ತಲೆಯಲ್ಲಿ ಕೂದಲಿದ್ದು ಬಿಟ್ಟರೆ ಸೌಂದರ್ಯ ಎಂದು ಭಾವಿಸಬೇಡಿ, ಅದು ಆರೋಗ್ಯಕರಾಗಿರುವುದು ಅತ್ಯಂತ ಮುಖ್ಯ. ಕೂದಲಿನಿಂದ ಹೆಣ್ಣಿನ ವ್ಯಕ್ತಿತ್ವಕ್ಕೆ ಹೊಸತೊಂದು ಮೆರುಗು ಸಿಗುತ್ತದೆ. ತಲೆ ಹೊಟ್ಟು ಇದ್ದರೆ ಕೂದಲಿನ ಗುಣಮಟ್ಟ ಕೆಡುತ್ತದೆ.

ಆದರೆ ಬಾಳೆ, ಕಿತ್ತಳೆ, ಅವಕಾಡೋ, ಪರಂಗಿ ಹಣ್ಣುಗಳ ಪ್ಯಾಕ್‌ ಬಳಸಿ ತಲೆಗೆ ಪೇಸ್ಟ್ ಹಚ್ಚಿದರೆ, ಕೂದಲಿನ ಎಷ್ಟೋ ಸಮಸ್ಯೆಗಳು ತಗ್ಗುತ್ತವೆ. ಹೀಗಾಗಿ ನಿಮಗೆ ಉದ್ದ, ದಟ್ಟ, ಕಪ್ಪು, ಒತ್ತಾದ, ಸುಂದರ ಕೇಶರಾಶಿ ಬೇಕಿದ್ದರೆ ಈ ಫ್ರೂಟ್‌ ಹೇರ್‌ ಪ್ಯಾಕ್‌ ಬಳಸಿ ನೋಡಿ :

ಕೆಮಿಕಲ್ಸ್ ನಿಂದ ಕೆಟ್ಟ ಕೂದಲಿಗಾಗಿ : ಚೆನ್ನಾಗಿ ಕಳಿತ 1 ಬಾಳೆಹಣ್ಣನ್ನು ಕಿವುಚಿಡಿ. ಇದಕ್ಕೆ 1 ಚಮಚ  ನಿಂಬೆರಸ, 1 ಮೊಟ್ಟೆಯ ಹಳದಿ ಭಾಗ ಬೆರೆಸಿಕೊಳ್ಳಿ. ಈ ಪೇಸ್ಟ್ ನ್ನು ನೀಟಾಗಿ ಕೂದಲಿಗೆ ಹಚ್ಚಿಕೊಳ್ಳಿ. 15-20 ನಿಮಿಷ ಹಾಗೆ ಬಿಟ್ಟು, ಚೆನ್ನಾಗಿ ತಲೆಗೆ ತಿಕ್ಕಿ ತೊಳೆಯಿರಿ. ವಾರದಲ್ಲಿ 1 ಸಲ ಈ ಪ್ಯಾಕ್‌ ಬಳಸಿರಿ, ಇದರಿಂದ ಕೂದಲಿನ ಹೊಳಪು ಹೆಚ್ಚುತ್ತದೆ.

ಬಣ್ಣಗೆಟ್ಟ ಕೂದಲಿಗಾಗಿ : ನೀವು ಕೂದಲಿಗಾಗಿ ಬಗೆಬಗೆಯ ಬಣ್ಣ ಬಳಸಿದ್ದೀರಿ ಎಂದಿಟ್ಟುಕೊಳ್ಳಿ, ಆಗ ಪ್ರತಿ ಕೂದಲಿನ ತುದಿಯವರೆಗೂ ಅದರ ಗಾಢ ಪ್ರಭಾವ ಇದ್ದೇ ಇರುತ್ತದೆ. ಇದಕ್ಕೆ ನೀವು ಬಾಳೆಹಣ್ಣಿನ ಪ್ಯಾಕ್‌ಬಳಸಿರಿ. ಮಸೆದ ಬಾಳೆಹಣ್ಣಿಗೆ, 2 ಚಮಚ ಬೇವಿನೆಲೆಯ ಪೇಸ್ಟ್, 2 ಕಪ್‌ ಪರಂಗಿ ಹಣ್ಣಿನ ಪೇಟ್, ತುಸು ಬೆಚ್ಚಗಿನ ನೀರು ಬೆರೆಸಿ ಮಿಶ್ರಣ ಕಲಸಿಡಿ. ಇದನ್ನು ತಲೆಗೆ ಒತ್ತಿ, ಕೂದಲಿಗೂ ನೀಟಾಗಿ ಹಚ್ಚಬೇಕು. ಹಾಗೆ 30 ನಿಮಿಷ ಬಿಟ್ಟು ನಂತರ ತಲೆ ತೊಳೆಯಿರಿ. ಇದರಿಂದ ಕೂದಲಿನ ಹೊಳಪು ಹೆಚ್ಚುತ್ತದೆ. ಈ ರೀತಿ ಕೂದಲು ತೊಳೆದ ನಂತರ, ಮತ್ತೊಮ್ಮೆ ಸೀಗೆ, ಚಿಗರೆಪುಡಿ ಬೆರೆಸಿದ ಮಿಶ್ರಣ ಅಥವಾ ಹರ್ಬಲ್ ಶ್ಯಾಂಪೂನಿಂದ ತಲೆ ತೊಳೆಯಬೇಕು.

ಆಯ್ಲಿ ಕೂದಲಿಗಾಗಿ : ಅರ್ಧ ಕಪ್‌ಕಿತ್ತಳೆ ರಸ, 1 ದೊಡ್ಡ ಚಮಚ ತುಳಸಿ ರಸ, 1 ಕಪ್‌ ಮೊಸರು, ತುಸು ಬೆಟ್ಟದ ನೆಲ್ಲಿಕಾಯಿ ಪೇಸ್ಟ್ ಇತ್ಯಾದಿ ಎಲ್ಲವನ್ನೂ ಬೆರೆಸಿಕೊಂಡು, ತಲೆ ಕೂದಲಿಗೆ ಹಚ್ಚಿರಿ. ಇದರಿಂದ ತಲೆಯಲ್ಲಿನ ಪೋರ್ಸ್‌ ಕ್ಲೋಸ್‌ ಆಗುತ್ತದೆ. ಹೀಗಾಗಿ ಕೂದಲು ಜಿಡ್ಡು ಜಿಡ್ಡಾಗುವುದಿಲ್ಲ. ನಿಮ್ಮ ಕೂದಲು ಇನ್ನೂ ಹೆಚ್ಚು ಆಯ್ಲಿ ಎನಿಸಿದರೆ ತಿಂಗಳಿಗೆ 4-5 ಸಲ ಈ ಪ್ಯಾಕ್ ಅಗತ್ಯ ಬಳಸಿಕೊಳ್ಳಿ.

ಉದುರುತ್ತಿರುವ ಕೂದಲಿಗಾಗಿ : ನಿಮ್ಮ ಕೂದಲು ಸತತ ಉದುರುತ್ತಿದ್ದರೆ, ಮೆಂತ್ಯ ನೆನೆಸಿ ನೀಟಾಗಿ ಪೇಸ್ಟ್ ಮಾಡಿ. ಇದಕ್ಕೆ ಗ್ರೀನ್ ಟೀ ಬೆರೆಸಿಕೊಂಡು ತಲೆಗೆ ನಿಯಮಿತವಾಗಿ ಹಚ್ಚಿಕೊಳ್ಳಿ. ಇದಕ್ಕೆ ಮುಂಚೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಮೆಹಂದಿ ಬಳಸಬೇಡಿ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ರೆಡಿಮೇಡ್‌ ಮೆಹಂದಿ ಬಹಳ ಕೆಮಿಕಲ್ಸ್ ಯುಕ್ತ ಆಗಿರುತ್ತದೆ. ಇದು ಕೂದಲಿನ ಬುಡವನ್ನು ದುರ್ಬಲಗೊಳಿಸುತ್ತದೆ.

ತುರಿಕೆಯುಳ್ಳ ತಲೆಗಾಗಿ : ತಲೆ ಹೊಟ್ಟಿನ ಕಾರಣ ತಲೆಯಲ್ಲಿ ನವೆ, ತುರಿಕೆ ಹೆಚ್ಚಾದರೆ, ಅರ್ಧ ಕಪ್‌ನೆಲ್ಲಿ ರಸಕ್ಕೆ 1 ನಿಂಬೆಹಣ್ಣು ಹಿಂಡಿಕೊಳ್ಳಿ. ಜೊತೆಗೆ ತುಸು ಮೊಸರು ಬೆರೆಸಿಕೊಂಡು ಮಿಶ್ರಣ ಕಲಸಿಡಿ. ಇದನ್ನು ನೀಟಾಗಿ ತಲೆಗೆ ಹಚ್ಚಿ ತಿಕ್ಕಿರಿ. ಇದರಿಂದ ತಲೆ ಹೊಟ್ಟು ತೊಲಗುತ್ತದೆ, ನವೆ, ತುರಿಕೆಗಳಿಂದ ಮುಕ್ತಿ ಸಿಗುತ್ತದೆ. ಹೊಟ್ಟೆಯ ಅನಾರೋಗ್ಯದ ಕಾರಣ ತಲೆ ಹೊಟ್ಟು ಹೆಚ್ಚಬಹುದು. ಆದ್ದರಿಂದ ನಿಮ್ಮ ಆಹಾರದಲ್ಲಿ ಪೌಷ್ಟಿಕಾಂಶ ತುಂಬಿರಲಿ, ನಾರಿನಂಶ ಹೆಚ್ಚಾಗಿರಲಿ.

ನಿರ್ಜೀವ ಕೂದಲಿಗಾಗಿ : ಇದರ ಪ್ಯಾಕ್‌ಗಾಗಿ 1 ಕಪ್‌ ತೆಂಗಿನ ಹಾಲಿಗೆ, 1 ಚಮಚ ದಾಸವಾಳದ ಹೂವಿನ ಪೇಸ್ಟ್ (ಅಥವಾ ರೆಡಿಮೇಡ್‌ ಪೌಡರ್‌), ಅರ್ಧ ಕಪ್‌ ನಿಂಬೆ ರಸ, ಬಿಯರ್‌ ಬೆರೆಸಿ ಮಿಶ್ರಣ ತಯಾರಿಸಿ ಇದರಿಂದ ನಿರ್ಜೀವ ಕೂದಲು ತೊಳೆದರೆ, ಅದಕ್ಕೆ ಹೆಚ್ಚಿನ ಕಳೆ ಬರುತ್ತದೆ.

ಇವುಗಳ ಬಳಕೆ ಜೊತೆ ನಿಮ್ಮ ಜೀವನಶೈಲಿ ಸಹ ಸುಧಾರಿಸಿ. ಆರೋಗ್ಯಕರ ಜೀವನಶೈಲಿ ಹೆಲ್ದಿ ಕೂದಲಿಗೆ ಮೂಲಾಧಾರ!

 – ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ