- ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ದೇಶದೊಳ್ ಹಾಗೂ ಕಲಿವೀರ ಚಿತ್ರಗಳ ಖ್ಯಾತಿಯ ನಿರ್ದೇಶಕ ಅವಿರಾಮ್ ಕಂಠೀರವ ಅವರು ನಿರ್ದೇಶನ ಮಾಡಿರುವ ಸಿನಿಮಾ ಕರಳೆ ಚಿತ್ರದ ವಿವಾದಿತ ಪೋಸ್ತರ್ ಇದೀಗ ಬ್ಯಾನ್ ಆಗಿದೆ. ನಟಿ ಕುಂಕುಮ್ ಹರಿಹರ ಅವರಿದ್ದ ಈ ಪೋಸ್ಟರ್ ಅನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಲನಚಿತ್ರ ನಿರ್ಮಾಪಕರ ಸಂಘದ ಜೊತೆಗೆ ಮಾತುಕತೆಯ ನಂತರ ಬ್ಯಾನ್ ಮಾಡಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿ ಇತ್ತೀಚೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಿತ್ರದ ನಿರ್ಮಾಪಕರು, ನಿರ್ದೇಶಕರು ಹಾಗೂ ನಟಿ ಸೇರಿದಂತೆ ಚಿತ್ರತಂಡ ಮಾದ್ಯಮದವರಿಗೆ ಮಾಹಿತಿ ನೀಡಿದೆ.
ನಟಿ ಕುಂಕುಮ್ ಅವರ ಒಪ್ಪಿಗೆ ಪಡೆಯದೆ ಚಿತ್ರದ ಪೋಸ್ಟರ್ ಬಿಡುಗಡೆ ಆಗಿತ್ತು. ಅದೊಂದು ಸೂಕ್ಷ್ಮ ವಿಷಯವಾಗಿರುವ ಕಾರಣದಿಂದ ನಟಿ ಕುಂಕುಮ್ ಅವರು ವಾಣಿಜ್ಯಮಂಡಳಿಗೆ ದೂರು ಸಲ್ಲಿಸಿದ್ದು ಈ ಸಂಬಂಧ ಇಂದು ವಿವಾದ ಬಗೆಹರಿಸಿದ ವಾಣಿಜ್ಯ ಮಂಡಳಿ ಪೋಸ್ಟರ್ ಅನ್ನು ಬ್ಯಾನ್ ಮಾಡಿದೆ.

ಪತ್ರಿಕಾಗೋಷ್ಟಿಯಲ್ಲಿ ಈ ಕುರಿತು ಮಾತನಾಡಿದ ನಿರ್ದೇಶಕ ಅವಿರಾಮ್ ಕಂಠೀರವ " ಈ ಪೋಸ್ಟರ್ ವಿವಾದ ಬೇಡವಾದ ವಿವಾದವಾಗಿದೆ, ನಾನು ನನ್ನ ದೃಷ್ಟಿಕೋನದಿಂದ ಈ ಪೋಸ್ಟರ್ ರಚಿಸಿದ್ದೆ. ಈ ಪೋಸ್ಟರ್ ನಿಂದ ಇಷ್ಟು ದೊಡ್ಡ ವಿವಾದ ಆಗಲಿದೆ ಎನ್ನುವ ಕಲ್ಪನೆ ನನಗಿರಲಿಲ್ಲ. ನಾನು ನನ್ನ ಸಿನಿಮಾವನ್ನು ಬಹಳ ಬಲವಾಗಿ ಪ್ರಸ್ತುತ ಪಡಿಸುವ ಕಾರಣಕ್ಕಾಗಿ ಈ ಪೋಸ್ಟರ್ ಮಾಡಿದ್ದೆ. ಅದರಲ್ಲಿ ತಾಯಿ ಮಗುವಿನ ಸಂಬಂಧ ತೋರಿಸಲಾಗಿದೆ. ಹಾಗಾಗಿ ನನ್ನ ದೃಷ್ಟಿಯಿಂದ ಅದು ವಿವಾದಿತ ಪೋಸ್ಟರ್ ಆಗಿರಲಿಲ್ಲ. ಆದರೆ ನಟಿ ಕುಂಕುಮ್ ಈ ಪೋಸ್ಟರ್ ಬಿಡುಗಡೆಗೆ ಮುನ್ನ ತನಗೆ ತೋರಿಸಬೇಕು ಎಂದು ಬೇಡಿಕೆ ಇಟ್ಟಿದ್ದಾಗ ನಿರ್ದೇಶಕನಾಗಿ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆ ಎಂದು ನಾನು ಭಾವಿಸಿದೆ. ಆದರೆ ಇಂದು ವಾಣಿಜ್ಯ ಮಂಡಳಿ ಅಧ್ಯಕ್ಷರು, ನಿರ್ಮಾಪಕರ ಸಂಘದ ಅಧ್ಯಕ್ಷರ ಜೊತೆಗೆ ಮಾತುಕತೆ ನಡೆಸಿದ ನಂತರ ನಾನು ಇದೀಗ ನಟಿಯ ಸೆಕೆಂಡ್ ಲುಕ್ ಪೋಸ್ಟರ್ ಬಿಡುಗಡೆಗೆ ಮುನ್ನ ಅದನ್ನು ಅವರಿಗೆ ಹಾಗೂ ಮಂಡಳಿಯ ಅಧ್ಯಕ್ಷರಿಗೂ ತೋರಿಸಲು ಸಮ್ಮತಿಸಿದ್ದೇನೆ." ಎಂದರು.
"ಸಿನಿಮಾ ಈ ಕಾಲಘಟ್ಟದಲ್ಲಿ ಜನರಿಗೆ ತಲುಪುವಂತೆ ಮಾಡಲು ಇಂತಹಾ ಪೋಸ್ಟರ್ ಅಗತ್ಯವಿದೆ ಎನ್ನುವುದು ನನ್ನ ಭಾವನೆಯಾಗಿತ್ತು. ನನ್ನ ದೃಷ್ಟಿಕೋನದ ಪ್ರಕಾರ ಇದು ಬೇಕಿತ್ತು " ಎಂದು ನಿರ್ದೇಶಕ ಹೇಳಿದ್ದು "ಮುಂದೆ ಬಿಡುಗಡೆ ಆಗಲಿರುವ ಪೋಸ್ಟರ್ ಇಂತಹಾ ಯಾವ ವಿವಾದಕ್ಕೆ ಆಸ್ಪದ ನೀಡುವಂತಿರುವುದಿಲ್ಲ " ಎನ್ನುವ ಭರವಸೆಯನ್ನು ನಿಡಿದ್ದಾರೆ.

ನಟಿಯಾದ ಕುಂಕುಮ್ ಹರಿಹರ ಅವರು ಮಾತನಾಡಿ "ನಾನಿಂದು ಈ ವಿಚಾರವನ್ನು ವಾಣಿಜ್ಯ ಮಂಡಳಿವರೆಗೆ ತಂದಿರುವ ಬಗೆಗೆ ನನಗೂ ಬೇಸರವಿದೆ. ಆದರೆ ನಾನು ಈ ಚಿತ್ರದ ಭಾಗವಾಗಿರುವ ಕಾರಣಕ್ಕೆ ಚಿತ್ರದ ಪೋಸ್ಟರ್ ಬಿಡುಗಡೆಯಂತಹಾ ವಿಷಯಗಳು ನನಗೂ ತಿಳಿಯಬೇಕಿದೆ.ಎನ್ನುವುದು ನನ್ನ ಮಾತು. ಆದರೆ ಈಗ ನಿರ್ದೇಶಕರು ಪೋಸ್ಟರ್ ಗೆ ಸಂಬಂಧಿಸಿ ಸ್ಪಷ್ಟನೆ ಕೊಟ್ಟಿರುವುದರಿಂದ ನಾನು ಸಹ ಅವರ ಮುಂದಿನ ನಡೆಗೆ ಒಪ್ಪಿಗೆ ಸೂಚಿಸಿದ್ದೇನೆ. " ಎಂದರು.





