– ರಾಘವೇಂದ್ರ ಅಡಿಗ ಎಚ್ಚೆನ್.
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ವೇಳೆ ತಾವು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಲು ಅವಕಾಶ ನೀಡುವಂತೆ ನಟ ದರ್ಶನ್ ಪರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯಿತು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಪೀಠ, ದರ್ಶನ್ ಅವರ ಖುದ್ದು ಹಾಜರಿಗೆ ಅವಕಾಶ ನೀಡದೆ, ವಿಡಿಯೋ ಕಾನ್ಫರೆನ್ಸ್ ಮೂಲಕವೇ ವಿಚಾರಣೆ ಮುಂದುವರಿಸಲು ಹಲವು ಪರ್ಯಾಯಗಳನ್ನು ಸೂಚಿಸಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯುತ್ತಿರುವುದರಿಂದ ದರ್ಶನ್ ಜೊತೆ ಗೌಪ್ಯವಾಗಿ ಚರ್ಚಿಸಲು ಸಾಧ್ಯವಾಗುತ್ತಿಲ್ಲ ಎಂದು ದರ್ಶನ್ ಪರ ವಕೀಲ ಹಷ್ಮತ್ ಪಾಷಾ ವಾದಿಸಿದರು. ಕಕ್ಷಿದಾರರೊಂದಿಗೆ ಮಾತನಾಡುವಾಗ ಇತರೆ ಆರೋಪಿಗಳು ಹಾಗೂ ಸಾಕ್ಷಿಗಳಿಗೆ ಮಾತುಕತೆ ಕೇಳಿಸುತ್ತದೆ. ಹೀಗಾಗಿ ಗೌಪ್ಯತೆ ಇರುವುದಿಲ್ಲ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಗೌಪ್ಯತೆ ಸಮಸ್ಯೆಯಾಗಿದ್ದರೆ ವಿಡಿಯೋ ಕಾನ್ಫರೆನ್ಸ್ನಲ್ಲೇ ದರ್ಶನ್ ಜೊತೆ ಖಾಸಗಿ ಮಾತುಕತೆಗೆ ವ್ಯವಸ್ಥೆ ಮಾಡಬಹುದು ಎಂದು ಹೇಳಿದರು. ಕೋರ್ಟ್ ಕಲಾಪ ಆರಂಭಕ್ಕೂ 15 ನಿಮಿಷ ಮೊದಲು ದರ್ಶನ್ ಜೊತೆ ಚರ್ಚಿಸಿ ಬಳಿಕ ವಿಚಾರಣೆ ಆರಂಭಿಸುವಂತೆ ಸಲಹೆ ನೀಡಿದರು.
ಪ್ರಕರಣದ ವಿಚಾರಣೆ ಯಾವುದೇ ಕಿರುಕುಳ ಅಥವಾ ವಿಳಂಬವಿಲ್ಲದೆ ಸೌಹಾರ್ದಯುತವಾಗಿ ನಡೆಯಬೇಕು. ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಸಾಕ್ಷಿಗಳ ವಿಚಾರಣೆ ವಿಳಂಬವಾಗಬಾರದು. ಸಾಕ್ಷ್ಯ ವಿಚಾರಣೆ ವಿಳಂಬವಾದಷ್ಟು ಪ್ರಾಸಿಕ್ಯೂಷನ್ಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ದರ್ಶನ್ ಅವರನ್ನು ನ್ಯಾಯಾಲಯಕ್ಕೆ ಕರೆತರಬೇಕಾದರೆ ಪೊಲೀಸ್ ಭದ್ರತೆ ಕಲ್ಪಿಸಬೇಕಾಗುತ್ತದೆ. ಅಭಿಮಾನಿಗಳ ಜನದಟ್ಟಣೆಯನ್ನು ನಿಯಂತ್ರಿಸುವುದು ಕಷ್ಟವಾಗಬಹುದು. ಅಗತ್ಯವಿದ್ದರೆ ಪರಪ್ಪನ ಅಗ್ರಹಾರ ಜೈಲಿನಲ್ಲೇ ನ್ಯಾಯಾಲಯದ ವ್ಯವಸ್ಥೆ ಮಾಡಿ ವಿಚಾರಣೆ ನಡೆಸುವ ಆಯ್ಕೆಯನ್ನೂ ಪರಿಗಣಿಸಬಹುದು ಎಂದು ಪೀಠ ತಿಳಿಸಿತು.
ಜೈಲಿನಲ್ಲೇ ವಿಚಾರಣೆ ನಡೆಸಿದರೆ ಎರಡೂ ಕಡೆಯ ವಕೀಲರಿಗೆ ತೊಂದರೆಯಾಗಬಹುದು ಎಂದು ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ನ್ಯಾಯಾಲಯ, ನಾಳಿನ ಸಾಕ್ಷಿಗಳ ವಿಚಾರಣೆ ಕುರಿತು ಇಂದೇ ದರ್ಶನ್ ಜೊತೆ ಚರ್ಚಿಸಲು ಅವಕಾಶ ನೀಡಬಹುದು. ಅಗತ್ಯವಿದ್ದರೆ ಹೆಡ್ಫೋನ್ ವ್ಯವಸ್ಥೆ ಮಾಡಬಹುದು ಹಾಗೂ ಗೌಪ್ಯತೆಗಾಗಿ ಲ್ಯಾಪ್ಟಾಪ್ ಮೂಲಕ ವಿಡಿಯೋ ಕಾನ್ಫರೆನ್ಸ್ ನಡೆಸಬಹುದು ಎಂದು ದರ್ಶನ್ ಪರ ವಕೀಲರಿಗೆ ಮತ್ತಷ್ಟು ಆಯ್ಕೆಗಳನ್ನು ನೀಡಿತು.
ಖುದ್ದು ಹಾಜರಿಯೇ ಬೇಕೆಂದಿದ್ದರೆ ಪರಪ್ಪನ ಅಗ್ರಹಾರದಲ್ಲೇ ವಿಚಾರಣೆ ನಡೆಸುವ ವ್ಯವಸ್ಥೆ ಮಾಡಬಹುದು. ಜಯಲಲಿತಾ ಪ್ರಕರಣದ ವಿಚಾರಣೆ ನಡೆದ ಕೋರ್ಟ್ನಲ್ಲೇ ಪ್ರಕ್ರಿಯೆ ನಡೆಸಬಹುದು ಹಾಗೂ ಸಂಬಂಧಪಟ್ಟವರನ್ನು ಹೊರತುಪಡಿಸಿ ಬೇರೆ ಯಾರಿಗೂ ಪ್ರವೇಶ ನೀಡದಂತೆ ವ್ಯವಸ್ಥೆ ಮಾಡಬಹುದು ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ದರ್ಶನ್ಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದು, ವಿಚಾರಣೆಯಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಅವರಿಗೂ ಇರುತ್ತದೆ. ವಿಚಾರಣೆ ಮುಗಿದ ಬಳಿಕ ಅಗತ್ಯವಿದ್ದರೆ ಮಾಧ್ಯಮಗಳೊಂದಿಗೆ ಮಾತನಾಡಬಹುದು ಎಂದು ನ್ಯಾಯಮೂರ್ತಿಗಳು ಹೇಳಿದರು.
ಅಂತಿಮವಾಗಿ ದರ್ಶನ್ ಅವರ ಖುದ್ದು ಹಾಜರಿಗೆ ಅವಕಾಶ ನಿರಾಕರಿಸಿದ ಹೈಕೋರ್ಟ್, ಎರಡೂ ಕಡೆಯ ವಕೀಲರು ಈ ಕುರಿತು ಚರ್ಚಿಸಿ ನಿರ್ಧಾರಕ್ಕೆ ಬರಬೇಕು ಹಾಗೂ ಸೆಪ್ಟೆಂಬರ್ 16ರಂದು ತಮ್ಮ ಅಭಿಪ್ರಾಯ ತಿಳಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು ಮುಂದೂಡಿತು.





