- ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: "ಅಮೆರಿಕಾ ಅಮೆರಿಕಾ 2
ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ್
ನಿರ್ಮಾಣ: ನಾಗತಿಹಳ್ಳಿ ಚಂದ್ರಶೇಖರ್
ತಾರಾಂಗಣ: ಶಾನ್ವಿ ಶ್ರೀವಾಸ್ತವ, ಪೃಥ್ವಿ ಅಂಬರ್, ನಿರೂಪ್ ಭಂಡಾರಿ
ರೇಟಿಂಗ್: 3 /5 ***
ನುಡಿ (ಶಾನ್ವಿ ಶ್ರೀವಾಸ್ತವ) ಎಐ ಇಂಜಿನಿಯರ್. ಆಕೆಯ ಮೇಲೆ ಕಿಂಚಿತ್ತೂ ಕಾಳಜಿ ತೋರದ ಗಂಡ ನಿನಾದ್ (ನಿರೂಪ್ ಭಂಡಾರಿ) ಇದ್ದಾನೆ. ಇಬ್ಬರ ಮಧ್ಯೆ ದೊಡ್ಡ ಅಂತರ ಸೃಷ್ಟಿ ಆಗಿದೆ. ಮಗಳು ಸಿರಿ (ರೀತು ಸಿಂಗ್) ಕಾರಣಕ್ಕೆ ಇಬ್ಬರ ಸಂಸಾರ ಹಾಗೆಯೇ ಉಳಿದುಕೊಂಡಿದೆ. ಒಂದು ಪ್ರಾಜೆಕ್ಟ್ ನಿಮಿತ್ತ ಶಾನ್ವಿ ಅಮೆರಿಕ ತೆರಳಬೇಕಾದ ಪರಿಸ್ಥಿತಿ ಬರುತ್ತದೆ. ಅಮೆರಿಕದಲ್ಲಿ ಆಕೆಯ ಹಳೆಯ ಬಾಯ್ಫ್ರೆಂಡ್ ನೀಲ್ (ಪೃಥ್ವಿ ಅಂಬರ್) ಭೇಟಿ ಆಗುತ್ತದೆ. ಬಿಟ್ಟುಹೋದ ಭೂತ ಕಾಲದ ಪ್ರೀತಿ ದಸಕ್ಕನೆ ಮುಖದ ಎದುರು ಬಂದು ನಿಲ್ಲುತ್ತದೆ. ಅಲ್ಲಿಂದ ನುಡಿಯ ಮನಸ್ಸಿನ ಭಾವನೆಗಳ ತಿಕ್ಕಾಟ ಶುರು. ನುಡಿ ಏನೆಲ್ಲ ಕಷ್ಟಗಳನ್ನು ಎದುರಿಸುತ್ತಾಳೆ? ಕೊನೆಗೆ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಾಳೆ ಎನ್ನುವುದನ್ನು ತಿಳಿಯಲು ನೀವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ "ಅಮೆರಿಕಾ ಅಮೆರಿಕಾ 2" ಚಿತ್ರವನ್ನು ನೋಡಬೇಕು.

ಈ ಹಿಂದೆ ಅಂದರೆ 1997ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿದ್ದ ‘ಅಮೆರಿಕಾ ಅಮೆರಿಕಾ’ ಚಿತ್ರದ ನೆನಪಿನೊಂದಿಗೆ ಬಂದ ಚಿತ್ರ ‘ಅಮೆರಿಕಾ ಅಮೆರಿಕಾ 2ಮೊದಲ ಭಾಗಕ್ಕೂ ಎರಡನೇ ಭಾಗಕ್ಕೂ ಯಾವುದೇ ಲಿಂಕ್ ಇಲ್ಲ. ಆದರೆ ಎರಡೂ ಚಿತ್ರಗಳಲ್ಲಿ ಭಾವನೆಗಳ ತಾಕಲಾಟ ಇದೆ, ಪ್ರೀತಿಯ ತಂತುವಿನ ಕಥೆಯ ಎಳೆಯೂ ಇದೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಪ್ರೀತಿಯ ಸ್ವರೂಪ ಹಾಗೂ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ತೋರಿಸುತ್ತದೆ. ಚಿತ್ರವು ಕಾದಂಬರಿ ಆಧಾರಿತವಾಗಿದ್ದರೂ ಸಹ ಚಿತ್ರದ ಪ್ರಥಮಾರ್ಧ ಕಥೆ ಮತ್ತಷ್ಟು ಆಳವಾದ ವಿವರಣೆ ಬೇಡುತ್ತದೆ. ಅಲ್ಲದೆ ಕಥೆಯಲ್ಲಿ ಇನ್ನಷ್ಟು ಹೊಸತನದ ಅಗತ್ಯವಿದೆ ಎನಿಸುತ್ತದೆ. ಕ್ಲೈಮ್ಯಾಕ್ಸ್ ಸಹ ಯಾವುದೇ ತರ್ಕಕ್ಕೆ ಸಿಕ್ಕುವುದಿಲ್ಲ.ನುಡಿ, ನಿನಾದ್ ನಡುವಿನ ಬಿರುಕಿನ ಕಾರಣವನ್ನು ಇನ್ನಷ್ಟು ಸ್ಪಷ್ಟವಾಗಿ ತೋರಿಸುವ ಅವಕಾಶ ನಿರ್ದೇಶಕರಿಗಿತ್ತು. ಅಲ್ಲದೆ ನೀಲ್ ಮತ್ತು ನುಡಿ ಬೇರಾಗಲು ಇದೇ ಸ್ಪಷ್ಟ ಕಾರಣ ಎನ್ನುವಂತಹಾ ಕಾರಣವಊ ಚಿತ್ರದಲ್ಲಿಲ್ಲ.
ಪಾತ್ರದ ವಿಷಯಕ್ಕೆ ಬಂದರೆ ಶಾನ್ವಿ ಶ್ರೀವಾಸ್ತವ್ ನುಡಿ ಪಾತ್ರವೇ ಇಡೀ ಚಿತ್ರದ ಜೀವಾಳ. ನಟಿ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಪೃಥ್ವಿ ಅಂಬಾರ್ ಮತ್ತು ನಿರೂಪ್ ಭಂಡಾರಿ ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಬಾಲ ನಟಿ ರೀತು ಸಿಂಗ್ ಸಹ ತಮಗೆ ದೊರೆತ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ.
ಎಸ್‌ಕೆ ರಾವ್ ಮತ್ತು ಶ್ರೀ ಕ್ರೇಜಿಮೈಂಡ್ ಛಾಯಾಗ್ರಹಣ, ಮನೋಮೂರ್ತಿ ಅವರ ಸಂಗೀತ ಮತ್ತು ನಕುಲ್ ಅಭ್ಯಂಕರ್ ಹಿನ್ನೆಲೆ ಸಂಗೀತ ಉತ್ತಮವಾಗಿದೆ. ಆದರೆ ಈ ಹಿಂದಿನ ಚಿತ್ರಗಳಲ್ಲಿದ್ದಂತೆ ಹಾಡುಗಳು ಗುನುಗಿಸಿಕೊಳ್ಳುವಲ್ಲಿ ಸೋತಿದೆ. ಒಟ್ಟಾರೆ ಹೇಳಬೇಕೆಂದರೆ ಒಮ್ಮೆ ನೋಡಬಹುದಾದ ಚಿತ್ರ.





