– ರಾಘವೇಂದ್ರ ಅಡಿಗ ಎಚ್ಚೆನ್.
ಎಲ್ಲರೂ ಭಾರೀ ಕುತೂಹಲದಿಂದ ಕಾಯುತ್ತಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಟೀಸರ್ ಕೊನೆಗೂ ಬಿಡುಗಡೆಯಾಗಿದೆ. ಕೆಜಿಎಫ್ 2 ಬಳಿಕ ಟಾಕ್ಸಿಕ್ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದ ಯಶ್, ತಮ್ಮ ಹುಟ್ಟುಹಬ್ಬದ ದಿನವೇ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.
ಮಲಯಾಳಂನ ಖ್ಯಾತ ನಟಿ ಹಾಗೂ ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾ ಮೂಲಕ ಯಶ್ ಮತ್ತೊಮ್ಮೆ ವರ್ಲ್ಡ್ ಸಿನೆಮಾ ಕಬ್ಜಾ ಮಾಡಲು ಸಜ್ಜಾಗಿದ್ದಾರೆ. ಜನವರಿ 7ರಂದು ಟೀಸರ್ ರಿಲೀಸ್ ಮಾಡುವುದಾಗಿ ಘೋಷಿಸಿದ್ದ ತಂಡ, ಹೇಳಿದಂತೆ ಯಶ್ ಬರ್ತ್‌ಡೇ ದಿನವೇ ಟೀಸರ್ ಬಿಡುಗಡೆ ಮಾಡಿದ್ದು ರಾಮಾಚಾರಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.
ಟೀಸರ್‌ನಲ್ಲಿ ಯಶ್ ಸಂಪೂರ್ಣವಾಗಿ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಗೀತು ಮೋಹನ್ದಾಸ್ ತಮ್ಮ ಸಿನಿಮಾಗಳಲ್ಲಿ ಪಾತ್ರಗಳನ್ನು ವಿಭಿನ್ನವಾಗಿ ಪ್ರೆಸೆಂಟ್ ಮಾಡಿದ ಶೈಲಿಯಲ್ಲೇ, ಈ ಬಾರಿ ಯಶ್‌ನನ್ನೂ ಹೊಸ ಆಯಾಮದಲ್ಲಿ ತೋರಿಸಿದ್ದಾರೆ.
ಸ್ಮಶಾನದ ದೃಶ್ಯಗಳಿಂದಲೇ ಟೀಸರ್ ಶುರುವಾಗುತ್ತಿದ್ದು, ಗಲಾಟೆ–ಗದ್ದಲದ ನಂತರ ಅಸಲಿ ಆಟ ಆರಂಭವಾಗುತ್ತದೆ. ಶರ್ಟ್‌ಲೆಸ್ ಆಗಿ ಕಾಣಿಸುವ ಯಶ್, ಬ್ಯಾಕ್ ಲುಕ್‌ನಿಂದ ಎಂಟ್ರಿ ಕೊಡುತ್ತಾರೆ. ಬೂಟುಗಾಲಿಂದ ಬುಲೆಟ್ಸ್ ಹೊರಬಿಡುವ ದೃಶ್ಯ ಮೈನವಿರೇಳಿಸುವಂತಿದೆ.
ಇನ್ನು ‘ಟಾಕ್ಸಿಕ್’ ಸಿನಿಮಾ ‘ಧುರಂಧರ್ 2’ ವಿರುದ್ಧ ತೆರೆಗೆ ಬರಲಿದೆ. ಹಿಂದಿಯಲ್ಲಿ ‘ಧುರಂಧರ್’ ಸೂಪರ್ ಹಿಟ್ ಆಗಿದ್ದು, ಅದರ ಸೀಕ್ವೆಲ್ ಈಗಾಗಲೇ ದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ. ಈ ಸ್ಪರ್ಧೆಯನ್ನು ಎದುರಿಸಲು ‘ಟಾಕ್ಸಿಕ್’ ತಂಡ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.
ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮೆಚ್ಚುಗೆ: ‘ಅರ್ಜುನ್ ರೆಡ್ಡಿ’, ‘ಕಬೀರ್ ಸಿಂಗ್’, ‘ಅನಿಮಲ್’ ಸಿನಿಮಾಗಳ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಈ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಟಾಕ್ಸಿಕ್ ಟೀಸರ್ ನನ್ನನ್ನು ತಟ್ಟಿತು. ಸ್ಟೈಲ್, ಆ್ಯಟಿಟ್ಯೂಟ್, ಕೆಯಾಸ್.. ಹುಟ್ಟುಹಬ್ಬದ ಶುಭಾಶಯಗಳು ಯಶ್” ಎಂದು ಅವರು ಟ್ವೀಟ್ ಮಾಡಿದ್ದಾರೆ.





