– ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಕಿರುತೆರೆಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ ‘ಸರಿಗಮಪ ಲಿಟಲ್ ಚಾಂಪ್ಸ್’ನ ಮಹಾ ಫಿನಾಲೆಗೆ ಅದ್ದೂರಿ ತೆರೆ ಬಿದ್ದಿದೆ. ಹಲವು ವಾರಗಳ ಕಾಲ ತಮ್ಮ ಗಾಯನದ ಮೂಲಕ ಸಂಗೀತಪ್ರಿಯರ ಮನ ಗೆದ್ದಿದ್ದ ಬಾಲಪ್ರತಿಭೆಗಳ ಪೈಕಿ, ಕೊನೆಗೂ ಮಂಗಳೂರಿನ ಅಶ್ಮಿತ್ ವಿನ್ನರ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಗಾಯನದ ಜೊತೆಗೆ ವಯೊಲಿನ್ ವಾದನದಲ್ಲೂ ಅದ್ಭುತ ಪ್ರತಿಭೆ ಮೆರೆದ ಅಶ್ಮಿತ್, ಫಿನಾಲೆಯಲ್ಲಿ ಎದುರಾದ ಕಠಿಣ ಪೈಪೋಟಿಯನ್ನು ಮೆಟ್ಟಿ ನಿಂತು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಗಾಯಕಿ ಇಂದು ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಬೆಳೆದ ಅಶ್ಮಿತ್‌ಗೆ ವಿಜೇತ ಟ್ರೋಫಿಯೊಂದಿಗೆ ಬರೋಬ್ಬರಿ 20 ಲಕ್ಷ ರೂಪಾಯಿ ನಗದು ಬಹುಮಾನ ದೊರೆತಿದೆ.

ಅಶ್ಮಿತ್ ವರ್ಸಸ್ ಅಚಿಂತ್ಯ: ಕೊನೆಯ ಹಂತದಲ್ಲಿ ರೋಚಕ ಕದನ!

ಫಿನಾಲೆಯ ಅಂತಿಮ ಸುತ್ತು ನಿಜಕ್ಕೂ ರೋಚಕವಾಗಿತ್ತು. ಮಂಗಳೂರಿನ ಮತ್ತೊಬ್ಬ ಪ್ರತಿಭಾವಂತ ಬಾಲಗಾಯಕ ಅಚಿಂತ್ಯ ರೈ ತಮ್ಮ ಮಿಮಿಕ್ರಿ ಮತ್ತು ಗಾಯನದ ಮೂಲಕ ಪ್ರೇಕ್ಷಕರನ್ನು ರಂಜಿಸಿ, ಅಶ್ಮಿತ್‌ಗೆ ಪ್ರಬಲ ಪೈಪೋಟಿ ನೀಡಿದರು. ಎರಡು ಹಂತಗಳಲ್ಲಿ ನಡೆದ ಅಂತಿಮ ಸಂಗೀತ ಸಮರದಲ್ಲಿ ಅಶ್ಮಿತ್ ಮತ್ತು ಅಚಿಂತ್ಯ ನಡುವೆ ಚಾಂಪಿಯನ್ ಪಟ್ಟಕ್ಕಾಗಿ ನೇರ ಹಣಾಹಣಿ ಏರ್ಪಟ್ಟಿತ್ತು. ತೀರ್ಪುಗಾರರ ಮೆಚ್ಚುಗೆ ಜೊತೆಗೆ ವೀಕ್ಷಕರ ಮನ ಗೆದ್ದ ಅಶ್ಮಿತ್, ಅಂತಿಮವಾಗಿ ಗೆಲುವಿನ ನಗೆ ಬೀರಿದರು. ಅಚಿಂತ್ಯ ರೈ ಮೊದಲ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದು, ಅವರಿಗೆ ಟ್ರೋಫಿಯೊಂದಿಗೆ 15 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗಿದೆ.

ಫಿನಾಲೆಯಲ್ಲಿ ಮಿಂಚಿದ ಆರು ಪ್ರತಿಭೆಗಳು

ಈ ಬಾರಿಯ ‘ಸರಿಗಮಪ ಲಿಟಲ್ ಚಾಂಪ್ಸ್’ನಲ್ಲಿ ಫಿನಾಲೆ ತಲುಪಿದ್ದ ಆರು ಸ್ಪರ್ಧಿಗಳೂ ತಮ್ಮದೇ ಆದ ವಿಶೇಷ ಪ್ರತಿಭೆಯಿಂದ ಗಮನ ಸೆಳೆದಿದ್ದರು.

1001754286

ಅಶ್ಮಿತ್: ಗಾಯನದ ಜೊತೆಗೆ ವಯೊಲಿನ್ ವಾದನದಲ್ಲೂ ಮಿಂಚಿದ ಮಂಗಳೂರಿನ ಬಹುಮುಖ ಪ್ರತಿಭೆ.

ಅಚಿಂತ್ಯ ರೈ: ಮಿಮಿಕ್ರಿ ಮತ್ತು ಗಾಯನ ಎರಡರಲ್ಲೂ ಸೈ ಎನಿಸಿಕೊಂಡ ಮಂಗಳೂರಿನ ಪ್ರತಿಭಾವಂತ ಬಾಲಗಾಯಕ.

ಮಹನ್ಯ ಗರು ಪಾಟೀಲ್: ಉತ್ತರ ಕರ್ನಾಟಕದ ಜಾನಪದ ಸೊಗಡು ಮತ್ತು ಶಾಸ್ತ್ರೀಯ ಗಾಯನದ ಮಿಶ್ರಣದ ಮೂಲಕ ಗಮನ ಸೆಳೆದ ಕಂಠ.

ಹರುಷ್ ನವೀನ್‌ಕೃಷ್ಣ: ಖ್ಯಾತ ನಟ ಶ್ರೀನಿವಾಸಮೂರ್ತಿ ಅವರ ಮೊಮ್ಮಗ ಹಾಗೂ ನಟ ನವೀನ್ ಕೃಷ್ಣ ಅವರ ಪುತ್ರ. ಕಲಾ ಪರಂಪರೆಯ ನಡುವೆಯೂ ಸ್ವಂತ ಪ್ರತಿಭೆ ಮತ್ತು ಪರಿಶ್ರಮದಿಂದ ಗುರುತಿಸಿಕೊಂಡವರು.

ಜಯಲಕ್ಷ್ಮಿ: ವಿಭಿನ್ನ ಧ್ವನಿ ಹಾಗೂ ವಿಶಿಷ್ಟ ಗಾಯನ ಶೈಲಿಯಿಂದ ‘ಚಿನ್ನದ ಕಂಠ’ ಎಂಬ ಮೆಚ್ಚುಗೆ ಪಡೆದ ಪ್ರತಿಭೆ.

ಅವ್ಯುಕ್ತ್: ಶಾಸ್ತ್ರೀಯ ಗಾಯನದ ಮೂಲಕ ತಮ್ಮ ವಿದ್ವತ್ ಪ್ರದರ್ಶಿಸಿ ಗಮನ ಸೆಳೆದ ಬೆಂಗಳೂರಿನ ಪ್ರತಿಭಾವಂತ.

ಆರು ವಿಭಿನ್ನ ಪ್ರತಿಭೆಗಳ ನಡುವೆ ನಡೆದ ಈ ಸಂಗೀತ ಸಮರದಲ್ಲಿ, ಅಂತಿಮವಾಗಿ ವಯೊಲಿನ್ ನಾದದ ಜೊತೆಗೆ ಗಾಯನದಲ್ಲೂ ಮೋಡಿ ಮಾಡಿದ ಮಂಗಳೂರಿನ ಅಶ್ಮಿತ್ ಗೆಲುವಿನ ಕಿರೀಟ ಧರಿಸಿದ್ದಾರೆ. ಇನ್ನು ಚಿಕ್ಕ ವಯಸ್ಸಿನಲ್ಲೇ ದೊಡ್ಡ ವೇದಿಕೆಯಲ್ಲಿ ತಮ್ಮ ಪ್ರತಿಭೆಯ ಛಾಪು ಮೂಡಿಸಿರುವ ಅಶ್ಮಿತ್ ಅವರ ಈ ಗೆಲುವು, ಮಂಗಳೂರಿನ ಸಂಗೀತ ಲೋಕಕ್ಕೂ ಹೆಮ್ಮೆಯ ಕ್ಷಣವಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ