ಶರತ್ ಚಂದ್ರ
ಇತ್ತೀಚೆಗೆ ಐಟಿ ಕ್ಷೇತ್ರದಿಂದ ಕನಸು ಕಟ್ಟಿಕೊಂಡು ಅನೇಕ ಟೆಕ್ಕಿಗಳು ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಕೆಲವರು ಕೆಲಸ ಬಿಟ್ಟು ಬಂದರೆ, ಇನ್ನು ಕೆಲವರು ಸಮಯ ಸಿಕ್ಕಾಗ ವೃತ್ತಿ ಮತ್ತು ಸಿನಿಮಾ ಎರಡನ್ನು ಬ್ಯಾಲೆನ್ಸ್ ಮಾಡಿಕೊಂಡು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಸಾಲಿಗೆ ಕನ್ನಡದ ಪ್ರಸಿದ್ಧ ನಿರ್ದೇಶಕರಾಗಲು ಹೊರಟಿರುವ ಪ್ರಸಿದ್ದ್ ಕೂಡ ಸೇರುತ್ತಾರೆ.
2019ರಲ್ಲಿ NRI ನಿರ್ಮಾಪಕರು ಬಂಡವಾಳ ಹೂಡಿದ ‘ರತ್ನಮಂಜರಿ ‘ಚಿತ್ರದ ಮೂಲಕ ನಿರ್ದೇಶಕನಾಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ಪ್ರಸಿದ್ದ್ ,ತಮ್ಮ ಪ್ರಥಮ ಚಿತ್ರದಲ್ಲೇ ತಾನೊಬ್ಬ ಉತ್ತಮ ತಂತ್ರಜ್ಞ ಅಂತ ನಿರೂಪಿಸಿದ್ದರು.
ಪ್ರಥಮ ಚಿತ್ರವನ್ನು ವಿದೇಶದಲ್ಲಿ ಚಿತ್ರೀಕರಿಸಿದ್ದ ಹೆಗ್ಗಳಿಕೆ ಪ್ರಸಿದ್ದ್ತ್ ಅವರದ್ದು.ಪುನೀತ್ ಅವರಿಂದ ಒಂದು ಹಾಡು ಕೂಡ ಹಾಡಿಸಿದ್ದರು. ಸಿನಿಮಾ ಜಾಸ್ತಿ ಜನಕ್ಕೆ ತಲುಪದೇ ಇದ್ದರೂ ಕೂಡ,ಆ ಚಿತ್ರ ಪ್ರಸಿದ್ದ್ ಅವರಿಗೆ ಸಿನಿಮಾ ರಂಗದಲ್ಲಿ ಮುಂದುವರಿಯಲು ಪ್ರೇರೇಪಣೆ ನೀಡಿತ್ತು.
ಈ ಚಿತ್ರದ ನಂತರ ಗೆಳೆಯರೊಂದಿಗೆ ಸೇರಿ, ಕಿರುತೆರೆಯ ಸ್ಟಾರ್ ಕಿರಣ್ ರಾಜ್ ನಾಯಕತ್ವದ ಹಾಗೂ ‘ಮನ್ಸೂನ್ ರಾಗ’ ‘ಪದವಿ ಪೂರ್ವ’ ಖ್ಯಾತಿ ಯ ಯಶಾ ಶಿವಕುಮಾರ್ ನಾಯಕಿಯಾಗಿ ನಟಿಸಿದ ‘ಭರ್ಜರಿ ಗಂಡು’ ಚಿತ್ರ ನಿರ್ಮಾಣ ಮಾಡಿ ನಿರ್ದೇಶನ ಮಾಡಿದ್ದರು. ಹಳ್ಳಿಯ ಹಿನ್ನಲೆಯಲ್ಲಿ ಸಾಗುವ ಭರ್ಜರಿ ಗಂಡು’ ಚಿತ್ರದ ಸಾಹಸ ದೃಶ್ಯಗಳು ಹಾಗೂ ಚಿತ್ರದ ಸಂಗೀತ ಗಮನ ಸೆಳೆದಿದ್ದವು. ಕಿರಣ್ ರಾಜ್ ಸಿನಿಮಾ ರಂಗದ ಎಂಟ್ರಿಗೆ ಈ ಚಿತ್ರ ಸಹಕಾರಿಯಾಗಿತ್ತು.
ಪ್ರಸಿದ್ದ್ ಅವರು ನಿರ್ದೇಶಿಸಿರುವ ಅವರ ಮುಂದಿನ ಚಿತ್ರ ‘ಶೇರ್’ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಅತೀ ಶೀಘ್ರದಲ್ಲಿ ಬಿಡುಗಡೆ ಯಾಗಲಿದೆ. ಭರ್ಜರಿ ಗಂಡು ಚಿತ್ರದ ನಂತರ ಕಿರಣ್ ರಾಜ್ ಕಾಂಬಿನೇಶನ್ ಜೊತೆ ಮೂಡಿ ಬಂದಿರುವ ‘ಶೇರ್ ‘ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದು ಮಾಸ್ ಪ್ರೇಕ್ಷಕ ರನ್ನು ರಂಜಿಸುವ ಭರವಸೆ ಪ್ರಸಿದ್ದ್ ಅವರಿಗಿದೆ.ಚಿತ್ರದ ಟ್ರೈಲರ್ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
ಸದ್ಯಕ್ಕೆ ಪ್ರಸಿದ್ದ್ ಅವರು ಮುಂದಿನ ಪ್ರಾಜೆಕ್ಟ್’ ‘ಕಂಬಳೀಪುರ’ದಲ್ಲಿ ಬ್ಯುಸಿ ಯಾಗಿದ್ದು ದೇವಿ ಕಾಟೇರಮ್ಮನ ಕಥೆ ಹೊಂದಿರುವ ಈ ಚಿತ್ರದಲ್ಲಿ, ದೇವಿಯ ಪಾತ್ರವನ್ನು ಮಾಡಲು ದಕ್ಷಿಣ ಭಾರತದ ಜನಪ್ರಿಯ ನಾಯಕಿಯೊಬ್ಬರನ್ನು ಸಂಪರ್ಕಿಸಿದ್ದಾರಂತೆ ಸದ್ಯದಲ್ಲೇ ನಿರ್ದೇಶಕರು ಈ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಒಟ್ಟಿನಲ್ಲಿ ಕನ್ನಡ ಚಿತ್ರರಂಗದ ಭರವಸೆ ನಿರ್ದೇಶಕನಾಗಿ ಭದ್ರವಾಗಿ ಬೇರೂರುವ ಪ್ರಸಿದ್ದ್ ಅವರ ಪ್ರಯತ್ನ ಫಲ ಕೊಡಲಿ, ಪ್ರಸಿದ್ದ್ ಸ್ಯಾಂಡಲ್ ವುಡ್ ನ ಪ್ರಸಿದ್ದ ನಿರ್ದೇಶಕರಾಗಿ ಬೆಳೆಯಲಿ ಎಂದು ನಮ್ಮ ಹಾರೈಕೆ.