ನ್ಯಾಷನಲ್ ಕ್ರಶ್.. ಕೊಡಗಿನ ಕುವರಿ.. ದಿ ಮೋಸ್ಟ್ ಡಿಮ್ಯಾಂಡ್ ಇರೋ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಅದ್ಧೂರಿ ಚಿತ್ರ ‘ಛಾವಾ’ಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಬಾಲಿವುಡ್ನಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರೋ ನಟ ವಿಕಿ ಕೌಶಾಲ್ ಜೊತೆ ನಟಿಸಿರೋ ಛಾವಾದಲ್ಲಿ ಆ ದೃಶ್ಯಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ‘ಛಾವಾ’ ಚಿತ್ರದ ಟ್ರೇಲರ್ನಲ್ಲಿ ಬರುವ ಆ ಡ್ಯಾನ್ಸ್ ಈಗ ಟೀಕೆಗೆ ಗುರಿಯಾಗಿದೆ.
ಚಿತ್ರದಲ್ಲಿ ಸಾಂಭಾಜಿ ಮಹಾರಾಜರ ಪಾತ್ರದಲ್ಲಿ ವಿಕಿ ಕೌಶಲ್ ಮತ್ತು ಅವರ ಪತ್ನಿ ಯೇಸುಬಾಯಿಯಾಗಿ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಟ್ರೇಲರ್ನಲ್ಲಿ ಸಾಂಭಾಜಿ ಮಹಾರಾಜ್ ಅವರು ಯೇಸುಬಾಯಿ ಜೊತೆ ಲೆಜಿಮ್ ನೃತ್ಯ ಮಾಡುತ್ತಿರುವ ದೃಶ್ಯವನ್ನು ಸೇರಿಸಲಾಗಿತ್ತು. ಅರ್ಥಾತ್ ‘ಛಾವಾ’ ಸಿನಿಮಾದಲ್ಲಿ ಸಾಂಭಾಜಿ ಅವರ ಲೆಜಿಮ್ ನೃತ್ಯವೂ ಇದೆ. ಆದ್ರೀಗ ವಿಕಿ-ರಶ್ಮಿಕಾ ನೃತ್ಯ ದೃಶ್ಯ ಟೀಕೆಗೆ ಗುರಿಯಾಗಿದೆ. ಕೆಲವರು ದೃಶ್ಯ ತೆಗೆಯಬೇಕೆಂದು ಒತ್ತಾಯಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಮರಾಠಿ ಭಾಷೆ ಮತ್ತು ಕೈಗಾರಿಕೆ ಖಾತೆ ಸಚಿವರಾಗಿರುವ ಉದಯ್ ಸಮಂತ್ ಅವರೂ ಕೂಡ ಈ ನೃತ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಛತ್ರಪತಿ ಶಿವಾಜಿ-ಸಾಯಿಬಾಯಿ ದಂಪತಿಯ ಮಗ ಸಾಂಭಾಜಿ ಮಹಾರಾಜರ ಜೀವನಾಧಾರಿತ ಚಿತ್ರ ಇದಾಗಿದ್ದು, ಇದರಲ್ಲಿ ಸಾಂಭಾಜಿ ಅವರ ಘನತೆ, ಹೋರಾಟದ ಕಿಚ್ಚನ್ನ ತೋರಿಸಲಾಗಿದೆ. ಜೊತೆಗೆ ಟ್ರೈಲರ್ನಲ್ಲಿ ಮಹಾರಾಷ್ಟ್ರದ ಸಾಂಪ್ರದಾಯಿಕ ವಾದ್ಯ 'ಲೇಜಿಂ' ಬಳಸಿ ವಿಕಿ-ರಶ್ಮಿಕಾ ನೃತ್ಯ ಮಾಡಿದ್ದಾರೆ. ಆದ್ರೆ, ಆ ಲೆಜಿಮ್ ನೃತ್ಯದ ದೃಶ್ಯವು ಮರಾಠಾ ಗುಂಪುಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲ, ಮಾಜಿ ಸಂಸದ ಸಾಂಭಾಜಿರಾಜೆ ಛತ್ರಪತಿ ಕೂಡ ಚಿತ್ರದ ದೃಶ್ಯಗಳ ಸತ್ಯಾಸತ್ಯತೆ ಪರಿಶೀಲಿಸಲು ಬಿಡುಗಡೆಗೂ ಮುನ್ನ ಇತಿಹಾಸ ತಜ್ಞರಿಗೆ ತೋರಿಸಬೇಕು ಅಂತಾ ಒತ್ತಾಯಿಸಿದ್ದಾರೆ.
ಚಿತ್ರದಲ್ಲಿನ ಲೆಜಿಮ್ ನತ್ಯದ ದೃಶ್ಯಕ್ಕೆ ಟೀಕೆ ವ್ಯಕ್ತವಾಗ್ತಿದ್ದಂತೇ ಅದನ್ನ ತೆಗೆದು ಹಾಕಲು ನಿರ್ದೇಶಕ ಲಕ್ಷ್ಮಣ್ ಉಟೇಕರ್ ನಿರ್ಧರಿಸಿದ್ದಾರೆ. ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಅವರ ಜೊತೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಅವರು, ಸಂಭಾಜಿ ಮಹಾರಾಜ್ ಲೆಜಿಮ್ ನೃತ್ಯ ದೃಶ್ಯವನ್ನು ಚಿತ್ರದಿಂದ ತೆಗೆದುಹಾಕಲಾಗುವುದು ಎಂದು ಹೇಳಿದ್ದಾರೆ. ಸಂಭಾಜಿ ಮಹಾರಾಜರ ಚಿತ್ರವು ಶಿವಾಜಿ ಸಾವಂತ್ ಅವರ ಛಾವಾ ಪುಸ್ತಕದಿಂದ ಪ್ರೇರಿತವಾಗಿದೆ ಅಂತಾ ತಿಳಿಸಿದ್ದಾರೆ.
‘ಛಾವಾ’ ಚಿತ್ರದ ರಿಲೀಸ್ ಡೇಟ್ ಫೆಬ್ರವರಿ 14ನೇ ದಿನಾಂಕ ಫಿಕ್ಸ್ ಆಗಿದ್ದು, ಅದಕ್ಕೂ ಮುನ್ನ ಬುಧವಾರ(ಜನವರಿ 29)ವಿಶೇಷ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಇದರಲ್ಲಿ ಇತಿಹಾಸಕಾರರು ಮತ್ತು ತಜ್ಞರು ಸಿನಿಮಾ ನೋಡಿ ತಮ್ಮ ಅಭಿಪ್ರಾಯ ಕೊಟ್ಟ ಬಳಿಕ ಚಿತ್ರವನ್ನ ಮತ್ತೊಮ್ಮೆ ಪರಾಮರ್ಶೆಗೆ ಒಳಪಡಿಸಲಾಗುತ್ತದೆ.