- ರಾಘವೇಂದ್ರ ಅಡಿಗ ಎಚ್ಚೆನ್.
‘ತಿಥಿ’ ಸಿನಿಮಾ ಖ್ಯಾತಿಯ ಸೆಂಚುರಿ ಗೌಡ ಪಾತ್ರಧಾರಿ ಸಿಂಗ್ರಿಗೌಡ ಅವರು ಜನವರಿ 4ರ ರಾತ್ರಿ ನಿಧನರಾಗಿದ್ದಾರೆ. ನೂರು ವರ್ಷಕ್ಕೂ ಹೆಚ್ಚು ವಯಸ್ಸಾಗಿದ್ದ ಅವರು ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈಗಾಗಲೇ ‘ತಿಥಿ’ ಸಿನಿಮಾದಲ್ಲಿ ಗಡ್ಡಪ್ಪ ಪಾತ್ರ ಮಾಡಿದ್ದ ಚನ್ನೇಗೌಡ ಅವರು 2025ರ ನವೆಂಬರ್ 12ರಂದು ನಿಧನರಾಗಿದ್ದರು.
ಇದೀಗ ಅದೇ ಚಿತ್ರದ ಮತ್ತೊಬ್ಬ ಪ್ರಮುಖ ಪಾತ್ರಧಾರಿ ಸಿಂಗ್ರಿಗೌಡ ಅವರೂ ಕೊನೆಯುಸಿರು ಎಳೆದಿದ್ದಾರೆ.
ಪಾಂಡವಪುರ ತಾಲೂಕಿನ ಸಿಂಗ್ರಿಗೌಡನಕೊಪ್ಪಲಿನವರಾದ ಸಿಂಗ್ರಿಗೌಡ, ‘ತಿಥಿ’ (2015) ಸಿನಿಮಾದಲ್ಲಿ ಸೆಂಚುರಿ ಗೌಡ ಪಾತ್ರದ ಮೂಲಕ ಜನಮನ ಸೆಳೆದಿದ್ದರು. ಈ ಸಿನಿಮಾ ಹಿಟ್ ಆದ ಬಳಿಕ ಅವರಿಗೆ ಸಾಕಷ್ಟು ಜನಪ್ರಿಯತೆ ಲಭಿಸಿತ್ತು. ಚಿತ್ರ ಬಿಡುಗಡೆಯಾದ ನಂತರ ಹಲವು ಮಂದಿ ಅವರ ಗ್ರಾಮಕ್ಕೆ ಭೇಟಿ ನೀಡಿ ಫೋಟೋ ತೆಗೆಸಿಕೊಂಡು ಹೋಗುತ್ತಿದ್ದರು.
ಸಿಂಗ್ರಿಗೌಡರನ್ನು ‘ತಿಥಿ’ ಸಿನಿಮಾಕ್ಕೆ ಆಯ್ಕೆ ಮಾಡಿದ್ದೇ ಒಂದು ವಿಶೇಷ ಘಟನೆ. ಅವರ ಅಣ್ಣನ ತಿಥಿ ಕಾರ್ಯಕ್ರಮಕ್ಕೆ ಸಿನಿಮಾ ನಿರ್ದೇಶಕರು ಬಂದ ವೇಳೆ ಸಿಂಗ್ರಿಗೌಡ ಅವರನ್ನು ಗಮನಿಸಿ ಚಿತ್ರಕ್ಕೆ ಅವಕಾಶ ನೀಡಿದ್ದರು. ಈ ಸಿನಿಮಾದಿಗಾಗಿ ಅವರಿಗೆ ಸುಮಾರು 20 ಸಾವಿರ ರೂಪಾಯಿ ಸಂಭಾವನೆ ನೀಡಲಾಗಿತ್ತು ಎನ್ನಲಾಗಿದೆ.
‘ತಿಥಿ’ ನಂತರ ಅವರು ಇನ್ನೂ ಕೆಲ ಚಿತ್ರಗಳಲ್ಲಿ ನಟಿಸಿದ್ದರು. ಆದರೆ ಕೆಲವು ಸಿನಿಮಾ ತಂಡಗಳು ಸಂಭಾವನೆ ನೀಡದೆ ಮೋಸ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಸೆಂಚುರಿ ಗೌಡ ಪಾತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಗುರುತು ಮೂಡಿಸಿದ್ದ ಸಿಂಗ್ರಿಗೌಡ ಅವರ ನಿಧನಕ್ಕೆ ಅಭಿಮಾನಿಗಳು ಮತ್ತು ಚಿತ್ರರಂಗದವರು ಸಂತಾಪ ಸೂಚಿಸುತ್ತಿದ್ದಾರೆ.





