– ರಾಘವೇಂದ್ರ ಅಡಿಗ ಎಚ್ಚೆನ್.
ಈಗಾಗಲೇ ಹಲವಾರು ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಗುರುತಿಸಿಕೊಂಡಿರುವ ರಾಜೇಶ್ ಮೂರ್ತಿ ಇದೀಗ ಮಗನ ಚಿತ್ರಕ್ಕಾಗಿ ಮತ್ತೊಮ್ಮೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಆ ಚಿತ್ರದ ಹೆಸರು ಬ್ಲಡಿ ಬಾಬು. ಇದೇ ಜೂನ್ ನಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಮೂಲಕ ಹಿರಿಯ ಛಾಯಾಗ್ರಾಹಕ, ನಿರ್ಮಾಪಕ, ನಿರ್ದೇಶಕ ಹಾಗೂ ನಿರ್ಮಾಪಕರ ಸಂಘದ ಪ್ರಥಮ ಅಧ್ಯಕ್ಷರೂ ಆಗಿದ್ದ ಹೆಚ್.ಎಂ.ಕೆ. ಮೂರ್ತಿ ಅವರ ಮೊಮ್ಮಗ ಯಶಸ್ವಾ ಎರಡನೇ ಬಾರಿಗೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರಕ್ಕೆ ಅವರ ತಂದೆ ರಾಜೇಶ್ ಮೂರ್ತಿ ಅವರೇ ಆಕ್ಷನ್ ಕಟ್ ಹೇಳಿದ್ದಾರೆ. ಏಂಜಲ್ ಡ್ರೀಮ್ಸ್ ಎಂಟರ್ ಟೈನ್ ಮೆಂಟ್ಸ್ ಮೂಲಕ ಡೋಮ್ನಿಕ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಸೈಕಲಾಜಿಕಲ್, ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಬ್ಲಡಿ ಬಾಬು ಚಿತ್ರದ ಚಿತ್ರೀಕರಣವನ್ನು ಬೆಂಗಳೂರು, ನಂದಿ ಹಿಲ್ಸ್ ಹಾಗೂ ಚಿಕ್ಕಮಗಳೂರು ಸುತ್ತಮುತ್ತ 25ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ರೀರೆಕಾರ್ಡಿಂಗ್ ಕಾರ್ಯ ನಡೆಯುತ್ತಿದೆ. ನವನಟಿ ಸ್ಮಿತಾ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಬಾಲಿವುಡ್ ನಲ್ಲಿ ಗುರುತಿಸಿಕೊಂಡಿರುವ ದಿಲೀಪ್ ಕುಮಾರ್ ಅವರು ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ. ನಟ, ರಾಜಕಾರಣಿ ನೆ.ಲ.ನರೇಂದ್ರ ಬಾಬು ಅವರು ಚಿತ್ರದಲ್ಲಿ ನಾಯಕಿಯ ತಂದೆಯ ಪಾತ್ರ ನಿರ್ವಹಿಸಿದ್ದಾರೆ. ಹಿಪ್ನಟೈಸ್ ಮೂಲಕ ಎದುರಿದ್ದವರನ್ನು ತನ್ನ ಕೈವಶ ಮಾಡಿಕೊಳ್ಳುವ ತಂತ್ರ ಕಲಿತ ಖಳನಾಯಕನ ವಿರುದ್ದ, ತನ್ನ ಬುದ್ದಿ ಮತ್ತು ಶಕ್ತಿಯನ್ನು ಉಪಯೋಗಿಸಿ ನಾಯಕ ಹೇಗೆ ಗೆದ್ದು ಬರುತ್ತಾನೆ ಎನ್ನುವುದೇ ಚಿತ್ರದ ಕಾನ್ಸೆಪ್ಟ್.
ಚಿತ್ರರಂಗದಲ್ಲಿ ಪ್ರತಿಭಾವಂತ ಕಲಾವಿದನಾಗಿ ಗುರುತಿಸಿಕೊಳ್ಳಬೇಕೆಂಬ ಆಸೆ ಇಟ್ಟುಕೊಂಡಿರುವ ಯಶಸ್ವಾ ಈಗಾಗಲೇ ಒಂದೆರಡು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರಿಗೆ ಪರಿಚಿತರಾಗಿದ್ದಾರೆ.
ಈ ಹಿಂದೆ ಲಿಪ್ ಸ್ಟಿಕ್ ಮರ್ಡರ್, ಜೋಕರ್ ಜೋಕರ್, ಸೈಕೋಮ್ಯಾಕ್ಸ್ ನಂಥ ಕ್ರೈಂ, ಥ್ರಿಲ್ಲರ್ ಚಿತ್ರಗಳನ್ನೇ ಮಾಡಿಕೊಂಡು ಬಂದಿದ್ದ ರಾಜೇಶ್ ಮೂರ್ತಿ ಅವರು ಮತ್ತೊಮ್ಮೆ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಕೈ ಹಾಕಿದ್ದಾರೆ. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿ ಸಂಕಲನದ ಕೆಲಸವನ್ನೂ ನಿರ್ವಹಿಸಿದ್ದಾರೆ. ವಿಭಿನ್ನ ಶೈಲಿಯ 4 ಸಾಹಸ ದೃಶ್ಯಗಳು ಚಿತ್ರದಕ್ಲಿವೆ.
ಜತೆಗೆ ಈ ಚಿತ್ರದಲ್ಲಿ 3 ಹಾಡುಗಳಿದ್ದು ನಿತೀಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿನೋದ್ ಆರ್.ಅವರು ಛಾಯಾಗ್ರಹಣ ಕಾರ್ಯ ನಿರ್ವಹಿಸಿದ್ದಾರೆ.
ಸದ್ಯದಲ್ಲೇ ಚಿತ್ರದ ಟ್ರೈಲರ್ ರಿಲೀಸ್ ಮಾಡುವ ಯೋಜನೆಯಿದ್ದು, ಜೂನ್ ವೇಳೆಗೆ ಚಿತ್ರವನ್ನು ತೆರೆಗೆ ತರುವ ಯೋಜನೆಯಿದೆ ಎಂದು ನಿರ್ದೇಶಕ ರಾಜೇಶ್ ಮೂರ್ತಿ ತಿಳಿಸಿದ್ದಾರೆ.