Sj*

ಹರಿದಾಸರ ಚಿತ್ರಗಳ ನಿರ್ದೇಶಕರೆಂದೆ ಖ್ಯಾತರಾಗಿರುವ ಮಧುಸೂದನ್ ಹವಾಲ್ದಾರ್, ನಾಡಿನ ಮತ್ತೊಬ್ಬ ಹರಿದಾಸಿಣಿ ಹರಪನಹಳ್ಳಿ ಭೀಮವ್ವನವರ ಜೀವನ ಚರಿತ್ರೆ ಆಧಾರಿತ “ಹರಪನಹಳ್ಳಿ ಭೀಮವ್ವ” ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮಾತಾಂಬುಜ ಮೂವೀಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನವರಾತ್ರಿಯ ಮೊದಲ ದಿನ ಈ ಚಿತ್ರದ ಮುಹೂರ್ತ ಸಮಾರಂಭ ತ್ಯಾಗರಾಜನಗರದ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಕರ್ನಾಟಕ ಉಚ್ಭ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಶಾನಂದ ಅವರು ಆರಂಭ ಫಲಕ ತೋರಿದುರು. ಹೆಸರಾಂತ ಪತ್ರಕರ್ತರಾದ ರವೀಂದ್ರ ಜೋಶಿ ಕ್ಯಾಮೆರಾ ಚಾಲನೆ ಮಾಡಿದರು. ರವೀಂದ್ರ ಜೋಶಿ ಅವರು ಚಿತ್ರತಂಡಕ್ಕೆ ಒಳಿತಾಗಲಿ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಹದಿನೆಂಟು ಹಾಗೂ ಹತ್ತೊಂಬತ್ತನೆಯ ಶತಮಾನದ ಶ್ರೇಷ್ಠ ಹರಿದಾಸಿಣಿಯರಲ್ಲಿ ಹರಪನಹಳ್ಳಿ ಭೀಮವ್ವ ಕೂಡ ಒಬ್ಬರು. ಇವರು ಕನ್ನಡದ ಮೀರಾಬಾಯಿ ಎಂದೇ ಪ್ರಸಿದ್ಧರು. ಕೃಷ್ಣನ ಪರಮಭಕ್ತೆಯಾದ ಇವರು ಭೀಮೇಶ ಕೃಷ್ಣ ಅಂಕಿತದಿಂದ 140 ಕ್ಕೂ ಹೆಚ್ಚು ದೇವರನಾಮಗಳನ್ನು, ಉಗಾಭೋಗ ಹಾಗೂ ಸುಳಾದಿಗಳನ್ನು ರಚಿಸಿದ್ದಾರೆ. ಯು.ಎಸ್.ಎ ನಿವಾಸಿ ವೈಷ್ಣವಿಮೂರ್ತಿ ಅವರು ಭೀಮವ್ವನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಭೀಮವ್ವನವರ ತಂದೆಯ ಪಾತ್ರದಲ್ಲಿ ಗಾಯಕ ರಾಯಚೂರು ಶೇಷಗಿರಿದಾಸ್, ಗುರುವಿನ ಪಾತ್ರದಲ್ಲಿ ಗಾಯಕ ಅನಂತ ಕುಲಕರ್ಣಿ, ಶಿಷ್ಯನ ಪಾತ್ರದಲ್ಲಿ ಗಾಯಕ ಅನಂತ ಮಿಸ್ತ್ರಿ ಅಭಿನಯಿಸುತ್ತಿದ್ದಾರೆ. ಪತಿಯ ಪಾತ್ರದಲ್ಲಿ ತ್ರಿವಿಕ್ರಮ ಜೋಶಿ ಅವರು ನಟಿಸುತ್ತಿದ್ದಾರೆ. ಎಂಟು ಹಾಡುಗಳಿರುತ್ತದೆ. ರಾಯಚೂರು ಶೇಷಗಿರಿದಾಸ್, ಅನಂತ ಕುಲಕರ್ಣಿ, ಅನಂತ ಮಿಸ್ತ್ರಿ ಹಾಗೂ ನಾನು ಸಂಗೀತ ಸಂಯೋಜನೆ ಮಾಡುತ್ತಿದ್ದೇವೆ. ಎಂಟು ಹಾಡುಗಳನ್ನು ಭೀಮವ್ವನ ಪಾತ್ರದಲ್ಲಿ ನಟಿಸುತ್ತಿರುವ, ಮೂಲತಃ ಗಾಯಕಿಯೂ ಆಗಿರುವ ವೈಷ್ಣವಿಮೂರ್ತಿ ಅವರೆ ಹಾಡಲಿದ್ದಾರೆ. ಕನ್ನಡ ಹಾಗೂ ಹಿಂದಿಯಲ್ಲಿ ಈ ಚಿತ್ರ ಮೂಡಿಬರಲಿದೆ ಎಂದು ನಿರ್ದೇಶಕ ಮಧುಸೂದನ್ ಹವಾಲ್ದಾರ್ ತಿಳಿಸಿದರು.

bheema1

ಮಂತ್ರಾಲಯದ ರಾಯರ ಸನ್ನಿಧಿಯಲ್ಲಿ ಭೇಟಿಯಾದ ನನ್ನನ್ನು ನಟನೆಗೆ ಕರೆತಂದವರು ಮಧುಸೂದನ್ ಹವಾಲ್ದಾರ್. ಅವರ ಹರಿದಾಸರ ಚಿತ್ರಗಳಲ್ಲಿ ನಾನು ವಿಜಯದಾಸರ ಪಾತ್ರ ನಿರ್ವಹಿಸಿದ್ದೇನೆ‌. ಈ ಚಿತ್ರದಲ್ಲಿ ಭೀಮವ್ವನ ಪತಿಯ ಪಾತ್ರ ಮಾಡುತ್ತಿದ್ದೇನೆ ಎಂದು ತ್ರಿವಿಕ್ರಮ ಜೋಶಿ ಹೇಳಿದರು‌.

ನಾನು ಯು‌ಎಸ್ಎ ನಿವಾಸಿ‌‌. ಹರಿದಾಸರ ಭಕ್ತೆ. ನಾನು ಹರಪನಹಳ್ಳಿ ಭೀಮವ್ವನವರ ಪಾತ್ರ ಮಾಡುತ್ತಿರುವುದು ಬಹಳ ಸಂತೋಷವಾಗಿದೆ ಎಂದರು ನಟಿ ವೈಷ್ಣವಿಮೂರ್ತಿ.

ಗಾಯಕನಾಗಿದ್ದ ನನ್ನನ್ನು ಚಲನಚಿತ್ರ ಸಂಗೀತ ನಿರ್ದೇಶಕನಾಗಿ ಮಾಡಿದ್ದು ಮಧುಸೂದನ್ ಹವಾಲ್ದಾರ್. ಈಗ ಅವರ ಚಿತ್ರದ ಮೂಲಕ ನಟನಾಗಿಯೂ ಪರಿಚಯವಾಗುತ್ತಿದ್ದೇನೆ ಎಂದು ರಾಯಚೂರು ಶೇಷಗಿರಿ ದಾಸ್ ಹೇಳಿದರು.

ವಾಸುಮೂರ್ತಿ, ಪವನ್ ಕುಮಾರ್, ಸಿ.ಆರ್ ಮುರಳಿ, ವಾಸುದೇವ ಅಗ್ನಿಹೋತ್ರಿ ಹಾಗೂ ಹರಪನಹಳ್ಳಿ ಭೀಮವ್ವನ ವಂಶಸ್ಥರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ