ಭಾರತ ಕ್ರಿಕೆಟ್ ತಂಡದ ಖ್ಯಾತ ಲೆಗ್ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಮಧ್ಯೆ ಡಿವೋರ್ಸ್ ಆಗಿದೆ ಅನ್ನೋ ಸುದ್ದಿ ಹೊರಬಿದ್ದಿದೆ. ರಾಷ್ಟ್ರೀಯ ಮಾಧ್ಯಮಗಳು ಹಾಗೂ ನ್ಯೂಸ್ ವೆಬ್ಸೈಟ್ಗಳು ಬಿತ್ತರಿಸಿರುವ ವರದಿಗಳ ಪ್ರಕಾರ ಇಬ್ಬರೂ ಕೂಡ ಬಾಂದ್ರಾ ಫ್ಯಾಮಿಲಿ ಕೋರ್ಟ್ನಲ್ಲಿ ಡಿವೋರ್ಸ್ ಪ್ರಕ್ರಿಯೆಯನ್ನು ಮುಗಿಸಿದ್ದಾರೆ. ಹಲವು ದಿನಗಳಿಂದ ಇಬ್ಬರೂ ಕೂಡ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದರು. ಸದ್ಯದಲ್ಲೇ ಅಧಿಕೃತವಾಗಿ ದೂರವಾಗಲಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು.
ಇದೀಗ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ ಅಂತಾ ಮಾಧ್ಯಮಗಳು ವರದಿ ಮಾಡಿವೆ. 4 ವರ್ಷಗಳ ಹಿಂದೆ ಮದುವೆ ಆಗಿದ್ದ ಚಾಹಲ್- ಧನಶ್ರೀ ಆರಂಭದಲ್ಲಿ ಚೆನ್ನಾಗಿಯೇ ಇದ್ದರು. ಆದ್ರೆ, ದಿನ ಕಳೆದಂತೆ ಅದ್ಯಾಕೋ ಇಬ್ಬರ ಮಧ್ಯೆ ಹೊಂದಾಣಿಕೆ ಕಾಣಿಸಿಕೊಳ್ಳಲೇ ಇಲ್ಲ. ಇಷ್ಟಾದ್ರೂ ಕೂಡ ಧನಶ್ರೀ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದರು.
ಇದರ ಮಧ್ಯೆ ಯುಜುವೇಂದ್ರ ಚಾಹಲ್ ಹಾಕಿರುವ ಒಂದು ಪೋಸ್ಟ್ ಮತ್ತಷ್ಟು ಚರ್ಚೆಗೆ ನಾಂದಿ ಹಾಡಿದೆ. ಚಾಹಲ್ ತಮ್ಮ ಪೋಸ್ಟ್ನಲ್ಲಿ ‘ದೇವರು ನನ್ನನ್ನು ಎಷ್ಟೋ ಬಾರಿ ರಕ್ಷಿಸಿದ್ದಾನೆ, ನಾನು ಅವುಗಳನ್ನು ಸಂಖ್ಯೆಯಲ್ಲಿ ಎಣಿಸಲು ಸಹ ಸಾಧ್ಯವಿಲ್ಲ’. ಕೆಲವೊಮ್ಮೆ ದೇವರು ನನ್ನ ಅರಿವಿಗೆ ಬಾರದೆಯೋ ನನ್ನ ಜೊತೆ ನಿಂತಿದ್ದಾನೆ. ನನಗೆ ಗೊತ್ತಿಲ್ಲದಿದ್ದರೂ ನನ್ನನ್ನು ಬೆಂಬಲಿಸಿದ್ದಕ್ಕಾಗಿ ದೇವರಿಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ಪ್ರತಿಯೊಬ್ಬರೂ ಕೂಡ ಚಾಹಲ್ ಜೀವನದಲ್ಲಿ ದೊಡ್ಡ ಘಟನೆ ನಡೆದಿರಬಹುದಾ ಅಂತಾ ಊಹಿಸಿದ್ದಾರೆ.
ಚಾಹಲ್ ಪೋಸ್ಟ್ ಹಾಕಿದ ಒಂದು ಗಂಟೆಯ ಬಳಿಕ ಧನಶ್ರೀ ಕೂಡ ಒಂದು ಪೋಸ್ಟ್ನ್ನು ಹಂಚಿಕೊಂಡಿದ್ದಾರೆ. ಧನಶ್ರೀ ತಮ್ಮ ಪೋಸ್ಟ್ನಲ್ಲಿ, ‘ಒತ್ತಡದಿಂದ ಅದೃಷ್ಟಶಾಲಿಯಾಗುವವರೆಗೆ. ದೇವರು ನಮ್ಮ ಒತ್ತಡವನ್ನು ಸಂತೋಷವಾಗಿ ಪರಿವರ್ತಿಸುವ ರೀತಿ ಎಷ್ಟು ಅದ್ಭುತವಾಗಿದೆ?
ಇಂದು ನೀವು ಯಾವುದಾದರೂ ವಿಷಯದ ಬಗ್ಗೆ ಒತ್ತಡಕ್ಕೊಳಗಾಗಿದ್ದರೆ, ಹೆಚ್ಚು ಯೋಚಿಸುತ್ತಿದ್ದರೆ, ನಿಮಗೆ ಒಂದು ಆಯ್ಕೆ ಇದೆ ಎಂಬುದನ್ನು ನೆನಪಿಡಿ, ನೀವು ಆ ಉದ್ವೇಗವನ್ನು ತೆಗೆದುಕೊಳ್ಳಬಹುದು ಅಥವಾ ನಿಮ್ಮ ಎಲ್ಲಾ ಚಿಂತೆಗಳನ್ನು ದೇವರಿಗೆ ಅರ್ಪಿಸಿ ಎಲ್ಲದಕ್ಕೂ ಪ್ರಾರ್ಥಿಸಬಹುದು. ದೇವರು ನಿಮ್ಮ ಒಳಿತಿಗಾಗಿ ಎಲ್ಲವನ್ನೂ ಮಾಡಬಹುದು ಅಂತಾ ನಂಬುವುದರಲ್ಲಿ ಬೇರೆಯದೇ ರೀತಿಯ ಶಕ್ತಿಯಿದೆ’ ಎಂದು ಬರೆದುಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದ್ದು ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ವಿಚ್ಛೇದನ ಪಡೆಯಲು ಧನಶ್ರೀ ವರ್ಮಾರಿಗೆ 60 ಕೋಟಿ ರೂಪಾಯಿ ಜೀವನಾಂಶ ಕೊಡಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.
ಹೀಗೆ ಇಬ್ಬರೂ ಕೂಡ ಪೋಸ್ಟ್ ಹಂಚಿಕೊಂಡಿದ್ದು ಮತ್ತು ಇಬ್ಬರೂ ಬೇರೆ ಬೇರೆಯಾಗಿ ವಾಸಿಸುತ್ತಿರೋದನ್ನ ಗಮನಿಸಿದರೆ ಇಬ್ಬರ ನಾಲ್ಕು ವರ್ಷಗಳ ದಾಂಪತ್ಯ ಅಂತ್ಯವಾದಂತಿದೆ. ಇದರ ಜೊತೆಗೆ ಬಾಂದ್ರಾ ಫ್ಯಾಮಿಲಿ ಕೋರ್ಟ್ನಲ್ಲೂ ಎಲ್ಲಾ ಪ್ರಕ್ರಿಯೆ ಮುಗಿಸಿದ್ದಾರೆ ಅನ್ನೋ ಸುದ್ದಿ ಕೂಡ ಹರಿದಾಡುತ್ತಿದೆ. ಈ ಮೂಲಕ ಭಾರತ ಕ್ರಿಕೆಟ್ ತಂಡದ ಶಿಖರ್ ಧವನ್, ಹಾರ್ದಿಕ್ ಪಾಂಡ್ಯ ಬಳಿಕ ಚಾಹಲ್ ವಿಚ್ಛೇದನ ಪಡೆದ ಮೂರನೇ ಕ್ರಿಕೆಟಿಗರಾಗಿದ್ದಾರೆ.