ಚಿಕಾಗೋದಲ್ಲಿ ಮೊಳಗಿದ “Sisters and Brothers of America” ಎಂಬ ಒಂದೇ ವಾಕ್ಯ ಜಗತ್ತಿನ ಗಮನವನ್ನು ಭಾರತದತ್ತ ಸೆಳೆದ ರೋಚಕಥೆ
ಜನವರಿ 12 — ಸ್ವಾಮಿ ವಿವೇಕಾನಂದರ ಜಯಂತಿ. 1893ರ ಸೆಪ್ಟೆಂಬರ್ 11 — ಅಮೇರಿಕಾದ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಐತಿಹಾಸಿಕ ಭಾಷಣದ ದಿನ. ಈ ಎರಡು ದಿನಾಂಕಗಳು ಕೇವಲ ಕ್ಯಾಲೆಂಡರ್‌ನಲ್ಲಿರುವ ದಿನಗಳಲ್ಲ. ಒಂದು ಭಾರತ ತನ್ನ ಮಹಾನ್ ಸನ್ಯಾಸಿಯ ಜನ್ಮವನ್ನು ಸ್ಮರಿಸುವ ದಿನವಾದರೆ, ಮತ್ತೊಂದು ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಶಕ್ತಿ ಮೊದಲ ಬಾರಿಗೆ ಪಾಶ್ಚಾತ್ಯ ಜಗತ್ತಿನ ಬೃಹತ್ ವೇದಿಕೆಯಲ್ಲಿ ಅದ್ದೂರಿಯಾಗಿ ಅನಾವರಣಗೊಂಡ ದಿನ.
ಸ್ವಾಮಿ ವಿವೇಕಾನಂದರ ಜೀವನವನ್ನು ನೆನಪಿಸಿಕೊಂಡಾಗ, ಅವರ ಚಿಕಾಗೋ ಭಾಷಣವೊಂದನ್ನೇ ನೆನಪಿಸಿಕೊಳ್ಳುವುದು ಸಾಕಾಗುವುದಿಲ್ಲ. ಅದರ ಹಿಂದೆ ಇದ್ದ ಸುದೀರ್ಘ ದೇಶ ಪರ್ಯಟನೆ, ಕನ್ಯಾಕುಮಾರಿಯ ಬಂಡೆಯ ಮೇಲಿನ ಧ್ಯಾನ, ರಾಜಮಹಾರಾಜರ ಪ್ರೋತ್ಸಾಹ, ಅಪರಿಚಿತ ಅಮೇರಿಕಾದಲ್ಲಿ ಎದುರಾದ ಸಂಕಷ್ಟಗಳು, ಪಾಶ್ಚಾತ್ಯ ವಿದ್ವಾಂಸರ ಮೆಚ್ಚುಗೆ ಮತ್ತು ಕೊನೆಗೆ ವಿಶ್ವವೇ ಕಿವಿಗೊಟ್ಟು ಕೇಳಿದ ಆ ದಿಕ್ಸೂಚಿ ಭಾಷಣ—ಇವೆಲ್ಲವೂ ಸೇರಿ ವಿವೇಕಾನಂದರ ದಿಗ್ವಿಜಯದ ಕಥೆಯಾಗುತ್ತದೆ.
ಕೋಲಂಬಸ್‌ನಿಂದ ಚಿಕಾಗೋವರೆಗೆ…
ಕ್ರಿ.ಶ. 1893ಕ್ಕೆ ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ, ಅಂದರೆ 1492ರಲ್ಲಿ, ಭಾರತಕ್ಕೆ ಸಮುದ್ರಮಾರ್ಗ ಕಂಡುಹಿಡಿಯುವ ಉದ್ದೇಶದಿಂದ ಹೊರಟ ಕ್ರಿಸ್ಟೋಫರ್ ಕೊಲಂಬಸ್ ದಿಕ್ಕು ತಪ್ಪಿ ಅಮೇರಿಕಾ ಖಂಡವನ್ನು ತಲುಪಿದ. ಅಲ್ಲಿನ ಮೂಲನಿವಾಸಿಗಳನ್ನು ಭಾರತೀಯರೆಂದು ಭಾವಿಸಿ Indians ಎಂದು ಕರೆದ ಘಟನೆ ಇತಿಹಾಸದಲ್ಲಿ ದಾಖಲಾಗಿದೆ.
ಮುಂದಿನ ಶತಮಾನಗಳಲ್ಲಿ ಯುರೋಪಿನ ವಸಾಹತುಶಾಹಿ ಶಕ್ತಿಗಳು ಅಮೇರಿಕಾ ಖಂಡದ ಮೇಲೆ ತಮ್ಮ ಹಿಡಿತವನ್ನು ಬಲಪಡಿಸಿದವು. ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಅಮೇರಿಕಾ ವೇಗವಾಗಿ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿತ್ತು. ತನ್ನ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಗಳನ್ನು ಹುಡುಕುತ್ತಿದ್ದ ಅಮೇರಿಕಾಕ್ಕೆ ಅಂತಾರಾಷ್ಟ್ರೀಯ ಪ್ರದರ್ಶನಗಳು ಮತ್ತು ಸಮ್ಮೇಳನಗಳು ವ್ಯಾಪಾರ, ವಿಜ್ಞಾನ, ಸಂಸ್ಕೃತಿ ಹಾಗೂ ಧರ್ಮದ ವಿಚಾರಗಳನ್ನು ಜಗತ್ತಿನ ಮುಂದೆ ಪ್ರದರ್ಶಿಸುವ ಅವಕಾಶವಾಗಿದ್ದವು.
ಅಂತಹ ಹಿನ್ನೆಲೆಯಲ್ಲಿಯೇ 1893ರಲ್ಲಿ ಚಿಕಾಗೋದಲ್ಲಿ World’s Columbian Exposition ಆಯೋಜಿಸಲಾಯಿತು. ಅಮೇರಿಕಾಕ್ಕೆ ಕೊಲಂಬಸ್ ಆಗಮಿಸಿದ 400ನೇ ವರ್ಷಾಚರಣೆಯ ನೆನಪಿನಲ್ಲಿಯೇ ಈ ಬೃಹತ್ ಕಾರ್ಯಕ್ರಮ ನಡೆದಿತ್ತು. ಇದರ ಅಂಗವಾಗಿ ವಿವಿಧ ಕ್ಷೇತ್ರಗಳ ಅನೇಕ ಅಂತಾರಾಷ್ಟ್ರೀಯ ಕಾರ್ಯಕ್ರಮಗಳು ನಡೆದವು.
ಅವುಗಳಲ್ಲಿ ಅತ್ಯಂತ ಐತಿಹಾಸಿಕವಾದದ್ದು Parliament of the World’s Religions — ವಿಶ್ವ ಧರ್ಮ ಸಮ್ಮೇಳನ. 1893ರ ಸೆಪ್ಟೆಂಬರ್ 11ರಿಂದ 27ರವರೆಗೆ ನಡೆದ ಈ ಸಮ್ಮೇಳನಕ್ಕೆ ಜಗತ್ತಿನ ವಿವಿಧ ಧರ್ಮಗಳ ಪ್ರತಿನಿಧಿಗಳು ಆಗಮಿಸಿದ್ದರು. ಆದರೆ ಸಮ್ಮೇಳನದ ಉದ್ದೇಶದ ಬಗ್ಗೆ ಆರಂಭದಿಂದಲೇ ಭಿನ್ನಾಭಿಪ್ರಾಯಗಳಿದ್ದವು. ಕೆಲ ಕ್ರೈಸ್ತ ಧರ್ಮಗುರುಗಳ ವಾದ ಹೀಗಿತ್ತು:
ಜಗತ್ತಿನಲ್ಲಿ ನಿಜವಾದ ಧರ್ಮವೆಂದರೆ ಕ್ರೈಸ್ತ ಧರ್ಮವೊಂದೇ. ಉಳಿದವುಗಳನ್ನು ಅದರೊಂದಿಗೆ ಹೋಲಿಸುವುದೇ ಅನಗತ್ಯ.
ಮತ್ತೊಂದೆಡೆ, ಇನ್ನೂ ಕೆಲವರು, ಕ್ರೈಸ್ತ ಧರ್ಮದ ಶ್ರೇಷ್ಠತೆಯನ್ನು ಜಗತ್ತಿನ ಮುಂದೆ ತೋರಿಸಲು ಮತ್ತು ಇತರ ಧರ್ಮೀಯರನ್ನು ಕ್ರೈಸ್ತ ಧರ್ಮದತ್ತ ಸೆಳೆಯಲು ಇಂತಹ ಸಮ್ಮೇಳನ ಅಗತ್ಯವೆಂದು ವಾದಿಸಿದರು. ಆದರೆ ಅವರಿಗೆ ತಿಳಿದಿರಲಿಲ್ಲ—ಅದೇ ವೇದಿಕೆ ಮುಂದೆ ಭಾರತದಿಂದ ಬಂದ ಕೇವಲ ಮೂವತ್ತು ವರ್ಷದ ಒಬ್ಬ ಸನ್ಯಾಸಿಯನ್ನು ವಿಶ್ವದ ಗಮನದ ಕೇಂದ್ರಬಿಂದುವನ್ನಾಗಿ ಮಾಡಲಿದೆ ಎಂದು!





