– ರಾಘವೇಂದ್ರ ಅಡಿಗ ಎಚ್ಚೆನ್.
ವಿಶ್ವದ ಪ್ರಮುಖ ನಗರಗಳಲ್ಲಿ ಒಂದಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕ ಪರಂಪರೆ ಇದೆ. ಆ ಸಾಂಸ್ಕೃತಿಕ ಪರಂಪರೆಯನ್ನು ಬಲಪಡಿಸುವ ಹಾಗೂ ಎಲ್ಲರಿಗೂ ಬದುಕು ಕಟ್ಟಿಕೊಟ್ಟಿರುವ ಇಡೀ ನಗರವನ್ನು ಒಂದು ದೊಡ್ಡ ಊರಿನಂತೆ ಕಂಡು ಜನರೆಲ್ಲರೂ ಒಟ್ಟಾಗಿ ಸಂಭ್ರಮಿಸುವ ಉದ್ದೇಶದಿಂದ “ಬೆಂಗಳೂರು ಜಾತ್ರೆ” ಹೆಸರಿನಲ್ಲಿ ಬೆಂಗಳೂರು ಊರಹಬ್ಬವನ್ನು ಡಿಸೆಂಬರ್ 4ರಿಂದ 13ರವರೆಗೆ ಆಯೋಜಿಸಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ನಗರದ ಬೆಳವಣಿಗೆಗೆ ತಕ್ಕಂತೆ ಜನರ ಜೀವನದ ಗುಣಮಟ್ಟವೂ ಸುಧಾರಿಸಬೇಕು. ಜೀವನದ ಗುಣಮಟ್ಟ ಕೇವಲ ಮೂಲಸೌಕರ್ಯಕ್ಕೆ ಸೀಮಿತವಲ್ಲ; ಕಲೆ, ಸಾಹಿತ್ಯ, ಸಂಸ್ಕೃತಿ, ಹವ್ಯಾಸಗಳು ಮತ್ತು ಸಾರ್ವಜನಿಕ ಚಟುವಟಿಕೆಗಳೂ ವ್ಯಕ್ತಿಯ ಜೀವನವನ್ನು ಸಮಗ್ರವಾಗಿಸುತ್ತವೆ. 2023 ರಲ್ಲೇ ಮೂಡಿದ ಈ ಆಲೋಚನೆಯನ್ನು ಈ ವರ್ಷ ಅನುಷ್ಠಾನಗೊಳಿಸಲು ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ಆಶಯದಂತೆ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.
*ಜನರ ಭಾಗವಹಿಸುವಿಕೆ ಮತ್ತು ವಿಕೇಂದ್ರೀಕೃತ ಆಯೋಜನೆ:*
ಬೆಂಗಳೂರು ಜಾತ್ರೆ ಕೇವಲ ಸರ್ಕಾರದ ಕಾರ್ಯಕ್ರಮವಾಗಿರದೆ, ಸಾರ್ವಜನಿಕರು, ಸಂಘ-ಸಂಸ್ಥೆಗಳು, ಕಲಾವಿದರು ಮತ್ತು ವಿವಿಧ ಸಮುದಾಯಗಳೇ ಭಾಗಿಯಾಗುವ ಜನಹಬ್ಬವಾಗಬೇಕು ಎಂಬುದು ಮುಖ್ಯ ಉದ್ದೇಶವಾಗಿದೆ. ಹಿಂದೆ ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ಸುಮಾರು 300 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿದ್ದ ಬೆಂಗಳೂರು ಇಂದು ಸುಮಾರು 750 ಚದರ ಕಿಲೋಮೀಟರ್ಗೆ ವಿಸ್ತರಿಸಿದೆ. ಇದಕ್ಕೆ ಅನುಗುಣವಾಗಿ, ಒಂದೇ ಸ್ಥಳಕ್ಕೆ ಸೀಮಿತಗೊಳಿಸದೆ ನಗರದ ವಿವಿಧ ಪಾಲಿಕೆಗಳು, ರಸ್ತೆಗಳು, ಉದ್ಯಾನವನಗಳು, ಸಭಾಂಗಣಗಳು, ಕಾಲೇಜು ಮೈದಾನಗಳು, ಮಾಲ್ಗಳು, ಟೆಕ್ ಪಾರ್ಕ್ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ವಿಕೇಂದ್ರೀಕೃತವಾಗಿ ನಡೆಸಲಾಗುತ್ತಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪೊಲೀಸ್ ಇಲಾಖೆ, ಬೆಸ್ಕಾಂ, ಬಿಡಬ್ಲ್ಯೂಎಸ್ಎಸ್ಬಿ, ಬೆಂಗಳೂರು ಮೆಟ್ರೋ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳು, ಖಾಸಗಿ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು, ವಸ್ತುಸಂಗ್ರಹಾಲಯಗಳು ಹಾಗೂ ನಾಗರಿಕ ಸಂಘಟನೆಗಳ ಸಹಯೋಗದಲ್ಲಿ ಹಬ್ಬ ಜರುಗಲಿದೆ.
*ಉದ್ಘಾಟನೆ, ಸ್ಥಳೀಯ ವೇದಿಕೆಗಳು ಮತ್ತು ಸಮಾರೋಪ*
*ಡಿಸೆಂಬರ್ 4 (ಉದ್ಘಾಟನೆ):* ಹಳೆಯ ಬೆಂಗಳೂರಿನ ಪ್ರಮುಖ ಗುರುತುಗಳಲ್ಲೊಂದಾದ ಬ್ರಿಗೇಡ್ ರಸ್ತೆ ಮತ್ತು ಎಂ.ಜಿ. ರಸ್ತೆಯ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯನ್ನು ಸಾಂಸ್ಕೃತಿಕ ವೇದಿಕೆಯನ್ನಾಗಿ ರೂಪಿಸಲಾಗುವುದು. ಸಂಚಾರ ಕಡಿಮೆ ಇರುವ ಎಂ.ಜಿ. ರಸ್ತೆ ಮತ್ತು ಕಬ್ಬನ್ ರಸ್ತೆ ನಡುವಿನ ಕಾಮರಾಜ ರಸ್ತೆ ಸಂಪರ್ಕ ರಸ್ತೆಯಲ್ಲಿ ವೇದಿಕೆ ನಿರ್ಮಿಸಲಾಗಿದ್ದು ರಾಜ್ಯದ ವಿವಿಧ ಭಾಗಗಳಿಂದ ಸುಮಾರು 500 ಜನಪದ ಕಲಾವಿದರು 20 ಕಲಾತಂಡಗಳೊಂದಿಗೆ ಆಗಮಿಸಿ ಕರ್ನಾಟಕದ ಬಹುಸಂಸ್ಕೃತಿಯನ್ನು ಪ್ರದರ್ಶಿಸುವ ಮೆರವಣಿಗೆನಡೆಸಲಿದ್ದಾರೆ. ಅಲ್ಲದೆ, ಕಲಾ ಪ್ರದರ್ಶನ ನೀಡಲಿದ್ದಾರೆ.
ಡಿಸೆಂಬರ್ 4 ರಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿಗಳಾ ಡಿ.ಕೆ. ಶಿವಕುಮಾರ್ ಅವರು ಈ ಮೆರವಣಿಗೆಗೆ ಚಾಲನೆ ನೀಡುವ ಮೂಲಕ ಬೆಂಗಳೂರು ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ 6 ಗಂಟೆಯ ನಂತರ ಖ್ಯಾತ ಸಂಗೀತ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
*ಫ್ರೀಡಂ ಪಾರ್ಕ್ (ಡಿ. 5 ಮತ್ತು 6):* ಮೆಜೆಸ್ಟಿಕ್ ಸಮೀಪದ ಫ್ರೀಡಂ ಪಾರ್ಕ್ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳ ಮೇಳ ಮತ್ತು ಆಹಾರ ಮೇಳ ಆಯೋಜಿಸಲಾಗುವುದು.





