– ರಾಘವೇಂದ್ರ ಅಡಿಗ ಎಚ್ಚೆನ್.
23 ವರ್ಷಗಳ ನಂತರ ‘ಅಪ್ಪು’ ಸಿನಿಮಾ ನೋಡ್ತಿದ್ದೀನಿ. ಈ ಸಿನಿಮಾ ಯೂತ್ ಲವ್ ಸ್ಟೋರಿ, ಈಗಲೂ ಕಥೆ ಹೊಸದಾಗಿದೆ. 23 ವರ್ಷದ ನಂತರ ಅಪ್ಪು ನನ್ನ ಪಕ್ಕ ನಿಂತು ಸಂದರ್ಶನ ಕೊಡ್ತಿಲ್ಲ ಅಂತ ಬೇಸರವಿದೆ ಎಂದು ನಟಿ ರಕ್ಷಿತಾ ಹೇಳಿದ್ದಾರೆ. ಪುನೀತ್ ರಾಜ್‌ಕುಮಾರ್ 50ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ‘ಅಪ್ಪು’ ಚಿತ್ರ ರೀ-ರಿಲೀಸ್ ಆಗಿದೆ. ಈ ಹಿನ್ನೆಲೆ ಚಿತ್ರದ ನಾಯಕಿ ರಕ್ಷಿತಾ ಸಿನಿಮಾ ವೀಕ್ಷಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ಈ ದಿನ ನನಗೆ ಎಮೋಷನಲ್ ಆಗಿತ್ತು. ನನ್ನ ಮಗನ ಜೊತೆ ಬಂದು ಸಿನಿಮಾ ನೋಡಿದೆ. ಇನ್ನೂ ಅಭಿಮಾನಿಗಳ ಸಂಭ್ರಮ ನೋಡಿ ಖುಷಿಯಾಯ್ತು ಎಂದು ರಕ್ಷಿತಾ ಹೇಳಿದ್ದಾರೆ.
‘ಅಪ್ಪು’ ಅಂದಾಕ್ಷಣ ಮೊದಲು ನೆನಪಾಗೋದು ಪಾರ್ವತಮ್ಮನವರು. ನನ್ನ ತಂದೆಯನ್ನು ನನ್ನ ಮಗ ಇದ್ದಂತೆ ಅಂತಾ ಪಾರ್ವತಮ್ಮನವರು ಯಾವಾಗಲೂ ಹೇಳ್ತಿದ್ದರು ಎಂದು ನಟಿ ಸ್ಮರಿಸಿದರು. ‘ಅಪ್ಪು’ ಚಿತ್ರದಲ್ಲಿ ನನಗೆ ಇಷ್ಟ ಆಗಿರೋ ಸೀನ್ ಅಂದ್ರೆ ಸುಚಿ ಕೈ ಕತ್ತರಿಕೊಳ್ಳೋದು. ಅದು ಎಮೋಷನಲ್ ಆಗಿತ್ತು ಎಂದು ಸೀನ್ ಬಗ್ಗೆ ವಿವರಿಸಿದರು. ಪುನೀತ್ ಅವರನ್ನು ನೆನೆದು ನಟಿ ಭಾವುಕರಾದರು.
ಅಂದು ಅಪ್ಪಾಜಿ, ಶಿವಣ್ಣ ಜೊತೆ 100ನೇ ದಿನದ ಪ್ರದರ್ಶನದಲ್ಲಿ ಸಿನಿಮಾ ನೋಡಿದಾಗ ಕನಸು ನನಸಾಯಿತು ಎಂದು ಅನಿಸಿತ್ತು. ಇವತ್ತಿಗೂ ಹಾಗೆ ಇದೆ ಅಪ್ಪು ಲವ್ ಸ್ಟೋರಿ, ಜನಕ್ಕೆ ಕನೆಕ್ಟ್ ಆಗಿದೆ ಎನ್ನುತ್ತಾ ಪುನೀತ್ ಬರ್ತ್‌ಡೇಗೆ ರಕ್ಷಿತಾ ವಿಶ್ ಮಾಡಿದರು.
ಅಭಿಮಾನಿಗಳೊಂದಿಗೆ ‘ಅಪ್ಪು’ ಸಿನಿಮಾ ವೀಕ್ಷಿಸಿದ ರಕ್ಷಿತಾ
ಇಂದು ಮರು ಬಿಡುಗಡೆ ಆಗಿರುವ ಪುನೀತ್ ರಾಜ್‌ಕುಮಾರ್ ‘ಅಪ್ಪು’ ಸಿನಿಮಾವನ್ನು ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ನಟಿ ರಕ್ಷಿತಾ ವೀಕ್ಷಿಸಿದ್ದಾರೆ. ಅಭಿಮಾನಿಗಳೊಂದಿಗೆ ರಕ್ಷಿತಾ ‘ಅಪ್ಪು’ ಚಿತ್ರ ನೋಡಿದ್ದಾರೆ. ಈ ವೇಳೆ, ಅರಸು, ಆಕಾಶ್ ಚಿತ್ರಗಳ ನಿರ್ದೇಶಕ ಮಹೇಶ್ ಬಾಬು ಸಹ ಉಪಸ್ಥಿತರಿದ್ದರು. ಅಲ್ಲದೆ ‘ಬಿಗ್ ಬಾಸ್’ ಸ್ಪರ್ಧಿಗಳಾದ ಕಿಶನ್, ರಕ್ಷಕ್ ಬುಲೆಟ್, ಕಾರ್ತಿಕ್ ಮಹೇಶ್ , ನಮ್ರತಾ ಗೌಡ ಕೂಡ ‘ಅಪ್ಪು’ ಸಿನಿಮಾ ನೋಡಿದ್ದಾರೆ.
ಮತ್ತೊಂದು ವಿಶೇಷ ಅಂದ್ರೆ, ಇವತ್ತು ಅಶ್ವಿನಿ ಮೇಡಂ ಅವರ ಹುಟ್ಟುಹಬ್ಬ. ಹಾಗಾಗಿ ಎಲ್ಲಾ ಅಪ್ಪು ಅಭಿಮಾನಿಗಳ ಪರವಾಗಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು, ಲವ್ ಯೂ ಅಪ್ಪು ಸರ್ ಎಂದಿದ್ದಾರೆ.
ಪುರಿ ಜಗನ್ನಾಥ್ ನಿರ್ದೇಶನದ ‘ಅಪ್ಪು’ ಸಿನಿಮಾದಲ್ಲಿ ಪುನೀತ್‌ಗೆ ನಾಯಕಿಯಾಗಿ ರಕ್ಷಿತಾ ನಟಿಸಿದ್ದರು. ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದರು. 2002ರಲ್ಲಿ ಈ ಸಿನಿಮಾದ ಮೂಲಕ ಪುನೀತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.
ಅಪ್ಪು ಸರ್ ಫ್ಯಾನ್ಸ್ಗೆ ಇವತ್ತು ಹಬ್ಬ: ಆಂಕರ್ ಅನುಶ್ರೀ
ಅಪ್ಪು ಸರ್ ಫ್ಯಾನ್ಸ್ಗೆ ಇವತ್ತು ಹಬ್ಬ, ಅಪ್ಪು’ ಸಿನಿಮಾ ಇವತ್ತು ರೀ-ರಿಲೀಸ್ ಆಗಿದೆ. ಆದರೆ.. ಅವರ ಸಿನಿಮಾ ನೋಡೋಕೆ, ಶಿಳ್ಳೆ ಹೊಡೆಯೋಕೆ ಮತ್ತೆ ಒಂದು ವರ್ಷ ಕಾಯಬೇಕು. ಅವರ ಚಿತ್ರದ ಲಾಂಚ್ ಟೈಮ್‌ನಲ್ಲಿ ನಾವು ಹೇಗೆ ಸಂಭ್ರಮಿಸುತ್ತಿದ್ದೆವೋ ಈಗಲೂ ಹಾಗೇ ಸಂಭ್ರಮಿಸುತ್ತಿದ್ದೇವೆ ಎಂದು ನಿರೂಪಕಿ ಅನುಶ್ರೀ ಹೇಳಿದ್ದಾರೆ. ಅವರಿಂದು ವೀರೇಶ್ ಚಿತ್ರಮಂದಿರದಲ್ಲಿ “ಅಪ್ಪು” ಸಿನಿಮಾ ವೀಕ್ಷಿಸಿ ಮಾಧ್ಯಮದವರ ಜೊತೆ ಮಾತನಾಡಿದರು.