–  ರಾಘವೇಂದ್ರ ಅಡಿಗ ಎಚ್ಚೆನ್.

‘ಭೇಲ್’ ಸಿನಿಮಾ ಪ್ರಚಾರಕ್ಕಾಗಿ ಬಳ್ಳಾರಿ ಹಾಗೂ ಹೊಸಪೇಟೆಗೆ ಆಗಮಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಬಳ್ಳಾರಿಯಲ್ಲಿ ಬೃಹತ್ ಹಾರ ಹಾಕಿ ಸ್ವಾಗತಿಸಿದರೆ, ಹೊಸಪೇಟೆಯಲ್ಲಿ ಹೂವಿನ ಮಳೆ ಸುರಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಬಳ್ಳಾರಿಯ ನಟರಾಜ್ ಸಿನಿ ಕಾಂಪ್ಲೆಕ್ಸ್‌ಗೆ ಆಗಮಿಸಿದ ಶಿವರಾಜ್‌ಕುಮಾರ್ ಅವರನ್ನು ನೋಡಲು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಈ ವೇಳೆ JCB ಮೂಲಕ ಬೃಹತ್ ಹಾರ ಹಾಕಿ ಶಿವಣ್ಣನಿಗೆ ಭರ್ಜರಿ ಸ್ವಾಗತ ಕೋರಲಾಯಿತು.

ಬಳಿಕ ಶಿವರಾಜ್‌ಕುಮಾರ್ ಅಭಿಮಾನಿಗಳೊಂದಿಗೆ ಕೆಲಕಾಲ ‘ಭೇಲ್’ ಸಿನಿಮಾ ವೀಕ್ಷಿಸಿ, ಅವರೊಂದಿಗೆ ಸಮಯ ಕಳೆದರು. ನೆಚ್ಚಿನ ನಟನನ್ನು ಹತ್ತಿರದಿಂದ ಕಂಡ ಅಭಿಮಾನಿಗಳು ಸಂಭ್ರಮಿಸಿದರು.

ಹೊಸಪೇಟೆಯಲ್ಲೂ ಶಿವಣ್ಣನಿಗೆ ಹೂವಿನ ಮಳೆ

ಬಳ್ಳಾರಿ ಬಳಿಕ ಹೊಸಪೇಟೆಗೆ ತೆರಳಿದ ಶಿವರಾಜ್‌ಕುಮಾರ್ ಅವರಿಗೆ ಅಲ್ಲಿಯೂ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ದೊರೆಯಿತು. ನಟಿ ಸಂಜನಾ ಆನಂದ್ ಅವರೊಂದಿಗೆ ಅಪ್ಪು ಪುತ್ಥಳಿಗೆ ಶಿವಣ್ಣ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಈ ವೇಳೆ ನೆರೆದಿದ್ದ ಅಭಿಮಾನಿಗಳು ಶಿವಣ್ಣನ ಮೇಲೆ ಹೂವಿನ ಮಳೆ ಸುರಿಸಿ ಸಂಭ್ರಮಿಸಿದರು. ಶಿವರಾಜ್‌ಕುಮಾರ್ ಕೂಡ ಅಭಿಮಾನಿಗಳತ್ತ ಕೈಬೀಸಿ ಸಂತಸ ಹಂಚಿಕೊಂಡರು. ಹೊಸಪೇಟೆಯ ಲಕ್ಷ್ಮೀ ಟಾಕೀಸ್‌ಗೆ ಭೇಟಿ ನೀಡಿದ ಶಿವಣ್ಣ ಕೆಲಕಾಲ ಅಭಿಮಾನಿಗಳೊಂದಿಗೆ ಸಮಯ ಕಳೆದರು. ‘ಭೇಲ್’ ಸಿನಿಮಾ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡದೊಂದಿಗೆ ಶಿವಣ್ಣ ಬಳ್ಳಾರಿ ಮತ್ತು ಹೊಸಪೇಟೆಯಲ್ಲಿ ಪ್ರಚಾರ ನಡೆಸಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ