- ರಾಘವೇಂದ್ರ ಅಡಿಗ ಎಚ್ಚೆನ್.
2022, ಜೂನ್ 10. ಸಿನಿಪ್ರಿಯರಿಗೆ 'ಚಾರ್ಲಿ' ಪರಿಚಯವಾದ ದಿನ. ತಮ್ಮ ಅಮೋಘ ಅಭಿನಯದ ಮೂಲಕ ರಕ್ಷಿತ್ ಶೆಟ್ಟಿ ಮತ್ತೊಮ್ಮೆ ಪ್ರೇಕ್ಷಕರ ಎದೆಯಾಳ ತಲುಪಿದ ದಿನ. ಕಿರಣ್ ರಾಜ್ ಅವರಂತಹ ಅದ್ಭುತ ನಿರ್ದೇಶಕ ಚಂದನವನಕ್ಕೆ ತಮ್ಮ ಪ್ರತಿಭೆ ಪ್ರದರ್ಶಿಸಿದ ದಿನ. ಒಂದೊಳ್ಳೆ ಸಿನಿಮಾ ಇಂದು ಮೂರನೇ ವರ್ಷದ ಸಂಭ್ರಮದಲ್ಲಿದೆ.2022ರ ಇದೇ ದಿನದಂದು ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ರಿಲೀಸ್ ಆಗಿ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ ಚಿತ್ರ 'ಚಾರ್ಲಿ 777' ಇಂದು ಮೂರು ವರ್ಷ ಪೂರೈಸಿದ ಸಂಭ್ರಮದಲ್ಲಿದೆ. ಈ ಹಿನ್ನೆಲೆ, ನಾಯಕ ನಟ ರಕ್ಷಿತ್ ಶೆಟ್ಟಿ ವಿಶೇಷ ಪೋಸ್ಟ್ ಶೇರ್ ಮಾಡಿದ್ದಾರೆ.
![]()
ರಕ್ಷಿತ್ ಶೆಟ್ಟಿ ಪೋಸ್ಟ್: ''777 ಚಾರ್ಲಿ ಕೇವಲ ಒಂದು ಸಿನಿಮಾವಲ್ಲ, ಅದಕ್ಕೂ ಹೆಚ್ಚಿನದು. ಅದೊಂದು ಬಾಂಧವ್ಯ, ಒಂದು ಅನುಭವ. ಇಂದಿಗೆ 3 ವರ್ಷಗಳಾಗಿದ್ದು, ನನ್ನ ಹೃದಯವು ಈ ಚಿತ್ರ ನಮ್ಮ ಜೀವನದಲ್ಲಿ ತಂದ ಪ್ರತೀ ಕ್ಷಣ ಮತ್ತು ಪ್ರತೀ ಪ್ರೀತಿಯ ನೆನಪುಗಳಿಗೆ ಮರಳುತ್ತದೆ! ಕೃತಜ್ಞ'' ಎಂದು ಬರೆದುಕೊಂಡಿದ್ದಾರೆ.
777 ಚಾರ್ಲಿ ಮನುಷ್ಯ ಹಾಗೂ ಶ್ವಾನದ ನಡುವಿನ ಸುಂದರ ಬಾಂಧವ್ಯವನ್ನು ಚಿತ್ರಿಸಿದೆ. ಭಾವನಾತ್ಮಕ ಕಥೆಯನ್ನು ಕಿರಣ್ ರಾಜ್ ಅದ್ಭುತವಾಗಿ ಕಟ್ಟಿಕೊಟ್ಟಿದ್ದರೆ, ನಾಯಕ ನಟ ರಕ್ಷಿತ್ ಶೆಟ್ಟಿ ಕಥೆಗೆ ಜೀವ ತುಂಬಿದ್ದಾರೆ. ಪರಿಪೂರ್ಣತೆಯೊಂದಿಗೆ ಒಂದೊಳ್ಳೆ ಕಥಾಹಂದರವನ್ನು ತೆರೆಮೇಲೆ ಪ್ರಸ್ತುತಪಡಿಸುವಲ್ಲಿ ರಕ್ಷಿತ್ ಶೆಟ್ಟಿ ತಂಡ ಯಶಸ್ವಿಯಾಗಿತ್ತು. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪಿದ ಈ ಚಿತ್ರ ಬಾಕ್ಸ್ ಆಫೀಸ್ನಲ್ಲೂ ಯಶ ಕಂಡಿದೆ. ಅತಿ ಕಡಿಮೆ ಬಜೆಟ್ನಲ್ಲಿ ಚಿತ್ರೀಕರಣಗೊಂಡ ಈ ಚಿತ್ರ 150 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿ ಸದ್ದು ಮಾಡಿತ್ತು. ಅಲ್ಲದೇ ಸಾಲು ಸಾಲು ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದೆ. ಕನ್ನಡದ ಅತ್ಯುತ್ತಮ ಚಲನಚಿತ್ರಕ್ಕಾಗಿ 69ನೇ ರಾಷ್ಟ್ರೀಯ ಪ್ರಶಸ್ತಿಯೂ ಲಭಿಸಿದೆ. 2023ರ ಅಕ್ಟೋಬರ್ 17ರಂದು ನಟ ರಕ್ಷಿತ್ ಶೆಟ್ಟಿ ಹಾಗೂ ನಿರ್ದೇಶಕ ಕಿರಣ್ ರಾಜ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.




