ಬಾಲಿವುಡ್ ನಟಿ ರಾಧಿಕಾ ಆಪ್ಟೆ ತಮ್ಮ ಹಲವು ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದೂ ಸೇರಿದಂತೆ ಧೈರ್ಯಶಾಲಿ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ರಾಧಿಕಾ ಆಪ್ಟೆ ತಮ್ಮ ಸಿನಿಮಾವೊಂದರ ಹಸಿಬಿಸಿ ದೃಶ್ಯವೊಂದು ಸೋರಿಕೆಯಾದ ನಂತರ ಅನುಭವಿಸಿದ ಭಾವನಾತ್ಮಕ ಸಂಕಟವನ್ನು ನೆನಪಿಸಿಕೊಂಡಿದ್ದು, ಆ ಘಟನೆಯಿಂದಾಗಿ ನಾನು ಹಲವು ದಿನಗಳ ಕಾಲ ಮನೆಯಿಂದ ಹೊರಬರಲಾಗದ ಸ್ಥಿತಿಯಲ್ಲಿದ್ದೆ ಎಂದು ಹೇಳಿಕೊಂಡಿದ್ದಾರೆ.
ತೆರೆಯ ಮೇಲಿನ ಬೋಲ್ಡ್ ದೃಶ್ಯಗಳ ಕುರಿತು ‘ಇಂಡಿಯಾ ಟುಡೇ’ ಜೊತೆ ಮಾತನಾಡಿರುವ ರಾಧಿಕಾ, ಇಂತಹ ದೃಶ್ಯಗಳು ಆಗಾಗ್ಗೆ ಕಲಾವಿದರ ವೈಯಕ್ತಿಕ ಜೀವನದ ಮೇಲೂ ತೀವ್ರ ಪರಿಣಾಮ ಬೀರುತ್ತವೆ ಎಂದು ಹೇಳಿದ್ದಾರೆ.
“ನಾವು ರಾಸಲೀಲೆ ದೃಶ್ಯಗಳಲ್ಲಿ ನಟಿಸುವ ಬಗ್ಗೆ ಮಾತನಾಡುತ್ತಿದ್ದೆವು; ಆದರೆ ನಾನು ನಟಿಸಿದ್ದ ದೃಶ್ಯವೊಂದು ಸೋರಿಕೆಯಾದಾಗ, ಸತತ ನಾಲ್ಕು ದಿನಗಳ ಕಾಲ ನನಗೆ ಮನೆಯಿಂದ ಹೊರಗೆ ಕಾಲಿಡಲೂ ಸಾಧ್ಯವಾಗಲಿಲ್ಲ. ಸಮಸ್ಯೆಯೆಂದರೆ, ಇದರ ಪರಿಣಾಮಗಳು ಬಹಳ ಬೇಗನೆ ನಮ್ಮ ಮನೆ ಬಾಗಿಲನ್ನೇ ತಲುಪಬಲ್ಲವು. ಯಾರಾದರೂ ನಿಮ್ಮ ಮನೆಯ ಡೋರ್‌ಬೆಲ್ ಬಾರಿಸಬಹುದು ಮತ್ತು ಆ ದೃಶ್ಯದಿಂದ ಮನನೊಂದು ಯಾರಾದರೂ ನಿಮ್ಮ ಮನೆಯ ಹೊರಗೆ ಬಂದು ನಿಲ್ಲಬಹುದು. ಹಾಗಾಗಿ, ಇದು ಅಂದುಕೊಂಡಷ್ಟು ಸುಲಭವಲ್ಲ; ಇದು ಬಹಳ ಸಂಕೀರ್ಣವಾದ ವಿಷಯ,” ಎಂದು ರಾಧಿಕಾ ಹೇಳಿದ್ದಾರೆ.
ಆ ಸೋರಿಕೆಯಾದ ದೃಶ್ಯವು ತನ್ನ ವೈಯಕ್ತಿಕ ಜೀವನ ಮತ್ತು ದೈನಂದಿನ ಚಟುವಟಿಕೆಗಳ ಮೇಲೆ ಹೇಗೆ ತಕ್ಷಣದ ಪರಿಣಾಮ ಬೀರಿತು ಎಂಬುದನ್ನು ಅವರು ವಿವರಿಸಿದ್ದಾರೆ.
“ಲೈಂಗಿಕತೆಗೆ ಸಂಬಂಧಿಸಿದ ವಿಷಯಕ್ಕೆ ಬಂದರೆ, ನನ್ನದೊಂದು ವಿಡಿಯೋ ಕ್ಲಿಪ್ ಸೋರಿಕೆಯಾದಾಗ ಪರಿಸ್ಥಿತಿ ನಿಜಕ್ಕೂ ಕಷ್ಟಕರವಾಯಿತು. ಅದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಮಾತ್ರ ಸೀಮಿತವಾಗಿರಲಿಲ್ಲ. ಬದಲಾಗಿ ಪ್ರತಿದಿನ ನೋಡುವ ಮತ್ತು ಭೇಟಿಯಾಗುವ ಜನರ ಬಳಿಗೂ ತಲುಪಿತ್ತು. ವಾಚ್ ಮನ್, ನನ್ನ ಕಾರು ಚಾಲಕ ಸಹ ಆ ವಿಡಿಯೋ ನೋಡಿದ್ದರು. ಸ್ಟೈಲಿಸ್ಟ್‌ನ ಚಾಲಕ ಸಹ ಆ ಕ್ಲಿಪ್‌ನ್ನು ಪದೇ ಪದೇ ನೋಡುತ್ತಾ, ‘ನೀವು ಅವರ ಮನೆಗೆ ಹೋಗುತ್ತಿದ್ದೀರಾ?’ ಎಂದು ಕೇಳುತ್ತಲೇ ಇದ್ದದ್ದು ನನಗೆ ನೆನಪಿದೆ. ಇಂತಹ ಘಟನೆಗಳು ನಡೆಯಲಾರಂಭಿಸಿದವು ಮತ್ತು ಪರಿಸ್ಥಿತಿಯನ್ನು ನಿಭಾಯಿಸುವುದು ಬಹಳ ಕಷ್ಟವಾಗಿತ್ತು” ಎಂದು ರಾಧಿಕಾ ಆಪ್ಟೆ ಹೇಳಿದ್ದಾರೆ.





