ನಟ ಸಲ್ಮಾನ್ ಖಾನ್ ಅಭಿನಯದ ಚಿತ್ರ 'Battle of Galwan' ಟೀಸರ್ ಚೀನಾದಲ್ಲಿ ವಿವಾದದ ಕಿಡಿ ಹೊತ್ತಿಸಿದೆ. ವಾಸ್ತವ ಸತ್ಯಗಳನ್ನು ತಿರುಚಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ಕಿಡಿಕಾರಿವೆ.
2020 ರಲ್ಲಿ ಪೂರ್ವ ಲಡಾಖ್‌ನ ಗಾಲ್ವಾನ್‌ನಲ್ಲಿ ನಡೆದಿದ್ದ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯನ್ನು ಈ ಚಿತ್ರ ಆಧರಿಸಿದ್ದು, ಅಪೂರ್ವ ಲಖಿಯಾ ನಿರ್ದೇಶಿಸಿದ್ದಾರೆ. ಝೈನ್ ಶಾ, ಅಂಕುರ್ ಭಾಟಿಯಾ ಮತ್ತು ವಿಪಿನ್ ಭಾರದ್ವಾಜ್ ಜೊತೆಗೆ ಚಿತ್ರಾಂಗದಾ ಸಿಂಗ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಪಡೆಗಳ ಒಳನುಗ್ಗುವ ಹೋರಾಟದಲ್ಲಿ ಮಡಿದ 16 ಬಿಹಾರ ರೆಜಿಮೆಂಟ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ಬಿಕ್ಕುಮಲ್ಲ ಸಂತೋಷ್ ಬಾಬು ಪಾತ್ರದಲ್ಲಿ ನಟಿಸಿದ್ದಾರೆ.
ಚೀನಾ ಮಾಧ್ಯಮಗಳು ಹೇಳುವಂತೆ, ಚೀನಾದ ಸರ್ಕಾರಿ ಪತ್ರಿಕೆ ಗ್ಲೋಬಲ್ ಟೈಮ್ಸ್‌ನಲ್ಲಿನ ಲೇಖನವೊಂದರಲ್ಲಿ ಜೂನ್ 2020 ರ ಘರ್ಷಣೆಯ ಘಟನೆಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಆದರೆ ವಾಸ್ತವ ಸತ್ಯಗಳು ಹೊಂದಿಕೆಯಾಗುವುದಿಲ್ಲ ಎಂದು ಆರೋಪಿಸಿದೆ.
'ಸೋ ಕಾಲ್ಡ್ ತಜ್ಞರು' ಎಂದು ಉಲ್ಲೇಖಿಸಿದ್ದು, 'Battle of Galwan'ಒಂದು ಟಾಪ್ ಸಿನಿಮಾ ಎಂಬ ವರದಿಗಳನ್ನು ತಳ್ಳಿಹಾಕಿದ್ದಾರೆ. ಸಂತೋಷ್ ಬಾಬು ಪಾತ್ರವನ್ನು 'ಸೋ ಕಾಲ್ಡ್ ಪ್ರಮುಖ ಪಾತ್ರ' ಎಂದು ಹೇಳಿ ಧೈರ್ಯಶಾಲಿ, ತ್ಯಾಗಿ ಎಂಬುದನ್ನು ನಿರಾಕರಿಸಿವೆ.
ಬಾಲಿವುಡ್ ಸಿನಿಮಾಗಳು ಹೆಚ್ಚಿನವು ಮನರಂಜನೆ ಕೇಂದ್ರಿತ, ಭಾವನಾತ್ಮಕವಾಗಿ ತುಂಬಿರುವ ಚಿತ್ರವಾಗಿರುತ್ತವೆ. ಆದರೆ ಯಾವುದೇ ಸಿನಿಮೀಯ ಉತ್ಪ್ರೇಕ್ಷೆಯು ಇತಿಹಾಸವನ್ನು ಪುನಃ ಬರೆಯಲು ಅಥವಾ ಚೀನಾದ ಸಾರ್ವಭೌಮ ಪ್ರದೇಶವನ್ನು ರಕ್ಷಿಸಲು PLA ಯ ನಿರ್ಣಯವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಗಾಲ್ವಾನ್ ಕಣಿವೆ ವಾಸ್ತವ ನಿಯಂತ್ರಣ ರೇಖೆಯಲ್ಲಿದ್ದು, ಪೂರ್ವ ಲಡಾಖ್‌ನಲ್ಲಿರುವ ಅಕ್ಸಾಯ್ ಚಿನ್ ಪ್ರದೇಶಕ್ಕೆ ಸಮೀಪದಲ್ಲಿದೆ.
ಇನ್ನೂ ಗ್ಲೋಬಲ್ ಟೈಮ್ಸ್ ನಲ್ಲಿ ಗಾಲ್ವಾನ್ ಕಣಿವೆಯು ನೈಜ ನಿಯಂತ್ರಣ ರೇಖೆಯ ಚೀನಾದ ಬದಿಯಲ್ಲಿದೆ ಎಂದು ತಪ್ಪಾಗಿ ಹೇಳಲಾಗಿದೆ. ಇದರಲ್ಲಿ ಜೂನ್ 2020 ರ ಘರ್ಷಣೆಗೆ ಭಾರತವೇ ಕಾರಣ ಎನ್ನಲಾಗಿದೆ. ಭಾರತೀಯ ಪಡೆಗಳು LAC ಅನ್ನು ದಾಟಿ ಹೋರಾಟವನ್ನು ಪ್ರಚೋದಿಸಿತು ಎಂದು ಹೇಳುತ್ತದೆ.
ಭಾರತೀಯ ಸೇನೆಯ ಕೃತ್ಯಗಳು ಗಡಿ ಪ್ರದೇಶಗಳ ಸ್ಥಿರತೆಯನ್ನು ಗಂಭೀರವಾಗಿ ಹಾಳುಮಾಡಿದೆ. ಚೀನಾದ ಸಿಬ್ಬಂದಿಯ ಜೀವಕ್ಕೆ ಅಪಾಯವನ್ನುಂಟುಮಾಡಿದೆ. ಗಡಿ ವಿಷಯದ ಬಗ್ಗೆ ಉಭಯ ದೇಶಗಳ ನಡುವೆ ಮಾಡಿಕೊಂಡ ಒಪ್ಪಂದಗಳನ್ನು ಉಲ್ಲಂಘಿಸಿದೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳನ್ನು ನಿಯಂತ್ರಿಸುವ ಮೂಲ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಹೇಳಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಭಾರತ, ಭಾರತೀಯ ಚಲನಚಿತ್ರ ನಿರ್ದೇಶಕರು ಚೀನಾ ಮಾಧ್ಯಮಗಳ ವರದಿಗಳನ್ನು 'ಕಪೋಲಕಲ್ಪಿತ' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
Battle of Galwan'ಟೀಸರ್ ಗೆ ಚೀನಾದ ಪ್ರತಿಕ್ರಿಯೆ ಸ್ಪಷ್ಟವಾಗಿದೆ. ಇದು ನಮ್ಮ ಶತ್ರು ರಾಷ್ಟ್ರದ ಚಟುವಟಿಕೆಗಳು ಬಹಿರಂಗವಾಗಿದ್ದು, ಅದನ್ನು ಖಂಡಿತವಾಗಿ ನೋಡುವುದಾಗಿ ಬಾಲಿವುಡ್ ಚಿತ್ರ ನಿರ್ದೇಶಕ ಅಶೋಕ್ ಪಂಡಿತ್ ಹೇಳಿದ್ದಾರೆ.
ಗ್ಲೋಬಲ್ ಟೈಮ್ಸ್ ಚೀನಾ"ಸರ್ಕಾರದ ಮುಖವಾಣಿ" ಆಗಿರುವುದರಿಂದ ಅಂತಹ ಪ್ರತಿಕ್ರಿಯೆ ನೀಡಿರುವುದರಲ್ಲಿ ಅಚ್ಚರಿಯೇನಿಲ್ಲ ಎಂದು ನಟ ಮತ್ತು ನಿರ್ಮಾಪಕ ರಾಹುಲ್ ಮಿತ್ರ ಪ್ರತಿಕ್ರಿಯಿಸಿದ್ದಾರೆ.





