
ಅದೊಂದು ಏಕಾದಶಿಯ ದಿನ ಪಾಂಡವರಲ್ಲಿ ಅಗ್ರಜನಾದ ಶ್ರೀ ಧರ್ಮರಾಯನು ಭಗವಾನ್ ಶ್ರೀಕೃಷ್ಣನನ್ನು ದ್ವಾದಶಿಯ ಪಾರಾಯಣಕ್ಕೆ ತಮ್ಮ ಮನೆಗೆ ಬರಬೇಕೆಂದು ಆಹ್ವಾನಿಸಿದಾಗ ಶ್ರೀಕೃಷ್ಣನು ಸಹಾ ಬಹಳ ಸಂತೋಷದಿಂದ ಆ ಆಮಂತ್ರಣವನ್ನು ಸ್ವೀಕರಿಸುತ್ತಾನೆ. ಶ್ರೀಕೃಷ್ಣನು ಪಾಂಡವರ ಮನೆಗೆ ಬರುವ ವಿಷಯವನ್ನು ತಿಳಿದ ಕೌರವರ ಅಗ್ರಜ ದುರ್ಯೋಧನನು ಸಹಾ ಅದೇ ದ್ವಾದಶಿಯಂದು ತಮ್ಮ ಮನೆಗೆ ಬರಬೇಕೆಂದು ಶ್ರೀಕೃಷ್ಣನನ್ನು ಆಹ್ವಾನಿಸಿದಾಗ, ಶ್ರೀ ಕೃಷ್ಣನು ಯಾರ ಮನೆಗೆ ಊಟಕ್ಕೆ ಹೋಗಬೇಕೆಂಬ ಸಂದಿಗ್ಧ ಪರಿಸ್ಥಿತಿಗೆ ಒಳಗಾಗಿ ಕೆಲ ಕ್ಷಣ ಸಾವರಿಸಿಕೊಂಡು ಯಾರ ಮನೆಯಲ್ಲಿ 108 ತರಕಾರಿಗಳೊಂದಿಗೆ ಊಟವನ್ನು ತಯಾರಿಸುತ್ತಾರೋ, ಅಂತಹವರ ಮನೆಗೆ ತಾನು ಊಟಕ್ಕೆ ಬರುತ್ತೇನೆ ಎಂದು ತಿಳಿಸುವ ಮೂಲಕ ಬೀಸೋ ದೊಣ್ಣೆ ತಪ್ಪಿಸಿಕೊಂಡರೆ, ಸಾವಿರ ವರ್ಷ ಆಯಸ್ಸು ಎನ್ನುವಂತೆ ಪರಿಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾಗಿ ಶ್ರೀಕೃಷ್ಣನು ನಿಭಾಯಿಸುತ್ತಾನೆ.
ಕೇವಲ 108 ತರಕಾರಿಗಳು ತಾನೇ ಎಂಬ ದುರಹಂಕಾರದಿಂದ ದುರ್ಯೋಧನನು ತಕ್ಷಣವೇ ತನ್ನ ಎಲ್ಲಾ ಸೇವಕರನ್ನೂ ಕರೆಯಿಸಿ ತನ್ನ ರಾಜ್ಯದಲ್ಲಿರುವ ಎಲ್ಲಾ ಮಾರುಕಟ್ಟೆಗಳಿಂದಲೂ ತರಕಾರಿಗಳನ್ನು ತರಲು ಆಜ್ಞಾಪಿಸುತ್ತಾನೆ. ರಾಜನ ಆಜ್ಞೆಯಂತ ಆತನ ಭಟರು ಇಡೀ ರಾಜ್ಯವನ್ನು ಸುತ್ತಾಡಿ ತರಕಾರಿಗಳನ್ನು ಖರೀಧಿಸಿ ಅರಮನೆಯ ಪಾಕಶಾಲೆಗೆ ತಂದು ಲೆಕ್ಕ ಹಾಕಿದಾಗ ಅಂತಿಮವಾಗಿ ಅಲ್ಲಿ ಕೇವಲ 105 ಬಗೆಯ ತರಕಾರಿಗಳು ಮಾತ್ರಾ ಲಭ್ಯವಿದ್ದು ಶ್ರೀಕೃಷ್ಣನು ಹೇಳಿದ 108 ತರಕಾರಿಗಳಲ್ಲಿ 3 ತರಕಾರಿಗಳು ಬಾಕಿ ಉಳಿದಾಗ ಮತ್ತೆ ಆ 3 ತರಕಾರಿಗಳನ್ನು ತರಲು ತಿಣುಕಾಡುತ್ತಿರುತ್ತಾರೆ. ತನ್ನ ಸೇವಕರಿಗೆ ಸಿಗದೇ ಹೋದ ತರಕಾರಿ ಪಾಂಡವರು ಹೇಗೆ ತಂದಿರುತ್ತಾರೆ? ಎಂಬ ಕುತೂಹಲದಿಂದ ಪಾಂಡವರ ಮನೆಗೆ ತನ್ನ ಸೇವಕರನ್ನು ಗುಪ್ತವಾಗಿ ಕಳುಹಿಸಿ ಅಲ್ಲಿನ ಪರಿಸ್ಥಿತಿಯನ್ನು ನೋಡಿಕೊಂಡು ಬರಲು ಸೂಚಿಸುತ್ತಾನೆ. ಪಾಂಡವರ ಮನೆಯಿಂದ ಹಿಂದಿರುಗಿದ ಆ ಸೇವಕನು, ರಾಜಾ, ಪಾಂಡವರ ಅರಮನೆಯಲ್ಲಿ ನಾವು ತಂದ ಹಾಗೆ ಯಾವುದೇ ತರಕಾರಿಗಳನ್ನು ತರದೇ ಹೋದರೂ ಧರ್ಮರಾಜನು ಯಾವುದೇ ರೀತಿಯ ಆತಂತಕವಿಲ್ಲದೇ ನಿರಾಳರಾಗಿದ್ದಾರೆ ಎಂದು ತಿಳಿಸಿದಾಗ, ಆಹಾ!!, ತನ್ನ ಬಳಿ 108 ತರಕಾರಿಯಲ್ಲಿ 105 ಬಗೆಯ ತರಕಾರಿಗಳು ಇದ್ದು ಕೇವಲ 3 ತರಕಾರಿಗಳಲ್ಲಿ ಮಾತ್ರಾ ಇಲ್ಲದೇ ಇರುವುದನ್ನು ಮನ್ನಿಸಿ ಶ್ರೀಕೃಷ್ಣನು ತನ್ನ ಮನೆಗೆ ಭೋಜನಕ್ಕೆ ಬರುತ್ತಾನೆ ಎಂದು ನಂಬಿ ಭೂರೀ ಭೋಜನವನ್ನು ತಯಾರಿ ಮಾಡಲು ತನ್ನ ಬಾಣಗಿಸಿಗರಿಗೆ ಸೂಚಿಸುತ್ತಾನೆ.





