ಕನ್ನಡ ಚಿತ್ರರಂಗದಲ್ಲಿ 70 ರಿಂದ 90ರ ದಶಕದಲ್ಲಿ ಕನ್ನಡ ಚಿತ್ರರಂಗದ ಅನೇಕ ನಾಯಕ ನಾಯಕಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಲ್ಲದೇ, ಅದುವರೆವಿಗೂ ಕೇವಲ ಪೌರಾಣಿಕ ಮತ್ತು ಸಾಮಾಜಿಕ ಪಾತ್ರಗಳಲ್ಲಷ್ಟೇ ನಟಿಸುತ್ತಿದ್ದ ರಾಜಕುಮಾರ್ ಅವರನ್ನು ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ ಜೇಡರ ಬಲೆಯಲ್ಲಿ ಜೇಮ್ಸ್ ಬಾಂಡ್ ರೀತಿಯಲ್ಲಿ ತೋರಿಸುವ ಮೂಲಕ ಕನ್ನಡ ಚಿತ್ರಪ್ರೇಮಿಗಳನ್ನು ಕುಣಿಸಿದ ಜೋಡಿ ನಿರ್ದೇಶಕರಾಗಿದ್ದ ದೊರೈ-ಭಗವಾನ್ ಜೋಡಿಯಲ್ಲಿ ಬಿ. ದೊರೈರಾಜು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.

ಸಾಮಾನ್ಯವಾಗಿ ದೊರೈರಾಜ್ ಎಂಬ ಹೆಸರನ್ನು ಕೇಳಿದ ತಕ್ಷಣ ಅವರು ತಮಿಳಿನವರೋ ಇಲ್ಲವೇ ಮಲೆಯಾಳಾದವರೋ ಎನ್ನುವ ಭಾವನೆ ಥಟ್ ಎಂದು ಮೂಡುತ್ತದಾದರೂ, ಶ್ರೀ ಬಿ.ದೊರೈರಾಜ್ ಅವರು ಅಪ್ಪಟ ಕನ್ನಡಿಗರಾಗಿದ್ದು, ಮೈಸೂರಿನ ಮೂಲದವರಾಗಿದ್ದು, ಚಿಕ್ಕಂದಿನಿಂದಲೂ ಸಂಗೀತ ಚಿತ್ರ ಕಲೆ, ಕ್ರೀಡೆಯಲ್ಲಿ ಆಸಕ್ತರಾಗಿ, ಅಂತಿಮವಾಗಿ ಚಲನಚಿತ್ರಗಳ ಬಗ್ಗೆ ಆಸಕ್ತಿ ಹೊಂದಿ ಮೈಸೂರಿನಲ್ಲಿ ಆರಂಭವಾದ ನವಜ್ಯೋತಿ ಸ್ಟುಡಿಯೋ ದಲ್ಲಿ ಸಹಾಯಕರಾಗಿ ಸೇರಿ ಕೊಂಡು ನಂತರ ಮುಂಬೈನಲ್ಲಿ ಏನ್.ಜಿ.ರಾವ್ ಬಳಿ ಕ್ಯಾಮರಾ ಸಹಾಯಕರಾಗಿ ಕೆಲಸವನ್ನು ಕಲಿತುಕೊಂಡ ನಂತರ ಮಲಯಾಳಂನ ಶಶಿಧರನ್ ಚಿತ್ರದ ಮೂಲಕ ಸ್ವತಂತ್ರವಾಗಿ ಛಾಯಾಗ್ರಾಕರಾದ ನಂತರ, ವರನಟ ರಾಜಕುಮಾರರ ಸೋದರಿ ಚಿತ್ರದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಛಾಯಾಗ್ರಾಹಕರಾಗಿ ಪಾದಾರ್ಪಣೆ ಮಾಡಿದ ನಂತರ ಅನೇಕ ಕನ್ನಡ ಚಿತ್ರಗಳಲ್ಲಿ ಯಶಸ್ವಿ ಛಾಯಾಗ್ರಾಹಕರಾಗಿ ಗುರುತಿಸಿಕೊಳ್ಳುತ್ತಾರೆ. ರಾಜಕುಮಾ

ಅಂದೆಲ್ಲಾ ಮದ್ರಾಸ್‌ನ ಪಾಂಡಿ ಬಜಾರ್ ಎನ್ನುವ ಸ್ಥಳದಲ್ಲಿ ಹೆಚ್ಚಾಗಿ ಕನ್ನಡ ಸಿನಿಮಾ ರಂಗದವರು ಕೆಲಸ ಮಾಡುತ್ತಿದ್ದು ಅಲ್ಲಿನ ಸಿನಿಮಾ ಪ್ರೊಡಕ್ಷನ್ ಯುನಿಟ್‌ನಲ್ಲಿ ಕೆಲಸಗಾರನಾಗಿ ಭಗವಾನ್ ಅವರು ಕೆಲಸ ಮಾಡುತ್ತಿದ್ದಾಗ ಆದೊಮ್ಮೆ ಸರಿಯಾಗಿ ಕೆಲಸ ಸಿಗದೆ, ಸಂಬಳವಿಲ್ಲದೆ ಒಪ್ಪತ್ತು ಊಟಕ್ಕಾಗಿ ಪರದಾಡುವ ಸ್ಥಿತಿಯಲ್ಲಿದ್ದು, ಎರಡು ದಿನಗಳ ಊಟವಿಲ್ಲದೇ ಯಾರ ಬಳಿಯಾದರೂ ಸಾಲ ಮಾಡಿ ಹೊಟ್ಟೆ ತುಂಬಿಸಿಕೊಳ್ಳಲು ಯೋಚಿಸುತ್ತಿರುವಾಗ, ಅದೇ ಸಮಯದಲ್ಲೇ ಛಾಯಾಗ್ರಾಹಕ ದೊರೈ ಅವರು ಸಿಕ್ಕಾಗ, ದಯವಿಟ್ಟು ಒಂದು ರೂಪಾಯಿ ಇದ್ದರೆ ಕೊಡಿ, ಎರಡು ದಿನ ಊಟ ಮಾಡಿಲ್ಲಾ.. ಸಂಬಳ ಬಂದ್ಮೇಲೆ ಕೊಡುತ್ತೇನೆ ಎಂದು ಕೇಳಿಕೊಂಡಾಗ, ದೊರೈ ಅವರು ತಮ್ಮ ಜೋಬಿನಿಂದ ಎಂಟಾಣೆ ಕೊಡುತ್ತಾರೆ. ಭಗವಾನ್ ಆ ಹಣದಿಂದ ಹೋಟೆಲ್ಲಿಗೆ ಹೋಗಿ ತಿಂಡಿ ತಿಂದು ಬಂದು ನೇರವಾಗಿ ಜಿ.ವಿ. ಅಯ್ಯರ್ ಅವರ ಕಚೇರಿಗೆ ಹೋದಾಗ, ಅಯ್ಯರ್ ಅವರು ಯಾಕೋ? ನಾವೆಲ್ಲ ನಿನ್ನ ಪಾಲಿಗೆ ಸತ್ತು ಹೋಗಿದ್ದೀವಾ.. ಎರಡು ದಿನ ಊಟವಿಲ್ಲದೇ ಇದ್ದರೂ ನಮ್ಮ ಮನೆಗೆ ಬಂದಿಲ್ಲಾ! ಅಂತ ಕೂಗಾಡುತ್ತಾರೆ. ಅರೇ!! ಎಂಟಾಣೆ ಕೊಟ್ಟ ದೊರೈ ಅಯ್ಯರ್ ಬಳಿ ಹೀಗೆ ಚಾಡಿ ಹೇಳುವುದಾ! ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದದ್ದನ್ನು ಗ್ರಹಿಸಿದ ಅಯ್ಯರ್ ಅವರು ದೊರೈ ನಿನಗೆ ಕೊಟ್ಟ ಎಂಟಾಣೆ ನನ್ನ ಬಳಿ ಸಾಲವಾಗಿ ಪಡೆದ ಹಣವಾಗಿತ್ತು! ಎಂದು ಹೇಳಿದಾಗ, ಅರೇ!! ಅವರು ಸಾಲವಾಗಿ ಪಡೆದ ಹಣವನ್ನು ಸದ್ದಿಲ್ಲದೇ ನನಗೆ ಕೊಟ್ಟರಲ್ಲಾ! ಎಂಬ ಒಳ್ಳೆಯ ಆಭಿಪ್ರಾಯ ಮೂಡಿ ಅಂದಿನಿಂದ ಅವರಿಬ್ಬರ ಸ್ನೇಹ ಗಟ್ಟಿಯಾಗಿದ್ದಲ್ಲದೇ, ಹೀಗೆ ಅವರಿಬ್ಬರೂ ಎಂಟಾಣೆಯ ಪಾರ್ಟ್ನರ್ ಎಂದೇ ಪ್ರಖ್ಯಾತರಾಗಿ ಕನ್ನಡದ ಯಶಸ್ವಿ ನಿರ್ದೇಶಕರ ಜೋಡಿಯಾಗಿ ಹೊರಹೊಮ್ಮಿದ್ದದ್ದು ಈಗ ಇತಿಹಾಸ.





