- ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡದ ಬಹುಚರ್ಚಿತ ಥ್ರಿಲ್ಲರ್ ಸಿನಿಮಾ ‘ರಾಕ್ಷಸಪುರದೊಳ್’ ಇದೀಗ ತೆಲುಗು ಪ್ರೇಕ್ಷಕರನ್ನು ರಂಜಿಸಲು ‘ರಾಕ್ಷಸಪುರಂ’ ಹೆಸರಿನಲ್ಲಿ ತೆರೆಗೆ ಬರುತ್ತಿದೆ. ಖ್ಯಾತ ನಿರ್ಮಾಪಕ ಮತ್ತು ವಿತರಕ ಕೆ.ಎಸ್. ರಾಮರಾವ್ ಈ ಚಿತ್ರವನ್ನು ತೆಲುಗಿನಲ್ಲಿ ಪ್ರಸ್ತುತಪಡಿಸುತ್ತಿದ್ದು, ಸಿನಿಮಾ ಮೇ 15ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಚಿತ್ರಕ್ಕೆ ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರ ಲಭಿಸಿದೆ. ಈ ಕುರಿತು ಮಾತನಾಡಿದ ಕೆ.ಎಸ್. ರಾಮರಾವ್, ಚಿತ್ರದ ಮೇಕಿಂಗ್ ಗುಣಮಟ್ಟ ಮತ್ತು ಸಸ್ಪೆನ್ಸ್ ಅಂಶಗಳು ತಮ್ಮನ್ನು ಭಾರೀವಾಗಿ ಸೆಳೆದಿವೆ ಎಂದು ಹೇಳಿದ್ದಾರೆ.
ರಾಜ್ ಬಿ. ಶೆಟ್ಟಿ ಈ ಸಿನಿಮಾದಲ್ಲಿ ಪವರ್‌ಫುಲ್ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೊಲೆ ಪ್ರಕರಣದ ಸುತ್ತ ಸಾಗುವ ರೋಚಕ ತನಿಖಾ ಕಥಾಹಂದರ ಚಿತ್ರದ ಹೈಲೈಟ್ ಆಗಿದೆ.
ಆರಂಭದಲ್ಲಿ ಮೇ 7ಕ್ಕೆ ಬಿಡುಗಡೆ ಪ್ಲ್ಯಾನ್ ಮಾಡಲಾಗಿದ್ದರೂ, ಹೆಚ್ಚಿನ ಪ್ರೇಕ್ಷಕರನ್ನು ತಲುಪುವ ಉದ್ದೇಶದಿಂದ ಮೇ 15ಕ್ಕೆ ಬಿಡುಗಡೆ ಮುಂದೂಡಲಾಗಿದೆ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.
ಐಪಿಎಲ್ ಹಾಗೂ ಓಟಿಟಿ ಸ್ಪರ್ಧೆಯ ನಡುವೆಯೂ ಉತ್ತಮ ಕಂಟೆಂಟ್ ಇರುವ ಸಿನಿಮಾಗಳಿಗೆ ಪ್ರೇಕ್ಷಕರು ಸದಾ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವನ್ನು ನಿರ್ಮಾಪಕರು ವ್ಯಕ್ತಪಡಿಸಿದ್ದಾರೆ.





