- ರಾಘವೇಂದ್ರ ಅಡಿಗ ಎಚ್ಚೆನ್.
ʻಉತ್ತಮ ಸಿನಿಮಾವೊಂದು ತನಗೆ ಏನೇನು ಬೇಕೋ ಅದನ್ನು ತಾನೇ ತೆಗೆದುಕೊಳ್ಳುತ್ತದಂತೆʼ ಇದು ಸಿನಿಮಾರಂಗದ ಅನುಗಾಲದ ನಂಬಿಕೆ. ಮಕರ ಸಂಕ್ರಾಂತಿಯ ಶುಭ ದಿನ ʻಚೌಕಿದಾರ್ʼ ಎನ್ನುವ ಪ್ಯಾನ್ ಇಂಡಿಯಾ ಸಿನಿಮಾದ ಟೀಸರ್ ಲೋಕಾರ್ಪಣೆಗೊಂಡಿದೆ. ಈ ಟೀಸರನ್ನು ನೋಡಿದಾಗ ಇದೊಂದು ʻಉತ್ತಮ ಸಿನಿಮಾʼ ಅನ್ನಿಸಿಕೊಳ್ಳುವ ಎಲ್ಲ ಸಾಧ್ಯತೆಗಳನ್ನು ಹುಟ್ಟುಹಾಕುತ್ತದೆ. ತನಗೆ ಬೇಕಿರುವ ಎಲ್ಲವನ್ನೂ ʻಚೌಕಿದಾರ್ʼ ತನ್ನ ತೆಕ್ಕೆಗೆ ಎಳೆದುಕೊಂಡಿದ್ದಾನಾ ಅನ್ನಿಸುತ್ತದೆ. ಒಬ್ಬರಾ? ಇಬ್ಬರಾ? ಹಲವು ಪ್ರತಿಭಾವಂತರು ಇಲ್ಲಿ ಒಟ್ಟಿಗೆ ಸೇರಿದ್ದಾರೆ.
ರಥಾವರ, ತಾರಕಾಸುರದಂಥ ಸಿನಿಮಾ ಕೊಟ್ಟವರು ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ. ಸದ್ಯ ಇವರು ನಟ ಕಿಶೋರ್ ಅವರಿಗಾಗಿ ರೆಡ್ ಕಾಲರ್ ಎನ್ನುವ ಹಿಂದಿ ಚಿತ್ರವನ್ನೂ ರೂಪಿಸಿದ್ದಾರೆ. ಚಂದ್ರಶೇಖರ ಬಂಡಿಯಪ್ಪ ಉತ್ತಮ ನಿರ್ದೇಶಕ ಅನ್ನಿಸಿಕೊಳ್ಳುವುದರ ಜೊತೆಗೆ ಅದ್ಭುತ ಕತೆಗಾರರೂ ಆಗಿದ್ದಾರೆ. ʻದೇವರ ಕಾಲೋನಿʼ, ʻಚೈನಾಸೆಟ್ʼ ಮತ್ತು ʻಉಯಿಲುʼ ಎಂಬ ಮೂರು ಕಥೆಗಳನ್ನು ಒಳಗೊಂಡ ಕಥಾಸಂಕಲನ `ದೇವರ ಕಾಲೋನಿ’ ಹೆಸರಿನಲ್ಲಿ ಪ್ರಕಟ ಕೂಡಾ ಆಗಿದೆ. ಇಷ್ಟರಲ್ಲೇ ಈ ಕೃತಿ ಇಂಗ್ಲಿಷ್ ಭಾಷೆಗೂ ಅನುವಾದಗೊಂಡು ಪ್ರಕಟಗೊಳ್ಳಲಿದೆ. ಯುವ ನಿರ್ದೇಶಕ ಗುರುದತ್ತ ಗಾಣಿಗ ಪ್ರಜ್ವಲ್ ದೇವರಾಜ್ ಗಾಗಿ ʻಕರಾವಳಿʼ ಹೆಸರಿನ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರಲ್ಲಾ? ಆ ಚಿತ್ರಕ್ಕೆ ಕಥೆ, ಚಿತ್ರಕತೆ ಬರೆದುಕೊಟ್ಟಿರೋದು ಕೂಡಾ ಇದೇ ಚಂದ್ರಶೇಖರ ಬಂಡಿಯಪ್ಪ
ದಿಯಾ ಸಿನಿಮಾದ ಮೂಲಕ ಪ್ರವರ್ಧಮಾನಕ್ಕೆ ಬಂದ ಪೃಥ್ವಿಗೆ ಬಂಡಿಯಪ್ಪನವರ ಸಿನಿಮಾ ಹೊಸದೊಂದು ಇಮೇಜು ತಂದುಕೊಡುವುದು ಖಚಿತ. ಯಾಕೆಂದರೆ ಅದ್ಧೂರಿ ಬಜೆಟ್ಟಿನಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಅಂಬಾರ್ ಬೇರೆಯದ್ದೇ ಶೇಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಾರೂ ಮುಟ್ಟದ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡು ಭಿನ್ನ ರೀತಿಯಲ್ಲಿ ಕಟ್ಟಿ ಕೊಡುವುದು ಚಂದ್ರಶೇಖರ ಬಂಡೀಯಪ್ಪ ಅವರ ರೀತಿ. ರಥಾವರದಲ್ಲಿ ಮಂಗಳಮುಖಿಯರ ಜಗತ್ತನ್ನು ಅನಾವರಣಗೊಳಿಸಿದ್ದ ಇವರು, ತಾರಕಾಸುರದಲ್ಲಿ ಬುಡುಬುಡುಕೆ ಜನಾಂಗದ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡಿದ್ದರು. ದೇಸೀ ಕಥಾವಸ್ತುವನ್ನು ಕಮರ್ಷಿಯಲ್ ಆಗಿ ಕಟ್ಟಿಕೊಡುವ ಬಗೆ ಚಂದ್ರಶೇಖರ್ ಬಂಡಿಯಪ್ಪನವರಿಗೆ ಸಿದ್ಧಿಸಿದೆ. ಸದ್ಯ ಚೌಕಿದಾರ್ ಎನ್ನುವ ಪಕ್ಕಾ ಕಮರ್ಷಿಯಲ್, ಮಾಸ್ ಜೊತೆಗೆ ಕಾಡುವ ಕಥೆಯ ಸಿನಿಮಾವನ್ನು ಕಟ್ಟಿದ್ದಾರೆ. ಹೊಸ ನಿರ್ಮಾಪಕ ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣದಲ್ಲಿ ರೂಪುಗೊಂಡಿರುವ ʻಚೌಕಿದಾರ್ʼ ಟೀಸರ್ ಮೂಲಕ ಹೊಸ ಭರವಸೆ ಹುಟ್ಟುಹಾಕಿದೆ…
ದೊಡ್ಮನೆಯ ಮೊಮ್ಮಗಳು ಧನ್ಯಾ ರಾಮ್ಕುಮಾರ್ ಈ ಚಿತ್ರದಲ್ಲಿ ನಾಯಕಿ ಆಗಿದ್ದಾರೆ. ದಿಯಾ ಚಿತ್ರ ಖ್ಯಾತಿಯ ನಟ ಪೃಥ್ವಿ ಅಂಬಾರ್ ಇಲ್ಲಿ ವಿಭಿನ್ನವಾಗಿಯೇ ಕಾಣಿಸುತ್ತಿದ್ದಾರೆ. ರಗಡ್ ರೋಲ್ ಮೂಲಕವೇ ಎಲ್ಲರ ಗಮನ ಸೆಳೆಯಲಿದ್ದಾರೆ. ಚೈತ್ರದ ಪ್ರೇಮಾಂಜಲಿ ಚಿತ್ರದ ನಾಯಕಿ ಶ್ವೇತಾ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ದೊಡ್ಡ ಪರದೆಗೆ ಕಾಲಿಟ್ಟಿದ್ದಾರೆ. ಡೈಲಾಗ್ ಕಿಂಗ್ ಸಾಯಿಕುಮಾರ್ ಕೂಡ ಈ ಸಿನಿಮಾದಲ್ಲಿದ್ದಾರೆ. ನಟಿ ಸುಧಾರಾಣಿ ಈ ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದಾರೆ.
ಚೌಕಿದಾರ್ ಗೆ ಸಚಿನ್ ಬಸ್ರೂರು ಸಂಗೀತವಿದ್ರೆ, ವಿ. ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಸಂತೋಷ್ ನಾಯಕ್ ಸಾಹಿತ್ಯ ಬರೆಯುತ್ತಿದ್ದಾರೆ. ‘ಚೌಕಿದಾರ್’ ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಲವರ್ ಬಾಯ್ ಆಗಿದ್ದ ಪೃಥ್ವಿ ಅಂಬಾರ್ ಮಾಸ್ ಲುಕ್ ಕೊಡಲಿದ್ದಾರೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಚೌಕಿದಾರ್ ಸಿನಿಮಾವನ್ನು ಅಷ್ಟೇ ಅದ್ಧೂರಿಯಾಗಿ ಹಾಗೂ ಸೊಗಸಾಗಿ ನಿರ್ಮಿಸಲಾಗುತ್ತಿದೆ. ಸಿನಿಮಾವನ್ನು ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ಜೂನ್ 1ರಂದು ಚೌಕಿದಾರ್ ಚಿತ್ರದ ಮೊದಲ ಹಾಡು ಲೋಕಾರ್ಪಣೆಗೊಳ್ಳುತ್ತಿದೆ…