ಸಾಮಾನ್ಯವಾಗಿ ಬೇಸಿಗೆಯಲ್ಲಿ ಚರ್ಮ ಆಯ್ಲಿ ಆಗುತ್ತದೆ. ಆದರೆ ಕೆಲವರಿಗೆ ಚರ್ಮ ನೈಸರ್ಗಿಕವಾಗಿ ಡ್ರೈ ಆಗಿರುತ್ತದೆ. ಅಂಥವರ ಚರ್ಮ ಬೇಸಿಗೆಯಲ್ಲಿ ಮತ್ತಷ್ಟು ಡ್ರೈ ಆಗತೊಡಗುತ್ತದೆ.

ಡ್ರೈ ಸ್ಕಿನ್‌ನ್ನು ಅರ್ಥ ಮಾಡಿಕೊಳ್ಳಬೇಕಾದರೆ ನೀವು ಮೊದಲು ನಾರ್ಮಲ್ ಸ್ಕಿನ್‌ ಬಗ್ಗೆ ತಿಳಿಯಬೇಕಾಗುತ್ತದೆ. ನಾರ್ಮಲ್ ಸ್ಕಿನ್‌ನಲ್ಲಿ ನೀರು ಮತ್ತು ಲಿಪಿಡ್‌ನ ಪ್ರಮಾಣ ಸಮತೋಲನವಾಗಿರುತ್ತದೆ. ಆದರೆ ಚರ್ಮದಲ್ಲಿ ನೀರು ಅಥವಾ ಫ್ಯಾಟ್‌ ಅಥವಾ ಇವೆರಡೂ ಅಂಶಗಳ ಪ್ರಮಾಣ ಕಡಿಮೆಯಾದಾಗ ಚರ್ಮ ಡ್ರೈ ಅಥವಾ ಶುಷ್ಕವಾಗತೊಡಗುತ್ತದೆ. ಇದರಿಂದ ಚರ್ಮದಲ್ಲಿ ನವೆ, ಸೀಳುವಿಕೆ, ಉದುರುವಿಕೆ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಸಾಮಾನ್ಯವಾಗಿ ಈ ಕೆಳಗಿನ ಭಾಗಗಳ ಚರ್ಮ ಶುಷ್ಕವಾಗುತ್ತದೆ :

ಕೈ ಕಾಲು : ಸಾಬೂನಿನಿಂದ ಮತ್ತೆ ಮತ್ತೆ ಕೈಕಾಲುಗಳನ್ನು ತೊಳೆಯುವುದರಿಂದ ಚರ್ಮ ಡ್ರೈ ಆಗತೊಡಗುತ್ತದೆ. ಧರಿಸಿದ ಬಟ್ಟೆಯ ಉಜ್ಜುವಿಕೆಯಿಂದಲೂ ಭುಜ ಮತ್ತು ತೊಡೆಗಳ ಚರ್ಮ ಡ್ರೈ ಆಗುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಟೈಟ್‌ ಫಿಟಿಂಗ್‌ ಉಡುಪುಗಳನ್ನು ಧರಿಸಬೇಡಿ.

ಮೊಣಕೈ ಮತ್ತು ಮಂಡಿ : ಹಿಮ್ಮಡಿ ಒಡೆಯುವಿಕೆಯು ಈ ಕಾಲದಲ್ಲಿ ಸಾಮಾನ್ಯ. ಬರಿಗಾಲಿನಲ್ಲಿ ನಡೆಯುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ. ಹಿಮ್ಮಡಿಗೆ ಮಾಯಿಶ್ಚರೈಸರ್‌ ಹಚ್ಚಿರಿ.

ಡ್ರೈ ಸ್ಕಿನ್‌ ಬಗ್ಗೆ ಗಮನ ಕೊಡದ್ದಿದರೆ ರಾಶೆಸ್‌, ಎಗ್ಸಿಮಾ, ಬ್ಯಾಕ್ಟೀರಿಯಲ್ ಇನ್‌ಫೆಕ್ಷನ್‌ ಮುಂತಾದ ಸಮಸ್ಯೆಗಳು ಎದುರಾಗಬಹುದು.

ಡ್ರೈ ಸ್ಕಿನ್‌ಗೆ ಕಾರಣ

ಬೇಸಿಗೆಯಲ್ಲಿ ಡ್ರೈ ಸ್ಕಿನ್‌ ಉಂಟಾಗಲು ಈ ಕೆಲವು ಕಾರಣಗಳಿರುತ್ತವೆ.

ಬೆವರು : ತ್ವಚೆಯ ಆರ್ದ್ರತೆಯನ್ನು ಕಾಪಾಡುವ ತೈಲಾಂಶ ಬೆವರಿನೊಂದಿಗೆ ಹರಿದು ಹೋಗುವುದರಿಂದ ತ್ವಚೆ ಶುಷ್ಕವಾಗುತ್ತದೆ.

ನೀರಿನ ಕೊರತೆ : ಬೇಸಿಗೆಯಲ್ಲಿ ನೀರಿನ ಸೇವನೆಯು ಕಡಿಮೆಯಾದಾಗ ಡೀಹೈಡ್ರೇಶನ್‌ ಆಗುತ್ತದೆ. ಶರೀರದಲ್ಲಿ ನೀರಿನ ಅಂಶ ಸರಿಯಾದ ಪ್ರಮಾಣದಲ್ಲಿ ಇರಲು ಸಾಕಷ್ಟು ನೀರು ಮತ್ತು ದ್ರವ ಪದಾರ್ಥಗಳನ್ನು ಸೇವಿಸಬೇಕು.

ಏರ್‌ ಕಂಡೀಶನರ್‌ : ತಂಪು ಹವೆಯಲ್ಲಿ ಆರ್ದ್ರತೆಯ ಪ್ರಮಾಣ ಕಡಿಮೆ ಇರುತ್ತದೆ. ಅದರಿಂದ ಚರ್ಮ ಡ್ರೈ ಆಗಬಹುದು. ಇದಲ್ಲದೆ, ತಂಪು ಗಾಳಿಯಿಂದ ಬಿಸಿ ಗಾಳಿಗೆ ಹೋದಾಗ ಬಿಸಿ ಗಾಳಿಯು ಚರ್ಮದ ಅಳಿದುಳಿದ ಆರ್ದ್ರತೆಯನ್ನೂ ಹೀರಿಕೊಳ್ಳುತ್ತದೆ. ಇದರಿಂದ ಚರ್ಮ ಡ್ರೈ ಆಗತೊಡಗುತ್ತದೆ.

ಮಜ್ಜನ : ಪದೇ ಪದೇ ಸ್ನಾನ ಮಾಡುವುದರಿಂದ ತ್ವಚೆಯ ತೈಲಾಂಶ ಹೋಗಿಬಿಡುತ್ತದೆ. ಇದಲ್ಲದೆ ಸ್ವಿಮಿಂಗ್‌ ಪೂಲ್‌ನಲ್ಲಿ ಈಜಿದಾಗ, ಅಲ್ಲಿರುವ ಕ್ಲೋರಿನ್‌ನಿಂದ ಚರ್ಮದ ನೈಸರ್ಗಿಕ ಸೀಬಮ್ ನಷ್ಟವಾಗುತ್ತದೆ. ಅದರಿಂದ ಚರ್ಮ ಆರ್ದ್ರತೆಯನ್ನು ಕಳೆದುಕೊಂಡು ಶುಷ್ಕವಾಗತೊಡಗುತ್ತದೆ.

ಡ್ರೈ ಸ್ಕಿನ್‌ನಿಂದ ರಕ್ಷಣೆ

ಚರ್ಮದ ಆರ್ದ್ರತೆಯನ್ನು ಹೀರಿಕೊಳ್ಳುವ ವಸ್ತುಗಳನ್ನು ದೂರ ಮಾಡಿ. ಉದಾ : ಆಲ್ಕೋಹಾಲ್, ಆ್ಯಸ್ಟ್ರಿಂಜೆಂಟ್‌ ಅಥವಾ ಹ್ಯಾಂಡ್‌ ಸ್ಯಾನಿಟೈಸಿಂಗ್‌ ಜೆಲ್.

– ಸ್ಟ್ರಾಂಗ್‌ ಸೋಪ್‌ ಅಥವಾ ಆ್ಯಂಟಿ ಬ್ಯಾಕ್ಟೀರಿಯಲ್ ಸೋಪ್‌ ಬಳಸಬೇಡಿ. ಏಕೆಂದರೆ ಅವು ಚರ್ಮದ ನೈಸರ್ಗಿಕ ತೈಲವನ್ನು ಹೀರಿಕೊಳ್ಳುತ್ತವೆ.

ದಿನ ಸ್ಕ್ರಬಿಂಗ್‌ ಮಾಡಬೇಡಿ. ವಾರದಲ್ಲಿ 1-2 ಸಲ  ಸ್ಕ್ರಬಿಂಗ್‌ ಮಾಡಿ.

– ಸನ್‌ಸ್ಕ್ರೀನ್‌ ಲೋಶನ್‌ ಹಚ್ಚಿಯೇ ಮನೆಯಿಂದ ಹೊರಗೆ ಹೋಗಿ. ಯುವಿ ಕಿರಣಗಳ ಸಂಪರ್ಕದಿಂದ ಫೋಟೋ ಏಜಿಂಗ್‌ ಸಮಸ್ಯೆ ಉಂಟಾಗಿ ಅದರಿಂದಲೂ ಡ್ರೈ ಸ್ಕಿನ್‌ ಆಗುತ್ತದೆ.

– ಲಿಪ್‌ ಬಾಮ್ ನಲ್ಲಿರುವ ಮೆಂಥಾಲ್ ಮತ್ತು ಕರ್ಪೂರದಂತಹ ವಸ್ತುಗಳು ತುಟಿಗಳ ಒಣಗುವಿಕೆಯನ್ನು ಹೆಚ್ಚಿಸುತ್ತವೆ.

– ಆಯಿಲ್ ಬೇಸ್ಡ್ ಮೇಕಪ್‌ ಬಳಸಬೇಡಿ. ಇದರಿಂದ ಚರ್ಮದ ರೋಮರಂಧ್ರಗಳು ಮುಚ್ಚಿಹೋಗುತ್ತವೆ.

– ಚರ್ಮದ ಟಿಶ್ಶೂಗಳ ರಿಪೇರಿಗೆ ಅವಶ್ಯಕವಾದ ವಿಟಮಿನ್‌ ಎ, ಮಾಲಿನ್ಯದಿಂದ ನಷ್ಟಗೊಳ್ಳುತ್ತದೆ. ಅದನ್ನು ತಡೆಯಲು ದಿನಕ್ಕೆ 4-5 ಸಲ ಹರ್ಬಲ್ ಫೇಸ್‌ವಾಶ್‌ನಿಂದ ಮುಖ ತೊಳೆಯಿರಿ.

– ವಯಸ್ಸು ಹೆಚ್ಚುತ್ತಿದ್ದಂತೆ ಚರ್ಮಕ್ಕೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ನಿಮ್ಮದು ಡ್ರೈ ಸ್ಕಿನ್‌ ಆಗಿದ್ದರೆ ಆ್ಯಂಟಿ ಏಜಿಂಗ್‌ ಮಾಯಿಶ್ಚರೈಸರ್‌ ಬಳಸಿ. ಅದರಿಂದ ಚರ್ಮದ ಬಿಗು ಉಳಿಯುತ್ತದೆ.

ಡ್ರೈ ಸ್ಕಿನ್‌ಗಾಗಿ ಆರೈಕೆ

ಆರೋಗ್ಯಕರ ಆಹಾರ : ಆ್ಯಂಟಿ ಆಕ್ಸಿಡೆಂಟ್‌ ಅಂಶ ಸಾಕಷ್ಟು ಪ್ರಮಾಣದಲ್ಲಿರುವಂಥ ಆಹಾರವನ್ನು ಸೇವಿಸಿ. ಇದರಿಂದ ಚರ್ಮದ ಆಯಿಲ್‌ ಮತ್ತು ಫ್ಯಾಟ್‌ ಪ್ರಮಾಣ ಸರಿಯಾಗಿದ್ದು, ಚರ್ಮ ಕೋಮಲವಾಗಿರುತ್ತದೆ. ಕಿತ್ತಳೆ, ಕೆಂಪು ದ್ರಾಕ್ಷಿ, ಬೆರೀಸ್‌, ಚೆರಿ, ಪಾಲಕ್, ಬ್ರೋಕ್ಲಿ ಇತ್ಯಾದಿ ಹಣ್ಣುಸೊಪ್ಪುಗಳು ಆ್ಯಂಟಿ ಆಕ್ಸಿಡೆಂಟ್ಸ್ನಿಂದ ಸಮೃದ್ಧವಾಗಿವೆ.

ಸನ್‌ಸ್ಕ್ರೀನ್‌ : ಎಲ್ಲ ಕಾಲದಲ್ಲಿಯೂ ಸನ್‌ಸ್ಕ್ರೀನ್‌ನ್ನು ಬಳಸುವುದು ಒಳ್ಳೆಯದು, ಏಕೆಂದರೆ ಯುವಿ ಕಿರಣಗಳು ಚರ್ಮಕ್ಕೆ ಹಾನಿಯನ್ನುಂಟು ಮಾಡುತ್ತವೆ.

ಎಕ್ಸ್ ಫಾಲಿಯೇಶನ್‌ : ಇದರಿಂದ ಡ್ರೈ ಸ್ಕಿನ್‌ನ ಮೇಲ್ಪದರ ನಿವಾರಣೆಯಾಗುತ್ತದೆ ಮತ್ತು ಚರ್ಮದ ಆರ್ದ್ರತೆ ಉಳಿದಿರುತ್ತದೆ.

ಮಾಯಿಶ್ಚರೈಸಿಂಗ್‌ : ಮುಖ ಮತ್ತು ಶರೀರದ ಚರ್ಮಕ್ಕೆ ಪ್ರತ್ಯೇಕ ಮಾಯಿಶ್ಚರೈಸರ್‌ನ ಅಗತ್ಯವಿರುತ್ತದೆ. ಮುಖದ ಮಾಯಿಶ್ಚರೈಸರ್‌ ಮೈಲ್ಡ್ ಆಗಿರಬೇಕು. ಶರೀರದ ಚರ್ಮಕ್ಕೆ ಆಯಿಲ್‌ ಬೇಸ್ಡ್ ಥಿಕ್‌ ಮಾಯಿಶ್ಚರೈಸರ್‌ ಸೂಕ್ತವಾಗಿರುತ್ತದೆ.

ಪಾದಗಳು : ಪಾದಗಳ ಬಗ್ಗೆ ಉದಾಸೀನತೆ ಬೇಡ. ಪಾದಗಳನ್ನು 10 ನಿಮಿಷಗಳ ಕಾಲ ಬೆಚ್ಚನೆಯ ನೀರಿನಲ್ಲಿ ಇರಿಸಿ. ನಂತರ ಸ್ಕ್ರಬಿಂಗ್‌ ಮಾಡಿ. ಆಮೇಲೆ ಫುಟ್‌ ಕ್ರೀಮ್ ಅಥವಾ ಮಿಲ್ಕ್ ಕ್ರೀಮ್ ಹಚ್ಚಿ. ಇದರಿಂದ ಪಾದಗಳ ಚರ್ಮ ಮೃದುವಾಗಿರುತ್ತದೆ.

ಮನೆ ಮದ್ದು

– ಕೊಬ್ಬರಿ ಎಣ್ಣೆಯಲ್ಲಿರುವ ಫ್ಯಾಟಿ ಆಸಿಡ್ಸ್ ಚರ್ಮಕ್ಕೆ ನೈಸರ್ಗಿಕ ಆರ್ದ್ರತೆ ನೀಡುತ್ತದೆ. ಮಲಗುವ ಮೊದಲು ಕೊಬ್ಬರಿ ಎಣ್ಣೆ ಹಚ್ಚಿ. ಸ್ನಾನದ ನಂತರ ಇದನ್ನು ಹಚ್ಚಬಹುದು.

– ಆಲಿವ್ ಆಯಿಲ್‌ನಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್ ಮತ್ತು ಫ್ಯಾಟಿ ಆಸಿಡ್ಸ್ ಚರ್ಮಕ್ಕೆ ಆರ್ದ್ರತೆ ಒದಗಿಸುತ್ತವೆ. ಇದು ಚರ್ಮಕ್ಕೆ ಮಾತ್ರವಲ್ಲದೆ ಕೂದಲು ಮತ್ತು ಉಗುರುಗಳಿಗೂ ಲಾಭದಾಯಕ.

– ಹಾಲು ಮಾಯಿಶ್ಚರೈಸರ್‌ನ ಕೆಲಸ ಮಾಡುತ್ತದೆ. ಹಾಲಿನಿಂದ ಚರ್ಮದ ನವೆ, ಊತ, ಶುಷ್ಕತೆಗಳು ದೂರವಾಗುತ್ತವೆ. ರೋಸ್‌ವಾಟರ್‌ ಅಥವಾ ನಿಂಬೆರಸವನ್ನು ಹಾಲಿಗೆ ಸೇರಿಸಿ ಹತ್ತಿಯಿಂದ ಚರ್ಮದ ಮೇಲೆ ಹಚ್ಚುವುದರಿಂದ ಚರ್ಮದ ಶುಷ್ಕತೆ ಹೋಗಿ ಕೋಮಲವಾಗುತ್ತದೆ.

– ಜೇನುತುಪ್ಪದಲ್ಲಿ ಕೆಲವು ವಿಟಮಿನ್‌ ಮತ್ತು ಮಿನರಲ್ಸ್ ಇದ್ದು, ಚರ್ಮಕ್ಕೆ ಉಪಯುಕ್ತವಾಗಿರುತ್ತದೆ. ಇದನ್ನು ಪರಂಗಿ, ಬಾಳೆಹಣ್ಣು ಅಥವಾ ಅವಕಾಡೋದೊಂದಿಗೆ ಸೇರಿಸಿ ಕೈಕಾಲುಗಳಿಗೆ ಹಚ್ಚಿ, 10 ನಿಮಿಷಗಳ ನಂತರ ತೊಳೆಯಿರಿ.

– ಯೋಗರ್ಟ್‌ ಚರ್ಮಕ್ಕೆ ಉತ್ತಮ ಮಾಯಿಶ್ಚರೈಸರ್‌ ಆಗಿದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್ ಮತ್ತು ಆ್ಯಂಟಿ ಇನ್‌ಫ್ಲಮೇಟರಿ ತತ್ವಗಳು ಚರ್ಮಕ್ಕೆ ಆರ್ದ್ರತೆ ನೀಡುತ್ತದೆ. ಇದರಲ್ಲಿರುವ ಲ್ಯಾಕ್ಟಿಕ್‌ ಆ್ಯಸಿಡ್‌ ಬ್ಯಾಕ್ಟೀರಿಯಾದಿಂದಲೂ ರಕ್ಷಣೆ ನೀಡಿ ಚರ್ಮದ ನವೆಯನ್ನು ದೂರ ಮಾಡುತ್ತದೆ. ಇದನ್ನು ಕಡಲೆಹಿಟ್ಟು, ಜೇನುತುಪ್ಪ ಮತ್ತು ನಿಂಬೆರಸದೊಂದಿಗೆ ಸೇರಿಸಿ ಚರ್ಮಕ್ಕೆ ಹಚ್ಚಿ. 10 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ.

– ಆ್ಯಲೋವೇರಾ ಚರ್ಮದ ಶುಷ್ಕತೆಯನ್ನು ಹೋಗಲಾಡಿಸುವುದರ ಜೊತೆಗೆ ಡೆಡ್‌ ಸೆಲ್ಸ್ ನ್ನು ಸಹ ನಿವಾರಿಸುತ್ತದೆ.

– ಓಟ್‌ಮೀಲ್‌ ಚರ್ಮದ ಮೇಲೆ ರಕ್ಷಣಾ ಪದರನ್ನು ರೂಪಿಸುತ್ತದೆ. ಬಾತ್‌ಟಬ್‌ಗೆ 1 ಕಪ್‌ ಪ್ಲೇನ್‌ ಓಟ್‌ಮೀಲ್‌ ಮತ್ತು ಲ್ಯಾವೆಂಡರ್‌ ಆಯಿಲ್‌ನ ಕೆಲವು ಹನಿಗಳನ್ನು ಹಾಕಿ ಸ್ನಾನ ಮಾಡುವುದರಿಂದ ಫ್ರೆಶ್‌ನೆಸ್‌ ಉಂಟಾಗುತ್ತದೆ. ಇದನ್ನು ಪಕ್ವವಾಗಿರುವ ಬಾಳೆಹಣ್ಣಿನೊಂದಿಗೆ ಸೇರಿಸಿ ಫೇಸ್‌ ಮಾಸ್ಕ್ ಮಾಡಿ ಮುಖಕ್ಕೆ ಹಚ್ಚಿ ಮತ್ತು 15 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ.

ಈ ವಿಧಾನಗಳನ್ನು ಅನುಸರಿಸಿದಾಗ ಬೇಸಿಗೆ ಕಾಲ ನಿಮ್ಮ ಪಾಲಿಗೆ ಹ್ಯಾಪಿ ಸಮ್ಮರ್‌ ಸೀಸನ್‌ ಆಗುತ್ತದೆ.

– ಡಾ. ಸರಳಾ ಭಟ್‌

Tags:
COMMENT