ಭಾರತದಲ್ಲಿ ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆ ಆಗ್ತಿದೆ. ಜನಸಾಮಾನ್ಯರು ಚಿನ್ನ ಕೊಳ್ಳೋದಕ್ಕೆ ಹಿಂದು-ಮುಂದು ನೋಡ್ತಿದ್ದಾರೆ. ಆದರೆ ಚಿನ್ನ ಖರೀದಿಗಾರರ ಪಾಲಿಗೆ ದುಬೈ ಸ್ವರ್ಗತಾಣ. ತೆರಿಗೆ ಇಲ್ದೆ ಇರೋ ಹೆಚ್ಚಾಗಿ ಇಲ್ಲಿಂದಲೇ ಚಿನ್ನ ಖರೀದಿ ಮಾಡ್ತಾರೆ. ಹಾಗಾಂತ ಬೇಕಾಬಿಟ್ಟಿ ತರೋ ಹಾಗಿಲ್ಲ. ದುಬೈನಿಂದ ಗೋಲ್ಡ್ ತರುವಾಗ ಕೆಲ ಕೆಲ ನಿಯಮಗಳನ್ನ ಪಾಲನೆ ಮಾಡ್ಬೇಕು.
ಒಬ್ಬ ಪುರುಷ ಪ್ರಯಾಣಿಕರು ದುಬೈನಿಂದ 20 ಗ್ರಾಂವರೆಗೆ ಚಿನ್ನ ತರಬಹುದು. ಅದರ ಮೌಲ್ಯ 50 ಸಾವಿರಕ್ಕಿಂತ ಒಳಗೆ ಇದ್ರೆ ಯಾವ್ದೇ ತೆರಿಗೆ ಇರೋದಿಲ್ಲ. ಮಹಿಳಾ ಪ್ರಯಾಣಿಕರು 1 ಲಕ್ಷ ರೂಪಾಯಿ ಮೌಲ್ಯದ ಒಳಗೆ 40 ಗ್ರಾಂವರೆಗೆ ಚಿನ್ನ ಖರೀದಿ ಮಾಡುವ ಅವಕಾಶವಿದೆ. ಇದು ಕೂಡ ಸುಂಕ ಮುಕ್ತವಾಗಿರುತ್ತೆ. ಈ ನಿಯಮವನ್ನ ಗಾಳಿಗೆ ತೂರಿ ಮಿತಿ-ಮೀರಿ ಚಿನ್ನ ತಂದ್ರೆ 15 ಪರ್ಸೆಂಟ್ ಕಸ್ಟಮ್ಸ್ ಟ್ಯಾಕ್ಸ್ ಕಟ್ಟಬೇಕಾಗುತ್ತೆ. ಚಿನ್ನದ ಮೌಲ್ಯವನ್ನ ಭಾರತದ ಪ್ರಸ್ತುತ ಬೆಲೆ ಆಧಾರದ ಮೇಲೆ ಲೆಕ್ಕ ಹಾಕಿ ಸುಂಕ ವಿಧಿಸಲಾಗುತ್ತೆ.
ನಿಯಮ ಏನಿದೆ ಗೊತ್ತಾ..? :
ವಧು ಅಥವಾ ವರನಿಗೆ 100 ಗ್ರಾಂವರೆಗೆ ಅನುಮತಿ ನೀಡಲಾಗಿದೆ. ಕಸ್ಟಮ್ ಆಧಿಕಾರಿಗಳಿಗೆ ವಿವಾಹ ಆಮಂತ್ರಣ ಪತ್ರ ಹಾಗೂ ಸುಂಕ ಪಾವತಿ ಅಗತ್ಯವಾಗಿರುತ್ತೆ. 1 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿ ವಿದೇಶದಲ್ಲಿ ವಾಸ ಮಾಡಿದವರು 1 ಕೆಜಿವರೆಗೆ ಚಿನ್ನ ತರಲು ಅವಕಾಶವಿದೆ. ಅದಾಗ್ಯೂ ಶೇ.15ರಷ್ಟು ಸುಂಕ ಕಟ್ಟಬೇಕಾಗಿರುತ್ತೆ.
ನೀವು ಚಿನ್ನ ಖರೀದಿ ಮಾಡೋದ್ರಲ್ಲೂ ಎರಡು ರೀತಿ ಇದೆ. ಒಂದು ವೈಯಕ್ತಿಕ ಬಳಕೆಗೆ, ಮತ್ತೊಂದು ವ್ಯಾಪಾರಕ್ಕೆ. ನೀವು ಯಾವ ಉದ್ದೇಶಕ್ಕೆ ಗೋಲ್ಡ್ ಪರ್ಚೆಸ್ ಮಾಡಿದ್ದೀರಾ ಅನ್ನೋದರ ಮೇಲೆ ಕೆಲ ನಿಯಮಗಳು ಅನ್ವಯವಾಗುತ್ತೆ. ವೈಯಕ್ತಿಕ ಬಳಕೆಗೆ ದುಬೈನಲ್ಲಿ ಆಭರಣ ಖರೀದಿಸಿದ್ರೆ ಅದರ ರಶೀದಿ ಮತ್ತು ಹಾಲ್ಮಾರ್ಕ್ ಇರ್ಬೇಕು. ಒಂದ್ವೇಳೆ ಬಿಸಿನೆಸ್ ಪರ್ಪಸ್ಗಾಗಿ ಗೋಲ್ಡ್ ತರೋದಾದ್ರೆ RBIನಿಂದ ಲೈಸೆನ್ಸ್ ಪಡ್ಕೊಂಡಿರ್ಬೇಕು. ಆದ್ರೆ ಇದಕ್ಕೆ ಸಾಮಾನ್ಯವಾಗಿ ಹೆಚ್ಚು ಸುಂಕ ಕಟ್ಟಬೇಕಾಗುತ್ತೆ.
ಸೀಕ್ರೆಟ್ ಆಗಿ ಸಾಗಿಸಿದ್ರೆ ಜೈಲು:
ಮಿತಿ ಮೀರಿದ ಚಿನ್ನ ತರುತ್ತಿರೋದಾಗಿ ಘೋಷಣೆ ಮಾಡಿ ಸುಂಕ ಕಟ್ಟಬಹುದು. 50 ಗ್ರಾಮ್ ಚಿನ್ನಕ್ಕೆ ಒಂದು ಗ್ರಾಮ್ಗೆ ಭಾರತದ ಪ್ರಸ್ತುತ ಬೆಲೆಗಿಂತ ಕಡಿಮೆ ಇರುತ್ತೆ. ಅದರ ಲೆಕ್ಕಾಚಾರದ ಮೇಲೆ ಇಂತಿಷ್ಟು ಅಂತ ಸುಂಕ ಕಟ್ಟಬೇಕು. ಏರ್ಪೋರ್ಟ್ನಲ್ಲಿ ಕಡ್ಡಾಯವಾಗಿ ತಪಾಸಣೆ ನಡೆಸಲಾಗುತ್ತೆ. ಸ್ಕ್ಯಾನರ್ ಹಾಗೂ ಸಿಬ್ಬಂದಿಗಳಿಂದ ತನಿಖೆ ನಡೆಯುತ್ತೆ. ಒಂದು ವೇಳೆ ಗೌಪ್ಯವಾಗಿ ಚಿನ್ನ ಸಾಗಿಸಲು ಪ್ರಯತ್ನ ಮಾಡಿದ್ರೆ ಸುಂಕದ 10 ಪಟ್ಟು ದಂಡದ ಜೊತೆಗೆ ಜೈಲುವಾಸ ಕೂಡ ಅನುಭವಿಸಬೇಕಾಗುತ್ತೆ. ದುಬೈನಿಂದ ತರುವ ಚಿನ್ನಕ್ಕೆ ರಶೀದಿ ಇಲ್ಲದಿದ್ರೆ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡ್ಬಹುದು. ಅಕಸ್ಮಾತ್ ನೀವು ದುಬೈನಿಂದ ಚಿನ್ನವನ್ನ ಪಾರ್ಸಲ್ ಮುಖಾಂತರ ತರೀಸಿಕೊಳ್ತಿದ್ರೆ 10 ಸಾವಿರಕ್ಕಿಂತ ಹೆಚ್ಚು ಮೌಲ್ಯದ್ದಾದ್ರೆ ಸುಂಕ ವಿಧಿಸಲಾಗುತ್ತೆ.
ಇದನ್ನು ಮರೆಯಬೇಡಿ :
ದುಬೈನಲ್ಲಿ ಚಿನ್ನ ಖರೀದಿ ಮಾಡುವಾಗ GRS ಹಾಲ್ ಮಾರ್ಕ್ VAT ರಶೀದಿ ಪಡೆಯಬೇಕು. ಸುಂಕ ಸೇರಿದಂತೆ ಒಟ್ಟು ವೆಚ್ಚವನ್ನು ಭಾರತದ ಬೆಲೆಗೆ ಹೋಲಿಕೆ ಮಾಡಿಕೊಳ್ಳಬೇಕು. ಹೆಚ್ಚುವರಿ ಚಿನ್ನದೊಂದಿಗೆ ಪ್ರಯಾಣ ಮಾಡುವಾಗ ತಪ್ಪದೇ ವಿಮೆ ಮಾಡಿಸಿಕೊಂಡಿದ್ರೆ ಒಳ್ಳೆಯದು. ಚಿನ್ನದ ಸಾಗಣೆಗೆ ಸಂಬಂಧಿಸಿದ ಅಪ್ಡೇಟ್ಗಳನ್ನು ನಿಯಮಿತವಾಗಿ ಪರಿಶೀಲಿಸುತ್ತಿರಬೇಕು. ಯಾಕಂದ್ರೆ ಸರ್ಕಾರಿ ನೀತಿಗಳು ಕಾಲ ಕಾಲಕ್ಕೆ ಬದಲಾಗ್ತಿರ್ತವೆ. ಇದರ ಮಾಹಿತಿ ಇಲ್ಲದಿದ್ರೆ ಸುಖಾಸುಮ್ಮನೆ ದಂಡ ಕಟ್ಟಬೇಕಾಗಹುದು ಅಥವಾ ಜೈಲು ಸೇರಬಹುದು.