ಕ್ಯಾಂಡಿಡ್‌ ನಟ್‌

ಸಾಮಗ್ರಿ : 250 ಗ್ರಾಂ ಉತ್ತಮ ಗುಣಮಟ್ಟದ ಇಡಿಯಾದ ಗೋಡಂಬಿ, 2 ಚಿಟಕಿ ಏಲಕ್ಕಿಪುಡಿ, 4 ಚಮಚ ಪುಡಿಸಕ್ಕರೆ, 1 ಸಣ್ಣ ಚಮಚ ಹಸಿಶುಂಠಿ ರಸ, ಕರಿಯಲು ಅಗತ್ಯವಿದ್ದಷ್ಟು ತುಪ್ಪ, 1 ಸಣ್ಣ ಚಮಚ ವೆನಿಲಾ ಎಸೆನ್ಸ್.

ವಿಧಾನ : ಮೊದಲು ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ಗೋಡಂಬಿ ನೆನೆಸಿಡಿ. ನಂತರ ನೀರನ್ನು ಬಸಿದು, ಒದ್ದೆ ಗೋಡಂಬಿ ಮೇಲೆ ಪುಡಿ ಸಕ್ಕರೆ ಉದುರಿಸಿ, ಚೆನ್ನಾಗಿ ಮೆತ್ತಿಕೊಳ್ಳುವಂತೆ ಮಾಡಿ. ಒಂದು ದಪ್ಪ ತಳದ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಇದಕ್ಕೆ ಗೋಡಂಬಿ ಹಾಕಿ ಕರಿದು ತೆಗೆಯಿರಿ. ನಂತರ ಇದರ ಮೇಲೆ  ಶುಂಠಿರಸ, ವೆನಿಲಾ ಎಸೆನ್ಸ್ ಏಲಕ್ಕಿಪುಡಿ ಉದುರಿಸಿ, ಪ್ರೀಹೀಟೆಡ್‌ ಓವನ್‌ನಲ್ಲಿ 180 ಡಿಗ್ರಿ ಶಾಖದಲ್ಲಿ 5 ನಿಮಿಷ ಬೇಕ್‌ ಮಾಡಿ ಹೊರ ತೆಗೆಯಿರಿ.

recepi-double

ಬೋರ್ನ್‌ವೀಟಾ ರೈಪಲ್

ಸಾಮಗ್ರಿ : 250 ಗ್ರಾಂ ರಸಭರಿತ ಒಣದ್ರಾಕ್ಷಿ, 100 ಗ್ರಾಂ ಚಾಕಲೇಟ್‌, 2 ಚಮಚ ಬೋರ್ನ್‌ವಿಟಾ, ಒಂದಿಷ್ಟು ಬೆಳ್ಳಿರೇಕು (ಎಡಿಬಲ್ ಸಿಲ್ವರ್‌ ಫಾಯಿಲ್‌).

ವಿಧಾನ : ತುಸು ತಣ್ಣಗಿನ ಹಾಲಿನಲ್ಲಿ ರಾತ್ರಿಯಿಡೀ ದ್ರಾಕ್ಷಿ ನೆನೆಹಾಕಿಡಿ. ಮಾರನೇ ಬೆಳಗ್ಗೆ ಈ ತೇವಾಂಶ ಹಿಂಗುವಂತೆ ಚೆನ್ನಾಗಿ ಒರೆಸಿಕೊಂಡು, ತೆಳುಬಟ್ಟೆ ಮೇಲೆ ಹರಡಿ ಫ್ಯಾನಿನಡಿ ಒಣಗಿಸಿ. ಒಂದು ಸಣ್ಣ ಪ್ಯಾನಿನಲ್ಲಿ ಚಾಕಲೇಟ್‌ ಕರಗಿಸಿ. ಅದಕ್ಕೆ ಬೋರ್ನ್‌ವೀಟಾ ಬೆರೆಸಿ. ನಂತರ ದ್ರಾಕ್ಷಿ ಸೇರಿಸಿ. ಚಾಕಲೇಟ್‌ ದ್ರಾಕ್ಷಿಗೆ ಮೆತ್ತಿಕೊಳ್ಳುವಂತೆ ಮಾಡಿ. ಇದನ್ನು ಒಂದು ತಟ್ಟೆಗೆ ರವಾನಿಸಿ, ಬೆಳ್ಳಿರೇಕಿನಿಂದ ಅಲಂಕರಿಸಿ ಸವಿಯಲು ಕೊಡಿ.

recepi-double

ಪಾನ್‌ ಪಸಂದ್‌ ಕಾಜೂ

ಸಾಮಗ್ರಿ : 250 ಗ್ರಾಂ ಇಡಿಯಾದ ಗೋಡಂಬಿ, 2 ಚಮಚ ಸೋಂಪು, 4 ಚಮಚ ಬ್ರೌನ್‌ಶುಗರ್‌, ಅರ್ಧ ಸಣ್ಣ ಚಮಚ ಪಾನ್‌ಮಸಾಲ (ರೆಡಿಮೇಡ್‌ ಲಭ್ಯ), 2-3 ಚಮಚ ಬೆಣ್ಣೆ, ಅರ್ಧರ್ಧ ಸಣ್ಣ ಚಮಚ ಸಿಹಿ ಅಡಕೆ ಚೂರು, ಏಲಕ್ಕಿ ಪುಡಿ.

ವಿಧಾನ : ಒಂದು ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ, ಬ್ರೌನ್‌ಶುಗರ್‌ ಹಾಕಿ ಕೆದಕಬೇಕು. ಸಕ್ಕರೆ ಕರಗಿದಾಗ ಗೋಡಂಬಿ ಹಾಕಿ ಚೆನ್ನಾಗಿ ಕೆದಕಬೇಕು. ಇದನ್ನು ಕೆಳಗಿಳಿಸಿ, ಗೋಡಂಬಿಗೆ ಉಳಿದೆಲ್ಲ ಮಸಾಲೆ ಸೇರಿಸಿ ಬೆರೆತುಕೊಳ್ಳುವಂತೆ ಮಾಡಿ. 180 ಡಿಗ್ರಿ  ಪ್ರೀಹೀಟೆಡ್‌ ಓವನ್ನಿನಲ್ಲಿ  10-15 ನಿಮಿಷ ಬೇಕ್‌ ಮಾಡಿ. ಹೊರತೆಗೆದು ಆರಿದ ನಂತರ ಏರ್‌ಟೈಟ್‌ ಜಾರ್‌ಗೆ ತುಂಬಿಸಿ ಬೇಕಾದಾಗ ಸವಿಯಿರಿ.

recepi-single

ಕೋಕೋನಟ್‌ ಅಖರೋಟ್‌

ಸಾಮಗ್ರಿ : 250 ಗ್ರಾಂ ಅಖರೋಟ್‌, 4-5 ಚಮಚ ಜೇನುತುಪ್ಪ, 2 ಚಮಚ ಕೊಬ್ಬರಿ ಎಣ್ಣೆ, 1 ಗಿಟುಕು ತೆಂಗಿನ ತುರಿ, 1-1 ಚಿಟಕಿ ಉಪ್ಪು, ವೈಟ್‌ ಪೆಪ್ಪರ್‌ ಪೌಡರ್‌, 2-3 ಚಮಚ ತೆಂಗಿನ ಹಾಲು.

ವಿಧಾನ : ಒಂದು ಬಾಣಲೆಯಲ್ಲಿ ತುಸು ಕೊಬ್ಬರಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಅರ್ಧ ಭಾಗ ತೆಂಗಿನತುರಿ, ಜೇನುತುಪ್ಪ, ಉಪ್ಪು, ಮೆಣಸು ಸೇರಿಸಿ ಚೆನ್ನಾಗಿ ಕೆದಕಿ ಕೆಳಗಿಳಿಸಿ. ನಂತರ ಇದಕ್ಕೆ ಅಖರೋಟ್‌ ಚೂರು ಬೆರೆಸಿ. ಒಂದು ಓವನ್‌ಪ್ರೂಫ್‌ ಟ್ರೇಗೆ ತುಪ್ಪ ಸವರಿ, ಅಖರೋಟ್‌ ಮಿಶ್ರಣವನ್ನು ಅದರಲ್ಲಿ ಹರಡಿರಿ. ಇದನ್ನು ಪ್ರೀಹೀಟೆಡ್‌ ಓವನ್‌ನಲ್ಲಿ 180 ಡಿಗ್ರಿ ಶಾಖದಲ್ಲಿ 10 ನಿಮಿಷ ಬೇಕ್‌ ಮಾಡಿ. ಇದನ್ನು ಹೊರತೆಗೆದ ಮೇಲೆ ಬಿಸಿ ಇರುವಾಗಲೇ ಉಳಿದೆಲ್ಲ ಸಾಮಗ್ರಿ ಉದುರಿಸಿ, ಬೆರೆಸಿಡಿ. ಆರಿದ ನಂತರ ಇದಕ್ಕೆ ಉಳಿದ ತೆಂಗಿನ ತುರಿ ಉದುರಿಸಿ, ತಣ್ಣಗಾದ ಮೇಲೆ ಸವಿಯಲು ಕೊಡಿ.

ಮಿಷ್ಟಿ ಬಾದಾಮಿ

ಸಾಮಗ್ರಿ : 250 ಗ್ರಾಂ ಬಾದಾಮಿ, 4-5 ಚಮಚ ಪುಡಿ ಸಕ್ಕರೆ, 2-3 ಚಮಚ ಬೆಣ್ಣೆ, 1-1 ಚಿಟಕಿ ಲವಂಗದ ಪುಡಿ, ಚಕ್ಕೆ ಪುಡಿ, ಉಪ್ಪು.

ವಿಧಾನ : ಬಾದಾಮಿಯನ್ನು ಬಿಸಿ ನೀರಲ್ಲಿ ಸ್ವಲ್ಪ ಹೊತ್ತು ನೆನೆಹಾಕಿಡಿ. ನಂತರ ನೀರನ್ನು ಬಸಿದು, ಈ ಬಿಸಿ ಬಾದಾಮಿ ಮೇಲೆ ಚೆನ್ನಾಗಿ ಪುಡಿ ಸಕ್ಕರೆ ಉದುರಿಸಬೇಕು, ಆಮೇಲೆ ಟಾಸ್‌ ಮಾಡಿ. ಆಗ ಕ್ರಮೇಣ ಸಕ್ಕರೆ ಕರಗಿ ಅಂಟಿಕೊಳ್ಳುತ್ತದೆ. ಒಂದು ಪ್ಯಾನಿನಲ್ಲಿ ಬೆಣ್ಣೆ ಬಿಸಿ ಮಾಡಿ, ಮಂದಉರಿಯಲ್ಲಿ ಈ ಬಾದಾಮಿಗಳನ್ನು ಹುರಿಯಿರಿ. ನಂತರ ಕೆಳಗಿಳಿಸಿ ಆರಲು ಬಿಡಿ. ಈ ಬಿಸಿ ಬಾದಾಮಿಗಳ ಮೇಲೆ ಉಳಿದ ಮಸಾಲೆ, ಉಪ್ಪು ಉದುರಿಸಿ. ತಣ್ಣಗಾದ ಮೇಲೆ ಸವಿಯಲು ಕೊಡಿ.

ಕೊಲ್ಹಾಪುರಿ ಕಾಜು

ಸಾಮಗ್ರಿ : 250 ಗ್ರಾಂ ಬೆಸ್ಟ್ ಗೋಡಂಬಿ, ಒಂದಿಷ್ಟು ಹೆಚ್ಚಿದ ಕರಿಬೇವು, 10-15 ಗ್ರಾಂ ಕೋಕಂ, 2-3 ಚಮಚ ಬೆಣ್ಣೆ, ಲವಂಗ, ಚಕ್ಕೆ, ಮೆಂತ್ಯ, ಪುಡಿ, ಚಾಟ್‌ ಮಸಾಲ, ಉಪ್ಪು (ತಲಾ ಅರ್ಧರ್ಧ ಚಮಚ).

ವಿಧಾನ :  ಕೋಕಂ ನೆನೆಸಿ ಅದರಿಂದ ಗಟ್ಟಿ ರಸ ಬೇರ್ಪಡಿಸಿ. ಒಂದು ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ. ಇದಕ್ಕೆ ಕೋಕಂ, ಕರಿಬೇವು ಬೆರೆಸಿ ಚಟಪಟಾಯಿಸಿ. ಎಲ್ಲ ಚೆನ್ನಾಗಿ ಬೆರೆತಾಗ ಇದಕ್ಕೆ ಗೋಡಂಬಿ ಹಾಕಿ ಕೆದಕಬೇಕು. ಮಂದ ಉರಿಯಲ್ಲಿ ಹದನಾಗಿ ಕೈಯಾಡಿಸುತ್ತಾ ಇರಿ. ಕೆಳಗಿಳಿಸಿದ ಮೇಲೆ ಎಲ್ಲಾ ಮಸಾಲೆ, ಉಪ್ಪು ಸೇರಿಸಿ ಬೆರೆಸಿಡಿ. ಆರಿದ ನಂತರ ಸವಿಯಲು ಕೊಡಿ.

ನಾಟೀ ನಟ್ಸ್

ಸಾಮಗ್ರಿ : 250 ಗ್ರಾಂ ಪಿಸ್ತಾ, 2-3 ಚಮಚ ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಚಾಟ್‌ಮಸಾಲ, ಇಂಗು, ಜಲಜೀರಾ ಪೌಡರ್‌, ಹುರಿದು ಪುಡಿ ಮಾಡಿದ ಜೀರಿಗೆ.

ವಿಧಾನ : ಪಿಸ್ತಾವನ್ನು ಸ್ವಲ್ಪ ಹೊತ್ತು ಬಿಸಿ ನೀರಲ್ಲಿ ನೆನೆಸಿಡಿ. ನಂತರ ನೀರು ಬಸಿದು, ಇದನ್ನು ತೆಳು ಬಟ್ಟೆ ಮೇಲೆ ಹರಡಿ ಫ್ಯಾನಿನಡಿ ಒಣಗಿಸಿ. ನಂತರ ಒಂದು ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ ಅದಕ್ಕೆ ಇಂಗಿನ ಒಗ್ಗರಣೆ ಕೊಡಿ. ನಂತರ ಪಿಸ್ತಾ ಬೆರೆಸಿ ಕೈಯಾಡಿಸುತ್ತಾ, ಮಂದ ಉರಿಯಲ್ಲಿ ಹುರಿಯಿರಿ. ಇದನ್ನು ಟ್ರೇಗೆ ರವಾನಿಸಿ, ಇದರ ಮೇಲೆ ಉಳಿದೆಲ್ಲ ಮಸಾಲೆ ಉಪ್ಪು ಉದುರಿಸಿ ಬೆರೆಸಿಡಿ. ಆರಿದ ನಂತರ ಜಾರ್‌ಗೆ ತುಂಬಿಸಿ, ಸವಿಯಲು ಕೊಡಿ.

ಚಾಕಲೇಟ್ ಆಲ್ಮಂಡ್

ಸಾಮಗ್ರಿ : 250 ಗ್ರಾಂ ಬಾದಾಮಿ, 2-3 ಚಮಚ ಬೆಣ್ಣೆ, 1 ಸಣ್ಣ ಚಮಚ ಇನ್‌ಸ್ಟೆಂಟ್‌ ಕಾಫಿಪುಡಿ, 2-2 ಚಮಚ ಚಾಕಲೇಟ್‌ ಪೌಡರ್‌, ಕೋಕೋ ಪೌಡರ್‌, ಶುಗರ್‌ ಪೌಡರ್‌.

ವಿಧಾನ : ಒಂದು ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ ಅದಕ್ಕೆ ಬಾದಾಮಿ ಹಾಕಿ ಹುರಿಯಿರಿ. ಬಾದಾಮಿ ಬಂಗಾರದ ಬಣ್ಣಕ್ಕೆ ತಿರುಗಿದಾಗ ಅದನ್ನು ಕೆಳಗಿಳಿಸಿ. ನಂತರ ಉಳಿದೆಲ್ಲ ಸಾಮಗ್ರಿ ಸೇರಿಸಿ ಬೆರೆಸಿಕೊಳ್ಳಿ. ಇದನ್ನು ಒಂದು ಟ್ರೇಗೆ ಹರಡಿ ಆರಲು ಬಿಡಿ. ಚೆನ್ನಾಗಿ ತಣ್ಣಗಾದಾಗ ಜಾರ್‌ಗೆ ತುಂಬಿಸಿ ಸವಿಯಿರಿ.

ಹನೀ ಪಿಸ್ತಾ

ಸಾಮಗ್ರಿ : 250 ಗ್ರಾಂ ಪಿಸ್ತಾ, 2-3 ಚಮಚ ಜೇನುತುಪ್ಪ, 1 ಮೊಟ್ಟೆ, 2 ಚಮಚ ಪುಡಿ ಸಕ್ಕರೆ, 1 ಚಿಟಕಿ ಚಕ್ಕೆ ಪುಡಿ, 2-3 ಹನಿ ವೆನಿಲಾ ಎಸೆನ್ಸ್, 1 ಚಿಟಕಿ ಉಪ್ಪು.

ವಿಧಾನ : ಒಂದು ಬಟ್ಟಲಿಗೆ ಮೊಟ್ಟೆ ಒಡೆದು ಹಾಕಿ, ಅದಕ್ಕೆ ಜೇನುತುಪ್ಪ ಬೆರೆಸಿ ಚೆನ್ನಾಗಿ ಬೀಟ್‌ ಮಾಡಿ. ನಂತರ  ಉಳಿದೆಲ್ಲ ಸಾಮಗ್ರಿ ಸೇರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ನಂತರ ಇದಕ್ಕೆ ಪಿಸ್ತಾ ಬೆರೆಸಿ, ಉಳಿದೆಲ್ಲ ಸಾಮಗ್ರಿ ಚೆನ್ನಾಗಿ ಮೆತ್ತಿಕೊಳ್ಳುವಂತೆ ಮಾಡಿ. ಓವನ್‌ ಪ್ರೀಹೀಟ್‌ ಆಗಿರಲಿ. 180 ಡಿಗ್ರಿ ಶಾಖದಲ್ಲಿ ಇದನ್ನು 10-15 ನಿಮಿಷ ಬೇಕ್‌ ಮಾಡಿ ಚೆನ್ನಾಗಿ ಆರಿದ ನಂತರ ಜಾರ್‌ಗೆ ತುಂಬಿಸಿ.

ಗಾರ್ಲಿಕ್‌ ಗೋಡಂಬಿ

ಸಾಮಗ್ರಿ : 250 ಗ್ರಾಂ ಗೋಡಂಬಿ, ರುಚಿಗೆ ತಕ್ಕಷ್ಟು ಅಚ್ಚ ಖಾರ, ಉಪ್ಪು, ಪುಡಿಮೆಣಸು, ಬೆಳ್ಳುಳ್ಳಿ ಪೇಸ್ಟ್, ಬ್ಲ್ಯಾಕ್‌ ಸಾಲ್ಟ್, ಚಾಟ್‌ಮಸಾಲ, 2-3 ಚಮಚ ಬೆಣ್ಣೆ.

ವಿಧಾನ : ಒಂದು ಬಾಣಲೆಯಲ್ಲಿ ಮೊದಲು ಬೆಣ್ಣೆ ಬಿಸಿ ಮಾಡಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ. ನಂತರ ಇದಕ್ಕೆ ಗೋಡಂಬಿ ಬೆರೆಸಿ, ಮಂದ ಉರಿಯಲ್ಲಿ ಅದನ್ನು ಹುರಿಯಬೇಕು. ಇದನ್ನು ಒಂದು ಟ್ರೇಗೆ ತೆಗೆದುಕೊಂಡು, ಅದರ ಮೇಲೆ ಉಳಿದೆಲ್ಲ ಮಸಾಲೆ ಉದುರಿಸಿ. ಇದು ಚೆನ್ನಾಗಿ ಆರಿದ ನಂತರ ಸವಿಯಲು ಕೊಡಿ.

और कहानियां पढ़ने के लिए क्लिक करें...