ಇದೀಗ ಚಳಿಗಾಲ ಆರಂಭವಾಗಿದ್ದು, ಈ ಬಾರಿ ಎಂದಿಗಿಂತಲೂ ಚಳಿ ಹೆಚ್ಚೇ ಇದೆ. ಚಳಿಗಾಲದಲ್ಲಿ ಹಲವರಿಗೆ ಚರ್ಮದ ಸಮಸ್ಯೆಗಳು ತಲೆನೋವಾಗಿ ಪರಿಣಮಿಸುತ್ತವೆ.
ಚರ್ಮ ಒಣಗಿದಂತೆ ಆಗುವುದು, ಚರ್ಮದಲ್ಲಿ ತುರಿಕೆ ಕಾಣಿಸಿಕೊಳ್ಳುವುದು ಸಹ ಇರುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ನೀವು ಕೆಲವೊಂದು ಸಿಂಪಲ್ ಟಿಪ್ಸ್‌ಗಳನ್ನು ಅನುಸರಿಸಿದರೆ ಸಾಕು ಈ ಸಮಸ್ಯೆಗಳಿಂದ ದೂರವಿರಬಹುದು. ಚಳಿಗಾಲದಲ್ಲಿ ಚರ್ಮದ ರಕ್ಷಣೆ ಯಾವ ರೀತಿ ಇರಬೇಕು, ಒಣ ಚರ್ಮ ಆಗದಂತೆ ನೋಡಿಕೊಳ್ಳುವುದು ಹೇಗೆ ಎಂಬುದನ್ನು ನೋಡೋಣ.
ಚಳಿಗಾಲದಲ್ಲಿ ಎದುರಾಗುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಚರ್ಮದ ಸಮಸ್ಯೆಯೂ ಒಂದು. ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ಸಾಧ್ಯವಾದಷ್ಟು ಸೋಪ್ ಬಳಸದಿರುವುದು ಒಳ್ಳೆಯದು. ಚರ್ಮದ ರಕ್ಷಣೆಗೆ ಓಟ್ ಮೀಲ್ ಬಳಸಿ ಸ್ನಾನ ಮಾಡುವುದು ಹಾಗೂ ಸ್ನಾನ ಮಾಡುವ ಮುನ್ನ ತೆಂಗಿನ ಎಣ್ಣೆ ಹಚ್ಚಿಕೊಳ್ಳುವುದರಿಂದ ಚರ್ಮ ಒಣಗದಂತೆ ನೋಡಿಕೊಳ್ಳಬಹುದು.
ಚಳಿಗಾಲದಲ್ಲಿ ಸ್ನಾನ ಮಾಡುವಾಗ ಯಾವ ವಿಧಾನಗಳನ್ನು ಅನುಸರಿಸಬೇಕು ಹಾಗೂ ಚಳಿಗಾಲದಲ್ಲಿ ಚರ್ಮ ರಕ್ಷಣೆ ಮಾಡುವುದು ಹೇಗೆ ಎಂಬ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿವೆ.
ಚಳಿಗಾಲದಲ್ಲಿ ಚರ್ಮ ಒಣಗುವುದಕ್ಕೆ ಮುಖ್ಯ ಕಾರಣ ತಂಪಾಗಿ ಬೀಸುವ ಗಾಳಿಯು ಬೆಚ್ಚಗಿನ ಗಾಳಿಗಿಂತ ಕಡಿಮೆ ತೇವಾಂಶ ಹೊಂದಿರುತ್ತದೆ. ಅಲ್ಲದೆ ವಿಟಮಿನ್ ಡಿ, ವಿಟಮಿನ್ ಎ, ನಿಯಾಸಿನ್ ಹಾಗೂ ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾಗುವುದು ಸಹ ಚರ್ಮ ಒಣಗುವುದಕ್ಕೆ ಕಾರಣವಾಗುತ್ತದೆ.
ಬೇಗ ಸ್ನಾನ ಮುಗಿಸಿ:
ಚಳಿಗಾಲದಲ್ಲಿ ಬಿಸಿ ಬಿಸಿ ನೀರಿನಿಂದ ಹೆಚ್ಚು ಸಮಯ ಸ್ನಾನ ಮಾಡಬೇಕು ಎಂಬ ಆಸೆ ಬರುವುದು ಸಹಜ. ಆದರೆ ಚಳಿಗಾಲದಲ್ಲಿ ಹೆಚ್ಚು ಹೊತ್ತು ಸ್ನಾನ ಮಾಡುವುದರಿಂದ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಚರ್ಮದ ತೇವಾಂಶ ಕೊರತೆಗೆ ಇದು ಸಹ ಕಾರಣವಾಗುತ್ತದೆ. ಬಿಸಿ ನೀರಿನಿಂದ ಹೆಚ್ಚು ಸಮಯ ಸ್ನಾನ ಮಾಡುವುದರಿಂದ ಚರ್ಮ ಶುಷ್ಕವಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಬೇಗನೆ ಸ್ನಾನ ಮುಗಿಸುವ ಅಭ್ಯಾಸ ಮಾಡಿಕೊಳ್ಳಿ.
ಮಾಯಿಶ್ಚರೈಸರ್ ಬಳಸಿ:
ಚರ್ಮ ಒಣಗದಂತೆ ನೋಡಿಕೊಳ್ಳುವುದಕ್ಕೆ ಮುಖ್ಯವಾಗಿ ಆಗಾಗ ಮಾಯಿಶ್ಚರೈಸರ್ ಬಳಸಿ. ಸ್ನಾನ ಮಾಡಿದ 5 ರಿಂದ 10 ನಿಮಿಷಗಳ ನಂತರ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ. ಇದರಿಂದ ದೇಹವು ತೇವಾಂಶದಿಂದ ಕೂಡಿರುತ್ತದೆ. ಮಾಯಿಶ್ಚರೈಸರ್ ಅಥವಾ ಲೋಷನ್ ಬಳಸುವ ಮೂಲಕ ಒಣ ಚರ್ಮವನ್ನು ತಪ್ಪಿಸಬಹುದು.
ಸ್ವೆಟರ್ ಧರಿಸಿ:
ಈ ಸಮಯದಲ್ಲಿ ಸಾಧ್ಯವಾದಷ್ಟು ಕೈ ಕಾಲುಗಳು ಮುಚ್ಚುವಂತಹ ಬಟ್ಟೆಗಳನ್ನು ಧರಿಸಿ. ಸಂಜೆ ಅಥವಾ ರಾತ್ರಿ ಸಮಯದಲ್ಲಿ ಪ್ರಯಾಣ ಮಾಡುವುದಿದ್ದರೆ ತಪ್ಪದೆ, ಸ್ವೆಟರ್ ಹಾಗೂ ಕೈಗವಸುಗಳನ್ನು ಹಾಕಿಕೊಳ್ಳಿ. ರಾತ್ರಿ ಮಲಗುವ ಸಂದರ್ಭದಲ್ಲೂ ಬೆಚ್ಚಗಿನ ಅಥವಾ ದಪ್ಪನಾದ ಬೆಡ್‌ಶಿಟ್ ಹೊದ್ದು ಮಲಗಿ.
ಹೆಚ್ಚು ನೀರು ಕುಡಿಯಿರಿ:
ಚಳಿಗಾಲದಲ್ಲಿ ಹೆಚ್ಚು ನೀರು ಕುಡಿಯುವುದರಿಂದ ನಿಮ್ಮ ಚರ್ಮ ಒಣಗುವುದಿಲ್ಲ. ಸಾಮಾನ್ಯವಾಗಿ ಈ ಸಮಯದಲ್ಲಿ ಜನ ಹೆಚ್ಚು ನೀರು ಕುಡಿಯುವುದಿಲ್ಲ. ಬೇಸಿಗೆ ಸಮಯದಂತೆ ಈ ಸಮಯದಲ್ಲಿ ಬಾಯಾರಿಕೆಯೂ ಆಗದಿರುವುದು ಸಹ ಇದಕ್ಕೆ ಕಾರಣ. ಆದರೆ ಹೆಚ್ಚು ನೀರು ಕುಡಿಯುವುದರಿಂದ ದೇಹದಲ್ಲಿ ತೇವಾಂಶ ಹೆಚ್ಚಾಗಿರುತ್ತದೆ.