–  ರಾಘವೇಂದ್ರ ಅಡಿಗ ಎಚ್ಚೆನ್.

ಐದು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಮತ್ತೊಂದು ಪ್ರತಿಷ್ಠಿತ ಗೌರವ ಒಲಿದುಬಂದಿದೆ. ಸಿನಿಮಾ ಕ್ಷೇತ್ರಕ್ಕೆ ನೀಡಿರುವ ಅಪಾರ ಕೊಡುಗೆಯನ್ನು ಗುರುತಿಸಿ ಬರ್ದ್ವಾನ್ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರ್ ಆಫ್ ಲಿಟರೇಚರ್ ಅಂದರೆ ಡಿ.ಲಿಟ್ ಪದವಿ ಪ್ರದಾನ ಮಾಡಲು ನಿರ್ಧರಿಸಿದೆ.

ವಿಶ್ವವಿದ್ಯಾಲಯದ 40ನೇ ವಾರ್ಷಿಕ ಘಟಿಕೋತ್ಸವ ಡಿಸೆಂಬರ್ 9ರಂದು ಗೋಲಾಪ್‌ಬಾಗ್ ಆವರಣದ ಸಭಾಂಗಣದಲ್ಲಿ ನಡೆಯಲಿದೆ. ಇದೇ ಸಮಾರಂಭದಲ್ಲಿ ಮಿಥುನ್ ಚಕ್ರವರ್ತಿಗೆ ಗೌರವ ಪದವಿ ಪ್ರದಾನ ಮಾಡಲಾಗುತ್ತದೆ. ಈ ಪ್ರಸ್ತಾವನೆಗೆ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಪಶ್ಚಿಮ ಬಂಗಾಳದ ರಾಜ್ಯಪಾಲ ಆರ್.ಎನ್. ರವಿ ಅಧಿಕೃತ ಅನುಮೋದನೆ ನೀಡಿದ್ದಾರೆ.

ಮಿಥುನ್ ಅವರ ಜೊತೆಗೆ ಇಬ್ಬರು ಖ್ಯಾತ ಪ್ರಾಧ್ಯಾಪಕರಾದ ಜಿ. ಪಾರ್ಥಸಾರಥಿ ಮತ್ತು ಭೂಪೇಂದ್ರನಾಥ ಗೋಸ್ವಾಮಿ ಅವರಿಗೂ ಗೌರವ ಡಾಕ್ಟರ್ ಆಫ್ ಸೈನ್ಸ್ ಪದವಿ ನೀಡಲಾಗುತ್ತದೆ.

1976ರಲ್ಲಿ ‘ಮೃಗಯಾ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಮಿಥುನ್, ಮೊದಲ ಸಿನಿಮಾದಲ್ಲೇ ಅತ್ಯುತ್ತಮ ನಟನಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದರು. ನಂತರ ‘ತಾಹಾದೇರ್ ಕಥಾ’ ಮತ್ತು ‘ಸ್ವಾಮಿ ವಿವೇಕಾನಂದ’ ಚಿತ್ರಗಳಲ್ಲಿನ ಅಭಿನಯಕ್ಕೂ ರಾಷ್ಟ್ರೀಯ ಪ್ರಶಸ್ತಿ ಒಲಿದಿತ್ತು. ‘ಡಿಸ್ಕೋ ಡ್ಯಾನ್ಸರ್’ ಸಿನಿಮಾ ಅವರನ್ನು ದೇಶದ ಗಡಿಗಳನ್ನು ದಾಟಿ ಜನಪ್ರಿಯಗೊಳಿಸಿತು.

ಬಂಗಾಳಿ ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಮಿಥುನ್, ಐದು ದಶಕಗಳಿಗೂ ಹೆಚ್ಚು ಕಾಲದ ಸಿನಿಮಾ ಪಯಣದಲ್ಲಿ ಹಲವು ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ. 2024ರಲ್ಲಿ ಪದ್ಮಭೂಷಣ ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯೂ ಅವರಿಗೆ ಲಭಿಸಿದೆ.

ಇದೀಗ ಬರ್ದ್ವಾನ್ ವಿಶ್ವವಿದ್ಯಾಲಯದ ಗೌರವ ಡಿ.ಲಿಟ್ ಪದವಿ ಅವರ ಸಾಧನೆಗಳ ಪಟ್ಟಿಗೆ ಮತ್ತೊಂದು ಹೆಮ್ಮೆಯ ಗರಿಯಾಗಿ ಸೇರ್ಪಡೆಯಾಗಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ