ ಬಿಟ್ಟುಹೋಗುತ್ತದೆ. ಯಾವ ವ್ಯಕ್ತಿ ಹೇಗೇ ಇರಲಿ, ತನ್ನನ್ನು ತಾನು ಹಾಗೇ ಒಪ್ಪಿಕೊಳ್ಳಬೇಕು. ಆಗ ಮಾತ್ರ ಇತರರೂ ನಮ್ಮನ್ನು ಸ್ವೀಕರಿಸುತ್ತಾರೆ. ಆದರೆ ಬಹಳ ಹೆಂಗಸರು ಹೀಗೆ ಮಾಡದೆ ಅನಗತ್ಯ ಸೌಂದರ್ಯ ಸಾಧನ, ವಿಧಾನಗಳು, ಸರ್ಜರಿಗಳಿಗೆ ಶರಣಾಗಿ ಹಣ, ಸಮಯ ಎರಡನ್ನೂ ವ್ಯರ್ಥ ಮಾಡಿಕೊಳ್ಳುತ್ತಾರೆ.
ಎಷ್ಟೋ ಹೆಂಗಸರು ಕೃತಕ ಐಲ್ಯಾಶೆಸ್, ಉಗುರು, ಹೇರ್ ಎಕ್ಸ್ ಟೆನ್ಶನ್ಸ್ ಇತ್ಯಾದಿ ಬಳಸುತ್ತಾರೆ. ಇವುಗಳಿಂದ ದೇಹಕ್ಕೆ ಒಂದಿಲ್ಲೊಂದು ನೋವು ತಪ್ಪಿದ್ದಲ್ಲ. ನಮ್ಮ ಕಂಗಳಲ್ಲಿ ಸಣ್ಣ ಕೂದಲ ಎಳೆ ಸಿಕ್ಕಿ ಹಾಕಿಕೊಂಡರೂ ನಮಗೆ ಹಿಂಸೆ ತಪ್ಪಿದ್ದಲ್ಲ. ಹೀಗಿರುವಾಗ ಇಡೀ ಐ ಲ್ಯಾಶೆಸ್ ಕೃತಕವಾದರೆ ಅದರಿಂದ ಕಷ್ಟ ಆಗದೇ ಇರುತ್ತದೆಯೇ? ಅಂದ್ರೆ ಇದರಿಂದ ಕಣ್ಣಿನ ಇರಿಟೇಶನ್, ಇಚಿಂಗ್, ಅನ್ ಕಂಫರ್ಟೆಬಲ್ ಫೀಲಿಂಗ್ ತಪ್ಪಿದ್ದಲ್ಲ. ಜೊತೆಗೆ ತಲೆನೋವು, ಕಣ್ಣಿನ ದೃಷ್ಟಿ ಕ್ರಮೇಣ ತಗ್ಗುವಿಕೆಗೆ ದಾರಿಯಾಗುತ್ತದೆ. ಕೃತಕ ಐ ಲ್ಯಾಶೆಸ್ ನ್ನು ಗಮ್ ನೆರವಿನಿಂದ ಅಂಟಿಸುತ್ತಾರೆ. ಇದರಲ್ಲಿನ ಕೆಮಿಕಲ್ಸ್ ನಿಂದ ಕಣ್ಣಿಗೆ ಹಾನಿ ಹೆಚ್ಚು.
ಕಂಗಳು ಕ್ರಮೇಣ ಭಾರಿ ಎನಿಸುತ್ತವೆ, ನಮಗೆ ಈ ಕೆಟ್ಟ ಪರಿಣಾಮಗಳ ಅರಿವೇ ಇರೋಲ್ಲ. ಜನ ನಮ್ಮ ಐ ಲ್ಯಾಶೆಸ್ ಹೊಗಳುವುದಷ್ಟೇ ನಮಗೆ ಮುಖ್ಯ ಎನಿಸುತ್ತದೆ. ಇದೇ ತರಹ ನೇಲ್ ಎಕ್ಸ್ ಟೆನ್ಶನ್ ಗಳಿಂದಲೂ ಹಿಂಸೆ ತಪ್ಪಿದ್ದಲ್ಲ. ನಮ್ಮ ಫೋಕಸ್ ಇರುವುದೆಲ್ಲ ಕೇವಲ ಅದು ಮುರಿಯಬಾರದು ಅಂತ. ಅದರ ದೆಸೆಯಿಂದ ಯಾವ ಕೆಲಸವನ್ನೂ ನೆಟ್ಟಗೆ ಮಾಡಲಾಗದು. ಕೂದಲಿಗೆ ಹೇರ್ ಎಕ್ಸ್ ಟೆನ್ಶನ್ ಅಳವಡಿಸಿದ ಮೇಲೆ, ಹಾಯಾಗಿ ತಲೆ ಸ್ನಾನ ಮಾಡಲಾಗದು. ಸ್ಕಾಲ್ಪ್ ನೆಟ್ಟಗೆ ಕ್ಲೀನ್ ಆಗದ ಕಾರಣ ಏನೇನೋ ಕಷ್ಟಗಳು ತಲೆದೋರುತ್ತವೆ. ಕೇವಲ ತೋರಿಕೆಗಾಗಿ ಬಳಸುವ ಇವನ್ನು ಎಂದೋ ಅಪರೂಪಕ್ಕೆ ಒಮ್ಮೊಮ್ಮೆ ಬಳಸಿದರೆ ಸರಿ. ಒಂದು ವೇಳೆ ಪರ್ಮನೆಂಟ್ ಐ ಲ್ಯಾಶೆಸ್, ಎಕ್ಸ್ ಟೆನ್ಶನ್, ಬ್ರೆಸ್ಟ್ ಇಂಪ್ಲಾಂಟ್ಸ್ ಮಾಡಿಸಿ ಹೆಚ್ಚಿನ ಬ್ಯೂಟಿ ಗಳಿಸ ಬಯಸಿದರೆ, ಇವೆಲ್ಲ ಸುದೀರ್ಘ ಬಾಳಿಕೆ ಬರುವುದಿಲ್ಲ ಎಂದು ನೆನಪಿಡಿ.
ಇದರ ಬದಲು ನಾವು ಮನೆಮದ್ದು, ನೈಸರ್ಗಿಕ ಉಪಾಯ ಅನುಸರಿಸಿದರೆ, ಸಹಜವಾಗಿಯೇ ನಾವು ಈ ಕೃತಕ ವಿಧಾನಗಳನ್ನು ಕಡೆಗಣಿಸಬಹುದು. ನಮಗೆ ಒರಿಜಿನಲ್ ಐ ಲ್ಯಾಶೆಸ್ ಇಲ್ಲದಿದ್ದರೆ, ಕ್ಯಾಸ್ಟರ್ ಆಯಿಲ್ ಬಳಸಬಹುದು. ಆ್ಯಲೋವೆರಾ ಜೆಲ್, ನೀಮ್ ಆಯಿಲ್ ಸಹ ಬಳಸಬಹುದು. ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಇದರಿಂದ ಸೋಂಕು, ಫಂಗಸ್, ತುರಿಕೆಗಳ ಭಯವಿಲ್ಲ. ಕೂದಲು ಉದುರುವುದೂ ಇಲ್ಲ ಮತ್ತು ಹೊಸ ಕೂದಲು ಸಹ ಬಲು ಬೇಗ ಬರುತ್ತದೆ. ಇದೇ ಸ್ಥಿತಿ ತಲೆಯ ಕೂದಲಿನದೂ ಸಹ. ಹಾಗೆಯೇ ಸಣ್ಣ ಸ್ತನಗಳ ಸಮಸ್ಯೆಗೆ, ಬ್ರೆಸ್ಟ್ ಇಂಪ್ಲಾಂಟ್ ಗೆ ಬದಲು ವ್ಯಾಯಾಮ ಯೋಗ, ವೆಯ್ಟ್ ಲಿಫ್ಟಿಂಗ್. ವಾಕಿಂಗ್, ಜಾಗಿಂಗ್ ಡಯೆಟಿಂಗ್ ಕಡೆ ಗಮನಕೊಟ್ಟರೆ ಬಲು ಬೇಗ ಫಿಟ್ & ಫೈನ್ ಎನಿಸಬಹುದು.
ಅಸಲಿ ವಿಚಾರ ಎಂದರೆ, ಒಬ್ಬ ಹೆಣ್ಣಿನ ಮುಖದಲ್ಲಿ ಆತ್ಮವಿಶ್ವಾಸದ ನಗು ತುಂಬಿ ತುಳುಕಿದರೆ, ಅವಳು ಆಗ ಸಹಜವಾಗಿಯೇ ಸೌಂದರ್ಯವತಿ ಎನಿಸುತ್ತಾಳೆ. ಅದರ ಬದಲಿಗೆ ಕೃತಕ ಸೌಂದರ್ಯ ವಿಧಾನಗಳಿಗೆ ಮೊರೆ ಹೋಗಿದ್ದರೂ, ಮುಖದಲ್ಲಿ ಆತ್ಮವಿಶ್ವಾಸದ ಕೊರತೆ ಕಾಡಿದರೆ, ಅದರಿಂದೇನೂ ಲಾಭ ಆಗದು. ಯಾರು ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಾರೋ ಅವರು ನಿಮ್ಮ ಕುಂದುಕೊರತೆಗಳನ್ನೂ ಸಹಜವಾಗಿಯೇ ಸ್ವೀಕರಿಸುತ್ತಾರೆ. ಯಾರದೋ ಎತ್ತರ ಕಡಿಮೆ ಆಗಿದ್ದರೆ ಕುಳ್ಳಿ ಕುಳ್ಳಿ ಎಂದು ಇತರರು ದೂಷಿಸಬಹುದು, ಆದರೆ ಇದಕ್ಕಾಗಿ ನೀವು ಕೃತಕವಾಗಿ ಎತ್ತರ ಏರಿಸಿಕೊಳ್ಳಲಾಗದು, ಅಂದ್ರೆ ನೀವು ಇದನ್ನು ಸಹಜವಾಗಿ ಒಪ್ಪಿಕೊಳ್ಳಲೇಬೇಕು. ಕೆಲವರು ಬೇಕೆಂದೇ ಇದಕ್ಕಾಗಿ ಅತಿ ಎತ್ತರದ ಪೆನ್ಸಿಲ್ ಹೀಲ್ಸ್ ಧರಿಸುತ್ತಾರೆ, ಆದರೆ ಇದರಿಂದ ಇವರ ಕಾಲು ಹಿಮ್ಮಡಿಗೆ ಹಿಂಸೆ ತಪ್ಪಿದ್ದಲ್ಲ, ತೊಡೆ ನಡುಕ ಹೆಚ್ಚುತ್ತದೆ. ಆಗ ಔಷಧಿಗೆ ಮೊರೆ ಹೋಗಬೇಕಾಗುತ್ತದೆ. ಇದಕ್ಕೆ ಬದಲಾಗಿ ನಿಮ್ಮ ಎತ್ತರ ಹೆಚ್ಚಾಗಿ ಕಂಡುಬರುವಂಥ ಡ್ರೆಸ್ ಧರಿಸುವುದು ಲೇಸು.
40+ ಹೆಂಗಸರು ತಮ್ಮನ್ನು ತಾವು 18+ ಆಗಿ ತೋರ್ಪಡಿಸಿಕೊಳ್ಳಲು ಬಯಸಿ, ಬ್ಯೂಟಿಪಾರ್ಲರ್ ನಿಂದ ಕೃತಕವಾಗಿ ಏನೋ ಮಾಡಿಕೊಳ್ಳಲು ಹೋದರೆ ಅದು ಹಾಸ್ಯಾಸ್ಪದವಾಗಿ ತೋರುತ್ತದೆ. ತಾವು ಅತಿ ಮಾಡ್‌ಗ್ಲಾಮ್ ಎಂದು ತೋರಿಸಿಕೊಳ್ಳಲು ಸ್ಮೋಕಿಂಗ್, ಡ್ರಿಂಕ್ಸ್ ಗೆ ದಾಸರಾಗುತ್ತಾರೆ. ಮನೆಯಿಂದ ಫುಲ್ ಡ್ರೆಸ್ಡ್ ಆಗಿ ಹೊರಟರೂ, ಪಾರ್ಟಿ ಸೇರುವ ಮುನ್ನ ಮಿನಿ ಡ್ರೆಸ್ ಗೆ ಬದಲಾಗುತ್ತಾರೆ. ಗಂಡಸರ ಗುಂಪಿನ ನಡುವೆ ನುಸುಳಿ, ಅವರನ್ನು ಆಕರ್ಷಿಸಲು, ಅನಗತ್ಯ ಅಂಗಾಂಗ ಪ್ರದರ್ಶನ ಮಾಡುತ್ತಾರೆ. ಅವರ ಈ ಕೃತಕ ಜೀವನ ಬಾಹ್ಯ ಪ್ರಪಂಚಕ್ಕೆ ಮಾತ್ರವಲ್ಲದೆ, ಆತ್ಮಸಾಕ್ಷಿಯನ್ನೂ ಅವರು ವಂಚಿಸಿಕೊಳ್ಳುತ್ತಿರುತ್ತಾರೆ. ಈ ರೀತಿ ಇಬ್ಬಗೆಯ ಜೀವನ ನಡೆಸುತ್ತಾರೆ. ತಮ್ಮ ಕುಟುಂಬಕ್ಕಾಗಿ ಒಂದು ಮುಖ, ಹೊರ ಪ್ರಪಂಚಕ್ಕಾಗಿ ಒಂದು ಮುಖ ಇರಿಸಿಕೊಳ್ಳುತ್ತಾರೆ. ಬಾಹ್ಯ ಆಡಂಬರಕ್ಕೆ ಹೆಚ್ಚು ಮಾನ್ಯತೆ ಕೊಡುತ್ತಾರೆಯೇ ವಿನಾ ಕೌಟುಂಬಿಕ ಜೀವನಕ್ಕಲ್ಲ.
ಹೀಗಾಗಿ ನೀವು ಹೇಗಿದ್ದೀರೋ ನಿಮ್ಮನ್ನು ಹಾಗೆಯೇ ಒಪ್ಪಿಕೊಳ್ಳಿ. ನಿಮ್ಮ ವಾಸ್ತವಿಕ ಬ್ಯೂಟಿ, ನಿಮ್ಮ ಮುಗುಳ್ನಗು, ನಿಮ್ಮ ವ್ಯಕ್ತಿತ್ವದಲ್ಲಿದೆ. ನಿಮ್ಮ ಕೆರಿಯರ್ ಗೆ ತಕ್ಕಂತೆ ನಿಮ್ಮ ಓವರ್ ಆಲ್ ಪರ್ಸನಾಲಿಟಿ ರೂಪಿಸಿಕೊಳ್ಳಿ.