2025ರ ಆಗಸ್ಟ್ 7 ಗುರುವಾರ ರಾತ್ರಿ, ಹೈಕೋರ್ಟ್ ಆದೇಶದ ಮೇರೆಗೆ, ಪೊಲೀಸ್ ರಕ್ಷಣೆಯಲ್ಲಿ 2009ರಲ್ಲಿ ಕನ್ನಡ ಚಿತ್ರರಂಗ ಕಂಡ ಅತ್ಯಂತ ಸುರದ್ರೂಪಿ ನಟ ಡಾ. ವಿಷ್ಣುವರ್ಧನ್ ಅವರನ್ನು ಅಂತ್ಯಕ್ರಿಯೆ ಮಾಡಿದ್ದ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಮಾಧಿಯನ್ನು ರಿಯಲ್ ಭೂಗಳ್ಳರ (ರಿಯಲ್ ಎಸ್ಟೇಟ್) ಕುಮ್ಮಕ್ಕಿನಿಂದಾಗಿ ಬಾಲಕೃಷ್ಣ ಅವರ ಕುಟುಂಬದ ಸದಸ್ಯರೊಬ್ಬರು ಏಕಾಏಕಿ ಕೆಡವಿ ಹಾಕಿದ ನಂತರ ನಾಡಿನಾದ್ಯಂತ ಇದೇ ಕುರಿತಾಗಿ ಪರ ಮತ್ತು ವಿರೋಧಗಳು ನಡೆಯುತ್ತಲೇ ಇದ್ದು, ಇನ್ನೂ ಅಚ್ಚರಿಯೆಂದರೆ, ಕೇವಲ ವಿಷ್ಣುವರ್ಧನ್ ಅವರ ಸಮಾಧಿಯಲ್ಲದೇ, ಅಭಿಮಾನ್ ಸ್ಟುಡಿಯೋ ಕಟ್ಟಿದ ಬಾಲಕೃಷ್ಣ ಅವರ ಸಮಾಧಿ ಮತ್ತು ಅದರ ಪಕ್ಕದಲ್ಲೇ ಇದ್ದ ಗಣೇಶನ ಗುಡಿಯನ್ನೂ ಸಹಾ ಕೆಡವಿ ಹಾಕುವ ಮೂಲಕ ಕನ್ನಡ ಚಿತ್ರಾಭಿಮಾನಿಗಳು ಅದರಲ್ಲೂ ವಿಶೇಷವಾಗಿ ವಿಷ್ಣುವರ್ಧನ್ ಅವರ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದ್ದಾರೆ.
ಹಾಗೆ ನೋಡಿದರೆ, ಬಾಲಣ್ಣ ಅವರು ಅಭಿಮಾನ್ ಸ್ಟುಡಿಯೋಸ್ ಕಟ್ಟಿದ್ದೇ ಒಂದು ರೋಚಕವಾಗಿದ್ದು ಮೊದಲು ಆ ಕುರಿತಂತೆ ತಿಳಿದುಕೊಂಡು ಮುಂದಿನ ವಿಚಾರಕ್ಕೆ ಬರೋಣ. ಹಾಸನ ಜಿಲ್ಲೆಯ ಅರಸೀಕೆರೆಯ ಮೂಲದ ಬಾಲಕೃಷ್ಣರವರು ಬಹಳ ಚಿಕ್ಕವಯಸ್ಸಿನಲ್ಲಿಯೇ ತಂದೆ ಮತ್ತು ತಾಯಿಯರನ್ನು ಕಳೆದು ಕೊಂಡು ಅನಾಥ ಮಗುವಾಗಿ ಅವರಿವರ ಮನೆಯಲ್ಲಿ ಬೆಳೆಯುವ ಸಮಯದಲ್ಲೇ ಶ್ರವಣ ಶಕ್ತಿಯನ್ನು ಕಳೆದು ಕೊಂಡು ಎದುರಿಗಿರುವವರು ಮಾತನಾಡುವಾಗ ತೋರುವ ಹಾವ ಭಾವ ಮತ್ತು ಅವರ ತುಟಿಗಳ ಚಲನೆಯಿಂದ ಅರ್ಥಮಾಡಿಕೊಂಡು ಸಂಭಾಷಿಸುವುದನ್ನು ಕರಗತ ಮಾಡಿಕೊಳ್ಳುತ್ತಾರೆ.

ಹೊಟ್ಟೆಯ ಪಾಡಿಗಾಗಿ ತಮ್ಮ ಊರಿಗೆ ಬಂದ ನಾಟಕ ಕಂಪೆನಿಯಲ್ಲಿ ಕಾವಲುಗಾರನಾಗಿ ಸೇರಿಕೊಂಡು ಹಗಲು ಹೊತ್ತಿನಲ್ಲಿ ಬೋರ್ಡು ಬರೆಯುವುದು, ಪೋಸ್ಟರ್ ಅಂಟಿಸುವುದು, ರಂಗಸಜ್ಜಿಕೆ ಹೀಗೆ ಒಂದೊಂದೇ ರಂಗ ಚಟುವಟಿಕೆಗಳಲ್ಲಿ ತೊಡಸಿಕೊಂಡು ಕೆಲಸವಿಲ್ಲದಿದ್ದಾಗ ನಾಟಕದ ತಾಲೀಮಿನ್ನು ನೋಡುತ್ತಲೇ ಅಭಿನಯವನ್ನು ಕಲಿತುಕೊಳ್ಳುತ್ತಾರೆ, ಅದೊಮ್ಮೆ ಅನಿವಾರ್ಯ ಕಾರಣದಿಂದಾಗಿ ನಟರೊಬ್ಬರು ಕೈಕೊಟ್ಟಾಗ, ಆ ನಾಟಕದ ಪ್ರತಿಯೊಂದು ಸಂಭಾಷಣೆಯೂ ಅವರಿಗೇ ಅರಿವಿಲ್ಲದೇ ಮಮನವಾಗಿದ್ದರಿಂದ ಬಾಲಣ್ಣನವರೇ ಕೃಷ್ಣಲೀಲಾ ನಾಟಕದ ಬಣ್ಣ ಹಚ್ಚಿ ನಾಟಕ ಯಶಸ್ವಿಯಾದ ನಂತರ ಅಲ್ಲಿಂದ ಹಿಂದಿರುಗಿ ನೋಡುವ ಪ್ರಮೇಯವೇ ಬಾರದೇ, ಅದು ಹಾಸ್ಯ ಪಾತ್ರವೇ ಇರಲಿ, ಪೋಷಕ ಪಾತ್ರವೇ ಇರಲಿ ಅಥವಾ ಖಳ ನಟನೆಯೇ ಇರಲಿ, ಕಿವಿ ಕೇಳಿಸಿದಿದ್ದರೂ ಸಹ ನಟರ ತುಟಿ ಚಲನೆ ಮತ್ತು ಆಂಗಿಕ ಅಭಿನಯವನ್ನೇ ಗಮನಿಸುತ್ತಾ ಅದಕ್ಕೆ ತಮ್ಮ ತಕ್ಕಂತೆ ತಮ್ಮದೇ ಮ್ಯಾನರಿಸಂ ನಲ್ಲಿ ತೇಲುವ ಧ್ವನಿಯಲ್ಲಿ ಸಂಭಾಷಣೆ ಹೇಳುತ್ತಾ ಆಭಿನಯಿಸುತ್ತಿದ್ದ ಬಾಲಣ್ಣನವರಿಗೆ ಬಾಲಣ್ಣನವರೇ ಸಾಟಿ.
ನಂತರ ಗುಬ್ಬಿ ಕಂಪನಿ ಸೇರಿಕೊಂಡು ಅಲ್ಲಿ ರಾಜ್ ಕುಮಾರ್, ನರಸಿಂಹರಾಜು ಮತ್ತು ಜಿ.ವಿ. ಅಯ್ಯರ್ ಮುಂತಾದ ದಿಗ್ಗಜರ ಪರಿಚಯವಾಗಿ 1943ರಲ್ಲಿ ರಾಧಾರಮಣ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಬಾಲಣ್ಣ, ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯ ನಟ, ಖಳ ನಟ, ಪೋಷಕ ನಟ ಹೀಗೆ ವಿವಿಧ ರೀತಿಯ ಪಾತ್ರಗಳಲ್ಲಿ ಕನ್ನಡಿಗರನ್ನು ರಂಜಿಸಿದ್ದಾರೆ.

60-70ರ ದಶಕಗಳ ವರೆಗೂ ಬಹುತೇಕ ದಕ್ಷಿಣ ಭಾರತದ ಸಿನಿಮಾಗಳೆಲ್ಲವೂ ದೂರದ ಮದರಾಸಿನಲ್ಲೇ ನಿರ್ಮಾಣವಾಗುತ್ತಿದ್ದ ಕಾರಣ, ಅನಿವಾರ್ಯವಾಗಿ ಕನ್ನಡ ಚಿತ್ರರಂಗದ ನಟ ನಟಿಯರು ಮದರಾಸಿನಲ್ಲೇ ವಾಸಿಸುತ್ತಿರುತ್ತಾರೆ. ಅಲ್ಲಿನ ಸ್ಟುಡೀಯೋಗಳು ಬೆಳಗಿನ ಹೊತ್ತು ತಮಿಳು ಮತ್ತು ತೆಲುಗು ಚಿತ್ರಗಳಿಗೆ ಮೀಸಲಾಗಿದ್ದು. ಎಲ್ಲರೂ ಮಲಗುವ ರಾತ್ರಿಯ ಹೊತ್ತಿನಲ್ಲಿ ಕನ್ನಡ ಚಿತ್ರಗಳ ಚಿತ್ರೀಕರಣಕ್ಕೆ ಅವಕಾಶ ನೀಡುವಂತ ತಾರತಮ್ಯವಿರುತ್ತದೆ. ಅದೆಷ್ಟೋ ಬಾರಿ ತಿಂಗಳಾನು ಗಟ್ಟಲೇ ಸ್ಟುಡಿಯೋ ಸಿಗದೇ ಹೋದ ಸಂಧರ್ಭದಲ್ಲಿ ಅನಿವಾರ್ಯವಾಗಿ ಹೊಟ್ಟೆಯ ಪಾಡಿಗಾಗಿ ಕನ್ನಡ ಚಿತ್ರರಂಗದ ದಿಗ್ಗಜರುಗಳಾದ ರಾಜ್ ಕುಮಾರ್, ಜಿ.ವಿ. ಅಯ್ಯರ್, ನರಸಿಂಹರಾಜು ಬಾಲಣ್ಣನಂತಹವರು ನಾಟಕ ತಂಡವನ್ನು ಕಟ್ಟಿಕೊಂಡು ಉತ್ತರ ಕರ್ನಾಟಕಕ್ಕೆ ಬಂದು ನಾಟಕಗಳನ್ನು ಆಡುತ್ತಾ ಅಲ್ಪ ಸ್ವಲ್ಖ ಹಣವನ್ನು ಸಂಪಾದಿಸಿ ಕೊಳ್ಳುವಂತಹ ದೌರ್ಭಾಗ್ಯವಿರುತ್ತದೆ. ಹಾಗೆ ನಾಟಕಗಳಲ್ಲಿ ದುಡಿದ ಹಣದಿಂದಲೇ ಈ ಎಲ್ಲಾ ದಿಗ್ಗಜರು ಸೇರಿಕೊಂಡು ರಣಧೀರ ಕಂಠೀರವ ಚಿತ್ರವನ್ನು ನಿರ್ಮಿಸಿ, ನಿರ್ಮಾಪಕರೂ ಆಗಿದ್ದಲ್ಲದೇ ಅದರ ಮೂಲಕ ನೂರಾರು ಕಲಾವಿದರಿಗೆ ಅನ್ನದಾತರೂ ಆದರು ಎಂದರೆ ತಪ್ಪಾಗಲಾರದು.





