ಮಸೂರ್‌ದಾಲ್‌ ಸ್ಪೈಸ್‌ ಫಿಂಗರ್ಸ್‌

ಮೂಲ ಸಾಮಗ್ರಿ : ಅರ್ಧ ಕಪ್‌ ಮಸೂರ್‌ದಾಲ್, 1 ತುಂಡು ಶುಂಠಿ, 2-3 ಹಸಿಮೆಣಸು, ಅರ್ಧ ಚಮಚ ಜೀರಿಗೆ, 2 ಚಿಟಕಿ ಅರಿಶಿನ, 4 ಚಮಚ ರೀಫೈಂಡ್‌ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಇಂಗು.

ಇತರ ಸಾಮಗ್ರಿ : 4 ಚಮಚ ಕಾರ್ನ್‌ಫ್ಲೋರ್‌, ತುಸು ನೀರು, 2 ಚಿಟಕಿ ಪುಡಿಮೆಣಸು, ಅರ್ಧ ಕಪ್‌ ಬಿಳಿ ಎಳ್ಳು, ಕರಿಯಲು ಎಣ್ಣೆ, ಜೊತೆಗೆ ಟೊಮೇಟೊ ಸಾಸ್‌.

ವಿಧಾನ : ಮೊದಲು ಬೇಳೆಯನ್ನು 2 ಗಂಟೆ ಕಾಲ ನೀರಲ್ಲಿ ನೆನೆಹಾಕಿ. ನಂತರ ನೀರನ್ನು ಸೋಸಿಕೊಂಡು ಉಪ್ಪು, ಖಾರ, ಶುಂಠಿ, ಹಸಿಮೆಣಸುಗಳ ಜೊತೆ ಮಿಕ್ಸಿಯಲ್ಲಿ ತಿರುವಿಕೊಳ್ಳಿ. ಈ ಮಿಶ್ರಣಕ್ಕೆ 2 ಕಪ್‌ ನೀರು ಬೆರೆಸಿ ದೋಸೆ ಹಿಟ್ಟಿನಂತೆ ತೆಳು ಮಾಡಿಕೊಳ್ಳಿ. ಒಂದು ನಾನ್‌ಸ್ಟಿಕ್‌ ಬಾಣಲೆಯಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ ಜೀರಿಗೆ, ಇಂಗಿನ ಒಗ್ಗರಣೆ ಕೊಡಿ. ಇದಕ್ಕೆ ಅರಿಶಿನ ಹಾಕಿ, ಬೇಳೆ ಮಿಶ್ರಣ ಬೆರೆಸಿ ಮಂದ ಉರಿಯಲ್ಲಿ ಕೈಯಾಡಿಸಿ. ನಿಧಾನವಾಗಿ ಇದು ಗಟ್ಟಿ ಪದರವಾಗಿ ಕೂಡಿಕೊಳ್ಳುತ್ತದೆ. ಜಿಡ್ಡು ಸವರಿದ ತಟ್ಟೆಗೆ ಇದನ್ನು ಹರಡಿ ಆರಲು ಬಿಡಿ. ಆರಿದ ನಂತರ ಚಿತ್ರದಲ್ಲಿರುವಂತೆ ಆಕಾರ ಕೊಡಿ. ಕಾರ್ನ್‌ಫ್ಲೋರ್‌ಗೆ ತುಸು ನೀರು ಬೆರೆಸಿ ತೆಳು ಪೇಸ್ಟ್ ಮಾಡಿ. ಒಂದು ಪ್ಲೇಟ್‌ನಲ್ಲಿ ಬಿಳಿ ಎಳ್ಳು ಹರಡಿರಿ. ಪ್ರತಿ ಫಿಂಗರ್‌ನ್ನೂ ಮೊದಲು ಕಾರ್ನ್‌ಫ್ಲೋರ್‌ನಲ್ಲಿ ಡಿಪ್‌ ಮಾಡಿ, ಎಳ್ಳಲ್ಲಿ ಹೊರಳಿಸಿ. ಹೀಗೆ ಎಲ್ಲವನ್ನೂ ಸಿದ್ಧಪಡಿಸಿಕೊಂಡು ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಇದೀಗ ಸ್ಪೈಸಿ ದಾಲ್ ಫಿಂಗರ್ಸ್‌ ರೆಡಿ! ಸಂಜೆ ಕಾಫಿ, ಟೀ ಸಮಯದಲ್ಲಿ ಇದನ್ನು ಸಾಸ್‌ ಜೊತೆ ಸವಿಯಲು ಕೊಡಿ.

ತೊಗರಿಬೇಳೆಯ ಗಟ್ಟಿ ವಡೆ

ಮೂಲ ಸಾಮಗ್ರಿ : ಅರ್ಧ ಕಪ್‌ ತೊಗರಿಬೇಳೆ, 1 ತುಂಡು ಶುಂಠಿ, 1-2 ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಇಂಗು, ಅಮ್ಚೂರ್‌ಪುಡಿ, ಅರ್ಧರ್ಧ ಚಮಚ ಜೀರಿಗೆ, ಸೋಂಪು, 2 ಚಿಟಕಿ ಅರಿಶಿನ, ಅರ್ಧ ಸೌಟು ರೀಫೈಂಡ್‌ ಎಣ್ಣೆ.

ಒಗ್ಗರಣೆಗೆ ಸಾಮಗ್ರಿ : 2 ಚಮಚ ನೈಲಾನ್‌ ಎಳ್ಳು, ರುಚಿಗೆ ತಕ್ಕಷ್ಟು ಚಾಟ್‌ಮಸಾಲ, 2 ಚಮಚ ರೀಫೈಂಡ್‌ ಎಣ್ಣೆ.

ವಿಧಾನ : ಬೇಳೆಯನ್ನು 3 ಗಂಟೆ ಕಾಲ ನೆನೆಹಾಕಿ. ನಂತರ ನೀರು ಸೋಸಿಕೊಂಡು ಶುಂಠಿ, ಹಸಿಮೆಣಸಿನ ಜೊತೆ ತುಸು ತರಿತರಿಯಾಗಿ ತಿರುವಿಕೊಳ್ಳಿ. ಆಮೇಲೆ ಇದಕ್ಕೆ ಎಣ್ಣೆ ಬಿಟ್ಟು ಉಳಿದೆಲ್ಲ ಸಾಮಗ್ರಿ ಬೆರೆಸಿಕೊಳ್ಳಿ. ನಂತರ ಕೋಡುಬಳೆ, ನಿಪ್ಪಟ್ಟಿಗಿಂತಲೂ ತುಸು ಗಟ್ಟಿಯಾದ ಮಿಶ್ರಣ ಮಾಡಿ ಎಣ್ಣೆ ಕೈಯಿಂದ ನಾದಿಕೊಳ್ಳಿ. ಇದನ್ನು ಸುರುಳಿ ಮಾಡಿ, ಮಧ್ಯೆ ಒಂದು ಸ್ಟೀಲ್ ಕಡ್ಡಿ ತೂರಿಸಿ, 10 ನಿಮಿಷ ಹಬೆಯಲ್ಲಿ ಬೇಯಿಸಿ. ಕೆಳಗಿಳಿಸಿ ಆರಿದ ಮೇಲೆ ಅರ್ಧ ಇಂಚು ತುಂಡುಗಳಾಗಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಕತ್ತರಿಸಿದ ತುಂಡುಗಳನ್ನು ಎಳ್ಳಿನಲ್ಲಿ ಹೊರಳಿಸಿ, ಈ ಬಾಣಲೆಗೆ ಹಾಕಿ ಶ್ಯಾಲೋ ಫ್ರೈ ಮಾಡಿ. ಅದರ ಮೇಲೆ ಚಾಟ್‌ಮಸಾಲ ಉದುರಿಸಿ, ಗಟ್ಟಿ ವಡೆ ಸವಿಯಲು ಕೊಡಿ.

ಹಾಗಲ ಉದ್ದಿನ ಪೂರಿ

ಸಾಮಗ್ರಿ : ಮಧ್ಯಮ ಗಾತ್ರದ 3 ಹಾಗಲಕಾಯಿ, ಅರ್ಧ ಕಪ್‌ ಉದ್ದಿನಬೇಳೆ, 1 ತುಂಡು ಶುಂಠಿ, 2 ಹಸಿಮೆಣಸು, ಅರ್ಧರ್ಧ ಚಮಚ ಜೀರಿಗೆ, ಧನಿಯಾಪುಡಿ, ಸೋಂಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಮೊಸರು, 1 ಕಪ್‌ ಗೋಧಿಹಿಟ್ಟು, ಅರ್ಧ ಕಪ್‌ ಕಡಲೆಹಿಟ್ಟು, ಕರಿಯಲು ಎಣ್ಣೆ.

ವಿಧಾನ : ಹಾಗಲಕಾಯಿ ಶುಚಿಗೊಳಿಸಿ, ಬೀಜ ತೆಗೆದು ನೀಟಾಗಿ ತುರಿದಿಡಿ. ಉದ್ದಿನಬೇಳೆ ನೆನೆಹಾಕಿಡಿ. ನೀರು ಸೋಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಉಳಿದೆಲ್ಲ ಸಾಮಗ್ರಿ ಸೇರಿಸಿ ಮೃದುವಾದ ಪೂರಿ ಹಿಟ್ಟು ಕಲಸಿಡಿ. ಅರ್ಧ ಗಂಟೆ ಹಾಗೇ ನೆನೆಯಲು ಬಿಡಿ. ಮತ್ತೆ ತುಪ್ಪ ಬೆರೆಸಿ ನಾದಿಕೊಳ್ಳಿ. ಇದರಿಂದ ಸಣ್ಣ ಉಂಡೆ ಮಾಡಿ, ಲಟ್ಟಿಸಿ, ಕಾದ ಎಣ್ಣೆಯಲ್ಲಿ ಪೂರಿಗಳಾಗಿ ಕರಿಯಿರಿ. ಈ ಪೂರಿಗಳು ಬೇರೆಯ ತರಹ ಉಬ್ಬುವುದಿಲ್ಲ. ಆದಷ್ಟೂ ಗರಿಗರಿಯಾಗಿ ಬರುವಂತೆ ಕರಿಯಿರಿ. ಇದನ್ನು ಆಲೂ ಪಲ್ಯ ಜೊತೆ ಬಿಸಿಯಾಗಿ ಸವಿಯಲು ಕೊಡಿ.

ಬಟಾಣಿ ಕಡಲೆಕಾಳಿನ ತೊವ್ವೆ

ಸಾಮಗ್ರಿ : ಅರ್ಧರ್ಧ ಕಪ್‌ ಒಣ ಬಟಾಣಿ, ಕಾಬೂಲ್‌ ಕಡಲೆಕಾಳು, 1-1 ಚಮಚ ಹೆಚ್ಚಿದ ಶುಂಠಿ, ಹಸಿ ಮೆಣಸು, ಅರ್ಧ ಕಪ್‌ ಟೊಮೇಟೊ ಪ್ಯೂರಿ, 2 ಚಿಟಕಿ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್‌ಮಸಾಲ, ಗರಂಮಸಾಲ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, 2 ಈರುಳ್ಳಿ, ಅರ್ಧ ಚಮಚ ಜೀರಿಗೆ, ಅರ್ಧ ಸೌಟು ತುಪ್ಪ.

ವಿಧಾನ : ಹಿಂದಿನ ರಾತ್ರಿ ಕಾಳು-ಬಟಾಣಿ ನೆನೆಹಾಕಿ ಮಾರನೇ ಬೆಳಗ್ಗೆ ಕುಕ್ಕರ್‌ನಲ್ಲಿ ಹದವಾಗಿ ಬೇಯಿಸಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು ಜೀರಿಗೆ ಒಗ್ಗರಣೆ ಕೊಡಿ. ನಂತರ ಶುಂಠಿ, ಹಸಿಮೆಣಸು, ಹೆಚ್ಚಿದ ಈರುಳ್ಳಿ, ಕರಿಬೇವು ಹಾಕಿ ಬಾಡಿಸಿ. ನಂತರ ಟೊಮೇಟೊ ಪ್ಯೂರಿ, ಉಪ್ಪು, ಅರಿಶಿನ, ಉಳಿದ ಮಸಾಲೆ ಹಾಕಿ ಕೆದಕಬೇಕು. ಇದಕ್ಕೆ ಬೆಂದ ಕಾಳು-ಬಟಾಣಿ (ನೀರಿನ ಸಮೇತ) ಹಾಕಿ ಮಂದ ಉರಿಯಲ್ಲಿ ಕೈಯಾಡಿಸಿ. ಚೆನ್ನಾಗಿ ಕುದ್ದ ಮೇಲೆ ಕೆಳಗಿಳಿಸಿ. ಕೊ.ಸೊಪ್ಪು ಉದುರಿಸಿ. ಬಿಸಿ ಬಿಸಿಯಾದ ಈ ತೊವ್ವೆ ಚಪಾತಿ, ರೊಟ್ಟಿಗಳಿಗೆ ಹೆಚ್ಚು ಸೂಕ್ತ.

ಉದ್ದು-ಹೆಸರುಕಾಳಿನ ಗ್ರೇವಿ

ಮೂಲ ಸಾಮಗ್ರಿ : ಉದ್ದಿನ ಕಾಳು (ಸಿಪ್ಪೆ ಬಿಡಿಸದ ಕಪ್ಪು ಬಣ್ಣದ್ದು) ಹೆಸರುಕಾಳು (ಅರ್ಧರ್ಧ ಕಪ್‌), 4 ಚಮಚ ಕಡಲೆಬೇಳೆ, 2-3 ಹುಳಿ ಟೊಮೇಟೊ, 1 ತುಂಡು ಶುಂಠಿ, 7-8 ಎಸಳು ಬೆಳ್ಳುಳ್ಳಿ, 1-2 ಈರುಳ್ಳಿ, 2-3 ಹಸಿ ಮೆಣಸು, 1 ದೊಡ್ಡ ಕ್ಯಾರೆಟ್‌, 1 ಪುಟ್ಟ ಹೂಕೋಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರ್ಧ ಸೌಟು ರೀಫೈಂಡ್‌ ಎಣ್ಣೆ.

ಒಗ್ಗರಣೆ ಸಾಮಗ್ರಿ : 3 ಚಮಚ ತುಪ್ಪ, ಅರ್ಧರ್ಧ ಚಮಚ ಜೀರಿಗೆ, ಗರಂಮಸಾಲ, ಪುಡಿಮೆಣಸು, ಕಸೂರಿಮೇಥಿ, ಅರ್ಧ ಕಪ್‌ ಟೊಮೇಟೊ ಪ್ಯೂರಿ, ಒಂದಿಷ್ಟು ಹೆಚ್ಚಿದ ಕರಿಬೇವು, ಕೊ.ಸೊಪ್ಪು.

ವಿಧಾನ : 2-3 ತಾಸು ಹೆಸರು, ಉದ್ದು, ಕಡಲೆ ನೆನೆಹಾಕಿ, ಕುಕ್ಕರ್‌ನಲ್ಲಿ ಬೇಯಿಸಿ. ಬಾಣಲೆಯಲ್ಲಿ ರೀಫೈಂಡ್‌ ಎಣ್ಣೆ ಬಿಸಿ ಮಾಡಿ ಹೆಚ್ಚಿದ ಶುಂಠಿ, ಹಸಿ ಮೆಣಸು, ಬೆಳ್ಳುಳ್ಳಿ ಆಮೇಲೆ ಈರುಳ್ಳಿ ಹಾಕಿ ಬಾಡಿಸಿ. ಹೆಚ್ಚಿದ ಹೂಕೋಸು ಹಾಕಿ ಬಾಡಿಸಿ. ಆಮೇಲೆ ತುರಿದ ಕ್ಯಾರೆಟ್‌ ಸೇರಿಸಿ ಕೆದಕಬೇಕು. ನಂತರ ಹೆಚ್ಚಿದ ಟೊಮೇಟೊ ಹಾಕಿ ಬಾಡಿಸಿ. ನಂತರ ಉಪ್ಪು, ಖಾರ, ಅರಿಶಿನ ಸೇರಿಸಿ. ಕೊನೆಯಲ್ಲಿ ಬೆಂದ ಹೆಸರು-ಉದ್ದುಗಳನ್ನು ನೀರಿನ ಸಮೇತ ಹಾಕಿ ಕುದಿಸಿ. ಗ್ರೇವಿ ಗಟ್ಟಿಯಾದಾಗ ಕೆಳಗಿಳಿಸಿ, ಹೆಚ್ಚಿದ ಕೊ.ಸೊಪ್ಪು ಉದುರಿಸಿ. ಪಕ್ಕದ ಚಿಕ್ಕ ಒಲೆಯಲ್ಲಿ ಸಣ್ಣ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಒಗ್ಗರಣೆ ಪದಾರ್ಥ ಹಾಕಿ ಕೆದಕಿ, ಈ ಗ್ರೇವಿಗೆ  ಬೆರೆಸಬೇಕು. ಬಿಸಿಯಾದ ಇದನ್ನು ಅನ್ನ, ಚಪಾತಿ, ಪೂರಿಗಳಿಗೆ ಬಳಸಿಕೊಳ್ಳಿ.

ಮಸೂರ್‌ ದಾಲ್‌ ಕಬಾಬ್‌

ಸಾಮಗ್ರಿ : ಅರ್ಧ ಕಪ್‌ ಮಸೂರ್‌ ದಾಲ್‌, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಪೇಸ್ಟ್ (ಒಟ್ಟಾರೆ 2 ಚಮಚ), ಅರ್ಧರ್ಧ ಕಪ್‌ ಬ್ರೆಡ್‌ ಕ್ರಂಬ್ಸ್, ತುರಿದ ಪನೀರ್‌, 2-3 ಈರುಳ್ಳಿ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, 2 ಚಮಚ ಹುರಿಗಡಲೆಯ ಪುಡಿ, 1 ಸೌಟು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಚಾಟ್‌ಮಸಾಲ.

ವಿಧಾನ : ಬೇಳೆಯನ್ನು 2 ತಾಸು ನೆನೆಹಾಕಿ, ನಂತರ ಕುಕ್ಕರ್‌ನಲ್ಲಿ ಕನಿಷ್ಠ ನೀರು ಬಳಸಿ ಹದನಾಗಿ ಬೇಯಿಸಿ ಕೆಳಗಿಳಿಸಿ. ಆರಿದ ನಂತರ ಮಂತಿನಿಂದ ಚೆನ್ನಾಗಿ ಮಸೆಯಿರಿ. ಆಮೇಲೆ ಇದಕ್ಕೆ ಉಳಿದ ಪದಾರ್ಥಗಳನ್ನು ಹೆಚ್ಚಿ ಹಾಕಿ, ಎಲ್ಲನ್ನೂ ಚೆನ್ನಾಗಿ ಬೆರೆಸಿಕೊಂಡು ವಡೆಯ ಮಿಶ್ರಣ ಕಲಸಿಡಿ. ಇದರಿಂದ ಚಿತ್ರದಲ್ಲಿರುವಂಥ ಆಕಾರದಲ್ಲಿ ತಟ್ಟಿಕೊಂಡು, ಬ್ರೆಡ್‌ ಕ್ರಂಬ್ಸ್ ನಲ್ಲಿ ಹೊರಳಿಸಿ, ಬಾಣಲೆಗೆ ಹಾಕಿ ಶ್ಯಾಲೋ ಫ್ರೈ ಮಾಡಿ. ಚಿತ್ರದಲ್ಲಿರುವಂತೆ ಎಲೆಕೋಸು, ಈರುಳ್ಳಿ ಜೊತೆ ಅಲಂಕರಿಸಿ. ಟೊಮೇಟೊ ಸಾಸ್‌ ಜೊತೆ ಸವಿಯಲು ಕೊಡಿ.

ಕಡಲೆಕಾಳಿನ ವಡೆ

ಸಾಮಗ್ರಿ : 1 ಕಪ್‌ ಕಡಲೆಕಾಳು, 1 ಆಲೂಗಡ್ಡೆ (ಬೇಯಿಸಿ ಮಸೆದಿಡಿ), 3-4 ಚಮಚ ಅಕ್ಕಿಹಿಟ್ಟು, 1 ಕಪ್‌ ಬ್ರೆಡ್‌ ಕ್ರಂಬ್ಸ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್‌ಮಸಾಲ, ಅಮ್ಚೂರ್‌ಪುಡಿ, ಕರಿಯಲು ಎಣ್ಣೆ.

ವಿಧಾನ : ಹಿಂದಿನ ಸಂಜೆ ಕಡಲೆಕಾಳು ನೆನೆಹಾಕಿ, ಮಾರನೇ ದಿನ ಶುಚಿಗೊಳಿಸಿ, ಕುಕ್ಕರ್‌ನಲ್ಲಿ ಬೇಯಿಸಿ. ಇದು ಆರಿದ ನಂತರ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಉಳಿದೆಲ್ಲ ಸಾಮಗ್ರಿ ಬೆರೆಸಿ, ವಡೆಯ ಮಿಶ್ರಣ ಕಲಸಿಡಿ. ನಂತರ ಸಣ್ಣ ಉಂಡೆಗಳಾಗಿಸಿ ಜಿಡ್ಡು ಸವರಿದ ಅಂಗೈ ಮೇಲೆ ತಟ್ಟಿ, ಕಾದ ಎಣ್ಣೆಯಲ್ಲಿ ಗರಿಗರಿ ಬರುವಂತೆ ವಡೆಗಳನ್ನು ಕರಿಯಿರಿ. ಇದನ್ನು ಪುದೀನಾ ಚಟ್ನಿ, ಟೊಮೇಟೊ ಸಾಸ್‌ ಜೊತೆ ಸವಿಯಿರಿ.

ಹೆಸರುಬೇಳೆ ಶ್ಯಾವಿಗೆ ಖೀರು

ಸಾಮಗ್ರಿ : ಅರ್ಧ ಕಪ್‌ ಹೆಸರುಬೇಳೆ, 1 ಕಪ್‌ (ತುಪ್ಪದಲ್ಲಿ ಹುರಿದು ತುಂಡರಿಸಿದ) ಶ್ಯಾವಿಗೆ, 1 ಲೀ. ಗಟ್ಟಿ ಹಾಲು, 2 ಕಪ್‌ ಸಕ್ಕರೆ, 2 ಚಿಟಕಿ ಏಲಕ್ಕಿ ಪುಡಿ, 1 ಚಿಟಕಿ ಪಚ್ಚಕರ್ಪೂರ, ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ ಚೂರು (ಒಟ್ಟಾಗಿ 1 ಕಪ್‌), ಅಗತ್ಯವಿದ್ದಷ್ಟು ತುಪ್ಪ, ಸಣ್ಣಗೆ ತುಂಡರಿಸಿದ ಖರ್ಜೂರ.

ವಿಧಾನ : ಮೊದಲು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಗೋಡಂಬಿ-ದ್ರಾಕ್ಷಿಗಳನ್ನು ಹುರಿದು ಪಕ್ಕಕ್ಕಿಡಿ. ಈಗ ಇದರಲ್ಲಿ ಹೆಸರುಬೇಳೆಯನ್ನು ಲಘುವಾಗಿ ಹುರಿದು, ಕುಕ್ಕರ್‌ನಲ್ಲಿ ಬೇಯಿಸಿ. ದಪ್ಪ ತಳದ ಸ್ಟೀಲ್‌ ಪಾತ್ರೆಯಲ್ಲಿ ಶ್ಯಾವಿಗೆಯನ್ನು ಅರ್ಧ ಲೀ. ಹಾಲಿನಲ್ಲಿ ಬೇಯಿಸಿ. ಮತ್ತೊಂದು ಪಾತ್ರೆಯಲ್ಲಿ ಉಳಿದ ಹಾಲು ಬಿಸಿ ಮಾಡಿ. ಇದಕ್ಕೆ ಸಕ್ಕರೆ ಹಾಕಿ ಮಂದ ಉರಿಯಲ್ಲಿ ಕುದಿಸಿ. ನಂತರ ಏಲಕ್ಕಿ, ಪಚ್ಚಕರ್ಪೂರ ಹಾಕಿ ಕೈಯಾಡಿಸಿ. ಬೆಂದ ಬೇಳೆಯನ್ನು ಮಂತಿನಲ್ಲಿ ಮಸೆದು ಇದಕ್ಕೆ ಸೇರಿಸಿ, ಆಮೇಲೆ ಶ್ಯಾವಿಗೆ ಸೇರಿಸಿ. 1-2 ಕುದಿ ಬರಿಸಿ. ಕೆಳಗಿಳಿಸುವಾಗ ಗೋಡಂಬಿ-ದ್ರಾಕ್ಷಿ ಸೇರಿಸಿ. ಸರ್ವ್ ಮಾಡುವ ಮುನ್ನ ಇನ್ನಷ್ಟು ಹಾಲು ಬೆರೆಸಿ, ಬಿಸಿಬಿಸಿಯಾಗಿ ಕೊಡಿ.

ಸ್ಪೆಷಲ್ ರವೆ ಪೊಂಗಲ್

ಸಾಮಗ್ರಿ : 1 ಕಪ್‌ ಹೆಸರುಬೇಳೆ, 2 ಕಪ್‌ ರವೆ, 15-20 ಕಾಳು ಮೆಣಸು, 1 ದೊಡ್ಡ ತುಂಡು ಶುಂಠಿ, 2-3 ಎಸಳು ಕರಿಬೇವು, 4-5 ಹಸಿಮೆಣಸು, 1 ಗಿಟುಕು ಕೊಬ್ಬರಿ ತುರಿ, ಅರ್ಧರ್ಧ ಕಪ್‌ ಗೋಡಂಬಿ ಚೂರು, ತುಪ್ಪ, ರುಚಿಗೆ ಉಪ್ಪು.

ವಿಧಾನ : ಮೊದಲು ಬಾಣಲೆಯಲ್ಲಿ ಹೆಸರು ಬೇಳೆಯನ್ನು ತುಪ್ಪದಲ್ಲಿ ಹುರಿದು ಚಿಕ್ಕ ಕುಕ್ಕರ್‌ನಲ್ಲಿ ಬೇಯಿಸಿ. ಅದೇ ಬಾಣಲೆಯಲ್ಲಿ ರವೆಯನ್ನು ಘಮ್ಮೆನ್ನುಂತೆ ಹುರಿದು ಪಕ್ಕಕ್ಕಿಡಿ. ತುಪ್ಪ ಬಿಸಿ ಮಾಡಿ, ಅದರಲ್ಲಿ ಜೀರಿಗೆ, ಮೆಣಸು, ಇಂಗಿನ ಒಗ್ಗರಣೆ ಕೊಡಿ. ಇದಕ್ಕೆ ಹೆಚ್ಚಿದ ಹಸಿ ಮೆಣಸು, ಕರಿಬೇವು, ಶುಂಠಿ ಹಾಕಿ ಕೆದಕಬೇಕು. ಆಮೇಲೆ ತುರಿದ ಕೊಬ್ಬರಿ ಸೇರಿಸಿ. ಬೆಂದ ಬೇಳೆ ಹಾಕಿ, ಉಪ್ಪು ಸೇರಿಸಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಬೇಳೆಯ ನೀರು ಗಮನಿಸಿಕೊಂಡು ರವೆಗೆ ಹೊಂದುವಂತೆ 1-2 ಕಪ್‌ ನೀರು ಹಾಕಿ ಕುದಿಸಿ. ಇದಕ್ಕೆ ಎಡಗೈಯಿಂದ ರವೆ ಬೆರೆಸುತ್ತಾ, ಗಂಟಾಗದಂತೆ ಕೆದುಕುತ್ತಿರಬೇಕು, ಮಂದ ಉರಿ ಇರಲಿ. ನಡುನಡುವೆ ತುಪ್ಪ ಬೆರೆಸುತ್ತಾ, ಕೊನೆಯಲ್ಲಿ ತುಪ್ಪುದಲ್ಲಿ ಹುರಿದ ಗೋಡಂಬಿ ಸೇರಿಸಿ ಕೆದಕಿ ಕೆಳಗಿಳಿಸಿ. ಬಿಸಿ ಇರುವಾಗಲೇ ಇದಕ್ಕೆ ತುಪ್ಪ ಬೆರೆಸಿ, ಶುಂಠಿ ಚಟ್ನಿ ಜೊತೆ ಸವಿಯಿರಿ.

COMMENT