Sj*
ಸಮೃದ್ಧಿ ಮಂಜುನಾಥ್ ನಿರ್ಮಾಣದ, ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ ಹಾಗೂ ಶ್ರೀನಿವಾಸರಾಜು ನಿರ್ದೇಶನದ "ಬೃಂದಾವಿಹಾರಿ" ಚಿತ್ರದ ಐದನೇ ಹಾಡು "ಒಂದೇ ಒಂದು" ಇತ್ತೀಚಿಗೆ ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ದೂರಿಯಾಗಿ ಅನಾವರಣವಾಯಿತು. ನಿರ್ಮಾಪಕ ಸಮೃದ್ಧಿ ಮಂಜುನಾಥ್ ಅವರ ಪತ್ನಿ ಪದ್ಮ ಮಂಜುನಾಥ್ ಅವರು ಈ ಹಾಡನ್ನು ಬಿಡುಗಡೆ ಮಾಡಿದರು. ಕವಿರತ್ನ ಡಾ||ವಿ.ನಾಗೇಂದ್ರಪ್ರಸಾದ್ ಬರೆದಿರುವ ಈ ಹಾಡನ್ನು ಹೆಸರಾಂತ ಗಾಯಕಿ ಕೆ.ಎಸ್ ಚಿತ್ರ ಹಾಗೂ ಖ್ಯಾತ ಗಾಯಕ ಜಸ್ಕರಣ್ ಸಿಂಗ್ ಹಾಡಿದ್ದಾರೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ನೀಡಿರುವ ಈ ಹಾಡಿಗೆ ಗಣೇಶ್ ಹಾಗೂ ದೇವಿಕ ಭಟ್ ಹೆಜ್ಜೆ ಹಾಕಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ನಾಲ್ಕು ಹಾಡುಗಳು ಸೂಪರ್ ಹಿಟ್ ಆಗಿದ್ದು, ಐದನೇ ಹಾಡಾಗಿ ಬಿಡುಗಡೆಯಾಗಿರುವ 'ಒಂದೇ ಒಂದು" ಎಲ್ಲರ ಮನ ಗೆಲ್ಲುತ್ತಿದೆ. ಆನಂದ್ ಆಡಿಯೋ ಮೂಲಕ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಅಕ್ಟೋಬರ್ 16, ನಾಡಹಬ್ಬ ದಸರಾ ಸಂದರ್ಭದಲ್ಲಿ ಈ ಚಿತ್ರ ತೆರೆಗೆ ಬರಲಿದೆ. ’ಕೃಷ್ಣಂ ಪ್ರಣಯ ಸಖಿ” ಚಿತ್ರದ ನಂತರ ಶ್ರೀನಿವಾಸರಾಜು ಹಾಗೂ ಗಣೇಶ್ ಜೋಡಿ ತೆರೆಯ ಮೇಲೆ ಮತ್ತೊಮ್ಮೆ ಮೋಡಿ ಮಾಡಲಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಈ ವೇಳೆ ಮಾತನಾಡಿದ ನಾಯಕ ಗಣೇಶ್, ಒಳ್ಳೆಯ ಸಾಲುಗಳನ್ನು ಕೊಟ್ಟಾಗ ನಮಗೆ ಅಂತ ಕೆಲಸವಿರುವುದಿಲ್ಲ. ಅಂತಹ ಅದ್ಭುತ ಸಾಲುಗಳನ್ನು ಕೊಟ್ಟ ಡಾ||ನಾಗೇಂದ್ರಪ್ರಸಾದ್ ಅವರಿಗೆ, ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್ ಅವರಿಗೆ, ಗಾಯಕ ಜಸ್ಕರಣ್ ಸಿಂಗ್ ಅವರಿಗೆ, ನಿರ್ದೇಶಕ ಶ್ರೀನಿವಾಸರಾಜು ಹಾಗೂ ಚಿತ್ರವನ್ನು ಸಮೃದ್ಧಿಯಾಗಿ ನಿರ್ಮಾಣ ಮಾಡಿರುವ ನಿರ್ಮಾಪಕ ಸಮೃದ್ಧಿ ಮಂಜುನಾಥ್ ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದ ಹೇಳುತ್ತೇನೆ. ಈ ಹಾಡನ್ನು ನೋಡಿದವರು ನೀವು ಈ ಹಾಡಿನಲ್ಲಿ ತುಂಬಾ ಮುದ್ದಾಗಿ ಕಾಣುತ್ತೀರಾ ಹಾಗೂ ಅಭಿನಯ ಕೂಡ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ. ನಾನು ಎಲ್ಲವನ್ನು ಪ್ರೀತಿಯಿಂದ ಮಾಡುತ್ತೇನೆ. ಆದರೆ ಅದು ತೆರೆಯ ಮೇಲೆ ಚೆನ್ನಾಗಿ ಕಾಣಲು ನೀವೆಲ್ಲಾ ನನ್ನ ಮೇಲಿಟ್ಟಿರುವ ಪ್ರೀತಿಯೇ ಕಾರಣ. ಆ ಪ್ರೀತಿ ಸದಾ ಇರಲಿ. ಅಕ್ಟೋಬರ್ 16 ನಮ್ಮ "ಬೃಂದಾವಿಹಾರಿ" ಚಿತ್ರ ನಿಮ್ಮ ಮುಂದೆ ಬರಲಿದೆ. ನೋಡಿ. ಪ್ರೋತ್ಸಾಹ ನೀಡಿ ಎಂದರು.
ಕ್ರಿಕೆಟ್ ನಿಂದ ನಮ್ಮ ಸ್ನೇಹ ಆರಂಭವಾಯಿತು. ನನ್ನನ್ನು ಚಿತ್ರರಂಗಕ್ಕೆ ಕರೆತಂದವರು ಗಣೇಶ್ ಅವರೆ. ಈಗ ನಮ್ಮ ಸಂಸ್ಥೆಯ ನಿರ್ಮಾಣದ ಚಿತ್ರಕ್ಕೆ ಅವರೆ ನಾಯಕರಾಗಿರುವುದು ಬಹಳ ಖುಷಿಯಾಗಿದೆ. "ಬೃಂದಾವಿಹಾರಿ" ಒಂದೊಳ್ಳೆ ಕೌಟುಂಬಿಕ ಚಿತ್ರ. ಹಾಡುಗಳು ಒಂದಕ್ಕಿಂತ ಒಂದು ಅದ್ಭುತ. ಇಂದು ನಮ್ಮ ಸಮೃದ್ಧಿ ಸಂಸ್ಥೆಗೆ ಹದಿನೈದು ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ "ಒಂದೇ ಒಂದು" ಹಾಡು ಕೂಡ ಬಿಡುಗಡೆಯಾಗಿರುವುದು ಬಹಳ ಸಂತೋಷವಾಗಿದೆ. ಈ ಹಾಡನ್ನು ನಾನು ನಮ್ಮ ಸಮೃದ್ಧಿ ಸಂಸ್ಥೆಯ ಎಲ್ಲರಿಗೂ ಅರ್ಪಿಸುತ್ತೇನೆ. ಅಕ್ಟೋಬರ್ 16 ನಾಡಹಬ್ಬದ ಸಂದರ್ಭದಲ್ಲಿ ನಮ್ಮ ಸಿನಿಮಾ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ನೀವೆಲ್ಲರು ಕುಟುಂಬ ಸಮೇತ ಬಂದು ನಮ್ಮ ಚಿತ್ರ ನೋಡಿ ಎಂದು ನಿರ್ಮಾಪಕ ಸಮೃದ್ಧಿ ಮಂಜುನಾಥ್ ಹೇಳಿದರು.





