
ಮೈಸೂರಿನ ಸಾಂಪ್ರದಾಯಕ ಕುಟುಂಬದಲ್ಲಿ ಜನಿಸಿದ ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್ ಆವರಿಗೆ ಬಾಲ್ಯದಿಂದಲೂ ರಂಗಭೂಮಿಯತ್ತ ಆಸಕ್ತಿ ಇದ್ದ ಕಾರಣ, ಮೈಸೂರು ಮತ್ತು ಸುತ್ತಮುತ್ತಲು ಎಲ್ಲೇ ನಾಟಕಗಳು ನಡೆದರೂ ಅಲ್ಲಿ ಬಾಲಕ ಭಗವಾನ್ ಹಾಜರಿರುತ್ತಾರೆ. ಅದೇ ರೀತಿ ಓದಿನಲ್ಲಿಯೂ ಚುರುಕಾಗಿದ್ದ ಭಗವಾನ್ ಕೇವಲ ಪಠ್ಯಪುಸ್ತಕಗಳಲ್ಲದೇ ಅಂದಿನ ಕಾಲದ ಬಹುತೇಕ ಕನ್ನಡದ ಸಾಹಿತಿಗಳ ಕಾದಂಬರಿಗಳನ್ನು ಓದುತ್ತಲೇ ಚಿತ್ರರಂಗದತ್ತ ಹರಿಸುತ್ತಾರೆ ತಮ್ಮ ಚಿತ್ತ. ಆರಂಭದಲ್ಲಿ ಸಿನಿಮಾ ರೆಪ್ರೆಸೆಂಟೆಟಿವ್ ಆಗಿ ಇಡೀ ರಾಜ್ಯವನ್ನು ಸುತ್ತಾಡಿದ ಎಸ್.ಕೆ. ಭಗವಾನ್ 1956ರ ವೇಳೆಗೆ ಕಣಗಾಲ್ ಪ್ರಭಾಕರ್ ಶಾಸ್ತ್ರಿಗಳಿಗೆ ಭಾಗ್ಯೋದಯ ಚಿತ್ರದಲ್ಲಿ ಸಹಾಯಕರಾಗಿ ಸೇರಿಕೊಳ್ಳುತ್ತಾರೆ. ಅಂದೆಲ್ಲಾ ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಚಿತ್ರಗಳು ಮದರಾಸಿನಲ್ಲಿ ನಡೆಯುತ್ತಿದ್ದ ಕಾರಣ ಮದರಾಸಿಗೆ ಹೋಗಿ ಅಲ್ಲಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗ, ಅದಾಗಲೇ ಛಾಯಾಗ್ರಾಹಕರಾಗಿ ಸುಪ್ರಸಿದ್ಧರಾಗಿದ್ದ ದೊರೈ ಅವರ ಪರಿಚಯವಾಗುತ್ತದೆ.

ಹೀಗೆ ಪರಿಚಯವಾದ ಇವರಿಬ್ಬರು ದೊರೈ-ಭಗವಾನ್ ಎಂಬ ಎರಡು ದೇಹ ಒಂದೇ ಆತ್ಮವಾದ ಕಥೆ ನಿಜಕ್ಕೂ ರೋಚಕವಾಗಿದೆ. ಚಿತ್ರಂರಂಗದಲ್ಲಿ ಸಾಧನೆ ಮಾಡುವ ಸಲುವಾಗಿ ದೂರದ ಮದರಾಸಿನಲ್ಲಿ ಕೆಲಸಕ್ಕಾಗಿ ಅಲೆಯುತ್ತಿದ್ದ ಭಗವಾನ್ ಅವರಿಗೆ ಅದೊಮ್ಮೆ ಕೈಯ್ಯಲ್ಲಿ ಕಾಸಿಲ್ಲದೇ ಒಂದು ಹೊತ್ತಿನ ಊಟಕ್ಕಾಗಿ ಪರಿತಪಿಸುತಿದ್ದ ಕಾಲವಾಗಿತ್ತು. ಕನ್ನಡ ಚಿತ್ರಗಳು ಚಿತ್ರೀಕರಣವಾಗುತ್ತಿದ್ದ ಸ್ಟುಡಿಯೋಗಳ ಬಳಿ ಕೆಲಸಕ್ಕಾಗಿ ಕಾಯುತ್ತಿದ್ದಲ್ಲದೇ, ಊಟ ಮತ್ತು ತಿಂಡಿಯ ಸಮಯದಲ್ಲಿ ಹತ್ತಿರಲ್ಲೇ ಇದ್ದ ಹೋಟೇಲ್ ಬಳಿ ಹೋಗಿ ನಿಂತು ಯಾರಾದರೂ ಪರಿಚಯದವರು ಬಂದರೆ ಅವರಿಗೆ ನಮಸ್ಕಾರ ಹಾಕಿ ಅವರೇನಾದರೂ ಮನಸ್ಸು ಮಾಡಿ ತಿಂಡಿ, ಊಟ ಕೊಡಿಸಿದರೆ ಉಂಟು, ಇಲ್ಲದಿದ್ದರೆ ಹೊಟ್ಟೆಗೆ ತಣ್ಣೀರು ಬಟ್ಟೆಯನ್ನು ಕಟ್ಟಿಕೊಂಡು ನಿದ್ರಿಸುತ್ತಿದಂತಹ ಕಾಲವಾಗಿರುತ್ತದೆ, ಅದೊಮ್ಮೆ ಎರಡು ದಿನಗಳ ಕಾಲ ಪರಿಚಿತರು ಯಾರೂ ಸಹಾ ಸಿಗದೇ ನಿತ್ರಾಣರಾಗಿದ್ದ ಭಗವಾನರಿಗೆ ಹೋಟೆಲ್ ಬಳಿ ದೊರೈ ಅವರು ಸಿಗುತ್ತಾರೆ. ಅಲ್ಪ ಸ್ವಲ್ಪ ಪರಿಚಯವಿದ್ದ ಕಾರಣ, ತಮ್ಮ ಸ್ವಾಭಿಮಾನವನ್ನೆಲ್ಲಾ ಬದಿಗಿಟ್ಟು, ಊಟ ಮಾಡಿ ಎರಡು ದಿನಗಳಾಗಿವೆ ಸ್ವಲ್ಪ ಹಣ ಇದ್ದರೆ ಕೊಡಿ ನಂತರ ಹಿಂದಿರುಗಿಸುತ್ತೇನೆ ಎಂದು ಕೇಳಿದ ತಕ್ಷಣ ಒಂದು ಕ್ಷಣವೂ ಯೋಚಿಸದ ದೊರೈ ಅವರು ತಮ್ಮಲ್ಲಿದ್ದ 50 ಪೈಸೆ ಹಣವನ್ನು ಕೊಟ್ಟು ಸರಸರನೆ ಹೊರಟು ಹೋಗುತ್ತಾರೆ. ಬದುಕಿದೆಯಾ ಬಡ ಜೀವ ಎಂದು ದೊರೈ ಅವರು ನೀಡಿದ್ದ ಹಣದಲ್ಲಿ ಭಗವಾನ್ ಅವರು ಹೊಟ್ಟೆ ತುಂಬಾ ಊಟ ಮಾಡುತ್ತಾರೆ. ಈ ಪ್ರಸಂಗವಾದ ಕೆಲವು ದಿನಗಳ ನಂತರ ಅವರಿಗೆ ತಿಳಿದು ಬಂದ ವಿಷಯವೆಂದರೆ, ಅಂದು ದೊರೈ ಅವರ ಬಳಿಯೂ ಕೇವಲ 50 ಪೈಸೆ ಇದ್ದಿದ್ದು, ಅದನ್ನು ಭಗವಾನ್ ಅವರಿಗೆ ಕೊಟ್ಟು ತಾವು ಉಪವಾಸ ಮಾಡಿರುತ್ತಾರೆ. ಹೀಗೆ ಎಂಟಾಣೆಯೊಂದಿಗೆ ಆರಂಭವಾದ ಅವರಿಬ್ಬರ ಗೆಳೆನ ಮುಂದೆ ಸುಮಾರು ಮೂರು ದಶಕಗಳ ಕಾಲ ಮುಂದುವರೆದಿದ್ದು ಈಗ ಇತಿಹಾಸ.





