–  ರಾಘವೇಂದ್ರ ಅಡಿಗ ಎಚ್ಚೆನ್.

ನಟ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಪ್ರೇಮ್ ಮತ್ತೊಮ್ಮೆ ಒಂದಾಗುತ್ತಿದ್ದಾರೆ. ‘ದಿ ವಿಲನ್’ ಚಿತ್ರದ ಬಳಿಕ ಈ ಜೋಡಿ ಹೊಸ ಸಿನಿಮಾದ ಮೂಲಕ ಮತ್ತೆ ಕೈಜೋಡಿಸುತ್ತಿದ್ದು, ಈಗಾಗಲೇ ಟೈಟಲ್ ಟೀಸರ್‌ಗಾಗಿ ಚಿತ್ರೀಕರಣ ಆರಂಭಿಸಿದೆ. ಬಿಗ್ ಬಾಸ್ ಸೆಟ್‌ನಿಂದ ಸುದೀಪ್ ಫೋಟೋವೊಂದನ್ನು ಹಂಚಿಕೊಂಡಿದ್ದು, ಪ್ರೇಮ್ ಜೊತೆ ಮತ್ತೆ ಕೆಲಸ ಮಾಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆ ಕನ್ನಡ ಚಿತ್ರರಂಗದಲ್ಲಿ ಹೊಸ ಕುತೂಹಲ ಮೂಡಿಸಿದೆ.

ಸುದೀಪ್ ಮತ್ತು ಪ್ರೇಮ್ ಕಾಂಬಿನೇಷನ್‌ನಲ್ಲಿ ಈ ಹಿಂದೆ ಬಂದಿದ್ದ ‘ದಿ ವಿಲನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಯಶಸ್ಸು ಕಂಡಿತ್ತು. ಇದೀಗ ಹಲವು ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗುತ್ತಿರುವುದರಿಂದ ಹೊಸ ಸಿನಿಮಾದ ಕಥೆ ಮತ್ತು ನಿರೂಪಣೆ ಹೇಗಿರಲಿದೆ ಎಂಬ ಚರ್ಚೆ ಆರಂಭವಾಗಿದೆ. ಈ ಬಾರಿ ರೊಮ್ಯಾಂಟಿಕ್ ಮತ್ತು ಕಾಮಿಡಿ ಶೈಲಿಯಲ್ಲಿ ಸಿನಿಮಾ ಮೂಡಿಬರಲಿದೆ ಎಂಬ ಮಾಹಿತಿ ಸಿನಿಪ್ರಿಯರ ನಿರೀಕ್ಷೆಯನ್ನು ಹೆಚ್ಚಿಸಿದೆ.

ಕಿಚ್ಚ ಸುದೀಪ್ ಸದ್ಯ ಹಲವು ಸಿನಿಮಾಗಳ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಮಾರ್ಕ್’ ಚಿತ್ರದ ಬಳಿಕ ಅವರು ‘ಬಿಲ್ಲ ರಂಗ ಭಾಷಾ’ ಸಿನಿಮಾದ ಕೆಲಸಗಳಲ್ಲೂ ನಿರತರಾಗಿದ್ದಾರೆ. ಇದರ ನಡುವೆಯೇ ಪ್ರೇಮ್ ನಿರ್ದೇಶನದ ಹೊಸ ಪ್ರಾಜೆಕ್ಟ್‌ಗಾಗಿ ಟೈಟಲ್ ಟೀಸರ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಸುದೀಪ್ ಅವರ ಈ ಹೊಸ ಪ್ರಯತ್ನ ಅಭಿಮಾನಿಗಳಲ್ಲಿ ಮತ್ತಷ್ಟು ಉತ್ಸಾಹ ಮೂಡಿಸಿದೆ.

ಟೈಟಲ್ ಟೀಸರ್ ಚಿತ್ರೀಕರಣ ಪೂರ್ಣಗೊಂಡ ಬಳಿಕ ಚಿತ್ರದ ಹೆಸರು ಹಾಗೂ ಇತರ ಮಾಹಿತಿಗಳು ಬಹಿರಂಗವಾಗುವ ನಿರೀಕ್ಷೆಯಿದೆ. ಸುದೀಪ್ ಮತ್ತು ಪ್ರೇಮ್ ಜೋಡಿ ಈ ಬಾರಿ ಯಾವ ರೀತಿಯ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಮತ್ತೊಂದೆಡೆ, ಸಿನಿಮಾಗಳ ಬ್ಯುಸಿ ಶೆಡ್ಯೂಲ್ ನಡುವೆಯೂ ಸುದೀಪ್ ವಾರಾಂತ್ಯದಲ್ಲಿ ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋ ನಿರೂಪಣೆಯನ್ನು ಮುಂದುವರಿಸುತ್ತಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ