- ರಾಘವೇಂದ್ರ ಅಡಿಗ ಎಚ್ಚೆನ್.
ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆ - ಎಲಿವಿಟಾ ಮಿಸಸ್ ಇಂಡಿಯಾ ವಲ್ಡ್೯ 2025 ಆಗಿರುವ ರಿನಿಮಾ ಬೋರಾ ಅಗರ್ವಾಲ್ ರವರ ಗೌರವಾರ್ಥ ವಾಗಿ ಅಧಿಕೃತ ಸ್ಯಾಶಿಂಗ್ ಸಮಾರಂಭವನ್ನು 'ಎಲಿವಿಟ್ಟಾ ಮಿಸೆಸ್ ಇಂಡಿಯಾ ವರ್ಲ್ಡ್' ಸಂಸ್ಥೆಯು ಆಯೋಜನೆ ಮಾಡಿದ್ದು, ರಿನಿಮಾ ಬೋರಾ ಅವರು ಜನವರಿ 22 ರಿಂದ 30 ರವರೆಗೆ ಮಿಸೆಸ್ ವರ್ಲ್ಡ್ ಸ್ಪರ್ಧೆ 2026ರಲ್ಲಿ ಭಾರತವನ್ನು ಪ್ರತಿನಿಧಿಸಲು ಅಧಿಕೃತವಾಗಿ ಆಯ್ಕೆ ಆಗಿದ್ದಾರೆ. ಈ ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತು ಜನವರಿ 29, 2026 ರಂದು ಅಮೆರಿಕದ ಲಾಸ್ ವೇಗಾಸ್‌ನಲ್ಲಿ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ರಿನಿಮಾ ಬೋರಾ ಅಗರ್ವಾಲ್ ಮಿಸಸ್ ವಲ್ಡ್೯ 2026ಕ್ಕೆ ಭಾರತದ ಪ್ರತಿನಿಧಿಯಾಗಿ ಅಂತರರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿರುವ ವಿಷಯವನ್ನು ತಿಳಿಸಲು ಹಾಗೂ ಆ ಸ್ಪರ್ಧೆಯ ರೂಪುರೇಷೆಗಳ ಕುರಿತು ವಿವರಿಸಲು ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಪತ್ರಿಕಾಗೋಷ್ಟಿ ಆಯೋಜಿಸಿದ್ದರು.

ಈ ವೇಳೆ ಮಾತನಾಡಿದ ರಿನಿಮಾ ಅಗರ್ವಾಲ್ "ನಾನು ಕಳೆದ ಮೂರು ವರ್ಷಗಳಿಂದ ಸತತ ಪ್ರಯತ್ನ ಪಟ್ಟು ಮಿಸೆಸ್ ಇಂಡಿಯಾ ಆಗಿದ್ದು ಈಗ ಮಿಸೆಸ್ ವರ್ಲ್ಡ್ ಸ್ಪರ್ಧೆಗೆ ತೆರಳುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ" ಎಂದರು. ಅಲ್ಲದೆ ಮಿಸೆಸ್ ಇಂಡಿಯಾ ಎಂದರೆ ಕೇವಲ ದೇಹ ಸೌಂದರ್ಯ ಮಾತ್ರವೇ ಅಲ್ಲ ಬದಲಾಗಿ ಉಡುಗೆ ತೊಡುಗೆ, ಜೊತೆಗೆ ನಾನು ಭಾರತಕ್ಕಾಗಿ ಇಲ್ಲಿನ ಸಮಾಜಕ್ಕಾಗಿ ಏನನ್ನು ಮಾಡಲು ಉದ್ದೇಶಿಸಿದ್ದೇನೆ ಎನ್ನುವುದನ್ನು ಸಹ ಮುಖ್ಯವಾಗಿ ಪರಿಗಣಿಸುತ್ತದೆ. ಅದೊಂದು ಅದ್ಭುತ ಅನುಭವ ಏಕೆಂದರೆ ನನಗೆ ಇದು ಉತ್ತಮ ವ್ಯಕ್ತಿಯಾಗಲು ದಾರಿ ಮಾಡಿಕೊಟ್ಟಿದೆ. " ಎಂದು ಅವರು ಹೇಳಿದ್ದಾರೆ.

ಎಲಿವಿಟ್ಟಾ ಮಿಸೆಸ್ ಇಂಡಿಯಾ ವರ್ಲ್ಡ್ ಸಂಸ್ಥೆ ಸಂಸ್ಥಾಪಕಿ ಸರ್ಗಮ್ ಕೌಶಲ್ ಅವರು ಮಾತನಾಡಿ "ಮಿಸೆಸ್ ವರ್ಲ್ಡ್ ಸ್ಪರ್ಧೆಯ ಅನುಭವ ಎಂದರೆ ಅದನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ನಾನು ವರ್ಷದೊಳಗೆ ಹನ್ನೆರಡು ದೇಶಗಳನ್ನು ಸುತ್ತಿದ್ದೇನೆ. ಅಲ್ಲೆಲ್ಲಾ ನನಗೆ ವಿವಿಧ ದೇಶಗಳ ವಿವಿಧ ಮಹಿಳೆಯರಿಂದ ಕಿರೀಟ ಸಿಕ್ಕಿದೆ. ಅದಕ್ಕಿಂತಲೂ ನನಗೆ ಹೆಚ್ಚಿನ ಸಂಖ್ಯೆಯಲ್ಲಿ ಸ್ನೇಹಿತರು ಸಿಕ್ಕಿದ್ದಾರೆ. ನನಗೆ ಎಲ್ಲಾ ದೇಶಗಳಲ್ಲಿ ಒಬ್ಬೊಬ್ಬ ಸ್ನೇಹೊತರಿದ್ದಾರೆ ಎಂದು ನಾನಿಲ್ಲಿ ಹೇಳಬಹುದು. ಇನ್ನು ರಿನಿಮಾ ಬಗ್ಗೆ ನನಗೆ ಬಹಳ ವಿಶ್ವಾಸ ಇದೆ. " ಎಂದರು.

ಎಲಿವಿಟ್ಟಾ ಮಿಸೆಸ್ ಇಂಡಿಯಾ ವರ್ಲ್ಡ್ ಸಂಸ್ಥೆಯ ಸರ್ಗಮ್ ಕೌಶಲ್ ಅವರು 2022ರ ಮಿಸೆಸ್ ವರ್ಲ್ಡ್ ಕಿರೀಟವನ್ನು ಗೆದ್ದ ಭಾರತದ ಹೆಮ್ಮೆಯ ಪುತ್ರಿ. ಅವರ ಐತಿಹಾಸಿಕ ವಿಜಯದ ಮೂಲಕ ಭಾರತವು ಮೂರು ದಶಕಗಳ ನಂತರ ಮತ್ತೆ ವಿಶ್ವಮಟ್ಟದ ಕಿರೀಟವನ್ನು ತನ್ನದಾಗಿಸಿಕೊಂಡಿತು. ಈ ಗೆಲುವಿನ ಬಳಿಕ, ಸರ್ಗಮ್ ಕೌಶಲ್ ಅವರು ಎಲಿವಿಟ್ಟಾ ಮಿಸೆಸ್ ಇಂಡಿಯಾ ವರ್ಲ್ಡ್ ಸಂಸ್ಥೆ ಎಂಬ ಪ್ರತಿಷ್ಠಿತ ವೇದಿಕೆಯನ್ನು ಸ್ಥಾಪಿಸಿ, ಭಾರತದಲ್ಲಿನ ಮಿಸೆಸ್ ಇಂಡಿಯಾ ಸ್ಪರ್ಧೆಯನ್ನು ಪಾರದರ್ಶಕ, ವಿಶ್ವಾಸಾರ್ಹ ಮತ್ತು ಜಾಗತಿಕವಾಗಿ ಮಾನ್ಯತೆ ಪಡೆದ ವೇದಿಕೆಯಾಗುವಂತೆ ರೂಪಾಂತರಿಸಿದರು. ಅವರು ಕೇವಲ ಸೌಂದರ್ಯ ರಾಣಿ ಮಾತ್ರವಲ್ಲ, ಮಹಿಳಾ ಸಬಲೀಕರಣ, ನಾಯಕತ್ವ ಮತ್ತು ಉದ್ದೇಶಪೂರ್ಣ ಬದುಕಿನ ಪ್ರೇರಣೆಯೂ ಆಗಿದ್ದಾರೆ. ಎಲಿವಿಟ್ಟಾ ಮಿಸೆಸ್ ಇಂಡಿಯಾ ವರ್ಲ್ಡ್ ಸಂಸ್ಥೆಯ ಮೂಲಕ ಅನೇಕ ವಿವಾಹಿತ ಮಹಿಳೆಯರಿಗೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಕಲ್ಪಿಸುತ್ತಿದ್ದಾರೆ.





