ಕಾರ್ತಿಕ ಮಾಸವೆಂದರೆ, ಅಷ್ಟರಲ್ಲಾಗಲೇ ಮೊದಲಾಗಿರುವ ನರಕ ಚತುರ್ಥಿಯ ದೀಪಗಳ ಹಬ್ಬ, ಬಲಿಪಾಡ್ಯಮಿಗೆ ತಾತ್ಕಾಲಿಕವಾಗಿ ಮುಗಿದರೂ, ಇಡೀ ಮಾಸ ದಿನನಿತ್ಯ ಸಂಜೆ ಮನೆಯ ಮುಂದೆ ದೀಪ ಹಚ್ಚಿಡುವ ಸಂಪ್ರದಾಯವಿದೆ.
ಯೋಗನಿದ್ರೆಯಿಂದ ಜಾಗೃತನಾಗುವನೆಂದು ಹೇಳುವ ಏಕಾದಶಿಯ ಮರುದಿನ ಅಂದರೆ ಉತ್ಥಾನ ದ್ವಾದಶಿಯಂದು ತುಳಸಿ ಹಬ್ಬ ಅಥವಾ ತುಳಸಿ ಕಲ್ಯಾಣ.

*’ಒಲ್ಲನೋ ಹರಿ ಕೊಳ್ಳನೋ* ಎಲ್ಲ ಸಾಧನವಿದ್ದು ತುಳಸಿಯಿಲ್ಲದ ಪೂಜೆ…’ ದಾಸವಾಣಿ ಸಾಲನ್ನು ಗಮನಿಸಿದಾಗ ಹರಿಗೆ ತುಳಸಿ ಅದೆಷ್ಟು ಪ್ರಿಯ ಎಂಬುದು ತಿಳಿಯುತ್ತದೆ.
ಶ್ರೀಕೃಷ್ಣನೊಂದಿಗೆ ತುಳಸಿಯ ವಿವಾಹ ಸಡಗರದಿಂದ ಆಚರಿಸಲಾಗುತ್ತದೆ.
ಇದನ್ನು ಕಿರುದೀಪಾವಳಿ ಎಂದೂ ಕರೆಯುವ ವಾಡಿಕೆ ಇದೆ. ಅಂತೆಯೇ ಅಂದು ಸಂಜೆ ಪಟಾಕಿಗಳ ಸಂಭ್ರಮದೊಂದಿಗೆ ಬೃಂದಾವನಸ್ಥಿತೆ ತುಳಸಿಗೆ ದೀಪಾರತಿ ಬೆಳಗಿ ಭಕ್ತಿಯನ್ನು ತೋರುವುದು ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯ.
ಈಗಿನ ಆಧುನಿಕ ವೇಗದ ಯುಗದಲ್ಲಿ ನಾಗರೀಕತೆ ಬೆಳೆದಂತೆ ಹಬ್ಬಗಳನ್ನೂ ಸಾಮೂಹಿಕವಾಗಿ ಆಚರಿಸುವುದು ಅನುಕೂಲಕರವಾಗಿಯೇ ಇದೆ. ಅದರಲ್ಲೂ ಹಲವಾರು ವಸತಿಗಳಿರುವ ಸಮುಚ್ಛಯಗಳಲ್ಲಿ ಇದು ಸರ್ವೇ ಸಾಮಾನ್ಯವಾಗಿದೆ. ಕಮ್ಯೂನಿಟಿ ಲಿವಿಂಗ್ ನ ಒಂದೆಡೆ ಕಲೆತು ಭಾಗವಾಗಿ ಹಬ್ಬಗಳನ್ನು ಕೊಂಡಾಡುವುದು ಪ್ರಗತಿಸೂಚಕವೇ ಹೌದು.
ನಮ್ಮ ಜನಪ್ರಿಯ ಹೆವೆನ್ಸ್ ಅಪಾರ್ಟ್ಮೆಂಟಿನಲ್ಲಿ , ಪ್ರತಿವರ್ಷದಂತೆ ಈ ವರ್ಷವೂ ತುಳಸಿ ಹಬ್ಬದ ಕಲರವ ಚೆನ್ನಾಗಿಯೇ ಇತ್ತು.

ಅಪಾರ್ಟ್ಮೆಂಟಿನ ಆವರಣದಲ್ಲಿ ಹಲವು ವರ್ಷಗಳಿಂದ ಬೆಳೆಯುತ್ತಿರುವ ಬೆಟ್ಟದನೆಲ್ಲಿ ಗಿಡಕ್ಕೆ ಅಂಟಿದಂತೆ ತುಳಸಿ ಗಿಡವಿದೆ. ಪ್ರತಿಕೂಲ ಹವಾಮಾನವೋ ಮತ್ತೇನು ನೈಸರ್ಗಿಕ ಕಾರಣವೋ ನೆಲ್ಲಿಯ ಎಲೆಗಳು ಉದುರಿ ಬೋಳಾದಂತಾದಾಗ ಇನ್ನೊಂದು ಪುಟ್ಟ ನೆಲ್ಲಿ ಗಿಡವನ್ನೂ ನೆಡಲ್ಪಟ್ಟಿದೆ. ಅದೃಷ್ಟಕ್ಕೆ ಬೆಳೆದ ನೆಲ್ಲಿ ರೆಂಬೆಗಳು ಚಿಗುರು ಕಾಣುತ್ತಿವೆ.

ಬೆಳಿಗ್ಗೆ ಹನ್ನೊಂದೂವರೆ ಸಮೀಪಕ್ಕೆ ಅಪಾರ್ಟ್ಮೆಂಟಿನ ಪೂಜಾಸಕ್ತ ಮಾತೆಯರು ತುಳಸಿಯ ವಿವಾಹಕ್ಕೆ ನೆರೆದಿದ್ದರು.

ಸಾಂಕೇತಿಕವಾಗಿ, ಹಿರಿಯ ಗೃಹಿಣಿ ಶ್ರೀಮತಿ ಉಮಾ ಅವರ ಮನೆಯ ಶ್ರೀಕೃಷ್ಣನ ಪಟ, ತುಳಸಿ ನೆಲ್ಲಿಗಿಡಗಳಿಗೆ ಪುಷ್ಪಾಲಂಕಾರವಾಗಿ ದಿವ್ಯವಾಗಿ ಕಂಗೊಳಿಸುತ್ತಿತ್ತು. ಸಾಲುದೀಪಗಳು ಹರಿದ್ರಾ-ಕುಂಕುಮ, ನೈವೇದ್ಯಗಳ ರೂಪದಲ್ಲಿ ಕಾಯಿ-ಹಣ್ಣುಗಳು, ಎರಡು ವಿಧದ ಕೋಸಂಬರಿ, ಶ್ರೀಕೃಷ್ಣನಿಗೆ ಪ್ರಿಯವಾದ ಅವಲಕ್ಕಿ ವೈವಿಧ್ಯ, ಕಡಲೆ ಉಸಲಿ, ಸಿಹಿ ಬಿಲ್ಲೆ ಗಳು ತಮ್ಮ ಸರತಿಯನ್ನು ಕಾಯುತ್ತಿದ್ದವು. ತುಳಸಿ ಅಷ್ಟೋತ್ತರ, ಭಕ್ತಿಗೀತೆಗಳ ನಡುವೆಯೇ ತುಳಸೀಪೂಜೆ ಸಾಂಗವಾಗಿ ನಡೆಯುತ್ತಿತ್ತು. ಪುರಂದರ ದಾಸರು ರಚನೆ ಕಲ್ಯಾಣಂ ತುಳಸಿ ಕಲ್ಯಾಣಂ ಹಾಡಿನೊಂದಿಗೆ ನಮನ, ನೈವೇದ್ಯ ಸಮರ್ಪಣೆ. ಕೊನೆಯಲ್ಲಿ ನೆಲ್ಲಿಕಾಯಿಗಳ ಮೇಲಿರಿಸಿದ ತುಪ್ಪದ ದೀಪದಾರಾಧನೆ, ಆರತಿಯೊಂದಿಗೆ ತುಳಸಿ ವಿವಾಹವು ಸಂಪನ್ನಗೊಂಡಿತ್ತು. ತುಳಸಿ ಕಲ್ಯಾಣಕ್ಕೆ ಸಾಕ್ಷಿಯಾಗಿದ್ದ ಎಲ್ಲಾ ಮಾತೆಯರಿಗೆ ದಕ್ಷಿಣೆಯೊಂದಿಗೆ ಫಲತಾಂಬೂಲ, ಪ್ರಸಾದದ ಹಂಚಿಕೆ ಹಬ್ಬದ ವಾತಾವರಣಕ್ಕೆ ಇನ್ನಷ್ಟು ಮೆರುಗು, ಸಾರ್ಥಕ್ಯ ನೀಡಿತ್ತು.

ಸಂಜೆ ಮತ್ತೆ ಮನೆ, ಮನೆಗಳಲ್ಲಿ ಬೃಂದಾವನದ ತುಳಸಿಗೆ ಪೂಜೆ, ಫಲನೈವೇದ್ಯ, ಬೆಳಕಿನ ಸಾಲು, ಕಾಣುವಾಗ ‘ಅದೆಷ್ಟು ಶ್ರೀಮಂತ ನಮ್ಮ ಹಬ್ಬ ಹರಿದಿನಗಳ ಸಂಸ್ಕೃತಿ’! ಎಂದು ಅಚ್ಚರಿ ಮತ್ತು ಹೆಮ್ಮೆ ಏಕೀಭವಿಸಿತ್ತು.
*****
ಕೆ.ವಿ.ರಾಜಲಕ್ಷ್ಮಿ
ಬೆಂಗಳೂರು.





